×
Ad

ಕ್ರಿಸ್ಮಸ್ ಮೇಲೆ ದಾಳಿ: ಭಾರತದ ವರ್ಚಸ್ಸಿಗೆ ಧಕ್ಕೆ

Update: 2025-12-27 08:10 IST

ಸಾಂದರ್ಭಿಕ ಚಿತ್ರ | Photo Credit : freepik

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವಿಶ್ವಾದ್ಯಂತ ಕ್ರಿಸ್ಮಸ್ ಸಂಭ್ರಮಾಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜೀಸಸ್ ವಿಶ್ವಕ್ಕೆ ಹರಡಿ ಹೋದ ತ್ಯಾಗ, ಶಾಂತಿಯ ಸಂದೇಶಗಳನ್ನು ನೆನೆಯಲಾಗುತ್ತದೆ. ಪ್ರಭುತ್ವದ ಕ್ರೌರ್ಯಗಳಿಗೆ ಸೆಡ್ಡು ಹೊಡೆದು ಜನ ಸಾಮಾನ್ಯರ ಧ್ವನಿಯಾದ ಜೀಸಸ್ ತತ್ವ ಆದರ್ಶಗಳು ಇಂದಿಗೂ ಜಗತ್ತನ್ನು ಪೊರೆಯುತ್ತಿವೆೆ. ಕ್ರೈಸ್ತ ಧರ್ಮದ ಸರ್ವೋಚ್ಚ ನಾಯಕ ಪೋಪ್ ಲಿಯೋ ಅವರು ಕ್ರಿಸ್ಮಸ್ ಸಂದೇಶವನ್ನು ಜಗತ್ತಿಗೆ ನೀಡಿದ್ದು, ಈ ಸಂದರ್ಭದಲ್ಲಿ ಇಸ್ರೇಲ್‌ನ ದೌರ್ಜನ್ಯಗಳಿಗೆ ಬಲಿಯಾಗಿರುವ ಫೆಲೆಸ್ತೀನ್‌ನ್ನು ನೆನೆದುಕೊಂಡಿದ್ದಾರೆ. ಗಾಝಾದಲ್ಲಿ ಅತಂತ್ರ ಬದುಕನ್ನು ಕಳೆಯುತ್ತಿರುವ ಸಾವಿರಾರು ಜನರ ಪರಿಸ್ಥಿತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಸ್ಮಸ್ ಆಚರಣೆಯೆಂದರೆ ಕುಣಿತ, ಕುಡಿತವಲ್ಲ. ದಮನಿತರ ಪರವಾಗಿ ಧ್ವನಿಯೆತ್ತುವ ಮೂಲಕ, ಶೋಷಿತರ ಸಂಕಟಗಳಿಗೆ ಸ್ಪಂದಿಸುವ ಮೂಲಕ ಕ್ರಿಸ್ಮಸ್ ದಿನವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಅವರು ಪರೋಕ್ಷವಾಗಿ ಜಗತ್ತಿಗೆ ಕರೆ ನೀಡಿದ್ದಾರೆ.

ಭಾರತದಲ್ಲೂ ಕ್ರಿಸ್ಮಸ್ ಸಂಭ್ರಮ ಅರ್ಥಪೂರ್ಣವಾಗಿ ಆಚರಣೆಯಾಗುತ್ತಿದೆ. ಭಾರತದಲ್ಲಿ ತಮ್ಮ ಸೇವೆಯ ಮೂಲಕವೇ ಕ್ರಿಶ್ಚಿಯನ್ ಮಿಷನರಿಗಳು ಕ್ರೈಸ್ತ ಧರ್ಮವನ್ನು ಹರಡಿದರು. ಬಡವರು, ರೋಗಿಗಳು, ದಲಿತರ ಸೇವೆಯನ್ನು ಧಾರ್ಮಿಕ ಮೌಲ್ಯಗಳಾಗಿ ಹರಡಿದ ಹೆಗ್ಗಳಿಕೆ ಕ್ರೈಸ್ತರಿಗೆ ಸೇರಬೇಕು. ಇವರ ಸೇವೆ ಮುಂದೆ ಎಲ್ಲ ಧರ್ಮೀಯರಿಗೂ ಮಾದರಿಯಾಯಿತು. ಇಂದು ಕ್ರೈಸ್ತ ಧರ್ಮೀಯರ ಸಂಭ್ರಮದಲ್ಲಿ ಪ್ರಧಾನಿ ಮೋದಿಯವರೂ ಭಾಗಿಯಾಗಿದ್ದಾರೆ. ಹೊಸದಿಲ್ಲಿಯಲ್ಲಿ ಗುರುವಾರ ಕ್ಯಾಥೆಡ್ರಲ್ ಚರ್ಚೊಂದರಲ್ಲಿ ಪ್ರಧಾನಿ ಮೋದಿಯವರು ಪ್ರಾರ್ಥನಾ ಸಭೆಯಲ್ಲಿ ಪಾಲುಗೊಂಡು, ಕ್ರಿಸ್ತನ ಸ್ತುತಿಗೀತೆಗಳಿಗೆ ಧ್ವನಿ ಸೇರಿಸಿದ್ದಾರೆ. ಪ್ರಾರ್ಥನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿಯವರು ‘‘ದಿಲ್ಲಿಯ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದೆ. ಈ ಪ್ರಾರ್ಥನೆಯು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಸಾರುತ್ತದೆ. ಕ್ರಿಸ್ಮಸ್‌ನ ಚೈತನ್ಯವು ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಉತ್ತೇಜಿಸಲಿ’’ ಎಂದು ಆಶಿಸಿದರು. ಆದರೆ ಇವರ ಸಂದೇಶವನ್ನು ಅಣಕಿಸುವಂತೆ, ದೇಶಾದ್ಯಂತ ಸಂಘಪರಿವಾರ ಕಾರ್ಯಕರ್ತರೆಂದು ಗುರುತಿಸಿಕೊಂಡ ಕೆಲವು ದುಷ್ಕರ್ಮಿಗಳು ಕ್ರಿಸ್ಮಸ್ ಆಚರಣೆಯ ವೇಳೆ ಕ್ರೈಸ್ತರ ವಿರುದ್ಧ ದಾಳಿ ಸಂಘಟಿಸಿದ್ದಾರೆ. ನೆರೆಯ ಕೇರಳವೂ ಸೇರಿದಂತೆ ದೇಶಾದ್ಯಂತ ಈ ದಾಳಿಗಳು ನಡೆದಿದ್ದು, ಪ್ರಧಾನಿ ಇವುಗಳ ವಿರುದ್ಧ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನಾಗಲಿ, ಖಂಡನಾ ಹೇಳಿಕೆಯನ್ನಾಗಲಿ ನೀಡಿಲ್ಲ.

ಕೇರಳದಲ್ಲಿ 15 ವರ್ಷದ ಮಕ್ಕಳ ಕ್ಯಾರೊಲ್ ಗುಂಪಿನ ಮೇಲೆ ಸಂಘಪರಿವಾರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯ ಮುಖಂಡ ಸಿ. ಕೃಷ್ಣಕುಮಾರ್ ಎಂಬಾತ ಈ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ‘‘ಕ್ಯಾರೊಲ್ ತಂಡ ಅಪರಾಧಿಗಳ ಗುಂಪಾಗಿದ್ದು ಸದಸ್ಯರು ಪಾನಮತ್ತರಾಗಿದ್ದರು’’ ಎಂದು ಅವರು ಆರೋಪಿಸಿದ್ದಾರೆ. ಆದರೆ ತಂಡದಲ್ಲಿದ್ದವರೆಲ್ಲರೂ ಬಾಲಕರು ಮತ್ತು ಅಪ್ರಾಪ್ತ ವಯಸ್ಸಿನ ಯುವಕರಾಗಿದ್ದರು. ಅವರು ಸಾರ್ವಜನಿಕವಾಗಿ ಯಾವುದೇ ದಾಂಧಲೆಗಳನ್ನು ಮಾಡಿದ ಬಗ್ಗೆ ದೂರುಗಳು ಇದ್ದಿರಲಿಲ್ಲ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಅವರು ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಆ ಮೆರವಣಿಗೆಯಲ್ಲಿ ಯಾವುದೇ ಹಿಂದೂ ವಿರೋಧಿ ಘೋಷಣೆಗಳು ಇರಲಿಲ್ಲ. ಬದಲಿಗೆ, ಕ್ರಿಸ್ತನ ಸಂದೇಶಗಳ ಹಾಡುಗಳನ್ನು ಅವರು ಹಾಡುತ್ತಿದ್ದರು. ಇಷ್ಟಾದರೂ ಇವರ ಮೇಲೆ ದಾಳಿಗಳನ್ನು ನಡೆಸಲಾಯಿತು. ಕ್ರಿಸ್ಮಸ್ ಆಚರಣೆ ನಡೆಸುತ್ತಿದ್ದ ವೇಳೆ ಕೇರಳದ ಹಲವೆಡೆ ಈ ದಾಳಿ ನಡೆದಿದ್ದು, ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕ್ರಿಸ್ಮಸ್ ವಿರುದ್ಧದ ಅಸಹನೆಯ ನೇತೃತ್ವವನ್ನು ಅಲ್ಲಿನ ಸರಕಾರವೇ ಹೊತ್ತುಕೊಂಡಿದೆ. ಸರಕಾರವು ಶಾಲೆಗಳ ಕ್ರಿಸ್ಮಸ್ ರಜೆಯನ್ನು ರದ್ದುಗೊಳಿಸಿದ್ದು ಅದೇ ದಿನ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯನ್ನು ಆಚರಿಸುವಂತೆ ಹಾಗೂ ಹಾಜರಾತಿ ಕಡ್ಡಾಯಗೊಳಿಸುವಂತೆ ಆದೇಶ ನೀಡಿದೆ. ಛತ್ತೀಸ್‌ಗಡದ ರಾಯಪುರದಲ್ಲಿ ಸಂಘಪರಿವಾರದ ದೊಡ್ಡ ಗುಂಪೊಂದು ಶಾಪಿಂಗ್ ಮಾಲ್‌ಗೆ ನುಗ್ಗಿ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಮಾಡಿದ ಅಲಂಕಾರಗಳನ್ನು ಧ್ವಂಸ ಮಾಡಿದೆ. ಸಾಂತಕ್ಲಾಸ್ ಪ್ರತಿಮೆಗೂ ಹಾನಿ ಮಾಡಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಕ್ರಿಸ್ಮಸ್ ಆಚರಿಸುತ್ತಿರುವ ಸಂದರ್ಭದಲ್ಲಿ ಚರ್ಚ್ ಮುಂಭಾಗ ಹನುಮಾನ್ ಚಾಲೀಸ ಪಠಿಸಿದ್ದಾರೆ. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಅಂಧ ಕ್ರಿಶ್ಚಿಯನ್ ಮಹಿಳೆಯ ಮೇಲೆಯೇ ಬಿಜೆಪಿ ನಾಯಕಿಯೊಬ್ಬಳು ದೌರ್ಜನ್ಯ ಎಸಗಿದ್ದಾಳೆ. ಅಸ್ಸಾಮಿನಲ್ಲೂ ಕ್ರಿಶ್ಚಿಯನ್ನರ ಮೇಲೆ ದಾಳಿಗಳು ನಡೆದಿವೆ. ವಿಪರ್ಯಾಸವೆಂದರೆ, ಬೀದಿ ಬದಿಯಲ್ಲಿ ಕ್ರಿಸ್ಮಸ್ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಮೇಲೂ ಹಲ್ಲೆಗಳು ನಡೆದಿವೆ. ಅವರು ವ್ಯಾಪಾರ ಮಾಡದಂತೆ ಗುಂಪುಗಳು ತಡೆದಿವೆ. ಈ ವ್ಯಾಪಾರಿಗಳೇನೂ ಕ್ರಿಶ್ಚಿಯನ್ನರಾಗಿರಲಿಲ್ಲ. ಯಾವುದೇ ಹಬ್ಬಗಳು ಬರಲಿ, ವ್ಯಾಪಾರಿಗಳು ಧರ್ಮವನ್ನು ನೋಡದೆಯೇ ಆಯಾ ಹಬ್ಬಗಳಿಗೆ ಸಂಬಂಧಿಸಿದ ಸಲಕರಣೆಗಳನ್ನು ಮಾರುತ್ತಾರೆ. ದುಷ್ಕರ್ಮಿಗಳ ಪುಂಡಾಟಗಳಿಂದಾಗಿ ವ್ಯಾಪಾರ ಉದ್ದಿಮೆಗಳಿಗೂ ಭಾರೀ ಧಕ್ಕೆ ಉಂಟಾಗಿದೆ.

ಕ್ರಿಶ್ಚಿಯನ್ನರು ಆಮಿಶಗಳನ್ನು ಒಡ್ಡಿ ಮತಾಂತರ ಮಾಡುತ್ತಾರೆ ಎಂದು ಈವರೆಗೆ ಸಂಘಪರಿವಾರ ಆರೋಪಿಸುತ್ತಿತ್ತು. ಇದೀಗ ಅವರು ತಮ್ಮ ಧರ್ಮದ ಹಬ್ಬ ಆಚರಣೆ ಮಾಡುವುದರಿಂದ ಹಿಂದೂ ಧರ್ಮಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ರೀತಿಯಲ್ಲಿ ಕ್ಯಾತೆ ತೆಗೆಯ ತೊಡಗಿದೆ. ಒಂದು ವೇಳೆ ಕ್ರಿಸ್ಮಸ್ ಆಚರಣೆಯಿಂದ ಹಿಂದೂಧರ್ಮಕ್ಕೆ ತೊಂದರೆಯಾಗುತ್ತದೆಯಾದರೆ ಸಂಘಪರಿವಾರ ಸಂಘಟನೆಗಳು ಮೊದಲು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಳ್ಳಬೇಕು. ಯಾಕೆಂದರೆ, ಸ್ವತಃ ಪ್ರಧಾನಿ ಮೋದಿಯವರೇ ಕ್ರಿಸ್ಮಸ್‌ನಲ್ಲಿ ಭಾಗವಹಿಸಿ ಏಸುವಿನ ಸ್ತುತಿಗೀತೆಯನ್ನು ಹಾಡಿದ್ದಾರೆ. ಈ ಹಿಂದೆ ಗಣೇಶೋತ್ಸವ ಆಚರಣೆಯ ಹೆಸರಿನಲ್ಲಿ ಹಲವೆಡೆ ಕೋಮು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ‘ಮೆರವಣಿಗೆಯ ಮೇಲೆ ಅನ್ಯಧರ್ಮೀಯರು ಕಲ್ಲು ತೂರಾಟ ಮಾಡಿದ್ದಾರೆ’ ಎಂದು ಆರೋಪಿಸಿ ಬಡವರ ಮನೆ, ಅಂಗಡಿ, ಮುಂಗಟ್ಟುಗಳಿಗೆ ಸಂಘಪರಿವಾರ ಕಾರ್ಯಕರ್ತರು ಹಾನಿ ಉಂಟು ಮಾಡಿದ್ದರು. ಸ್ವತಃ ಹಿಂದೂ ಧರ್ಮದ ಹಬ್ಬಗಳನ್ನು ತಮ್ಮ ದ್ವೇಷ ರಾಜಕಾರಣಗಳಿಗೆ ದುರ್ಬಳಕೆ ಮಾಡುತ್ತಾ ಬಂದ ಸಂಘಪರಿವಾರ ಕಾರ್ಯಕರ್ತರು ಇದೀಗ ಇತರ ಧರ್ಮೀಯರ ಹಬ್ಬ ಆಚರಣೆಗಳ ಮೇಲೂ ದಾಳಿ ನಡೆಸಿ ಸ್ವತಃ ಹಿಂದೂ ಧರ್ಮಕ್ಕೆ ಇನ್ನಷ್ಟು ಕಳಂಕಗಳನ್ನು ಬಳಿಯುತ್ತಿದ್ದಾರೆ. ಸಂಘಪರಿವಾರ ಕಾರ್ಯಕರ್ತರ ಈ ದಾಂಧಲೆಗಳಿಂದ ಕ್ರೈಸ್ತ ಧರ್ಮಕ್ಕೆ ಯಾವ ಹಾನಿಯೂ ಉಂಟಾಗುವುದಿಲ್ಲ. ಬದಲಿಗೆ ಹಿಂದೂ ಧರ್ಮದ ಬಗ್ಗೆ ಜಾಗತಿಕವಾಗಿ ತಪ್ಪು ಕಲ್ಪನೆಗಳು ಹೆಚ್ಚುತ್ತವೆ. ಒಂದೆಡೆ ಭಾರತದಲ್ಲಿ ಜಾತಿ ವ್ಯವಸ್ಥೆ ಬಲಿಷ್ಠವಾಗುತ್ತಿದೆ. ದಲಿತ ಯುವಕನನ್ನು ವರಿಸಿದ ತಪ್ಪಿಗೆ ಮೇಲ್‌ಜಾತಿಯ ಮಹಿಳೆಯನ್ನು ಕುಟುಂಬಸ್ಥರೇ ಕೊಂದು ಹಾಕುತ್ತಾರೆ ಮತ್ತು ಸಾರ್ವಜನಿಕವಾಗಿ ಅದನ್ನು ಸಮರ್ಥಿಸಲಾಗುತ್ತದೆ. ಇಂತಹ ಕೃತ್ಯಗಳಿಂದಾಗಿ ಶೋಷಿತ ಸಮುದಾಯ ಹಿಂದೂ ಧರ್ಮದ ಬಗ್ಗೆ ಭ್ರಮನಿರಸನಗೊಳ್ಳುತ್ತಿದೆ. ಹಿಂದೂ ಧರ್ಮದೊಳಗಿರುವ ಮುಖಂಡರು ಈ ಕುಂದುಕೊರತೆಗಳನ್ನು ಸರಿಪಡಿಸಬೇಕು. ಹಿಂದೂ ಧರ್ಮದೊಳಗೆ ನಡೆಯುವ ಇಂತಹ ಹೀನ ಕೃತ್ಯಗಳನ್ನು ಖಂಡಿಸಬೇಕು. ಇತ್ತೀಚೆಗೆ ಬಾಂಗ್ಲಾದಲ್ಲಿ ದಂಗೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿತ್ತು. ಆದರೆ, ಭಾರತದಲ್ಲಿ ಧರ್ಮ, ಜಾತಿಯ ಹೆಸರಿನಲ್ಲಿ ಮುಸ್ಲಿಮರು, ದಲಿತರು ಮತ್ತು ಕ್ರೈಸ್ತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇಂತಹ ದಾಳಿಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳದೆ ಇದ್ದರೆ, ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ಅಥವಾ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ವ್ಯಕ್ತಪಡಿಸುವ ಕಳವಳವನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಾರರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News