ಬಹಿರಂಗವಾದ ಕಲೆಯೊಳಗಿನ ‘ಬಣ್ಣ’

Update: 2024-03-25 06:51 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಲೆ ಜಾತಿ, ಧರ್ಮ, ದೇಶಗಳ ಗಡಿಗಳನ್ನು ಮೀರಿ ಮನಸ್ಸುಗಳನ್ನು ಬೆಸೆಯುತ್ತದೆ ಎನ್ನುವ ನಂಬಿಕೆಯಿದೆ. ಆದರೆ ದುರದೃಷ್ಟವಶಾತ್ ಭಾರತದಲ್ಲಿ ಕಲೆ, ಸಂಗೀತಗಳೂ ಜಾತಿ, ಧರ್ಮಗಳ ಕಳಂಕದಿಂದ ಹೊರಬರುವುದಕ್ಕೆ ಇನ್ನೂ ಒದ್ದಾಡುತ್ತಿದೆಯೆನ್ನುವ ಕಠೋರ ವಾಸ್ತವವನ್ನು ಕೇರಳದಲ್ಲಿ ಹಿರಿಯ ಕಲಾವಿದೆ ‘ಕಲಾ ಮಂಡಲಂ ಸತ್ಯಭಾಮ’ ಆಡಿರುವ ಮಾತುಗಳು ಬಹಿರಂಗ ಪಡಿಸಿವೆ. ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಕಲಾಮಂಡಲಂ ಸತ್ಯಭಾಮ ‘‘ಮೋಹಿನಿ ಆಟ್ಟಂನ್ನು ಕಪ್ಪು ವರ್ಣದ ಕುರೂಪಿ ಜನರು ಆಡಬಾರದು’ ಎಂದು ಫತ್ವಾ ಹೊರಡಿಸಿದರು. ಹೀಗೆ ಫತ್ವಾ ಹೊರಡಿಸುವ ಹೊತ್ತಿನಲ್ಲಿ ಆಕೆ ಪರೋಕ್ಷವಾಗಿ ಖ್ಯಾತ ಮೋಹಿನಿಯಾಟ್ಟಂ ಕಲಾವಿದರಾಗಿರುವ ಆರ್ ಎಲ್‌ ವಿ  ರಾಮಕೃಷ್ಣನ್ ಅವರನ್ನೇ ಉದ್ದೇಶಿಸಿ ಟೀಕಾ ಬಾಣಗಳನ್ನು ಹರಿಬಿಟ್ಟಿದ್ದರು. ‘‘ಚಾಲಕ್ಕುಡಿಯಲ್ಲಿ ಒಬ್ಬ ಮೋಹಿನಿಯಾಟ್ಟಂ ಕಲಾವಿದನಿದ್ದಾನೆ. ನೋಡಿದರೆ ಕಾಗೆಗಿಂತಲೂ ಕಪ್ಪು, ಕುರೂಪಿ. ಮೋಹಿಯಾಟ್ಟಂನ್ನು ಕುರೂಪಿ ಕಪ್ಪು ವರ್ಣದ ಗಂಡಸರು ಯಾವ ಕಾರಣಕ್ಕೂ ಆಡಬಾರದು. ಇದು ಮೋಹಿನಿಯಾಟ್ಟಕ್ಕೆ ಮಾಡುವ ಅಪಚಾರ’’ ಎಂದು ಹೇಳಿದ್ದರು. ಚಾಲಕ್ಕುಡಿ ಎಂದಾಗ ನೆನಪಿಗೆ ಬರುವುದು ಮೋಹಿನಿಯಾಟ್ಟಂನಲ್ಲಿ ಡಾಕ್ಟರೇಟ್ ಪಡೆದಿರುವ ಖ್ಯಾತ ನೃತ್ಯ ಕಲಾವಿದ ರಾಮಕೃಷ್ಣನ್. ಇವರು ಖ್ಯಾತ ಸಿನೆಮಾ ನಟ ದಿವಂಗತ ಕಲಾಭವನ್ ಮಣಿ ಅವರ ಸೋದರ. ಶಾಸ್ತ್ರೀಯ ನೃತ್ಯ ಕಲೆಯಲ್ಲಿ ಅಪಾರ ಸಾಧನೆಯನ್ನು ಮಾಡಿರುವ ರಾಮಕೃಷ್ಣನ್ ನೂರಾರು ವಿದ್ಯಾರ್ಥಿಗಳ ಆದರ್ಶವಾಗಿದ್ದಾರೆ. ಇಂತಹ ಕಲಾವಿದನನ್ನೇ ಗುರಿಯಾಗಿಸಿ ಸತ್ಯಭಾಮ ಯಾಕೆ ಟೀಕೆ ಮಾಡಿದರು ಎನ್ನುವುದು ಇದೀಗ ಕೇರಳಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

‘ಸತ್ಯಭಾಮಾ ಅವರಿಗೆ ಬಣ್ಣ ಎನ್ನುವುದು ಒಂದು ನೆಪ ಮಾತ್ರ. ಅವರಿಗೆ ಸಮಸ್ಯೆಯಾಗಿರುವುದು ನನ್ನ ಜಾತಿ. ಜಾತಿಯನ್ನು ಉಲ್ಲೇಖಿಸಿದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಎನ್ನುವ ಕಾರಣಕ್ಕಾಗಿ ಬಣ್ಣವನ್ನು ಮುಂದಿಟ್ಟಿದ್ದಾರೆ’ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ ರಾಮಕೃಷ್ಣನ್. ಶಾಸ್ತ್ರೀಯ ನೃತ್ಯವನ್ನು ಕಲಿಯುವ ಸಂದರ್ಭದಲ್ಲೂ ತನ್ನ ಜಾತಿ, ಬಣ್ಣದ ಕಾರಣಕ್ಕಾಗಿ ಏನೆಲ್ಲ ಕಿರುಕುಳಗಳನ್ನು ಎದುರಿಸಬೇಕಾಯಿತು ಎನ್ನುವುದನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ತನ್ನ ಕಲಿಕೆಯ ಸಂದರ್ಭದಲ್ಲಿ ಅಣ್ಣ ಕಲಾಭವನ್ ಮಣಿ ಅವರು ಬೆಂಬಲವಾಗಿ ನಿಲ್ಲದೇ ಇದ್ದಿದ್ದರೆ ಈ ಕ್ಷೇತ್ರದಲ್ಲಿ ಇಷ್ಟೊಂದು ಸಾಧಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎನ್ನುವುದನ್ನು ಸ್ಮರಿಸಿಕೊಂಡಿದ್ದಾರೆ. ಸತ್ಯಭಾಮಾ ವಿರುದ್ಧ ಮೊಕದ್ದಮೆ ದಾಖಲಿಸುವ ನಿರ್ಧಾರವನ್ನು ಅವರು ಮಾಡಿದ್ದಾರೆ. ತನ್ನ ಹೇಳಿಕೆಗೆ ಸತ್ಯಭಾಮಾ ಅವರು ಚೂರೇ ಚೂರು ಪಶ್ಚಾತ್ತಾಪವನ್ನು ವ್ಯಕ್ತಪಡಿಸಿಲ್ಲ. ಬದಲಿಗೆ ಅದನ್ನು ಇನ್ನಷ್ಟು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸತ್ಯಾಭಾಮಾ ಹೇಳಿಕೆಯ ವಿರುದ್ಧ ಇಡೀ ಕೇರಳ ತಿರುಗಿ ಬಿದ್ದಿದೆ ಎನ್ನುವುದು ಸಮಾಧಾನಕರ ವಿಷಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಭಾಮಾರನ್ನು ಟೀಕಿಸಿ, ಅಣಕಿಸಿ, ಖಂಡಿಸಿ ಸಾಲು ಸಾಲು ವೀಡಿಯೋಗಳು, ರೀಲ್ಸ್ ಗಳು ಹೊರ ಬರುತ್ತಿವೆ. ಇದೇ ಸಂದರ್ಭದಲ್ಲಿ ಕೇರಳದ ಪ್ರತಿಷ್ಠಿತ ನೃತ್ಯ ವಿಶ್ವವಿದ್ಯಾಲಯ ಕಲಾಮಂಡಲಂ ಸತ್ಯಭಾಮಾ ಅವರ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿದೆ. ‘ಸತ್ಯಭಾಮಾ ಒಂದು ಕಾಲದಲ್ಲಿ ಕಲಾಮಂಡಲಂನ ವಿದ್ಯಾರ್ಥಿನಿಯಾಗಿರಬಹುದು. ಅದಕ್ಕೆ ಹೊರತಾದ ಯಾವ ಸಂಬಂಧವೂ ಕಲಾಮಂಡಲಂ ಜೊತೆಗೆ ಅವರು ಹೊಂದಿಲ್ಲ. ಅವರ ಹೇಳಿಕೆ ಖಂಡನೀಯ’ ಎಂದು ಪ್ರಕಟನೆಯನ್ನು ಹೊರಡಿಸಿದೆ. ಒಂದು ಕಾಲದಲ್ಲಿ ಜಾತೀಯ ಅಸಮಾನತೆಗೆ ಕುಖ್ಯಾತಿಯನ್ನು ಪಡೆದಿದ್ದ ಕೇರಳ ಕಮ್ಯುನಿಸಂ, ನಾರಾಯಣಗುರು ಚಳವಳಿಗಳಿಂದ ಬದಲಾಗುತ್ತಾ ಬಂತು. ಇಂದು ಕೇರಳ ಸಾಮಾಜಿಕ ಸುಧಾರಣೆಗಾಗಿ ಇಡೀ ದೇಶಕ್ಕೆ ಮಾದರಿಯಾಗಿದೆ. ಇಷ್ಟಾದರೂ ಅದರ ತಳದಲ್ಲಿ ಹೇಗೆ ಜಾತೀಯ ಜಿಡ್ಡು ಇನ್ನೂ ಅಂಟಿಕೊಂಡಿದೆ ಎನ್ನುವ ಅಂಶವನ್ನು ಇದು ಬಹಿರಂಗಪಡಿಸಿದೆ.

ಭಾರತದಲ್ಲಿ ನೃತ್ಯ, ಸಂಗೀತ ಕಲೆ ಹೇಗೆ ಬೆಳೆದು ಬಂತು ಎನ್ನುವುದನ್ನು ಅರಿತವರಿಗಷ್ಟೇ ಈ ಕಲೆ ಹೇಗೆ ಜಾತಿ ರಾಜಕೀಯಕ್ಕೆ ಬಲಿಯಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಈ ದೇಶದಲ್ಲಿ ಸಂಗೀತ, ನೃತ್ಯವನ್ನು ಬೆಳೆಸಿಕೊಂಡು ಬಂದುದು ಕೆಳಜಾತಿಯ ಶೋಷಿತ ಸಮುದಾಯದ ಜನರು. ರಾಜರ ಆಸ್ಥಾನದಲ್ಲಿ ನೃತ್ಯ, ಸಂಗೀತದ ಮೂಲಕ ರಂಜಿಸುತ್ತಿದ್ದವರ ಸ್ಥಾನ ಸಮಾಜದಲ್ಲಿ ಹೇಗಿತ್ತು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಉಳಿದಂತೆ, ಈ ದೇಶದ ದೇವದಾಸಿಯರು ಸಂಗೀತ, ನೃತ್ಯದ ಮೂಲಕ ತಮ್ಮ ಬದುಕು ಕಟ್ಟಿಕೊಂಡು ಬಂದರು. ಅವರಿಂದ ಉಳಿದು, ಬೆಳೆದು ಬಂದ ಈ ಸಂಗೀತ ನೃತ್ಯ ನಿಧಾನಕ್ಕೆ ಮೇಲ್ಜಾತಿಯ ಜನರ ಕೈವಶವಾಗುತ್ತಿದ್ದಂತೆಯೇ ಅದಕ್ಕೆ ಏಕಾಏಕಿ ಜಾತಿ ಪಾವಿತ್ರ್ಯ ಬಂತು. ಯಾರು ಕಲೆಯನ್ನು ಉಳಿಸಿ ಬೆಳೆಸಿದರೋ ಅವರನ್ನು ಹೊರ ಹಾಕಿ, ಮೇಲ್ಜಾತಿಯ ಜನರು ಅದರ ಸಕಲ ಸೌಲಭ್ಯಗಳನ್ನು ಇಂದು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಕೆಳಜಾತಿಯ ಶೋಷಿತ ಸಮುದಾಯದ ಜನರನ್ನು ಅವರ ಜಾತಿ ಮತ್ತು ಬಣ್ಣದ ಕಾರಣವನ್ನು ಮುಂದಿಟ್ಟುಕೊಂಡು ದೂರವಿಡುವ ಪ್ರಯತ್ನ ನಡೆಯುತ್ತಿದೆ. ಸತ್ಯಭಾಮಾ ಅವರ ಹೇಳಿಕೆ ವೈಯಕ್ತಿಕವಾದುದಲ್ಲ. ಅದರ ಹಿಂದೆ ಕೆಲವು ಜಾತಿ ಹಿತಾಸಕ್ತಿಗಳು ಕೆಲಸ ಮಾಡಿವೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಭಾರತದಲ್ಲಿ ಕಲೆ, ಸಂಗೀತಗಳನ್ನು ಜಾತಿ ಮನಸ್ಸುಗಳು ಹೇಗೆ ನಿಯಂತ್ರಿಸುತ್ತಾ ಬರುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯಾಗಿದೆ ಇತ್ತೀಚಿನ ಕರ್ನಾಟಕ ಸಂಗೀತ ಕಲಾವಿದ ಟಿ. ಎಂ. ಕೃಷ್ಣ ಪ್ರಕರಣ. ಮದ್ರಾಸ್ ಮ್ಯೂಸಿಕ್ ಅಕಾಡಮಿಯು ಇತ್ತೀಚೆಗೆ ಪ್ರತಿಷ್ಠಿತ ‘ಕಲಾನಿಧಿ’ ಪ್ರಶಸ್ತಿಯನ್ನು ಟಿ. ಎಂ. ಕೃಷ್ಣ ಅವರಿಗೆ ಘೋಷಿಸಿತ್ತು. ಕಲಾನಿಧಿ ಪ್ರಶಸ್ತಿಯೆಂದರೆ ಸಂಗೀತ ಕ್ಷೇತ್ರದ ಪಾಲಿಗೆ ಆಸ್ಕರ್ ಪ್ರಶಸ್ತಿಯಿದ್ದಂತೆ. ಟಿ. ಎಂ. ಕೃಷ್ಣ ಅವರು ಕಳೆದ ಒಂದು ದಶಕದಿಂದ ಸಂಗೀತದ ಮೂಲಕ ಒಡೆದು ಹೋದ ಸಮಾಜವನ್ನು, ಮನಸ್ಸನ್ನು ಬೆಸೆಯುವ ಬಹುದೊಡ್ಡ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. ಕರ್ನಾಟಕ ಸಂಗೀತವನ್ನು ಈ ಸೌಹಾರ್ದದ ಕೆಲಸಕ್ಕೆ ಪರಿಣಾಮಕಾರಿಯಾಗಿ ಬಳಸುವ ಪ್ರಯೋಗ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಆದರೆ ಇವರಿಗೆ ಕಲಾನಿಧಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ, ಖ್ಯಾತ ಗಾಯಕಿಯರಾದ ರಂಜನಿ, ಗಾಯತ್ರಿ ಮತ್ತು ಇನ್ನು ಕೆಲವರು ಅದನ್ನು ವಿರೋಧಿಸಿದ್ದಾರೆ. ಮಾತ್ರವಲ್ಲ, ಅಕಾಡಮಿಯ ಸಮಾವೇಶಕ್ಕೆ ಬಹಿಷ್ಕಾರ ಹಾಕಿದ್ದಾರೆ. ಕೃಷ್ಣ ಅವರು ಶಾಸ್ತ್ರೀಯ ಸಂಗೀತವನ್ನು ಕುಲಗೆಡಿಸಿದ್ದಾರೆ ಎನ್ನುವುದು ಅವರ ಅಭಿಪ್ರಾಯ. ಶಾಸ್ತ್ರೀಯ ಸಂಗೀತವನ್ನು ಜಾತಿಯ ಗರ್ಭಗುಡಿಯಿಂದ ಹೊರಗೆ ತಂದು ಅದನ್ನು ಬೀದಿಯಲ್ಲಿ ಹಾಡಿದ್ದೇ ಇವರ ಪಾಲಿಗೆ ಬಹುದೊಡ್ಡ ಅಪರಾಧವಾಗಿದೆ. ಅಷ್ಟೇ ಅಲ್ಲ, ಕೃಷ್ಣ ಅವರು ಕರ್ನಾಟಕ ಸಂಗೀತಕ್ಕೆ ಪೆರಿಯಾರ್ ಕುರಿತ ಹಾಡುಗಳನ್ನು ಅಳವಡಿಸಿದರು. ಪ್ರವಾದಿ ಮುಹಮ್ಮದರ ಗುಣಗಾನಗಳಿರುವ ಅರೇಬಿಕ್ ಹಾಡುಗಳನ್ನು ಕರ್ನಾಟಕ ಸಂಗೀತದಲ್ಲಿ ಹಾಡಿದರು. ಇವೆಲ್ಲವೂ ಸಂಗೀತ ಲೋಕದಲ್ಲಿರುವ ಬ್ರಾಹ್ಮಣ್ಯ ಮನಸ್ಸನ್ನು ಕೆರಳಿಸಿತ್ತು. ಈ ಕಾರಣಕ್ಕಾಗಿಯೇ ಕಲಾನಿಧಿ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ನೀಡಿರುವುದು ಅಪರಾಧವಾಗಿ ಕಂಡಿದೆ.

ಎಲ್ಲ ಜಾತಿ, ಧರ್ಮಗಳ ಗಡಿಗಳನ್ನು ಮೀರಿ ಮನಸ್ಸುಗಳನ್ನು ಬೆಸೆಯಬೇಕಾಗಿದ್ದ ಸಂಗೀತವನ್ನು ಭಾರತದಲ್ಲಿ ಕೆಲವು ವರ್ಗ ತಮ್ಮ ಹಿಡಿತದಲ್ಲಿಡಲು ಹೊರಟಿರುವುದು ಆಘಾತಕಾರಿಯಾಗಿದೆ. ಇಲ್ಲಿ ಸಂಗೀತದ ಅಳಿವು ಉಳಿವು ಆನಂತರದ ಪ್ರಶ್ನೆ. ಇದು ಮನುಷ್ಯತ್ವದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ನಾವು ಖಂಡಿಸಬೇಕಾಗಿರುವುದು ಸಂಗೀತಗಾರರು, ಕಲಾವಿದರು ಎಂದು ಕರೆಸಿಕೊಂಡವರಲ್ಲಿ ಇರುವ ಈ ಜಾತಿ ಮೇಲರಿಮೆಯನ್ನು. ಮನುಷ್ಯರೆಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಲು ಸಾಧ್ಯವಾಗದ ಈ ಕಲಾವಿದರ ಕಲೆ ಯಾವ ಕಾರಣಕ್ಕೂ ಗೌರವಾನ್ವಿತ ಎನಿಸಿಕೊಳ್ಳುವುದಿಲ್ಲ. ಕಲಾವಿದರೊಳಗೇ ಬದಲಾವಣೆಗಳನ್ನು ತರಲು ವಿಫಲವಾಗಿರುವ ಅವರ ಸಂಗೀತ, ನೃತ್ಯಗಳು ಸಮಾಜದಲ್ಲಿ ತನ್ನ ಸತ್ ಪರಿಣಾಮವನ್ನು ಬೀರುತ್ತದೆ ಎಂದು ನಾವು ಭಾವಿಸುವುದಾದರೂ ಹೇಗೆ?

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News