ಕಾಳದಂಧೆಕೋರರ ಬುಡಕ್ಕೆ ‘ಗೊಬ್ಬರ’
ಸಾಂದರ್ಭಿಕ ಚಿತ್ರ PC: istockphoto
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಳೆಗಾಲ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಸರಕಾರ ಸಿಡಿಲು ಮಿಂಚುಗಳನ್ನು ಎದುರಿಸಲು ಸಿದ್ಧವಾಗಿರಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ಮಳೆ ಬೀಳದಿದ್ದರೆ ಅದರ ಹೊಣೆಗಾರಿಕೆಯನ್ನೂ ಸರಕಾರ ಹೊತ್ತುಕೊಳ್ಳಬೇಕಾಗುತ್ತದೆ. ಕಳೆದ ಬಾರಿ ಮಳೆಗಾಲ ತಡವಾದಾಗ ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದದ್ದೇ ಕಾರಣ’ ಎಂದು ಕೆಲವರು ವಿಶ್ಲೇಷಿಸಿದ್ದರು. ಅಗತ್ಯಕ್ಕಿಂತ ಹೆಚ್ಚು ಮಳೆ ಬಿದ್ದು ನೆರೆ ಬಂದಾಗಲೂ ಸರಕಾರ ಅದರ ಹೊಣೆ ಹೊರಬೇಕಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ ಇವೆರಡರ ನಡುವೆ ಸರಕಾರ ಜಾಗರೂಕವಾಗಿ ಹೆಜ್ಜೆಯಿಡಬೇಕಾಗುತ್ತದೆ. ಈ ಬಾರಿ ಅವಧಿಗೆ ಮುನ್ನವೇ ಭಾರೀ ಮಳೆ ಸುರಿದಿದೆ. ಒಂದು ರೀತಿಯಲ್ಲಿ ಅಗತ್ಯಕ್ಕಿಂತ ಹೆಚ್ಚೇ ಸುರಿದಿದೆ. ಜಲಾಶಯಗಳು ತುಂಬಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ತೀವ್ರಗೊಂಡಿವೆ. ರೈತರು ಗದ್ದೆ ಉತ್ತು ಇದೀಗ ಗೊಬ್ಬರ ಬೀಜಗಳಿಗಾಗಿ ಸರಕಾರದ ಕಡೆಗೆ ನೋಡುತ್ತಿದ್ದಾರೆ. ಬೇಗ ಮಳೆ ಸುರಿದಿರುವುದರಿಂದ, ಎಂದಿಗಿಂತ ಬೇಗನೇ ಕೃಷಿ ಕೆಲಸಗಳನ್ನು ರೈತರು ಶುರು ಹಚ್ಚಿದ್ದಾರೆ. ಈಗಾಗಲೇ ಐದು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬಿತ್ತನೆಯಾಗಿದೆ ಎಂದು ಸರಕಾರ ಹೇಳುತ್ತಿದೆ. ರೈತರು ಕಳೆದ ಅವಧಿಗಿಂತ ಹೆಚ್ಚು ಜೋಳ ಬಿತ್ತನೆ ಮಾಡಿದ್ದಾರೆ. ಇವೆಲ್ಲವೂ ಸರಕಾರದ ಪಾಲಿಗೆ ಒಳ್ಳೆಯ ವಿಷಯವಾಗಬೇಕಾಗಿತ್ತು. ಆದರೆ ರೈತರ ಅಗತ್ಯಕ್ಕೆ ಬೇಕಾದಷ್ಟು ರಸಗೊಬ್ಬರವನ್ನು ಪೂರೈಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗಾಗಿ ಗೊಬ್ಬರದಂಗಡಿಗಳ ಮುಂದೆ ರೈತರು ಸಾಲು ನಿಂತಿದ್ದಾರೆ. ಚಿತ್ರದುರ್ಗ ಗದಗ, ಕೊಪ್ಪಳ, ದಾವಣಗೆರೆ ಹೀಗೆ ರಾಜ್ಯದ ಹಲವೆಡೆ ರೈತರು ರಸಗೊಬ್ಬರ ಕೊರತೆಯಿಂದಾಗಿ ಕಂಗಾಲಾಗಿದ್ದಾರೆ. ಪ್ರತಿಭಟನೆಗೂ ಇಳಿದಿದ್ದಾರೆ. ಒಂದೆಡೆ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಕಳೆದ ಒಂದು ವಾರದಿಂದ ರಸಗೊಬ್ಬರ ಪೂರೈಕೆಯ ಕುರಿತಂತೆ ಕೇಂದ್ರಕ್ಕೆ ಬೇರೆ ಬೇರೆ ರೀತಿಯಲ್ಲಿ ರಾಜ್ಯ ಸರಕಾರ ಒತ್ತಡವನ್ನು ಹಾಕುತ್ತಿದೆ. ಫಲಿತಾಂಶ ಮಾತ್ರ ಶೂನ್ಯ.
ಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೊರತೆ ಅನೇಕ ಬಾರಿ ಸರಕಾರವನ್ನು ನಡುಗಿಸಿದೆ. ರೈತರ ಪ್ರತಿಭಟನೆ ಅತಿರೇಕಕ್ಕೆ ಹೋಗಿ ಲಾಠಿಚಾರ್ಜ್, ಗೋಲಿಬಾರ್‌ನಲ್ಲಿ ಅಂತ್ಯವಾದದ್ದೂ ಇದೆ. ಈ ಹಿಂದೆ ಯಡಿಯೂರಪ್ಪ ಸರಕಾರ ರೈತರ ಮೇಲೆ ಗೋಲಿಬಾರ್ ನಡೆಸಿದ ಕಳಂಕವನ್ನು ತನ್ನದಾಗಿಸಿಕೊಂಡಿತ್ತು. ಆ ಕಳಂಕವನ್ನು ತೊಳೆಯುವುದಕ್ಕೆ ಯಡಿಯೂರಪ್ಪ ಅವರಿಗೆ ಕೊನೆಯವರೆಗೂ ಸಾಧ್ಯವಾಗಿರಲಿಲ್ಲ. ದೇವೇಗೌಡರ ಕಾಲದಲ್ಲಿ ಶಿರಾದಲ್ಲಿಯೂ ರೈತರ ಪ್ರತಿಭಟನೆಗಳನ್ನು ಪೊಲೀಸ್ ಲಾಠಿ ಗಳ ಮೂಲಕ ದಮನಿಸಲಾಗಿತ್ತು. ಇದೀಗ ಸಿದ್ದರಾಮಯ್ಯ ಅವರ ಸರದಿ. ಈ ಹಿಂದೆ ಬಿಜೆಪಿ ನೇತೃತ್ವದ ಸರಕಾರವಿದ್ದಾಗ ಗೊಬ್ಬರ ಕೊರತೆಯ ವಿರುದ್ಧ ತೀವ್ರವಾಗಿ ಧ್ವನಿಯೆತ್ತಿದವರು ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿ ಆ ಕೊರತೆಯನ್ನು ನಿಭಾಯಿಸಲು ಅವರು ತಿಣುಕಾಡುತ್ತಿರುವುದು ಎದ್ದು ಕಾಣುತ್ತಿದೆ. 2025 ಖಾರಿಫ್ ಬೆಳೆಗೆ ಕೇಂದ್ರ ಸರಕಾರವು ಸುಮಾರು 11, 17,000 ಮೆಟ್ರಿಕ್ ಟನ್ ಯೂರಿಯಾವನ್ನು ಹಂಚಿಕೆ ಮಾಡಿದೆಯಾದರೂ, ರಾಜ್ಯಕ್ಕೆ ಸರಬರಾಜು ಮಾಡಿರುವುದು ಕೇವಲ 5, 16,959 ಮೆಟ್ರಿಕ್ ಟನ್. ಸದ್ಯ ಎಪ್ರಿಲ್‌ನಿಂದ ಜುಲೈಯವರೆಗೆ ರಾಜ್ಯಕ್ಕೆ 6,80, 655 ಮೆಟ್ರಿಕ್ ಟನ್ ಯೂರಿಯಾದ ಅವಶ್ಯಕತೆಯಿದೆ ಎಂದು ರಾಜ್ಯ ಸರಕಾರ ಅಭಿಪ್ರಾಯ ಪಡುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿರುವುದು ಮಾತ್ರವಲ್ಲ, ಬೇಗನೆ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಬೇಗನೆ ಇಳಿದಿದ್ದಾರೆ. ಹೆಚ್ಚಿನ ಗೊಬ್ಬರ ಬಳಸುವ ಬೆಳೆಯಾದ ಮೆಕ್ಕೆಜೋಳದ ವಿಸ್ತೀರ್ಣವು ಸುಮಾರು 2 ಲಕ್ಷ ಹೆಕ್ಟೇರ್‌ನಷ್ಟು ಹೆಚ್ಚಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಇದುವೇ ರಸಗೊಬ್ಬರ ಕೊರತೆಗೆ ಮೊದಲ ಕಾರಣ ಎನ್ನುವುದು ಸರಕಾರದ ಅಭಿಪ್ರಾಯವಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದ ರಸಗೊಬ್ಬರ ಕೊರತೆಯ ಬಗ್ಗೆ ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ ಮುಖ್ಯಮಂತ್ರಿ ಪತ್ರವನ್ನು ಬರೆದಿದ್ದಾರೆ.
ಇಂತಹ ಸಂದರ್ಭದಲ್ಲಿ ರಸಗೊಬ್ಬರದ ಕೃತಕ ಅಭಾವಗಳೂ ಕಾಣಿಸಿಕೊಳ್ಳುತ್ತವೆ. ಒಂದೆಡೆ ರಸಗೊಬ್ಬರವನ್ನು ದಾಸ್ತಾನು ಮಾಡಿ ಅದನ್ನು ಕಾಳಸಂತೆಯಲ್ಲಿ ಮಾರುವ ದಂಧೆಗಳು ಆರಂಭವಾಗಿವೆ. ರಸಗೊಬ್ಬರ ದಾಸ್ತಾನು ಇದ್ದರೂ ಅದನ್ನು ರೈತರಿಗೆ ನೀಡದೆ, ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಲಾಗುತ್ತದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಇದು ಎಲ್ಲ ಕಾಲದಲ್ಲೂ ನಡೆಯುವ ದಂಧೆಯಾಗಿದೆ. ಸರಕಾರ ಇದರ ವಿರುದ್ಧ ಅದೆಷ್ಟು ಕಾರ್ಯಾಚರಣೆ ನಡೆಸಿದರೂ, ಅದಕ್ಕೆ ಮೂಗುದಾರ ಹಾಕಲು ಸಾಧ್ಯವಾಗಿಲ್ಲ. ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ರಸಗೊಬ್ಬರ ಕೊರತೆಗೆ ರಾಜ್ಯ ಸರಕಾರವನ್ನೇ ಹೊಣೆ ಮಾಡುತ್ತಿದ್ದಾರೆ. ‘ಕೇಂದ್ರ ಸರಕಾರದಿಂದ 8, 70, 000 ಮೆಟ್ರಿಕ್ ಟನ್ ಯೂರಿಯಾ ಬಂದಿದ್ದು, 5,25,000 ಮೆಟ್ರಿಕ್ ಟನ್ ಯೂರಿಯಾ ಮಾತ್ರ ರಾಜ್ಯದ ಮಾರುಕಟ್ಟೆಯಲ್ಲಿದೆ. ಉಳಿದ ಸುಮಾರು 2,50,000ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಏನಾಗಿದೆ ಎಂದು ಅವರು ಕೇಳುತ್ತಿದ್ದಾರೆ. ರಾಜ್ಯಕ್ಕೆ ಬೇಕಾದಷ್ಟು ರಸಗೊಬ್ಬರವನ್ನು ಒದಗಿಸುವಂತೆ ಕೇಂದ್ರಕ್ಕೆ ಒತ್ತಡ ಹಾಕುವುದು ಕೇವಲ ಮುಖ್ಯಮಂತ್ರಿಯ ಹೊಣೆಗಾರಿಕೆ ಮಾತ್ರ ಅಲ್ಲ. ರಾಜ್ಯದಿಂದ ಆರಿಸಿ ಹೋಗಿರುವ ಸಂಸದರು ಕೂಡ ದಿಲ್ಲಿಯಲ್ಲಿ ರಾಜ್ಯದ ರೈತರ ಪರವಾಗಿ ಮಾತನಾಡಬೇಕಾಗುತ್ತದೆ. ಆಗ ಮಾತ್ರ ದಿಲ್ಲಿಯ ನಾಯಕರು ಸ್ಪಂದಿಸಲು ಸಾಧ್ಯ. ಆದರೆ, ರಾಜ್ಯದ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರನ್ನು ಟೀಕಿಸಲು ಇರುವ ಉತ್ಸಾಹ, ಕೇಂದ್ರವನ್ನು ರಸಗೊಬ್ಬರಕ್ಕಾಗಿ ಒತ್ತಾಯಿಸುವುದರಲ್ಲಿ ಇಲ್ಲ.
ರಸಗೊಬ್ಬರದ ಕೊರತೆ ಕೇವಲ ರಾಜ್ಯದ ಸಮಸ್ಯೆ ಮಾತ್ರವಲ್ಲ, ಇಡೀ ದೇಶವೇ ಈ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ದೇಶದ ಎಲ್ಲ ರೈತರಿಗೆ ಬೇಕಾಗುವಷ್ಟು ರಸಗೊಬ್ಬರನ್ನು ಒದಗಿಸಲು ಕೇಂದ್ರ ಸರಕಾರ ಈ ಹಿಂದಿನಿಂದಲೂ ವಿಫಲವಾಗುತ್ತಲೇ ಬಂದಿದೆ. ಭಾರತವು ಮುಖ್ಯವಾಗಿ ಯೂರಿಯಾ, ಡೈ ಅಮೋನಿಯಂ ಪಾಸ್ಪೇಟ್, ಪೊಟಾಶಿಯಂ ಕ್ಲೋರೈಡನ್ನು ಆಮದು ಮಾಡಿಕೊಳ್ಳುತ್ತದೆ. ರೈತರ ಬೇಡಿಕೆಗೆ ಅನುಗುಣವಾಗಿ ಆಮದು ಮಾಡಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ವಾಸ್ತವವಾಗಿದೆ. ರಶ್ಯದ ಜೊತೆಗೆ ಹಾಗೆಯೇ ಸೌದಿಯ ಜೊತೆಗೂ ಈ ನಿಟ್ಟಿನಲ್ಲಿ ಭಾರತ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ. ಹತ್ತು ದಿನಗಳ ಹಿಂದೆ ನಡೆದ ಒಪ್ಪಂದವೊಂದರಲ್ಲಿ ಮುಂದಿನ 5 ವರ್ಷಗಳ ಕಾಲ 31 ಲಕ್ಷ ಟನ್ ರಸಗೊಬ್ಬರವನ್ನು ಭಾರತಕ್ಕೆ ಪೂರೈಕೆ ಮಾಡಲು ಕೇಳಿಕೊಳ್ಳಲಾಗಿದೆ. ಇಷ್ಟಾದರೂ, ಭಾರತದ ರೈತರ ಅವಶ್ಯಕತೆಗಳನ್ನು ಅಗತ್ಯಕ್ಕೆ ತಕ್ಕಂತೆ ಈಡೇರಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಸತ್ಯವಾಗಿದೆ. ತೀವ್ರ ಕೊರೆತಯ ಸಂದರ್ಭದಲ್ಲೇ ನಕಲಿ ರಸಗೊಬ್ಬರ ಮತ್ತು ನಕಲಿ ಬೀಜಗಳ ಪೂರೈಕೆ ರೈತರ ಪಾಲಿಗೆ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಈ ನಕಲಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ನಂಬಿ ಮಣ್ಣಿಗೆ ಹಣ ಹೂಡಿಕೆ ಮಾಡುವ ರೈತರು ತಾವು ಮೋಸಹೋಗಿದ್ದೇವೆ ಎನ್ನುವುದು ಗೊತ್ತಾಗುವ ಹೊತ್ತಿಗೆ ಸಾಲದ ಸುಳಿಗೆ ಬಿದ್ದಿರುತ್ತಾರೆ. ರಾಜ್ಯದಲ್ಲಿ ಈಗಾಗಲೇ ಸುಮಾರು 9 ನಕಲಿ ರಸಗೊಬ್ಬರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವುಗಳನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಇಂತಹ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಪೂರೈಕೆಯಾಗಿರುವ ಗೊಬ್ಬರವನ್ನು ಅರ್ಹರಿಗೆ ತಲುಪಿಸುವ ಕೆಲಸಕ್ಕೆ ರಾಜ್ಯ ಸರಕಾರ ಆದ್ಯತೆಯನ್ನು ನೀಡಬೇಕು. ಕೃಷಿ ಸಹಕಾರ ಸಂಘಗಳ ಮೂಲಕ ಇದರ ವಿತರಣೆಗಳು ನಡೆದರೆ ಅರ್ಹ ರೈತರನ್ನು ತಲುಪಬಹುದು. ಹಾಗೆಯೇ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಒಂದಾಗಿ ಕೇಂದ್ರ ಸರಕಾರಕ್ಕೆ ರೈತರ ಸಮಸ್ಯೆಯನ್ನು ತಲುಪಿಸುವ ಕೆಲಸ ಮಾಡಬೇಕು. ಹಾಗೆಯೇ ರಸಗೊಬ್ಬರಕ್ಕೆ ಪರ್ಯಾಯ ದಾರಿಯನ್ನು ಹುಡುಕುವುದು ಕೂಡ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾವಯವ ಗೊಬ್ಬರಗಳನ್ನು ಬಳಸುವ ಕೃಷಿಕರಿಗೂ ಹೆಚ್ಚು ಹೆಚ್ಚು ಪ್ರೋತ್ಸಾಹಗಳನ್ನು ನೀಡುವುದಕ್ಕೆ ಮುಂದಾಗಬೇಕು. ಸಾವಯವ ಕೃಷಿಗೆ ನೀಡುವ ಸಹಾಯಗಳನ್ನು ಅನರ್ಹರು ತಮ್ಮದಾಗಿಸಿಕೊಳ್ಳುತ್ತಿರುವುದು ಈ ನಡುವೆ ಹೆಚ್ಚುತ್ತಿದೆ.
ಜಾಗತಿಕವಾಗಿ ರಸಗೊಬ್ಬರ ಬೆಲೆಯೇರಿಕೆಯ ಹೊರತಾಗಿಯೂ ರೈತರಿಗೆ ಸಬ್ಸಿಡಿ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ಈ ಸಬ್ಸಿಡಿಗಳಿಂದ ರೈತರಿಗಿಂತ, ಕಂಪೆನಿಗಳೇ ಲಾಭ ಮಾಡಿಕೊಳ್ಳುತ್ತಿವೆ ಎನ್ನುವ ಆರೋಪಗಳಿವೆ. ಈ ಸಹಾಯಧನವನ್ನು ನೇರವಾಗಿ ರೈತರಿಗೇ ದೊರಕುವಂತೆ ಮಾಡಬೇಕು ಎನ್ನುವ ಆಗ್ರಹಗಳೂ ಕೇಳಿ ಬರುತ್ತಿವೆ. ಒಟ್ಟಿನಲ್ಲಿ, ರೈತರ ಹೆಸರಿನಲ್ಲಿ ಬೃಹತ್ ಕಂಪೆನಿಗಳು, ಕಾಳದಂಧೆಕೋರರು, ಮಧ್ಯವರ್ತಿಗಳು ತಿಂದುತೇಗುವಂತಹ ಸ್ಥಿತಿ ನಿರ್ಮಾಣವಾಗಬಾರದು. ಈ ನಿಟ್ಟಿನಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಪೂರೈಕೆಗೆ ಕಟ್ಟು ನಿಟ್ಟಾದ ವ್ಯವಸ್ಥೆಯನ್ನು ಮಾಡಿ, ಅರ್ಹ ರೈತರಿಗೆ ವಂಚನೆಯಾಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. ರೈತರು ಸಿದ್ದರಾಮಯ್ಯ ಅವರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳಬೇಕಾಗಿದೆ.