Photo Credit: PTI

ಕೇಂದ್ರ ಸರಕಾರದ ಆದೇಶದ ಮೇರೆಗೆ ದಿಲ್ಲಿ ಪೊಲೀಸರು, ಚಾರಿತ್ರಿಕವಾಗಿ ಪ್ರಸಿದ್ಧಿ ಪಡೆದ ಜಂತರ್ ಮಂತರ್ ಪ್ರದೇಶದಲ್ಲಿ ಇನ್ನು ಮುಂದೆ ಸಾರ್ವಜನಿಕ ಪ್ರತಿಭಟನೆ ನಡೆಸಲು ಅವಕಾಶವಿಲ್ಲ; ಅದರ ಬದಲು ರಾಮಲೀಲಾ ಮೈದಾನವು ಸೇರಿದಂತೆ ಬೇರೆ ಮೂರು ಸ್ಥಳಗಳನ್ನು ಆ ಉದ್ದೇಶಕ್ಕೆ ಬಳಸಬೇಕು ಎಂದು ಘೋಷಿಸಿದ್ದಾರೆ. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಸಲಹೆಯ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಲವು ವ್ಯಾಪಾರ ಸಂಘಟನೆಗಳು ಸರಕಾರದ ಈ ನಡೆಯನ್ನು ಸ್ವಾಗತಿಸಿವೆ. ಆದರೆ ಬಹುತೇಕ ವಿರೋಧ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಮತ್ತು ಹೋರಾಟಗಾರರು ಇದನ್ನು ಖಂಡಿಸಿದ್ದಾರೆ. ಪ್ರಜಾತಂತ್ರದಲ್ಲಿ ಪ್ರಜೆಗಳಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಎಷ್ಟು ಅಗತ್ಯವೋ ಅಷ್ಟೇ ಗಂಭೀರವಾದ ವಿಷಯ ಅದನ್ನು ಎಲ್ಲಿ ನಡೆಸಲಾಗುತ್ತಿದೆ ಎಂಬುದು.

ರಾಜಧಾನಿಯ ಕೇಂದ್ರ ಸ್ಥಳದಲ್ಲಿ ಒಂದು ಬೃಹತ್ ಪ್ರತಿಭಟನೆ ನಡೆಯುತ್ತಿದ್ದರೆ ಅಲ್ಲಿನ ನಾಗರಿಕರಿಗೆ ಅದರಿಂದ ಸಂಕಷ್ಟವಾದರೂ ಅವರಿಗೆ ಅದರ ಆಳ ಮತ್ತು ವಿಸ್ತಾರವನ್ನು ಗಮನಿಸುವ ಅವಕಾಶವು ದೊರೆಯುತ್ತದೆ. ಮಾತ್ರವಲ್ಲ ಸರಕಾರದ ಕಚೇರಿಗಳು ಸಮೀಪದಲ್ಲಿದ್ದರೆ ಅಧಿಕಾರಿಗಳಿಗೂ ಪ್ರತಿಭಟನೆಯ ಕಾವು ಎಷ್ಟಿದೆ ಎಂದು ನಿಖರವಾಗಿ ತಿಳಿಯುತ್ತದೆ. ಸರಕಾರದ ಗುಪ್ತಚರ ಇಲಾಖೆ ಮತ್ತು ಪೊಲೀಸರು, ಪ್ರತಿಭಟನೆಯ ವಠಾರದಲ್ಲಿ ಕಿವಿ ಕಣ್ಣುಗಳನ್ನು ಸೂಕ್ಷ್ಮವಾಗಿರಿಸಿಕೊಂಡು ಪ್ರತಿಭಟನೆಯಲ್ಲಿ ಎಷ್ಟು ಮಂದಿ ಭಾಗವಹಿಸಿದ್ದರು, ಅವರ ಬೇಡಿಕೆಗಳು ಏನು, ಅವರ ಘೋಷಣೆಗಳು ಏನಿದ್ದವು, ಅವರ ವರ್ತನೆ ಹೇಗಿತ್ತು ಹಾಗೂ ಅವುಗಳಲ್ಲಿ ಕಾವು ಎಷ್ಟಿತ್ತು ಎಂಬುದರ ಬಗ್ಗೆ ಅರಿತುಕೊಂಡು ವಾಸ್ತವವಾದ ಚಿತ್ರಣವನ್ನು ಸರಕಾರಕ್ಕೆ ಒಪ್ಪಿಸಬೇಕು. ಅದು ಅವರ ಕರ್ತವ್ಯ. ಆದರೆ ಸರಕಾರವನ್ನು ನಡೆಸುವವರ ಧೋರಣೆಗನುಗುಣವಾಗಿ ವಾಸ್ತವವನ್ನು ಬಚ್ಚಿಟ್ಟು ಸರಕಾರಕ್ಕೆ ಪ್ರಿಯವಾಗುವ ವರದಿಯನ್ನು ನೀಡುವ ಪದ್ಧತಿಯು ಅತಿ ಸಾಮಾನ್ಯ.

ಈ ಕಾರಣಕ್ಕಾಗಿ ಪ್ರಜೆಗಳ ಪ್ರತಿಭಟನೆಗಳನ್ನು ದೇಶದ ರಾಜಧಾನಿಯ ಕೇಂದ್ರಸ್ಥಾನದಲ್ಲಿ ಮಾಡುವ ಕ್ರಮವು ಭಾರತವೂ ಸೇರಿದಂತೆ ಪ್ರಜಾತಂತ್ರಕ್ಕೆ ಬದ್ಧವಾದ ಅನೇಕ ದೇಶಗಳಲ್ಲಿದೆ. ಸರಕಾರದ ಕಚೇರಿಗಳ ಸಮೀಪವಾದಷ್ಟು ಪ್ರತಿಭಟನೆಯನ್ನು ಸ್ವತಂತ್ರವಾಗಿ ಗಮನಿಸಲು ಆಳುವ ನಾಯಕರಿಗೆ ಸಾಧ್ಯವಾಗುತ್ತದೆ. ಮಾತ್ರವಲ್ಲ, ಪ್ರತಿಭಟಿಸುವವರಿಗೂ ಸರಕಾರವನ್ನು ಅಥವಾ ಅದರ ಪ್ರತಿನಿಧಿಗಳನ್ನು ಸಂಪರ್ಕಿಸಲು ಸುಲಭವಾಗುತ್ತದೆ. ಪ್ರತಿಭಟನೆಯ ಉದ್ದೇಶ ಸಾಧನೆಗೆ ಇದು ಅತೀ ಅಗತ್ಯ. ಯಾವುದೇ ಪ್ರತಿಭಟನೆಯ ಕಾರಣವನ್ನು ಹುಡುಕಿ, ಅದರ ಹಿನ್ನೆಲೆಯನ್ನು ಅರ್ಥಮಾಡಿಕೊಂಡು ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಹುಡುಕುವುದು ಪ್ರಜಾಸತ್ತಾತ್ಮಕ ಸರಕಾರದ ಕರ್ತವ್ಯ.

ಈ ಹಿನ್ನೆಲೆಯಲ್ಲಿ ದಿಲ್ಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆಗೆ ಇನ್ನು ಅವಕಾಶವಿಲ್ಲ ಎಂಬ ನಿರ್ಧಾರ ಪ್ರಜಾಸತ್ತೆಯ ಆರೋಗ್ಯಕ್ಕೆ ಅಪಾಯಕಾರಿ. ಇದೇ ಕಾರಣಕ್ಕಾಗಿ ಬೇರೆ ಪ್ರದೇಶಗಳನ್ನು ನಿಗದಿಪಡಿಸಿ ಹೆಸರಿಸಲಾದರೂ ಅವುಗಳಲ್ಲಿ ಮಾಡುವ ಪ್ರತಿಭಟನೆಗಳು ಅರ್ಥಪೂರ್ಣವಾಗುವುದಿಲ್ಲ.

ನರೇಂದ್ರ ಮೋದಿ ಸರಕಾರವು ಆಡಳಿತದ ಸೂತ್ರವನ್ನು ವಹಿಸುವ ಮೊದಲೇ ಜಂತರ್ ಮಂತರ್ ಪ್ರದೇಶವು ಪ್ರಮುಖ ಪ್ರತಿಭಟನೆಗಳ ರಂಗಸ್ಥಳವಾಗಿತ್ತು. ‘ನಿರ್ಭಯಾ’ ಅತ್ಯಾಚಾರದ ವಿರುದ್ಧ ನಾಗರಿಕರ ಹೋರಾಟ ಮತ್ತು ಅಣ್ಣಾ ಹಝಾರೆಯ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟ ಎರಡು ಅವಿಸ್ಮರಣೀಯ ಸಾಮೂಹಿಕ ಪ್ರತಿಭಟನೆಗಳು ಅಲ್ಲಿ ನಡೆದಿದ್ದವು. ಅಣ್ಣಾ ಹಝಾರೆಯ ಹೋರಾಟದ ಕುದುರೆಯನ್ನೇರಿಯೇ ಭಾರತೀಯ ಜನತಾ ಪಾರ್ಟಿ ೨೦೧೪ರಲ್ಲಿ ಅಧಿಕಾರಕ್ಕೇರಿತು ಎಂಬುದೂ ಇಲ್ಲಿ ಪ್ರಸ್ತುತವಾಗುತ್ತದೆ.

ಜನಸಾಮಾನ್ಯರಿಗೆ ಆಳುವ ಸರಕಾರದ ನೀತಿಗಳು ಸಮಸ್ಯಾತ್ಮಕವಾದಾಗ ಅದರ ವಿರುದ್ಧ ಆಕ್ಷೇಪವನ್ನು ತೋರಿಸುವ ಸ್ವಾತಂತ್ರ್ಯ ಪ್ರಜಾಸತ್ತೆಯ ಒಂದು ಅನನ್ಯ ಗುಣ. ಈ ಆಕ್ಷೇಪವನ್ನು ಜನರು ವಿವಿಧ ರೂಪದಲ್ಲಿ ಮುಂದಿಡಬಹುದು. ಮುಂದಿನ ಚುನಾವಣೆಯಲ್ಲಿ ಸರಕಾರವನ್ನು ಬದಲಾಯಿಸುವುದು ಒಂದು ಮಾರ್ಗ; ಆದರೆ ಜನರ ಅಭಿಪ್ರಾಯವನ್ನು ಬಿಂಬಿಸುವ ಸಂಸತ್ತು ದಕ್ಷವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸದಿದ್ದಾಗ, ಆಳುವ ಪಕ್ಷವು ಅರ್ಥಪೂರ್ಣ ಚರ್ಚೆಗೆ ಸಂಸತ್ತಿನಲ್ಲಿ ಅವಕಾಶ ನೀಡದಿದ್ದಾಗ, ಬೀದಿಯ ಪ್ರತಿಭಟನೆ ಒಂದೇ ಜನರಿಗೆ ತಮ್ಮ ಮುನಿಸನ್ನು ಪ್ರಕಟಿಸುವ ಮಾರ್ಗವಾಗಿರುತ್ತದೆ. ಅದು ಶಾಂತಿಪೂರ್ಣವಾಗಿರಬೇಕೆಂಬುದರ ಬಗ್ಗೆ ಎರಡು ಮಾತಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿರುವ ಗಂಭೀರವಾದ ಲೋಪದೋಷಗಳ ಹಿನ್ನೆಲೆಯಲ್ಲಿ ಚುನಾವಣೆಯ ಮೂಲಕ ಸರಕಾರವನ್ನು ಬದಲಿಸಬಹುದೆಂಬುದು ಒಂದು ಭ್ರಮೆಯಾಗಿಯೇ ಉಳಿದಿದೆ. ಮಾತ್ರವಲ್ಲ ಸರಕಾರದ ನಿರ್ಧಾರಗಳು ಕೂಡಲೇ ಅನುಷ್ಠಾನವಾಗಿ ಜನಸಾಮಾನ್ಯರ ಜೀವನದ ಮೇಲೆ ಕೆಟ್ಟ ಪರಿಣಾಮಗಳು ಆಗುವ ಸಾಧ್ಯತೆ ಇದೆ. ನರೇಂದ್ರ ಮೋದಿ ಸರಕಾರವು ಸೆಪ್ಟಂಬರ್ ೨೦೨೦ರಲ್ಲಿ ಸಂಸತ್ತಿನಲ್ಲಿ ಮಂಜೂರಾದ ವಿವಾದಾತ್ಮಕವಾದ ಹೊಸ ಕೃಷಿ ಕಾಯ್ದೆಗಳನ್ನು ೨೦೨೦-೨೧ರ ರೈತರ ಪ್ರತಿಭಟನೆಯಿಂದಾಗಿ ಹಿಂಪಡೆದುದು ಇದಕ್ಕೊಂದು ನಿದರ್ಶನ. ಹೀಗಾಗಿ ಪ್ರತಿಭಟನೆಗಳು ಮುಂದಿನ ಚುನಾವಣೆಯ ಮೊದಲೇ ನಡೆಯಬೇಕಾಗುತ್ತವೆ.

ಭಿನ್ನಾಭಿಪ್ರಾಯಗಳ ಬಗ್ಗೆ ತೀವ್ರವಾದ ಅಸಹನೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹನನ, ತಮ್ಮ ನಿರ್ಧಾರವೇ ಪರಿಪೂರ್ಣ ಎಂಬ ಅಧಿಕಾರಿಶಾಹಿ ಮನೋವೃತ್ತಿ- ಇವುಗಳು ತುಂಬಿರುವ ವರ್ತಮಾನ ರಾಜಕೀಯ ಸನ್ನಿವೇಶದಲ್ಲಿ ಜಂತರ್ ಮಂತರ್ ಬಗ್ಗೆ ಸರಕಾರವು ಕೈಗೊಂಡ ನಿರ್ಧಾರ ದೇಶದ ಪ್ರಜಾಸತ್ತೆಯ ಮೇಲೆ ಮಾಡಿದ ಗಂಭೀರವಾದ ಆಘಾತ. ಜನಸಾಮಾನ್ಯರು ಬೇಗನೆ ಎಚ್ಚೆತ್ತು ಕೊಳ್ಳದಿದ್ದರೆ ‘ನಿಮ್ಮ ಪ್ರತಿಭಟನೆಗಳು ಏನಿದ್ದರೂ ಮನೆಯೊಳಗೆ ಮಾಡಿ, ಬೀದಿಯಲ್ಲಿ ಸರ್ವಥಾ ಸಾಧ್ಯವಿಲ್ಲ’ ಎಂಬ ಸುಗ್ರೀವಾಜ್ಞೆಯೂ ಈ ಸರಕಾರದಿಂದ ಹೊರಬರಬಹುದು. ಎರಡು ದಿನಗಳ ಹಿಂದೆಯಷ್ಟೆ ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ೨೦೨೨ರಲ್ಲಿ ಉತ್ತರಾಖಂಡದಲ್ಲಿ ನಡೆದ ಅಂಕಿತಾ ಭಂಡಾರಿಯ ಹತ್ಯೆಯ ಕುರಿತು ತಮಗೆ ನ್ಯಾಯ ಕೊಡಿ ಎಂಬ ಘೋಷಣಾ ಪತ್ರ ಹಿಡಿದು ಪ್ರತಿಭಟಿಸಿದ ಆಕೆಯ ಅಮ್ಮ ಮತ್ತು ಅಪ್ಪ ಅವರನ್ನು ಪೊಲೀಸರು ಸೂರ್ಯೋದಯದ ಮೊದಲೇ ಬಂಧಿಸಿದ ಘಟನೆ ಮತ್ತು ಅಕ್ಟೋಬರ ೧೬ರಂದು ಕನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಸಿಜೆಪಿಯು ರಾಷ್ಟ್ರಧ್ವಜ ಹಾರಿಸುವ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡದಿರುವ ಬೆಳವಣಿಗೆ ಈ ಮನೋಸ್ಥಿತಿಯ ಸ್ಪಷ್ಟ ಸಂಕೇತಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor