×
Ad

ಉಸಿರಾಡುವ ಗಾಳಿ ವಿಷವಾದರೆ?

Update: 2025-12-29 08:30 IST

PC: PTI

ಕೊರೋನ ಸೋಂಕಿನಿಂದ ಭಾರತದಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಕೊರೋನ ಸಾವುಗಳಿಗೆ ಸಂಬಂಧಿಸಿದಂತೆ ಸರಕಾರ ಅಂಕಿಅಂಶಗಳನ್ನು ಮುಚ್ಚಿಟ್ಟಿದೆ ಅಥವಾ ಅದಕ್ಕೆ ಸಂಬಂಧಿಸಿ ಸರಿಯಾದ ಅಂಕಿಅಂಶಗಳು ಸರಕಾರದ ಬಳಿಯಿಲ್ಲ ಎನ್ನುವ ಆರೋಪಗಳೂ ಇವೆ. ಅದೇನೇ ಇರಲಿ, ಕೊರೋನದಿಂದ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ ಎನ್ನುವುದು ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಕೊರೋನದಿಂದ ಸತ್ತವರಿಗಿಂತ ಲಾಕ್‌ಡೌನ್ ಕಾರಣಗಳಿಂದಾಗಿ ಮೃತಪಟ್ಟವರ ಸಂಖ್ಯೆ ಜಾಸ್ತಿಯಿದೆ ಎಂಬ ಇನ್ನೊಂದು ವಾದವೂ ಇದೆ. ಕೊರೋನ ಕಾಲದಲ್ಲಿ ಮೃತಪಟ್ಟವರಲ್ಲಿ ಅತ್ಯಧಿಕ ಮಂದಿ ಶ್ವಾಸಕೋಶ ಸಂಬಂಧಿ ರೋಗಗಳಿಂದ ನರಳುತ್ತಿರುವವರು ಎನ್ನುವುದನ್ನು ತಜ್ಞರು ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಅಸ್ತಮಾ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಹಲವು ರೋಗಗಳನ್ನು ಎದುರಿಸುತ್ತಿದ್ದ ಹಿರಿಯ ನಾಗರಿಕರು ಕೊರೋನಕ್ಕೆ ಮೊದಲು ಬಲಿಯಾದರು. ಕೋರೋನ ಇಂದು ಇಲ್ಲವಾಗಿರಬಹುದು, ಆದರೆ ದೇಶಾದ್ಯಂತ ಅದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ಹೊತ್ತಿಗೆ ದೇಶವು ವಾಯುಮಾಲಿನ್ಯದ ಕಾರಣಕ್ಕಾಗಿ ವಿಶ್ವದಲ್ಲಿ ಸುದ್ದಿ ಮಾಡುತ್ತಿದೆ. ಈ ವಾಯುಮಾಲಿನ್ಯವು ಭಾರತದ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಕೆಡಿಸುತ್ತಿದೆ. ಕೊರೋನ ಸಾಂಕ್ರಾಮಿಕದ ಹಾವಳಿಯ ಆನಂತರ ವಾಯುಮಾಲಿನ್ಯವು ಭಾರತ ಎದುರಿಸುತ್ತಿರುವ ಅತಿ ದೊಡ್ಡ ಆರೋಗ್ಯ ಬಿಕ್ಕಟ್ಟಾಗಿದೆ ಎಂದು ಆರೋಗ್ಯ ತಜ್ಙರು ಎಚ್ಚರಿಸಿದ್ದಾರೆ. ಭಾರತದಲ್ಲಿ ವಾಯುಮಾಲಿನ್ಯದಿಂದಾಗಿ ಸೃಷ್ಟಿಯಾಗುತ್ತಿರುವ ರೋಗಗಳನ್ನು ಬಹುತೇಕವಾಗಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿಲ್ಲ ಮತ್ತು ಅವುಗಳಿಗೆ ಚಿಕಿತ್ಸೆಯೂ ದೊರೆಯುತ್ತಿಲ್ಲ ಎಂದು ಶ್ವಾಸಕೋಶ ತಜ್ಞ ಹಾಗೂ ಭಾರತದ ಕೋವಿಡ್ ಸಲಹಾ ಸಮಿತಿಯ ಮಾಜಿ ಸದಸ್ಯ ಮನೀಶ್ ಗೌತಮ್ ಕಳವಳ ವ್ಯಕ್ತಪಡಿಸಿದ್ದಾರೆ.

ಕ್ಷಯ ರೋಗಕ್ಕಾಗಿ ಭಾರತವು ಕುಖ್ಯಾತಿಯನ್ನು ಹೊಂದಿದೆ. ಅಪೌಷ್ಟಿಕತೆ, ಹೆಚ್ಚುತ್ತಿರುವ ಹಸಿವಿನ ಸೂಚ್ಯಂಕ ಈ ಕ್ಷಯ ರೋಗದಲ್ಲಿ ಪ್ರಧಾನ ಪಾತ್ರವಹಿಸಿದೆ ಎನ್ನುವುದನ್ನು ಈಗಾಗಲೇ ತಜ್ಞರು ಬಹಿರಂಗಪಡಿಸಿದ್ದಾರೆ. ಆದರೆ ಹಸಿವಿನ ಸೂಚ್ಯಂಕದ ಕುರಿತಂತೆ ಜಾಗತಿಕ ವರದಿಯನ್ನೇ ಸರಕಾರ ನಿರಾಕರಿಸಿದೆ. ಅಂದರೆ, ವಾಸ್ತವವನ್ನು ಒಪ್ಪಿಕೊಳ್ಳಲು ಭಾರತ ಸರಕಾರ ಸಿದ್ಧವಿಲ್ಲ. ಅದನ್ನು ಮುಚ್ಚಿಟ್ಟು ಕ್ಷಯ ರೋಗಗಳು ದೇಶದಲ್ಲಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದೆ. ಇದೇ ಹೊತ್ತಿಗೆ ಭಾರತವು ಅಸ್ತಮಾ ಕಾರಣಕ್ಕಾಗಿಯೂ ಸುದ್ದಿಯಲ್ಲಿದೆ. ಕೊರೋನ ಕಾಲದಲ್ಲಿ ಅಸ್ತಮಾ ಪೀಡಿತರು ದೊಡ್ಡ ಸಂಖ್ಯೆಯಲ್ಲಿ ಸಂತ್ರಸ್ತರಾದರು. ಭಾರತದಲ್ಲಿ ಒಟ್ಟು 3.50 ಕೋಟಿ ಅಸ್ತಮಾ ರೋಗಿಗಳಿದ್ದಾರೆ. ಬಹುತೇಕರು ಸೂಕ್ತ ಚಿಕಿತ್ಸೆಗಳಿಲ್ಲದೆ ನರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು ಅಸ್ತಮಾವನ್ನು ಇನ್ನಷ್ಟು ಭೀಕರವಾಗಿಸುತ್ತಿದೆ. ಇತ್ತೀಚೆಗೆ ಸ್ವಿಸ್ ವಾಯು ಗುಣಮಟ್ಟ ಮೇಲ್ವಿಚಾರಣಾ ಸಂಸ್ಥೆಯ ದತ್ತಾಂಶವು ಭಾರತವು 2024ಕ್ಕೆ ವಿಶ್ವಸಂಸ್ಥೆಯ ವಾಯು ಗುಣಮಟ್ಟ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ ಎನ್ನುವುದನ್ನು ಬಹಿರಂಗಪಡಿಸಿತ್ತು. ಕಳೆದ ಮಾರ್ಚ್‌ಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ ಭಾರತವು ವಾಯುಮಾಲಿನ್ಯದಲ್ಲಿ ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ. ವಿಶ್ವದ 20 ಅತಿ ಹೆಚ್ಚು ಮಾಲಿನ್ಯಗೊಂಡ ನಗರಗಳಲ್ಲಿ 13 ನಗರಗಳು ಭಾರತದಲ್ಲಿವೆ ಎಂದು ವರದಿ ಹೇಳುತ್ತಿದೆ.

ಭಾರತದಲ್ಲಿ ವಿಶ್ವಸಂಸ್ಥೆಯ ಮಾರ್ಗಸೂಚಿಗಿಂತ ಎಂಟು ಪಟ್ಟು ಹೆಚ್ಚು ವಾಯು ಮಾಲಿನ್ಯವಿದೆ. ಅಸ್ತಮಾ ಸೇರಿದಂತೆ ಇನ್ನಿತರ ಶ್ವಾಸಕೋಶ ಕಾಯಿಲೆಗಳಿಗೆ ಭಾರತೀಯರು ಇತ್ತೀಚೆಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ದಾಖಲಾಗಿರುವ 20 ಲಕ್ಷ ಸಾವುಗಳು ವಾಯು ಮಾಲಿನ್ಯಕ್ಕೆ ಸಂಬಂಧಿಸಿದ್ದಾಗಿವೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲಿ ಒಂದು ಲಕ್ಷ ಜನರಲ್ಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿ 186 ಸಾವುಗಳು ಸಂಭವಿಸುತ್ತಿವೆ. ಇಷ್ಟಾದರೂ ಭಾರತವು ಜಾಗತಿಕ ವರದಿಗಳನ್ನು ನಿರ್ಲಕ್ಷಿಸುತ್ತಿದೆ. ಹಸಿವಿನ ಕಳಪೆ ಸೂಚ್ಯಂಕವನ್ನು ತಿರಸ್ಕರಿಸಿದಂತೆಯೇ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಮಾನದಂಡಗಳನ್ನೂ ಅದು ತಿರಸ್ಕರಿಸಿದೆ. ‘‘ದೇಶವು ವಾಯುಮಾಲಿನ್ಯವನ್ನು ಎದುರಿಸಲು ತನ್ನದೇ ಆದ ಮಾನದಂಡಗಳನ್ನು ಹೊಂದಿದೆ. ಅಂತರ್‌ಷ್ಟ್ರೀಯ ಮಾನದಂಡಗಳಿಗೆ ಅದು ಬದ್ಧವಾಗಬೇಕಾಗಿಲ್ಲ’’ ಎಂದು ಕೇಂದ್ರ ಸರಕಾರ ಕೆಮ್ಮುತ್ತಲೇ ಸಂಸತ್‌ನಲ್ಲಿ ಸ್ಪಷ್ಟೀಕರಣವನ್ನು ನೀಡಿದೆ. ಆದರೆ, ಇಂದು ದಿಲ್ಲಿ ಸೇರಿದಂತೆ ಭಾರತದ ನಗರಗಳ ಸ್ಥಿತಿಯನ್ನು ಸ್ವತಃ ಕೇಂದ್ರ ಸಚಿವರೇ ಟೀಕಿಸುತ್ತಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎರಡು ದಿನಗಳ ಹಿಂದೆ ದಿಲ್ಲಿಯ ವಾಯುಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ‘‘ನಾನು ದಿಲ್ಲಿಯಲ್ಲಿ ಮೂರು ದಿನಗಳಿಂದ ಇದ್ದೇನೆ. ಇಲ್ಲಿನ ವಾಯುಮಾಲಿನ್ಯದಿಂದಾಗಿ ನಾನು ಕಾಯಿಲೆ ಪೀಡಿತನಾಗಿದ್ದೇನೆ’’ ಎಂದಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ‘‘ದಿಲ್ಲಿಯ ವಾಯುಮಾಲಿನ್ಯ ಎಷ್ಟು ಕೆಟ್ಟದಾಗಿದೆಯೆಂದರೆ, ಪ್ರತಿ ಬಾರಿ ದಿಲ್ಲಿಗೆ ಹೋಗಬೇಕಾದಾಗ ನಾನು ಹೋಗಬೇಕೇ ಬೇಡವೇ ಎಂದು ಎರಡೆರಡು ಬಾರಿ ಯೋಚಿಸುತ್ತೇನೆ’’ ಎಂದಿದ್ದರು. ಕೇಂದ್ರ ಸಚಿವರು ದೇಶದ ಪ್ರಮುಖ ನಗರದ ಬಗ್ಗೆ ಇಂತಹದೊಂದು ಹೇಳಿಕೆಯನ್ನು ನೀಡಿದ ಬಳಿಕ, ಭಾರತದ ನಗರಗಳಲ್ಲಿ ಬದುಕುತ್ತಿರುವ ಸಾಮಾನ್ಯ ಜನರ ಸ್ಥಿತಿ ಏನಾಗಿರಬೇಕು? ಉದ್ಯಮಿಗಳು, ಬಂಡವಾಳ ಹೂಡಿಕೆದಾರರು ಭಾರತದ ನಗರಗಳ ಕುರಿತಂತೆ ಯಾವ ಮನಸ್ಥಿತಿಯನ್ನು ಹೊಂದಿರಬಹುದು? ಒಂದೆಡೆ ಅಭಿವೃದ್ಧಿಯಿಂದ ಭಾರತದ ನಗರಗಳ ವಾಯು ಕೆಟ್ಟು ಹೋಗಿದೆ ಮಗದೊಂದೆಡೆ ಕೆಟ್ಟು ಹೋದ ವಾಯುವಿನಿಂದಾಗಿ ಅಭಿವೃದ್ಧಿಗೂ ತಡೆಯಾಗಿದೆ. ಕೇಂದ್ರ ಸಚಿವ ಗಡ್ಕರಿಯವರ ಪ್ರಕಾರ, ವಾಯುಮಾಲಿನ್ಯಕ್ಕೆ ನೇರ ಕಾರಣ ವಾಹನಗಳು ಹೊರ ಬಿಡುತ್ತಿರುವ ಹೊಗೆ. ‘‘ಇಲ್ಲಿ ಉಂಟಾಗುವ ಒಟ್ಟು ಮಾಲಿನ್ಯದ ಶೇ. 40ರಷ್ಟು ಪಾಲು ವಾಹನಗಳಿಂದಲೇ ಬರುತ್ತದೆ’’ ಎಂದು ಗಡ್ಕರಿ ಅಭಿಪ್ರಾಯ ಪಡುತ್ತಾರೆ.

ಪ್ರತಿ ವರ್ಷ ಹಬ್ಬಗಳ ಹೆಸರಿನಲ್ಲಿ ಸಿಡಿಸುವ ಪಟಾಕಿಗಳ ಬಗ್ಗೆ ಮತ್ತು ಅದು ಸೃಷ್ಟಿಸಿರುವ ವಾಯುಮಾಲಿನ್ಯಗಳ ಬಗ್ಗೆ ನ್ಯಾಯಾಲಯಗಳೇ ಹಲವು ಬಾರಿ ಎಚ್ಚರಿಕೆಯನ್ನು ನೀಡಿವೆ. ಆದರೆ ಈ ಎಚ್ಚರಿಕೆಯನ್ನು ಸರಕಾರ ನಿರ್ಲಕ್ಷಿಸುತ್ತಲೇ ಬಂದಿದೆ. ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿದಂತಾಗುತ್ತದೆ ಎಂದು ಭಕ್ತರು ಮಾಡುತ್ತಿರುವ ನದಿಗಳ ಮಾಲಿನ್ಯವನ್ನು ನೋಡಿಯೂ ನೋಡದಂತಿರುವ ಕೇಂದ್ರ ಸರಕಾರ, ಪಟಾಕಿಗಳ ವಿಷಯದಲ್ಲೂ ಇದೇ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದೆ. ಹಾಗೆಯೇ ಕಾರ್ಪೊರೇಟ್ ಸಂಸ್ಥೆಗಳಿಗೆ ಗಣಿಗಾರಿಕೆಗಳಿಗೆ ನೀಡುತ್ತಿರುವ ಅನುಮತಿಯೂ ವಾಯುಮಾಲಿನ್ಯವನ್ನು ಗಂಭೀರಸ್ಥಿತಿಗೆ ತಂದು ನಿಲ್ಲಿಸಿದೆ. ಇವೆಲ್ಲವೂ ಅಂತಿಮವಾಗಿ ಈ ದೇಶದ ನಗರಗಳನ್ನು ರೋಗಪೀಡಿತಗೊಳಿಸ ತೊಡಗಿದೆ. ಉಸಿರಾಡುವ ಗಾಳಿಯೇ ವಿಷವಾದರೆ, ಈ ದೇಶದ ಆರೋಗ್ಯವನ್ನು ಯಾವ ಲಸಿಕೆಗಳೂ ರಕ್ಷಿಸಲಾರವು. ಮುಂದಿನ ದಿನಗಳಲ್ಲಿ ಈ ದೇಶದ ಆರೋಗ್ಯ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲು ಯಾವುದೇ ಕೊರೋನದಂತಹ ವೈರಸ್‌ಗಳ ಅಗತ್ಯವಿಲ್ಲ. ನಾವು ಉಸಿರಾಡುವ ಗಾಳಿಯೇ ರೋಗ ಹರಡುವ ಸಾಧನವಾಗಲಿದೆ. ಅದಕ್ಕೆ ಮೊದಲು ಸರಕಾರ ಎಚ್ಚರಗೊಳ್ಳಬೇಕಾಗಿದೆ. ನಮ್ಮ ನೀರು ಮತ್ತು ಗಾಳಿಯನ್ನು ಮಾಲಿನ್ಯದಿಂದ ರಕ್ಷಿಸಲು ‘ಸರ್ಜಿಕಲ್ ಸ್ಟ್ರೈಕ್’ ಒಂದರ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News