ಸಾಂದರ್ಭಿಕ ಚಿತ್ರ (AI)

ರಾಜ್ಯದಲ್ಲಿ ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಗರಿಗೆದರಿದೆ. ರಾಜ್ಯದ 31 ಜಿಲ್ಲಾ ಪಂಚಾಯತ್‌ಗಳಲ್ಲಿ ಒಟ್ಟು 1,129 ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಒಟ್ಟು 3,656 ಸದಸ್ಯ ಸ್ಥಾನಗಳಿಗೆ ರಾಜ್ಯ ಸರಕಾರವು ವರ್ಗವಾರು ಮೀಸಲಾತಿಯನ್ನು ನಿಗದಿಗೊಳಿಸಿ, ಪಟ್ಟಿ ಪ್ರಕಟಿಸಿದೆ. ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಅವುಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಹೀಗಾಗಿ ಮುಂದಿನ ವರ್ಷದ ಜನವರಿ ಒಳಗೆ ಚುನಾವಣೆ ನಡೆಯಬಹುದು ಎಂಬ ಮಹದಾಸೆಯು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅದೃಷ್ಟ ಪರೀಕ್ಷೆಗೆ ಹಂಬಲಿಸುತ್ತಿರುವ ಆಕಾಂಕ್ಷಿಗಳಲ್ಲಿ ಚಿಗುರಿದೆ. ಚುನಾವಣೆಗಳಿಲ್ಲದೆ ಸೊರಗಿದ್ದ ಸ್ಥಳೀಯ ಸಂಸ್ಥೆಗಳು ಪುನಃ ಜೀವಕಳೆ ಪಡೆಯಬಹುದು ಎಂದು ಅಧಿಕಾರ ವಿಕೇಂದ್ರೀಕರಣದಲ್ಲಿ ಆಸ್ಥೆಯುಳ್ಳವರ ಅಭಿಮತ.

ನೀತಿ-ನಿರ್ಧಾರಗಳಲ್ಲಿ ಜನಸಮೂಹದ ನೇರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಸ್ಥಳೀಯ ಸಂಸ್ಥೆಗಳು, ಜನತಂತ್ರ ವ್ಯವಸ್ಥೆಯಲ್ಲಿ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಆಡಳಿತ ವಿಕೇಂದ್ರೀಕರಣ ಮಾತ್ರವಲ್ಲದೆ, ರಾಜಕೀಯ ವಿಕೇಂದ್ರೀಕರಣಕ್ಕೂ ಮೆಟ್ಟಿಲುಗಳಾಗಿ ನಿಲ್ಲುತ್ತವೆ. ಇಂತಹ ಮಹತ್ವದ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸಲು ಆಗದೇ ಇರುವುದು ದುರದೃಷ್ಟದ ಸಂಗತಿ. ಪಂಚಾಯತ್ ರಾಜ್ ವ್ಯವಸ್ಥೆ ಅಳವಡಿಕೆಯಲ್ಲಿ ಕರ್ನಾಟಕದ ಹೆಸರು ಮುಂಚೂಣಿಯಲ್ಲಿ ನಿಲ್ಲುವಂತಹದು. ಆದರೆ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳ ಆಡಳಿತ ಅವಧಿ ಮುಗಿದು ಐದು ವರ್ಷಗಳಾದರೂ ಚುನಾವಣೆ ನಡೆಸಲು ಸಾಧ್ಯವಾಗದ ಸ್ಥಿತಿ ಒದಗಿದೆ. ಆಡಳಿತದ ಚುಕ್ಕಾಣಿ ಹಿಡಿದವರ ಬದ್ಧತೆಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಈ ವಿಚಾರದಲ್ಲಿ ಪಕ್ಷಭೇದ ಎಂಬುದಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಯಾವುದೋ ಒಂದು ಕುಂಟು ನೆಪ ಮುಂದೊಡ್ಡಿ ಚುನಾವಣೆ ಮುಂದೂಡುವುದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಆಸಕ್ತಿಯೂ ಒಂದೇ ರೀತಿ ಇರುವಂತಹದು. ಈ ವಿಚಾರದಲ್ಲಿ ಮಾತ್ರ ನಮ್ಮ ಮುಖಂಡರದು ಸಮಾನ ಆಸಕ್ತಿ ಮತ್ತು ಒಂದೇ ಬಗೆಯ ಚಿಂತನೆ.

ಜನತಾ ಪಕ್ಷ ನೇತೃತ್ವದ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ವ್ಯವಸ್ಥೆಯು ದೇಶದಾದ್ಯಂತ ಗಮನ ಸೆಳೆದಿತ್ತು. ಸ್ಥಳೀಯ ಆಡಳಿತಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಡೆದ ಪ್ರಯತ್ನಕ್ಕೂ ಕರ್ನಾಟಕದ ಈ ಪ್ರಯೋಗವು ಸಣ್ಣ ಮಟ್ಟದಲ್ಲಾದರೂ ಪ್ರೇರಣೆಯಾಗಿತ್ತು ಎಂಬುದು ಅತಿಶಯೋಕ್ತಿ ಅಲ್ಲ. ರಾಜೀವ್ ಗಾಂಧಿ ನೇತೃತ್ವದ ಸರಕಾರ ನೇಮಿಸಿದ ಎಲ್.ಎಂ. ಸಿಂಘ್ವಿ ನೇತೃತ್ವದ ಸಮಿತಿಯು ಪಂಚಾಯತ್ ರಾಜ್ ವ್ಯವಸ್ಥೆ ಸುಭದ್ರವಾಗಬೇಕಾದರೆ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು ಎಂದು ಹೇಳಿತ್ತು. ಇದಲ್ಲದೆ, ಪಂಚಾಯತ್ ವ್ಯವಸ್ಥೆ ಬಲಪಡಿಸುವ ದಿಸೆಯಲ್ಲಿ ನೀಡಿದ್ದಂತಹ ಬೇರೆ ಬೇರೆ ಸಮಿತಿಗಳ ವರದಿಗಳನ್ನು ರಾಜೀವ್ ಪರಿಶೀಲಿಸಿದ್ದರು. ಅದರ ಮುಂದುವರಿಕೆಯಾಗಿ ಭಾರೀ ಸಿದ್ಧತೆಯೊಂದಿಗೆ 64ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ರೂಪುಗೊಂಡಿತು. ರಾಜೀವ್ ಅವರೇ ಆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. 1989ರಲ್ಲಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿತು. ಆದರೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಖ್ಯಾಬಲ ಹೆಚ್ಚಿಗಿದ್ದ ಕಾರಣ ಅಲ್ಲಿ ಮಸೂದೆಗೆ ಸೋಲುಂಟಾಯಿತು. ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವ ಒಂದು ಚಾರಿತ್ರಿಕ ವಿದ್ಯಮಾನದ ಕೀರ್ತಿ ಮುಡಿಗೇರಿಸಿಕೊಳ್ಳುವ ಅವಕಾಶದಿಂದ ರಾಜೀವ್ ಗಾಂಧಿ ವಂಚಿತರಾದರು. ಅವರ ಮರಣಾನಂತರ ಪ್ರಧಾನಿಯಾದ ಪಿ.ವಿ. ನರಸಿಂಹರಾವ್ ಅವರು ರಾಜೀವ್ ಗಾಂಧಿ ಕನಸನ್ನು ನನಸಾಗಿಸಿದರು. ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸುವ ಉದ್ದೇಶದ ಎರಡು ಮಹತ್ವದ ತಿದ್ದುಪಡಿ ಮಸೂದೆಗಳು 1992ರ ಡಿಸೆಂಬರ್‌ನಲ್ಲಿ ಸಂಸತ್ತಿನ ಅನುಮೋದನೆ ಪಡೆದವು. ವೈರುಧ್ಯದ ಸಂಗತಿ ಎಂದರೆ ಅವರು ಪ್ರತಿನಿಧಿಸಿದ್ದ ಪಕ್ಷವೇ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿದ್ದರೂ ಈ ಸಂಸ್ಥೆಗಳು ಚುನಾವಣೆಗಳಿಲ್ಲದೆ ಸೊರಗಿವೆ!

ಪಂಚಾಯತ್ ರಾಜ್ ವ್ಯವಸ್ಥೆಯ ಪರಿಕಲ್ಪನೆಗೆ ರೆಕ್ಕೆ ಮೂಡಿದ ದಿನದಿಂದಲೂ ಅದನ್ನು ಜಾರಿಗೆ ತರಲು ತೊಡರುಗಾಲಾಗಿ ಪರಿಣಮಿಸಿರುವುದು ಶಾಸಕರು ಮತ್ತು ಸಂಸದರು. ಅಧಿಕಾರ ಎಲ್ಲಿ ತಮ್ಮ ಕೈತಪ್ಪಿಹೋಗುವುದೋ ಎಂಬ ಅಭದ್ರತಾಭಾವದಿಂದ ಸ್ಥಳೀಯ ಸಂಸ್ಥೆಗಳ ಶಕ್ತಿ ಕುಂದಿಸುವ ಕೆಲಸಕ್ಕೆ ಅವರು ಪಕ್ಷಭೇದ ಮರೆತು ಕೈಜೋಡಿಸುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ನಗರ ಸ್ಥಳೀಯ ಸಂಸ್ಥೆಗಳು ಕಾಲಕಾಲಕ್ಕೆ ಚುನಾವಣೆ ಎದುರಿಸುವ ಸುಯೋಗದಿಂದ ವಂಚಿತವಾಗುತ್ತಿರುವುದಕ್ಕೂ ಇದೇ ಕಾರಣ. ಬಹುಮುಖ್ಯವಾಗಿ ಶಾಸಕರ ಒತ್ತಡ ಪ್ರಧಾನ ಪಾತ್ರ ಪೋಷಿಸುತ್ತಿದೆ. ಸರಕಾರ ಮುನ್ನಡೆಸುವವರು ಅವರ ಒತ್ತಡಕ್ಕೆ ಮಣಿದು, ನೆಪಗಳ ಮೊರೆಹೋಗುತ್ತಿದ್ದಾರೆ. ನ್ಯಾಯಾಲಯಗಳನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುವ ಹುನ್ನಾರಗಳು ನಿರಂತರವಾಗಿ ನಡೆದಿವೆ. ವಿಧಾನಸಭೆ ಮತ್ತು ಲೋಕಸಭೆಗೆ ಹೇಗೆ ಕಾಲಕಾಲಕ್ಕೆ ಚುನಾವಣೆಗಳು ನಡೆಯುತ್ತವೋ ಅದೇ ರೀತಿ ಅವಧಿ ಪೂರ್ಣಗೊಳಿಸಿದ ಸ್ಥಳೀಯ ಸಂಸ್ಥೆಗಳಿಗೂ ಸಕಾಲಕ್ಕೆ ಚುನಾವಣೆ ನಡೆಯಬೇಕು. ಅದನ್ನು ಆಗುಮಾಡುವಂತಹ ಒತ್ತಡದ ಗುಂಪುಗಳು ರೂಪುಗೊಳ್ಳಬೇಕು. ಆಕಾಂಕ್ಷಿಗಳು ಪಕ್ಷದ ಹಂಗು ತೊರೆದು ದನಿ ಎತ್ತಬೇಕು.

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ನೆಲೆಯಲ್ಲಿಯೂ ಈ ಚುನಾವಣೆ ಮಹತ್ವಪೂರ್ಣವಾದುದು. ಈಗಿರುವ ವೇಳಾಪಟ್ಟಿ ಪ್ರಕಾರ, ಕೇಂದ್ರ ಚುನಾವಣಾ ಆಯೋಗವು ಡಿಸೆಂಬರ್ 15ರ ಒಳಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಆ ಬಳಿಕ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದೆ. ಎಸ್‌ಐಆರ್ ಪ್ರಕ್ರಿಯೆ ವಿಳಂಬವಾದರೆ ಅದರ ಪರಿಣಾಮ ಈ ಚುನಾವಣೆಯ ಮೇಲೂ ಆಗಬಹುದು. ಅಂದರೆ ಇನ್ನಷ್ಟು ವಿಳಂಬ ಆಗಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆಯವರೂ ಹೇಳಿದ್ದಾರೆ. ಎಸ್‌ಐಆರ್ ಕಾರಣಕ್ಕಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ. ಮತದಾರರ ಪರಿಷ್ಕೃತ ಪಟ್ಟಿ ಪ್ರಕಟವಾಗದೇ ಇದ್ದಲ್ಲಿ ಲಭ್ಯವಿರುವ ಮತದಾರರ ಪಟ್ಟಿ ಅನುಸಾರವೇ ಚುನಾವಣೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಹೇಳಿದೆ. ಹೀಗಾಗಿ ನೆಪಗಳನ್ನು ಮುಂದಿಟ್ಟು ಚುನಾವಣೆ ಮುಂದೂಡುವ ತಂತ್ರಗಾರಿಕೆ ಬೇಡ. ಚುನಾವಣೆ ನಡೆಸುತ್ತೇವೆ ಎಂಬ ಇಚ್ಛಾಶಕ್ತಿಯನ್ನು ಸರಕಾರ ಪ್ರದರ್ಶಿಸಬೇಕು. ಬೆಂಗಳೂರು ಮಹಾನಗರ ಒಳಗೊಂಡಂತೆ ಬಾಕಿ ಇರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ತ್ವರಿತವಾಗಿ ನಡೆಸಲು ಸರಕಾರ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸರಕಾರಗಳು ಜನತಂತ್ರದ ಬೇರು ಇದ್ದಂತೆ. ಬೇರಿಗೆ ನೀರು ಮತ್ತು ಸರಿಯಾದ ಪೋಷಕಾಂಶಗಳನ್ನು ಒದಗಿಸುವ ಕೆಲಸವನ್ನು ಸರಕಾರ ಮಾಡಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor