×
Ad

ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ

Update: 2025-12-30 08:30 IST

PC : PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜಾಗತೀಕರಣದ ಶಕೆ ಆರಂಭವಾದ ನಂತರ ನಮ್ಮ ಬೆಟ್ಟ, ಗುಡ್ಡ, ನದಿ ಹಾಗೂ ನಿತ್ಯ ಹರಿದ್ವರ್ಣದ ಕಾಡುಗಳು ಅಭಿವೃದ್ಧಿಯ ಅಟ್ಟಹಾಸಕ್ಕೆ ಆಹುತಿಯಾಗುತ್ತಲೇ ಇವೆ. ದಕ್ಷಿಣ ಭಾರತದ ಜೀವಸೆಲೆಗಳಂತಿರುವ ಪಶ್ಚಿಮ ಘಟ್ಟಗಳು ನಿತ್ಯ ಯಾತನೆಯನ್ನು ಅನುಭವಿಸುತ್ತಿವೆ. ಹಾಗಾಗಿಯೇ ಇಲ್ಲಿನ ಸೂಕ್ಷ್ಮ ಪರಿಸರಕ್ಕೆ ಕಂಟಕವಾಗಬಹುದಾದ ‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆಯ ಬಗ್ಗೆ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಮಲೆನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ದಕ್ಷಿಣದಲ್ಲಿ ಪರಿಸರ ನಾಶಕ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವಂತೆ ಉತ್ತರ ಭಾರತದಲ್ಲಿ ಕೂಡ ಅರಾವಳಿ ಪರ್ವತ ಶ್ರೇಣಿಗಳಿಗೆ ಎದುರಾಗಿರುವ ಅಪಾಯದ ಬಗ್ಗೆ ಅಲ್ಲಿನ ಜನ ಹೋರಾಟಕ್ಕೆ ಇಳಿದಿದ್ದಾರೆ. ಅರಾವಳಿ ಪರ್ವತ ಪರಿಸರದಲ್ಲಿ ಗಣಿಗಾರಿಕೆ, ರಿಯಲ್ ಎಸ್ಟೇಟ್ ಸೇರಿದಂತೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ವಿರುದ್ಧ ಜನರು ಬೀದಿಗಿಳಿದಿದ್ದಾರೆ. ರಾಜಸ್ಥಾನ ಮತ್ತು ಹರ್ಯಾಣಗಳಲ್ಲಿ ವ್ಯಾಪಕ ಪ್ರತಿಭಟನೆ ಶುರುವಾಗಿದೆ. ಅದರಲ್ಲೂ ಅರಾವಳಿ ಪರ್ವತ ಶ್ರೇಣಿಯ ಬಗ್ಗೆ ಕೇಂದ್ರ ಪರಿಸರ ಸಚಿವಾಲಯದ ವ್ಯಾಖ್ಯೆಯನ್ನು ಸುಪ್ರೀಂ ಕೋರ್ಟ್ ಮೊದಲು ಒಪ್ಪಿಕೊಂಡಿದ್ದರಿಂದ ಪ್ರತಿಭಟನೆ ತೀವ್ರಗೊಂಡಿತು.ಗುಜರಾತ್, ರಾಜಸ್ಥಾನ, ದಿಲ್ಲಿ ಮತ್ತು ಹರ್ಯಾಣಗಳಲ್ಲಿ ವ್ಯಾಪಿಸಿರುವ ಅರಾವಳಿ ಪರ್ವತ ಸಾಲು ಜಗತ್ತಿನಲ್ಲೇ ಅತ್ಯಂತ ಹಳೆಯದಾದ ಬೆಟ್ಟ ಸಾಲುಗಳಲ್ಲಿ ಒಂದು ಎಂಬ ಪ್ರತೀತಿಯನ್ನು ಹೊಂದಿದೆ. ಹಸಿರು ಶ್ವಾಸಕೋಶಗಳೆಂದು ಹೆಸರಾಗಿರುವ ಈ ಪರ್ವತ ಶ್ರೇಣಿ ಜೀವ ವೈವಿಧ್ಯದ ತಾಣವಾಗಿದೆ. ತಾನು ಹಬ್ಬಿಕೊಂಡಿರುವ ಪ್ರದೇಶ ಮರಳುಗಾಡು ಆಗದಂತೆ ಕಾಪಾಡಿಕೊಂಡು ಬಂದಿದೆ. ಅರಾವಳಿ ಪರ್ವತ ಶ್ರೇಣಿಗೆ ಮಾರಕವಾದ ಗಣಿಗಾರಿಕೆ, ರಿಯಲ್ ಎಸ್ಟೇಟ್ ಮತ್ತಿತರ ಚಟುವಟಿಕೆಗಳು ನಡೆಯುವುದನ್ನು ವಿರೋಧಿಸಿ ಚಳವಳಿ ತೀವ್ರಗೊಂಡ ನಂತರ ಕೇಂದ್ರ ಪರಿಸರ ಮಂತ್ರಿ ಭೂಪೇಂದರ್ ಯಾದವ್ ಸ್ಪಷ್ಟೀಕರಣ ನೀಡಿ ವಿಸ್ತೃತ ಅಧ್ಯಯನ ನಡೆಸಿದ ನಂತರ ಮಾತ್ರ ಗಣಿಗಾರಿಕೆಗೆ ಹೊಸ ಪರವಾನಿಗೆಯನ್ನು ನೀಡುವುದಾಗಿ ತಿಳಿಸಿದ್ದಾರೆ.

ಆದರೆ ಮಂತ್ರಿಗಳ ಮಾತಿನ ಮೇಲೆ ಜನರಿಗೆ ನಂಬಿಕೆಯಿಲ್ಲ. ಈಗಾಗಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಒಳ ಬೆಂಬಲದೊಂದಿಗೆ ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಈ ಅಕ್ರಮ ಗಣಿಗಾರಿಕೆಗೆ ಇರುವ ಕಾನೂನಿನ ತೊಡಕುಗಳನ್ನು ಪರಿಹರಿಸುವ ಪ್ರಯತ್ನಗಳೂ ನಡೆಯುತ್ತಿವೆ. ಈ ಅಕ್ರಮ ಗಣಿಗಾರಿಕೆಯ ಪರಿಣಾಮವಾಗಿ ಕೆಲವೆಡೆ ಪರ್ವತಗಳು ಶಿಥಿಲವಾಗಿವೆ. ಹೀಗಾಗಿ ಸಾರ್ವಜನಿಕ ಪ್ರತಿಭಟನೆಗಳು ತೀವ್ರಗೊಂಡಿವೆ. ಮೊದಲು ಅರಾವಳಿ ಪರ್ವತ ಶ್ರೇಣಿಯ ರಕ್ಷಣೆಗೆ ಪೂರಕವಾದ ನಿರ್ದೇಶನಗಳನ್ನು ನೀಡಿದ ಸುಪ್ರೀಂ ಕೋರ್ಟ್ ಈ ಪ್ರದೇಶದಲ್ಲಿ ಪರಿಸರಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಚಟುವಟಿಕೆಗಳಿಗೆ ಪರವಾನಿಗೆ ನೀಡಕೂಡದೆಂದು ಸರಕಾರ ಮತ್ತು ಅಧಿಕಾರಿಗಳಿಗೆ ತಾಕೀತು ಮಾಡಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಪರಿಸರ ಸಚಿವಾಲಯ ಬೇರೆ ವ್ಯಾಖ್ಯಾನ ನೀಡಿದ ನಂತರ ಅದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದರಿಂದ ಜನರಿಗೆ ತೀವ್ರ ಆತಂಕ ಉಂಟಾಯಿತು. ಸರಕಾರ ನೀಡಿರುವ ಸ್ಪಷ್ಟೀಕರಣ ಹಾಗೂ ಮರು ವ್ಯಾಖ್ಯಾನದಲ್ಲಿ ವಾಸ್ತವ ಪರಿಸ್ಥಿತಿಯನ್ನು ಮರೆ ಮಾಚಲಾಗಿದೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾದ ಅಂಶವಾಗಿದೆ. ‘ಫಾರೆಸ್ಟ್ ಸರ್ವೇ ಆಫ್ ಇಂಡಿಯಾ’ ರೂಪಿಸಿದ ಮಾನದಂಡಗಳನ್ನು ಪರಿಸರ ಸಚಿವಾಲಯದ ಸಮಿತಿ ಪರಿಗಣನೆಗೆ ತೆಗೆದುಕೊಳ್ಳದಿರುವುದು ಕೂಡ ಜನರ ಕೋಪಕ್ಕೆ ಕಾರಣವಾದ ಅಂಶವಾಗಿದೆ.

ಸದರಿ ಪ್ರದೇಶದ ಪರಿಸರ ಸಂರಕ್ಷಣೆಯ ಬಗ್ಗೆ ಪ್ರಾಮಾಣಿಕ ಕಾಳಜಿಯನ್ನು ಹೊಂದಿರದ ಕೇಂದ್ರ ಸರಕಾರದ ಬಗ್ಗೆ ಪರಿಸರ ಸಂಘಟನೆಗಳು ಹಾಗೂ ಸಾರ್ವಜನಿಕರು ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ‘ಅರಾವಳಿ ಉಳಿಸಿ’ ಆಂದೋಲನ ವ್ಯಾಪಕ ಜನ ಬೆಂಬಲವನ್ನು ಪಡೆಯುತ್ತಿದೆ. ಯಾವುದೇ ಜನಪರ ಚಳವಳಿಗಳನ್ನು ಜನತಾಂತ್ರಿಕ ಸರಕಾರ ಕಡೆಗಣಿಸುವುದು ಸರಿಯಲ್ಲ.

ಸುಪ್ರೀಂ ಕೋರ್ಟ್ ಈ ಹಿಂದೆ ಒಪ್ಪಿದ ಹಾಗೂ ಅನುಮೋದನೆ ನೀಡಿದ ಕೇಂದ್ರ ಸರಕಾರದ ಹೊಸ ವ್ಯಾಖ್ಯಾನ ಯಾವುದೆಂದರೆ ‘ಅರಾವಳಿ ಪರ್ವತ ಶ್ರೇಣಿಗಳಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿಲ್ಲ’ ಎಂಬುದಾಗಿದೆ. ಈ ಶ್ರೇಣಿಗಳಲ್ಲಿ ಶೇ. 90ರಷ್ಟು ಬೆಟ್ಟಗಳ ಎತ್ತರ 100 ಮೀಟರ್‌ಗಿಂತ ಕಡಿಮೆ ಇದೆ ಎಂಬುದಾಗಿದೆ. ಈ ಹೊಸ ವ್ಯಾಖ್ಯಾನದಡಿಯಲ್ಲಿ ಗಣಿಗಾರಿಕೆ ನಡೆದರೆ ಉತ್ತರ ಭಾರತದ ಶ್ವಾಸಕೋಶವಾಗಿರುವ ಅರಾವಳಿ ಪರ್ವತ ಶ್ರೇಣಿ ಬಹುತೇಕ ನಾಶವಾಗುವ ಅಪಾಯ ಎದುರಾಗಿದೆ. ಹಾಗಾಗಿಯೇ ಇದರ ವಿರುದ್ಧ ಜನ ಬೀದಿಗಿಳಿದು ಹೋರಾಡುತ್ತಿದ್ದಾರೆ.

ಭಾರತದ ಪಶ್ಚಿಮ ಭಾಗವನ್ನು ಆವರಿಸಿಕೊಂಡಿರುವ ಅರಾವಳಿ ಪರ್ವತ ಶ್ರೇಣಿಗಳು ಎರಡು ಶತಕೋಟಿ ವರ್ಷಗಳಷ್ಟು ಹಳೆಯದಾಗಿವೆ. ರಾಜಸ್ಥಾನದಲ್ಲಿ ಈಶಾನ್ಯದಿಂದ ನೈಋತ್ಯದವರೆಗೆ ಸುಮಾರು 300 ಮೈಲುಗಳವರೆಗೆ ಇವು ಹಬ್ಬಿವೆ. ಅಂತಲೇ ಗಣಿಗಾರಿಕೆಯ ಪರವಾಗಿರುವ ಮೋದಿ ಸರಕಾರ ನಾನಾ ವ್ಯಾಖ್ಯಾನವನ್ನು ನೀಡುತ್ತಾ ಪರಿಸರ ಹೋರಾಟಗಳನ್ನು ದಿಕ್ಕು ತಪ್ಪಿಸುತ್ತಿದೆ ಎಂಬುದು ಚಳವಳಿಗಾರರ ಆರೋಪವಾಗಿದೆ.

ಅರಾವಳಿ ಪರ್ವತ ಶ್ರೇಣಿಗಳನ್ನು ರಕ್ಷಣೆ ಮಾಡಬೇಕಾದ ಕೇಂದ್ರ ಸರಕಾರ ಅದಾನಿ ಕಂಪೆನಿಗೆ ಈ ಅಮೂಲ್ಯ ಪ್ರದೇಶವನ್ನು ಧಾರೆ ಎರೆದು ಕೊಡಲು ಮುಂದಾಗಿದೆ.ಇದರ ದುಷ್ಪರಿಣಾಮದ ಬಗ್ಗೆ ತಜ್ಞರು ವರದಿ ನೀಡಿದರೂ ಹೊಸ ಹೊಸ ವ್ಯಾಖ್ಯಾನಗಳ ಮೂಲಕ ಗಣಿಗಾರಿಕೆ ಲಾಬಿಯ ಪರವಾಗಿ ನಿಂತಿರುವುದು ಕಳವಳಕಾರಿ ಸಂಗತಿಯಾಗಿದೆ. ಜನರ ಬದುಕು, ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಹಾಕಿ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯ ಪರವಾಗಿರುವುದು ಎಲ್ಲರೂ ಖಂಡಿಸಬೇಕಾದ ಸಂಗತಿಯಾಗಿದೆ.

ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಾದುದು ಜನರ ಹಿತ ರಕ್ಷಣೆಗಾಗಿ ಇರಬೇಕೇ ಹೊರತು ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿ ಅಲ್ಲ ಎಂಬ ಬದ್ಧತೆ ಜನಪ್ರತಿನಿಧಿಗಳಿಗೆ ಇರಬೇಕು. ಚುನಾವಣೆ ಸಂದರ್ಭದಲ್ಲಿ ಜನಸಾಮಾನ್ಯರ ಮನೆ ಬಾಗಿಲಿಗೆ ಬಂದು ಕೈ ಮುಗಿಯುವ ರಾಜಕಾರಣಿಗಳು ಚುನಾವಣೆ ಮುಗಿದ ನಂತರ ತಮ್ಮನ್ನು ಚುನಾಯಿಸಿದ ಜನರನ್ನು ಮರೆತು ಉದ್ಯಮಪತಿಗಳ, ಗಣಿಗಾರಿಕೆ ಮಾಡುವವರ ಹಾಗೂ ರಿಯಲ್ ಎಸ್ಟೇಟ್ ಮಂದಿಯ ಹಿತಾಸಕ್ತಿಯನ್ನು ರಕ್ಷಿಸಲು ಮುಂದಾಗುತ್ತಾರೆ. ಇದು ಜನರಿಗೆ ಮಾಡುವ ದ್ರೋಹವಲ್ಲದೇ ಬೇರೇನೂ ಅಲ್ಲ. ಹಾಗಾಗಿ ಮರು ಚುನಾವಣೆಯಲ್ಲಿ ಇಂಥವರು ಗೆದ್ದು ಬರದಂತೆ ಜನರು ಎಚ್ಚರ ವಹಿಸಬೇಕಾದುದು ಇಂದಿನ ಅನಿವಾರ್ಯ ಕರ್ತವ್ಯವಾಗಿದೆ. ಅಭಿವೃದ್ಧಿ ಅಂದರೆ ಯಾರ ಅಭಿವೃದ್ಧಿ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಶತಮಾನಗಳಿಂದ ಕಾಪಾಡಿಕೊಂಡು ಬಂದ ಅಮೂಲ್ಯ ಅರಣ್ಯ ಸಂಪತ್ತನ್ನು ನಾಶ ಮಾಡಿ ಅವುಗಳ ಸಮಾಧಿಯ ಮೇಲೆ ರೆಸಾರ್ಟ್, ಪಂಚತಾರಾ ಹೋಟೆಲ್, ಗಣಿಗಾರಿಕೆ ಎಂಬ ಲೂಟಿ ಇವೆಲ್ಲ ನಡೆಯಲು ಅವಕಾಶ ನೀಡಬಾರದು. ಎಲ್ಲ ಅಭಿವೃದ್ಧಿಗಿಂತ ಮಾನವಾಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News