ಡಿಜಿಟಲ್ ಬಂಧನಕ್ಕೊಳಗಾಗಿರುವ ದೇಶದ ಅರ್ಥವ್ಯವಸ್ಥೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದಲ್ಲಿ ಅಸಲಿ ತನಿಖಾ ಸಂಸ್ಥೆಗಳಿಗಿಂತ ನಕಲಿ ತನಿಖಾ ಸಂಸ್ಥೆಗಳ ಕಾರ್ಯಾಚರಣೆಗಳೇ ಹೆಚ್ಚುತ್ತಿರುವುದು ಸುಪ್ರೀಂಕೋರ್ಟ್‌ನ ಗಮನಕ್ಕೂ ಬಂದಂತಿದೆ. ಡಿಜಿಟಲ್ ಬಂಧನ ಪ್ರಕರಣಗಳ ಕುರಿತು ಏಕೀಕೃತ ರಾಷ್ಟ್ರವ್ಯಾಪಿ ತನಿಖೆಯನ್ನು ಸೋಮವಾರ ಸಿಬಿಐಗೆ ವಹಿಸಿಕೊಟ್ಟಿರುವ ಸರ್ವೋಚ್ಚ ನ್ಯಾಯಾಲಯವು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಂತಹ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರಕಾರಗಳಿಗೆ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಆರ್‌ಬಿಐಗೂ ನೋಟಿಸನ್ನು ನೀಡಿದೆ. ‘ಸೈಬರ್ ವಂಚನೆ’ ಪ್ರಕರಣಗಳಲ್ಲಿ ಬಳಸಲಾದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವನ್ನು ಯಾಕೆ ಬಳಸಿಲ್ಲ ಎನ್ನುವುದಕ್ಕೆ ಉತ್ತರಿಸುವಂತೆಯೂ ಅದು ಸೂಚಿಸಿದೆ. ಜೊತೆಗೆ ಇಂತಹ ಆನ್‌ಲೈನ್ ಅಪರಾಧಗಳನ್ನು ಎದುರಿಸಲು ಪ್ರಾದೇಶಿಕ ಮತ್ತು ರಾಜ್ಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಪ್ರಧಾನಿ ಮೋದಿಯವರು ತನ್ನ ಆಡಳಿತದ ಹೆಗ್ಗಳಿಕೆಗಳಲ್ಲಿ ಒಂದು ಎಂದು ಹೇಳಿಕೊಂಡು ಬರುತ್ತಿರುವ ಡಿಜಿಟಲ್ ಬ್ಯಾಂಕಿಂಗ್ ದೇಶದಲ್ಲಿ ದರೋಡೆಗೆ ಹೊಸ ಆಯಾಮವೊಂದನ್ನು ನೀಡಿದೆ. 2014ಕ್ಕೆ ಮೊದಲು ಮನೆ, ಬ್ಯಾಂಕ್‌ಗಳ ಬಾಗಿಲು ಮುರಿದು, ಗೋಡೆ ಕೊರೆದು ಒಳ ನುಗ್ಗಿ ದರೋಡೆ ಮಾಡುತ್ತಿದ್ದರೆ, ಮೋದಿಯವರ ಡಿಜಿಟಲ್ ಯುಗದಲ್ಲಿ ಸಾವಿರಾರು ಕಿಲೋಮೀಟರ್ ದೂರದಲ್ಲಿ ಕುಳಿತು ದೇಶದ ಜನರ ಮನೆ, ಬ್ಯಾಂಕ್‌ಗಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಒಂದು ರೀತಿಯಲ್ಲಿ, ದರೋಡೆಗಳನ್ನೇ ಡಿಜಿಟಲೀಕರಣ ಮಾಡಲಾಗಿದೆ. ಹಿಂದೆ ಬ್ಯಾಂಕ್ ದರೋಡೆಯಾದರೆ ಅದರ ಹೊಣೆಯನ್ನು ಬ್ಯಾಂಕ್‌ಗಳು ಹೊತ್ತುಕೊಂಡು ಗ್ರಾಹಕರಿಗೆ ಆದ ನಷ್ಟವನ್ನು ತುಂಬಿಕೊಡುತ್ತಿತ್ತು. ಆದರೆ ಈ ಡಿಜಿಟಲ್ ದರೋಡೆಗಳಿಗೆ ಸಂಬಂಧಿಸಿ ಬ್ಯಾಂಕ್‌ಗಳು ಹೊಣೆಗಾರಿಕೆಯಿಂದ ಸಂಪೂರ್ಣ ನುಣುಚಿಕೊಳ್ಳುತ್ತಿದೆ. ಗ್ರಾಹಕ ತನ್ನ ಖಾತೆಯನ್ನು ಸೈಬರ್ ಕಳ್ಳರು ದೋಚಿದರೆ ಯಾರಲ್ಲಿ ದೂರು ನೀಡಬೇಕು ಎಂದು ಗೊತ್ತಾಗದೆ ಅಸಹಾಯಕನಾಗಬೇಕಾಗುತ್ತದೆ. ಈ ಡಿಜಿಟಲ್ ದರೋಡೆಗಳಿಗೆ ಹೊಸ ತಂತ್ರಗಳನ್ನು ಅನ್ವೇಷಣೆ ಮಾಡುವಲ್ಲಿ ಕಳ್ಳರು ಪೊಲೀಸರಿಗಿಂತ ಎಷ್ಟೋ ಮುಂದಿದ್ದಾರೆ. ಪ್ರಧಾನಿ ಮೋದಿಯವರು ಭದ್ರತೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬದಲು, ಸಂತ್ರಸ್ತ ಗ್ರಾಹಕರನ್ನು ತಮ್ಮ ಭಾಷಣಗಳಿಂದ ಸಂತೈಸುವುದಕ್ಕೆ ಸೀಮಿತರಾಗಿದ್ದಾರೆ.
2024ರಲ್ಲಿ ಭಾರತವು ಸೈಬರ್ ಕ್ರಿಮಿನಲ್‌ಗಳು ಮತ್ತು ವಂಚಕರಿಂದಾಗಿ 22, 842 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಅಷ್ಟೇ ಅಲ್ಲ, 2025ರಲ್ಲಿ ಇಂತಹ ವಂಚನೆಗಳಿಂದ 1.2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಳ್ಳಲಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಅಂದಾಜಿಸಿದೆ. 2023ರಲ್ಲಿ ಈ ಸೈಬರ್ ದರೋಡೆಯಲ್ಲಿ ಭಾರತೀಯರು 7, 465 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದರೆ, 2022ರಲ್ಲಿ 2,306 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಅಂದರೆ ವರ್ಷದಿಂದ ವರ್ಷಕ್ಕೆ ಕಳೆದುಕೊಳ್ಳುತ್ತಿರುವ ಹಣ ಹಲವು ಪಟ್ಟು ಹೆಚ್ಚುತ್ತಿದೆ. ವಿಶೇಷವೆಂದರೆ, ಹೀಗೆ ಹಣ ಕಳೆದುಕೊಳ್ಳುತ್ತಿರುವವರು ಅನಕ್ಷರಸ್ಥರು, ಡಿಜಿಟಲ್ ಬ್ಯಾಂಕಿಂಗ್‌ನ ಬಗ್ಗೆ ಅಜ್ಞಾನ ಹೊಂದಿರುವವರಲ್ಲ. ಸ್ವತಃ ಬ್ಯಾಂಕ್ ಅಧಿಕಾರಿಗಳೇ ಈ ಸೈಬರ್ ವಂಚಕರ ಮೋಸಕ್ಕೆ ನೇರವಾಗಿ ಬಲಿಯಾಗುತ್ತಿದ್ದಾರೆ. ರಾಜಕಾರಣಿಗಳು, ಉಪನ್ಯಾಸಕರು, ನಿವೃತ್ತ ಅಧಿಕಾರಿಗಳು ಹೀಗೆ ವಿದ್ಯಾವಂತರ ದೊಡ್ಡ ಪಡೆಯೇ ಡಿಜಿಟಲ್ ದರೋಡೆಯ ನೇರ ಸಂತ್ರಸ್ತರಾಗಿದ್ದಾರೆ. ಕಳೆದ ವರ್ಷ ಕರ್ನಾಟಕದ ಗದಗ್ ಜಿಲ್ಲೆಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಸೈಬರ್ ವಂಚಕರಿಗೆ ಬಲಿಯಾಗಿ 26 ಲಕ್ಷ ರೂಪಾಯಿ ಕಳೆದುಕೊಂಡರು. ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಸಂಪಾದಿಸಿ ಎನ್ನುವ ಜಾಹೀರಾತಿಗೆ ಮರುಳಾಗಿ ತಮ್ಮ ಬ್ಯಾಂಕ್ ವಿವರಗಳನ್ನು ನೀಡಿ ಅವರು ಹಣ ಕಳೆದುಕೊಂಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬ್ಯಾಂಕ್ ಅಧಿಕಾರಿಯನ್ನೇ ಡಿಜಿಟಲ್ ಅರೆಸ್ಟ್ ಮಾಡಿ ಸುಮಾರು 56 ಲಕ್ಷ ರೂಪಾಯಿಗಳನ್ನು ದೋಚಿದ್ದರು. ಜನರನ್ನು ಜಾಗೃತಿಗೊಳಿಸಬೇಕಾಗಿದ್ದ, ಡಿಜಿಟಲ್ ಬ್ಯಾಂಕ್ ವ್ಯವಹಾರದ ಕುರಿತಂತೆ ಜನರನ್ನು ಸಾಕ್ಷರರನ್ನಾಗಿಸಬೇಕಾಗಿದ್ದ ಅಧಿಕಾರಿಗಳೇ ಡಿಜಿಟಲ್ ಅರೆಸ್ಟ್‌ಗೆ ಬಲಿಯಾದರೆ, ಇನ್ನು ಜನಸಾಮಾನ್ಯರ ಸ್ಥಿತಿಯೇನಾಗಬೇಕು?
ಇನ್ನೊಬ್ಬರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಅಥವಾ ಮೋಸದಿಂದ ಒಟಿಪಿ ಪಡೆದು ಹಣ ದೋಚುವುದು ಒಂದು ರೀತಿಯಾದರೆ, ಡಿಜಿಟಲ್ ಆ್ಯರೆಸ್ಟ್ ಹೆಸರಿನಲ್ಲಿ ಕೋಟಿಗಟ್ಟಳೆ ಹಣವನ್ನು ದೋಚುವುದು ವಂಚಕರ ಇನ್ನೊಂದು ಬಗೆಯ ತಂತ್ರ. ಇಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಿರುವುದು ಮಾತ್ರವಲ್ಲ, ತನಿಖಾ ಸಂಸ್ಥೆಯ ಹೆಸರನ್ನೇ ದುರ್ಬಳಕೆ ಮಾಡಿ ಜನರನ್ನು ವಂಚಿಸಲಾಗುತ್ತಿದೆ. ಸಿಬಿಐ ಹೆಸರಿನಲ್ಲಿ ಇಂತಹ ಭಾರೀ ವಂಚನೆಗಳು ನಡೆದಾಗಲೇ ತನಿಖಾ ಸಂಸ್ಥೆಗಳು ಎಚ್ಚೆತ್ತು ಇದಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ತನಿಖಾ ಸಂಸ್ಥೆಗಳ ಹೆಸರುಗಳನ್ನೇ ಬಳಸಿಕೊಂಡು ವಂಚಕರು ಮೋಸವೆಸಗುವುದು ಆಯಾ ಸಂಸ್ಥೆಗೆ ಅವಮಾನಕಾರಿ ವಿಷಯವಾಗಿದೆ.
ತಮ್ಮ ಹೆಸರಿನಲ್ಲೇ ನಡೆಯುತ್ತಿರುವ ವಂಚನೆಗಳನ್ನು ತಡೆಯಲು ತನಿಖಾ ಸಂಸ್ಥೆಗಳು ವಿಫಲವಾಗುತ್ತವೆ ಎಂದಾದರೆ, ಇತರ ವಂಚನೆಗಳನ್ನು ತಡೆಯುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು? ಡಿಜಿಟಲ್ ಅರೆಸ್ಟ್‌ನಲ್ಲಿ ಜನರು ಮೋಸ ಹೋಗಿ ಹಣದ ವಿವರಗಳನ್ನು ನೀಡುವುದು ಈ ದೇಶದ ಕಾನೂನು ವ್ಯವಸ್ಥೆಗೆ ಹೆದರಿ. ಒಂದು ರೀತಿಯಲ್ಲಿ ಡಿಜಿಟಲ್ ಅರೆಸ್ಟ್ ಮೂಲಕ ವಂಚಕರು ಕಾನೂನು ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ.
ಡಿಜಿಟಲ್ ಅರೆಸ್ಟ್‌ಗೊಳಾಗಾದವರ ಹಿನ್ನೆಲೆ ಗಮನಿಸಿದರೆ ನಿಜಕ್ಕೂ ಆಘಾತವಾಗುತ್ತದೆ. ಗುಜರಾತ್‌ನಲ್ಲಿ ವೈದ್ಯೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ಬೆದರಿಸಿ ಅವರಿಂದ 19 ಕೋಟಿ ರೂಪಾಯಿಯನ್ನು ದೋಚಿದ್ದಾರೆ. ಇಲ್ಲಿ, ದುಷ್ಕರ್ಮಿಗಳು ಆರಂಭದಲ್ಲಿ ದೂರವಾಣಿ ಸಂಪರ್ಕ ಇಲಾಖೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಆಕೆಯ ಮೊಬೈಲ್ ಸಂಖ್ಯೆಯನ್ನು ಅಕ್ರಮ ವ್ಯವಹಾರಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ವೈದ್ಯೆ ತನ್ನ ಜೀವಮಾನದ ಗಳಿಕೆಯನ್ನೆಲ್ಲ ಕೆಲವೇ ಗಂಟೆಗಳಲ್ಲಿ ದುಷ್ಕರ್ಮಿಗಳಿಗೆ ಒಪ್ಪಿಸಿ ಬಿಟ್ಟಿದ್ದರು. ಹಿಮಾಚಲ ಪ್ರದೇಶದಲ್ಲಿ ನಿವೃತ್ತ ಕರ್ನಲ್ ದಂಪತಿಯನ್ನು ಡಿಜಿಟಲ್ ಬಂಧನಗೈದು 49 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ. ನೋಯ್ಡಾದಲ್ಲಿ ಕುಟುಂಬವೊಂದನ್ನು ಐದು ದಿನಗಳ ಕಾಲ ಡಿಜಿಟಲ್ ಬಂಧನಕ್ಕೊಳಪಡಿಸಿ ಸುಮಾರು 1.1 ಕೋಟಿ ರೂಪಾಯಿ ಸುಲಿಗೆ ಮಾಡಿದ್ದರು. ಮುಂಬೈಯಲ್ಲಿ ಓರ್ವ ವೃದ್ಧೆಯನ್ನು ಒಂದು ತಿಂಗಳ ಕಾಲ ಡಿಜಿಟಲ್ ಬಂಧನಕ್ಕೊಳಪಡಿಸಿ 3.8 ಕೋಟಿ ರೂಪಾಯಿಯನ್ನು ದೋಚಿದ್ದರು. 15 ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಇದೇ ರೀತಿಯಲ್ಲಿ ವಂಚಿಸಿ 31 ಕೋಟಿ ರೂಪಾಯಿಯನ್ನು ದೋಚಿದ್ದರು. ಇತ್ತೀಚೆಗೆ ನಡೆದ ಅತಿ ದೊಡ್ಡ ವಂಚನೆ ಪ್ರಕರಣ ಇದು. ಒಂದು ರೀತಿಯಲ್ಲಿ, ಇಡೀ ದೇಶದ ಅರ್ಥವ್ಯವಸ್ಥೆ ಡಿಜಿಟಲ್ ಬಂಧನದಲ್ಲಿದೆ. ಆರ್‌ಬಿಐ ಇನ್ನಾದರೂ ಎಚ್ಚೆತ್ತು ಈ ಬಂಧನದಿಂದ ಬಿಡುಗಡೆಗೊಳ್ಳುವ ದಾರಿಯನ್ನು ಕಂಡುಕೊಳ್ಳಬೇಕು.