Photo: x.com/rishpardikar

ಪ್ರಸಕ್ತ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳಲಿಲ್ಲ.ತತ್ಪರಿಣಾಮವಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ.ರಾಜ್ಯದ 240 ತಾಲೂಕುಗಳ ಪೈಕಿ 237 ತಾಲೂಕುಗಳಲ್ಲಿ ಕಳೆದ ಮೂರು ವಾರಗಳಿಂದ ಮಳೆಯಾಗಿಲ್ಲ. ಈ ನಡುವೆ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರದ ತಂಡ ಬಂದು ಹೋಗಿದೆ. ರಾಜ್ಯದ ವಿವಿಧೆಡೆ ಪ್ರವಾಸ ಮಾಡಿದ ಕೇಂದ್ರದ ತಂಡ ಬರ ಪರಿಸ್ಥಿತಿಯ ಭೀಕರತೆಯನ್ನು ಕಣ್ಣಾರೆ ಕಂಡಿದೆ.

ಕೃಷಿ ಕ್ಷೇತ್ರದ ಚೇತರಿಕೆಗೆ ಸಂಜೀವಿನಿಯಾದ ಮುಂಗಾರು ಮಳೆ ಈ ಸಲ ರೈತಾಪಿ ವರ್ಗದ ನಿರೀಕ್ಷೆಯನ್ನು ಹುಸಿಗೊಳಿಸಿತು. ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರಾಸರಿ ಶೇ.30ರಷ್ಟು ಮಳೆಯ ಕೊರತೆಯನ್ನು ಅನುಭವಿಸಿತು. ಶೇ.50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನೇಗಿಲ ಯೋಗಿಯ ಮೇಲಿನ ಸಾಲದ ಹೊರೆ ಮತ್ತು ಬೆಳೆ ಹಾನಿಯಿಂದಾಗಿ ಕಳೆದ ಎರಡು ತಿಂಗಳ ಕಾಲಾವಧಿಯಲ್ಲಿ 10 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರದ ತೀವ್ರತೆಯ ಪರಿಣಾಮವಾಗಿ ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿದೆ. ಬಿತ್ತಿದ ಬೆಳೆಗಳು ಒಣಗಿ ಹೋಗಿವೆ. ಹಗಲೂ ರಾತ್ರಿ ಮೈ ಬೆವರು ಸುರಿಸಿ ಬೆಳೆದ ಬೆಳೆ ಕಮರಿ ಹೋಗಿದೆ.ಜೋಳ, ಸೂರ್ಯಕಾಂತಿ, ತೊಗರಿ, ಗೋಧಿ ಸೇರಿದಂತೆ ಹಲವು ಪ್ರಮುಖ ಬೆಳೆಗಳು ರೈತನ ಕೈಗೆ ಬರಲಿಲ್ಲ. ಮುಂಗಾರಿನಲ್ಲಾದ ನಷ್ಟವನ್ನು ಹಿಂಗಾರು ಸರಿದೂಗಿಸಬಹುದೆಂಬ ನಿರೀಕ್ಷೆಯೂ ಈಗ ಉಳಿದಿಲ್ಲ. ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಅಂದಾಜು ರೈತರ ಆತಂಕವನ್ನು ಇನ್ನಷ್ಟು ಜಾಸ್ತಿ ಮಾಡಿದೆ. ಹೀಗಾಗಿ ರೈತಾಪಿ ವರ್ಗದ ಸುತ್ತ ಕತ್ತಲು ಕವಿದಂತಾಗಿದೆ.

ಬರಗಾಲವೆಂದರೆ ಬೆಳೆ ಹಾನಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲಿ ದನಕರುಗಳಿಗೆ ಮೇವಿನ ಕೊರತೆ ಮತ್ತು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕೃಷಿ ಕಾರ್ಮಿಕರ ಪರಿಸ್ಥಿತಿಯಂತೂ ಇನ್ನೂ ಶೋಚನೀಯ. ಊರಿನಲ್ಲಿ ಉದ್ಯೋಗವಿಲ್ಲದೆ ಅವರು ಮಹಾನಗರಗಳಿಗೆ, ಅಕ್ಕಪಕ್ಕದ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ವಲಸೆ ಹೋಗುವ ರೈತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅನೇಕ ಹಳ್ಳಿಗಳು ಸಂಪೂರ್ಣ ಖಾಲಿಯಾಗಿವೆ. ಇಂಥ ದಾರುಣ ಪರಿಸ್ಥಿತಿಯಲ್ಲಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲು ಕೇಂದ್ರದ ತಂಡ ಬಂದು ಹೋಗಿದೆ. ರಾಜ್ಯ ಸರಕಾರದಿಂದ ಹಾಗೂ ಪ್ರತಿಪಕ್ಷ ನಾಯಕರಿಂದ ಬರ ಪರಿಸ್ಥಿತಿ ಬಗ್ಗೆ ಮನವಿಯನ್ನು ಸಲ್ಲಿಸಲಾಗಿದೆ.

ಕೇಂದ್ರದ ತಂಡ ಕಾಟಾಚಾರಕ್ಕೆ ಬಂದು ಹೋದರೆ ಸಾಲದು. ಬರಗಾಲ ಮತ್ತು ನೆರೆ ಹಾವಳಿಯಂಥ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಇಡೀ ರಾಜ್ಯ ಪಕ್ಷಭೇದ ಬದಿಗಿಟ್ಟು ಒಂದಾಗಿ ನಿಲ್ಲಬೇಕು. ಹಿಂದೆಲ್ಲಾ ಇಂಥ ಪರಿಸ್ಥಿತಿ ಎದುರಾದಾಗ ಒಂದಾಗಿ ನಿಂತ ಉದಾಹರಣೆಗಳಿವೆ.ಆದರೆ ವಿಷಾದದ ಸಂಗತಿ ಅಂದರೆ ಈ ಬಾರಿ ಬರ ಪರಿಹಾರದ ನೆರವು ಕೋರಲು ರಾಜಧಾನಿ ದಿಲ್ಲಿಗೆ ತೆರಳಲಿರುವ ಸರ್ವಪಕ್ಷ ನಿಯೋಗದಿಂದ ಹೊರಗುಳಿಯಲು ಬಿಜೆಪಿ ಮತ್ತು ಜೆಡಿಎಸ್ ತೀರ್ಮಾನಿಸಿವೆ. ಇದು ಸರಿಯಲ್ಲ. ಪ್ರತಿಪಕ್ಷಗಳ ಈ ನಕಾರಾತ್ಮಕ ನಿಲುವಿನಿಂದ ಕೇಂದ್ರ ಸರಕಾರದಿಂದ ನೆರವು ಪಡೆಯುವ ರಾಜ್ಯದ ಪ್ರಯತ್ನ ಯಶಸ್ವಿಯಾಗುವ ಸಾಧ್ಯತೆ ಕಡಿಮೆ.

ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ದಿಲ್ಲಿಗೆ ಹೋಗಲು ತೀರ್ಮಾನಿಸಿರುವುದು ಸೂಕ್ತವಾಗಿದೆ. ಇದನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋರ್ ಅವರು ಕಟುವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲ ಇದನ್ನು ರಾಜಕೀಯ ಪ್ರಹಸನ ಎಂದು ಕರೆದಿದ್ದಾರೆ. ನಿಯೋಗದ ಖರ್ಚು ವೆಚ್ಚಗಳ ಬಗ್ಗೆ ಅನಗತ್ಯ ತಕರಾರು ತೆಗೆದಿದ್ದಾರೆ. ಅತ್ಯಂತ ತೀವ್ರ ಬರಗಾಲದ ಭೀಕರತೆಯಿಂದ ಇಡೀ ಕರ್ನಾಟಕ ತತ್ತರಿಸಿ ಹೋಗಿರುವಾಗ ಅದಕ್ಕಿಂತಲೂ ಅಧಿಕಾರ ರಾಜಕೀಯ ಇವರಿಗೆ ಮುಖ್ಯವಾಗಿದೆ.

ಕರ್ನಾಟಕದಿಂದ 17 ಲೋಕಸಭಾ ಸದಸ್ಯರು ಮತ್ತು 6 ಮಂದಿ ರಾಜ್ಯಸಭಾ ಸದಸ್ಯರು ಬಿಜೆಪಿಯಿಂದ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.ಆದರೂ ಕೇಂದ್ರದಿಂದ ರಾಜ್ಯಕ್ಕೆ ಸೂಕ್ತವಾದ ನೆರವು ಸಿಗುತ್ತಿಲ್ಲ ಹಾಗೂ ಅನುದಾನ ಬಿಡುಗಡೆಯಲ್ಲೂ ಅನ್ಯಾಯವಾಗುತ್ತಿದೆ. ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಮಂತ್ರಿಗಳು ಮತ್ತು ಬಿಜೆಪಿ ಸಂಸದರು ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ವಿಫಲಗೊಂಡಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಏಕೈಕ ಕಾರಣಕ್ಕಾಗಿ ರಾಜ್ಯಕ್ಕೆ ಕೇಂದ್ರದಿಂದ ಬರುವ ನೆರವಿನ ಬಗ್ಗೆ ನಕಾರಾತ್ಮಕ ಧೋರಣೆ ತಾಳುವುದು ಸರಿಯಲ್ಲ.

ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ನೆರವು ಬೇಕೆಂದು ಬಿಜೆಪಿ ನಾಯಕರು ಪತ್ರಿಕಾ ಹೇಳಿಕೆಯನ್ನೇನೋ ನೀಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ನಾಯಕರು ಕೋಪಿಸಿಕೊಳ್ಳುತ್ತಾರೆ ಎಂಬ ಹೆದರಿಕೆಯಿಂದಾಗಿ ರಾಜ್ಯ ಬಿಜೆಪಿ ನಾಯಕರು ನಿಯೋಗದಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದಾರೆ ಎಂಬ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ರಾಜ್ಯದ ರೈತಾಪಿ ವರ್ಗದ ಹಿತಾಸಕ್ತಿಗಿಂತ ಸ್ವಪಕ್ಷದ ಹಿತಾಸಕ್ತಿ ಮುಖ್ಯವಾದಾಗ ಹೀಗಾಗುತ್ತದೆ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದು ಇದು ಮೊದಲ ಸಲವೇನಲ್ಲ. 2024ರಲ್ಲಿ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರದಲ್ಲಿ ವಿಳಂಬವಾದಾಗ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಬೇಕಾಯಿತು. ರಾಜ್ಯ ಸರಕಾರ 18,171 ಕೋಟಿ ರೂ. ನೆರವು ಕೋರಿದ್ದರೂ ಕೇಂದ್ರದಿಂದ ದೊರಕಿದ್ದು 3,498 ಕೋಟಿ ರೂ. ಮಾತ್ರ. ರಾಜ್ಯದ ಬೇಡಿಕೆ ಮತ್ತು ಕೇಂದ್ರದ ನೀಡಿಕೆ ನಡುವೆ ಇರುವ ಬಹುದೊಡ್ಡ ಅಂತರವು ಅನ್ಯಾಯಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇನ್ನಾದರೂ ರಾಜ್ಯದ ಪ್ರತಿಪಕ್ಷಗಳು ಬರ ಪರಿಸ್ಥಿತಿಯನ್ನು ಎದುರಿಸಲು ಸರಕಾರದ ನೆರವಿಗೆ ಬರಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor