×
Ad

ಉನ್ನಾವೋ ಅತ್ಯಾಚಾರ ಪ್ರಕರಣ: ಸಂತ್ರಸ್ತಳೇ ಅಪರಾಧಿಯಾದರೆ?

Update: 2025-12-25 07:44 IST

ಭ್ರಷ್ಟಾಚಾರದ ವಿರುದ್ಧ, ಆದಿವಾಸಿಗಳು-ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಿದ ಹಲವು ಸಾಮಾಜಿಕ ಹೋರಾಟಗಾರರು ವಿಚಾರಣೆಯ ಹೆಸರಿನಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹಲವು ವರ್ಷಗಳಿಂದ ಜೈಲು-ನ್ಯಾಯಾಲಯ ಎಂದು ಅಲೆದಾಡುತ್ತಿರುವ ಉಮರ್ ಖಾಲಿದ್‌ಗೆ

ತಾನು ಯಾಕೆ ಜೈಲಿನಲ್ಲಿದ್ದೇನೆ ಎನ್ನುವುದರ ಕುರಿತಂತೆಯೇ ಅರಿವಿಲ್ಲ. ನ್ಯಾಯಾಲಯವೂ ಇವರನ್ನು ಯಾಕೆ ಜೈಲಿನಲ್ಲಿಟ್ಟುಕೊಂಡಿದ್ದೀರಿ ಎಂದು ಪೊಲೀಸರನ್ನು ಕೇಳುತ್ತಲೂ ಇಲ್ಲ. ಆದರೆ ಇಂದೇ ಸಂದರ್ಭದಲ್ಲಿ ದಲಿತ ಮಹಿಳೆಯ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಲೈಗೈದ ಆರೋಪ ಸಾಬೀತಾಗಿ ಜೈಲು ಪಾಲಾಗಿದ್ದ ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್‌ನ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ಅಮಾನತಿನಲ್ಲಿಟ್ಟಿದೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಬಿಡುಗಡೆ ತಡವಾಗಿದೆ. ಆದರೆ ಯಾವ ಕ್ಷಣದಲ್ಲೂ ಆತ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸೆಂಗರ್‌ನನ್ನು ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದು, ಆತನಿಂದ ತನ್ನ ಕುಟುಂಬಕ್ಕೆ ಜೀವಭಯವಿದೆ ಎಂದು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಕೂಗಿ ಹೇಳುತ್ತಿದ್ದರೂ ನ್ಯಾಯಾಲಯದ ಕಿವಿ ಕಿವುಡಾಗಿದೆ. ಸಂತ್ರಸ್ತೆಯ ಮನೆಯ ಐದು ಕಿಲೋಮೀಟರ್ ಒಳಗೆ ಬರಬಾರದು ಹಾಗೂ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತಿನೊಂದಿಗೆ ನ್ಯಾಯಾಲಯ ಜಾಮೀನನ್ನು ನೀಡಿದೆ. ವಿಪರ್ಯಾಸವೆಂದರೆ, ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಮಾತ್ರವಲ್ಲ, ಓರ್ವನನ್ನು ಕೊಂದು ಹಾಕಿದ ಆರೋಪ ಸಾಬೀತಾಗಿ ಸೆಂಗರ್ ಜೈಲು ಶಿಕ್ಷೆ ಅನುಭವಿಸುತಿದ್ದಾರೆ. ಇಷ್ಟಕ್ಕೂ ಸಮಾಜದಲ್ಲಿ ಬಲಿಷ್ಠ ಜಾತಿ, ವರ್ಗಕ್ಕೆ ಸೇರಿದ ಮಾಜಿ ಶಾಸಕನೊಬ್ಬ ನೇರವಾಗಿ ಸಂತ್ರಸ್ತೆಯ ಮನೆಗೆ ನುಗ್ಗುವ ಅಗತ್ಯವಿದೆಯೆ? ತಾನು ಮಾಡಬೇಕಾದ ಕೃತ್ಯವನ್ನು ಬೆಂಬಲಿಗರ ಜೊತೆಗೆ ಮಾಡಿಸುವ ಶಕ್ತಿ ಆರೋಪಿಗಿಲ್ಲ ಎಂದು ನ್ಯಾಯಾಲಯ ಭಾವಿಸುತ್ತಿದೆಯೆ?

ಉನ್ನಾವೋ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇಲ್ಲಿ ಆರೋಪಿ ಬಿಜೆಪಿಯ ನಾಯಕನಾಗಿದ್ದ. ಸಂತ್ರಸ್ತೆ ಅಪ್ರಾಪ್ತ ವಯಸ್ಸಿನ ಬಾಲಕಿಯಾಗಿದ್ದಾಗ ಆಕೆಯನ್ನು ಅಪಹರಿಸಿ ಆರೋಪಿ ಅತ್ಯಾಚಾರಗೈದಿದ್ದ. ಇದು ಕೇವಲ ಅತ್ಯಾಚಾರ ಪ್ರಕರಣ ಮಾತ್ರವಾಗಿರಲಿಲ್ಲ. ಈ ಅತ್ಯಾಚಾರದ ವಿರುದ್ಧ ದೂರು ನೀಡಿದ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳಲು ಸೆಂಗರ್ ಯೋಜನೆ ರೂಪಿಸಿದ್ದ. ಆರೋಪಿ ಅದೆಷ್ಟು ಬಲಿಷ್ಠನೆಂದರೆ, ದೂರನ್ನು ಹಿಂದೆಗೆಯಲು ಸಿದ್ಧವಿಲ್ಲದ ಸಂತ್ರಸ್ತೆಯ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲು ಸೇರುವಂತೆ ಮಾಡಿದ್ದ. ನ್ಯಾಯಾಲಯದ ಆವರಣದಲ್ಲೇ ಪೊಲೀಸರ ಸಮ್ಮುಖದಲ್ಲಿ ಸಂತ್ರಸ್ತೆಯ ತಂದೆಗೆ ಕುಲದೀಪ್ ಸಿಂಗ್ ಸೆಂಗರ್‌ನ ಸೋದರನ ನೇತೃತ್ವದಲ್ಲೇ ಹಲ್ಲೆ ನಡೆದಿತ್ತು. ಅಷ್ಟೇ ಅಲ್ಲ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಹೊರಿಸಿ ಹಲ್ಲೆಗೀಡಾದಾತನನ್ನೇ ಜೈಲಿಗೆ ತಳ್ಳಲಾಗಿತ್ತು. ಬಳಿಕ ಜೈಲಿನಲ್ಲಿ ಆತನನ್ನು ಕೊಂದು ಹಾಕಲಾಗಿತ್ತು. ಇದಾದ ಬಳಿಕ ಸಂತ್ರಸ್ತೆಯ ಮೇಲೂ ದಾಳಿ ನಡೆಯಿತು. ರಸ್ತೆ ಅವಘಡದ ಮೂಲಕ ಆಕೆಯನ್ನು ಸಾಯಿಸಲು ಪ್ರಯತ್ನ ನಡೆಯಿತು. ಈ ಕೃತ್ಯದಲ್ಲಿ ಆಕೆ ಕುಟುಂಬದ ಸದಸ್ಯರನ್ನು ಕಳೆದುಕೊಳ್ಳಬೇಕಾಯಿತು. ಅಂತಿಮವಾಗಿ ಸಂತ್ರಸ್ತೆ ಸಾರ್ವಜನಿಕವಾಗಿ ಆತ್ಮಹತ್ಯೆಯ ಬೆದರಿಕೆ ಒಡ್ಡಿದರು. ಹೀಗೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ಸರಕಾರ ಸೆಂಗರ್‌ನ ವಿರುದ್ಧ ದೂರು ದಾಖಲಿಸಲು ಮುಂದಾಯಿತು. ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಸುದೀರ್ಘ ಹೋರಾಟ, ಬಲಿದಾನಗಳ ಬಳಿಕವಷ್ಟೇ ಸೆಂಗರ್‌ನ ವಿರುದ್ಧ ಪೊಲೀಸ್ ವ್ಯವಸ್ಥೆ ಕ್ರಮ ತೆಗೆದುಕೊಂಡಿತು. ನ್ಯಾಯಾಲಯದಲ್ಲಿ ಆರೋಪಗಳು ಸಾಬೀತಾದವು. ಅನಿವಾರ್ಯವಾಗಿ ಬಿಜೆಪಿಯು ಕೂಡ ಸೆಂಗರ್‌ನನ್ನು ಪಕ್ಷದಿಂದ ಉಚ್ಚಾಟಿಸಿತು. ಸೆಂಗರ್ ಜೈಲಿನಲ್ಲಿದ್ದರೂ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಜೀವಭಯದಿಂದಲೇ ಬದುಕುತ್ತಾ ಬಂದಿದೆ. ಇದೀಗ ದಿಲ್ಲಿ ಹೈಕೋರ್ಟ್ ಸೆಂಗರ್‌ನ ಶಿಕ್ಷೆಯನ್ನು ಅಮಾನತಿನಲಿಟ್ಟು, ಜಾಮೀನು ನೀಡಿದೆ. ನ್ಯಾಯಾಲಯದ ತೀರ್ಮಾನಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ತೆ ‘‘ಆತನನ್ನು ಜೈಲಿನಿಂದ ಬಿಡುಗಡೆ ಮಾಡುವುದಾದರೆ, ನನ್ನನ್ನು ಜೈಲಿಗೆ ಹಾಕಿ’’ ಎಂದು ಮನವಿ ಮಾಡಿದ್ದಾರೆ. ಆರೋಪಿಗಿರುವ ರಾಜಕೀಯ ಶಕ್ತಿಯ ಅರಿವಿದ್ದೂ ಆತನನ್ನು ನ್ಯಾಯಾಲಯ ಬಿಡುಗಡೆ ಮಾಡಲು ಮನಸ್ಸು ಮಾಡುತ್ತದೆ ಎಂದಾದರೆ, ಬದಲಿಗೆ ಸಂತ್ರಸ್ತಳನ್ನು ಜೈಲಿಗೆ ವರ್ಗಾಯಿಸುವುದೇ ಹೈಕೋರ್ಟ್ ಸಂತ್ರಸ್ತೆಗೆ ನೀಡಬಹುದಾದ ಪರ್ಯಾಯ ನ್ಯಾಯವಾಗಿದೆ. ಆ ಮೂಲಕ ಆಕೆಯ ಜೀವಕ್ಕಾದರೂ ರಕ್ಷಣೆ ಸಿಕ್ಕಿದಂತಾಗಬಹುದು. ಆದರೆ, ಜೈಲಿನಲ್ಲೂ ಆಕೆಯನ್ನು ಸಾಯಿಸುವಷ್ಟು ಜನಬಲ, ಆರ್ಥಿಕ ಬಲ ಸೆಂಗರ್‌ನಿಗಿದೆ. ಇದು ನ್ಯಾಯಾಲಯಕ್ಕೆ ತಿಳಿಯದ ವಿಷಯವೇನೂ ಅಲ್ಲ.

ವಿಪರ್ಯಾಸವೆಂದರೆ, ಸೆಂಗರ್ ಬಿಡುಗಡೆಯ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಂತ್ರಸ್ತೆಯನ್ನು ಪೊಲೀಸರು ತಡೆದಿದ್ದಾರೆ. ಸಂತ್ರಸ್ತೆಯ ಆತಂಕವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಇಂಡಿಯಾಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಂತ್ರಸ್ತೆಯನ್ನು ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅಣಕಿಸಿ ನಕ್ಕಿದ್ದಾರೆ. ‘‘ಆಕೆಯ ಮನೆ ಉನ್ನಾವೋದಲ್ಲಿದೆ. ಮತ್ತೆ ದಿಲ್ಲಿಯಲ್ಲಿ ಏನು ಮಾಡುತ್ತಿದ್ದಾಳೆ?’’ ಅವರು ಕೇಳಿದ್ದಾರೆ. ನಿಜಕ್ಕೂ ಆತ ನಕ್ಕಿದ್ದು, ನ್ಯಾಯ ವ್ಯವಸ್ಥೆಯ ಅಸಹಾಯಕತೆಯನ್ನು ನೋಡಿ. ಆತ ಮಾತ್ರವಲ್ಲ, ಈ ದೇಶದ ಜೈಲಿನಲ್ಲಿರುವ ಎಲ್ಲ ಅತ್ಯಾಚಾರ ಆರೋಪಿಗಳೂ ನ್ಯಾಯ ವ್ಯವಸ್ಥೆಯ ವೈಕಲ್ಯವನ್ನು ನೋಡಿ ನಗುತ್ತಿದ್ದಾರೆ. ಸೆಂಗರ್ ಪ್ರಕರಣವು, ಈ ಹಿಂದೆ ಗುಜರಾತ್‌ನ ದಂಗೆಯ ಸಂದರ್ಭದಲ್ಲಿ ಸಾಮೂಹಿಕ ಹತ್ಯೆ ಮತ್ತು ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಗುಜರಾತ್ ಸರಕಾರ ಮಧ್ಯ ಪ್ರವೇಶಿಸಿ ಬಿಡುಗಡೆ ಮಾಡಿ ಛೀಮಾರಿಗೊಳಗಾದುದನ್ನು ನೆನಪಿಸುತ್ತದೆ. ಅಂದು ಆ ಅಪರಾಧಿಗಳ ಬಿಡುಗಡೆಯನ್ನು ಬಿಜೆಪಿ ನಾಯಕರು ಅದ್ದೂರಿಯಾಗಿ ಸ್ವಾಗತಿಸಿದ್ದರು. ಮಾತ್ರವಲ್ಲ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಅವರನ್ನು ಬಿಜೆಪಿ ನಾಯಕರು ಬಳಸಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಸುಪ್ರೀಂಕೋರ್ಟ್ ಆರೋಪಿಗಳ ಬಿಡುಗಡೆಯನ್ನು ಖಂಡಿಸಿ ಗುಜರಾತ್ ಸರಕಾರಕ್ಕೆ ಛೀಮಾರಿ ಹಾಕಿತ್ತು. ಅಪರಾಧಿಗಳನ್ನು ಮತ್ತೆ ಜೈಲು ಸೇರುವಂತೆ ಮಾಡಿತ್ತು. ವಿಪರ್ಯಾಸವೆಂದರೆ, ಉನ್ನಾವೋ ಅತ್ಯಾಚಾರ ಆರೋಪಿಯ ಬಿಡುಗಡೆಯಲ್ಲಿ ನ್ಯಾಯಾಲಯವೇ ನೇರ ಪಾತ್ರವನ್ನು ವಹಿಸುತ್ತಿರುವುದು. ಹಾಗೊಂದು ವೇಳೆ ಆತ ಬಿಡುಗಡೆಯಾದರೆ, ಅದು ನ್ಯಾಯ ವ್ಯವಸ್ಥೆಯ ಮೇಲೆ ನಡೆಯುವ ಬರ್ಬರ ಅತ್ಯಾಚಾರವೆಂದು ಪರಿಗಣಿಸಲ್ಪಡಲಿದೆ. ಇಂತಹ ತೀರ್ಪಿಗಿಂತ ಅತ್ಯಾಚಾರವನ್ನು ಸಂವಿಧಾನಬದ್ಧವೆಂದು ಘೋಷಿಸುವುದು ಉತ್ತಮ. ಅತ್ಯಾಚಾರಗೈಯುವುದು ರಾಜಕಾರಣಿಗಳ ಹಕ್ಕು ಎಂದು ಘೋಷಿಸಿದರೆ ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಅಪರಾಧವನ್ನು ಮಾಡಲಾರರು. ನ್ಯಾಯಾಲಯವನ್ನು ನಂಬಿ ಮೋಸ ಹೋಗಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು, ಅಂತಿಮವಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಸನ್ನಿವೇಶವಾದರೂ ತಪ್ಪಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News