×
Ad

ಮಾಲೆಗಾಂವ್ ಸ್ಫೋಟ : ವ್ಯರ್ಥವಾಗದ ಎನ್‌ಐಎ ಪ್ರಯತ್ನ!

Update: 2025-08-01 07:12 IST

ಪ್ರಜ್ಞಾಸಿಂಗ್ ಠಾಕೂರ್ | ಕರ್ನಲ್ ಪ್ರಸಾದ್ ಪುರೋಹಿತ್ PC: PTI 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊನೆಗೂ ಎನ್‌ಐಎ ಪ್ರಯತ್ನ ವ್ಯರ್ಥವಾಗಲಿಲ್ಲ. 2008ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ತನಿಖೆಯ ಹೆಸರಿನಲ್ಲಿ ಆರೋಪಿಗಳನ್ನು ರಕ್ಷಿಸಲು ಅದು ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ. ಸ್ಫೋಟಕ್ಕೆ ಸಂಬಂಧಿಸಿ ಸಂಬಂಧಿಸಿ ಬಂಧಿಸಲ್ಪಟ್ಟ ಎಲ್ಲಾ ಏಳು ಆರೋಪಿಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. 2002ರ ಸೆಪ್ಟೆಂಬರ್‌ನಲ್ಲಿ ನಡೆದ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿರುವುದಲ್ಲದೆ, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್‌ರ ನೇರ ಭಾಗೀದಾರಿಕೆಯನ್ನು ತನಿಖಾ ಸಂಸ್ಥೆ ಗುರುತಿಸಿತ್ತು. ಆದರೆ ಎಲ್ಲರನ್ನೂ ಸಾಕ್ಷಿಯ ಕೊರತೆಯ ಹೆಸರಿನಲ್ಲಿ ನ್ಯಾಯಾಲಯ ಬಿಡುಗಡೆ ಮಾಡಿದೆ. ಈ ತೀರ್ಪು ಅನಿರೀಕ್ಷಿತವಾಗಿರಲಿಲ್ಲ. ಮಾಲೆಗಾಂವ್ ಸ್ಫೋಟದಲ್ಲಿ ಕರ್ನಲ್ ಪುರೋಹಿತ್, ಪ್ರಜ್ಞಾಸಿಂಗ್ ಠಾಕೂರ್ ಮೊದಲಾದವರ ಪಾತ್ರವನ್ನು ಗುರುತಿಸಿದ ಅಂದಿನ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ಅವರ ತಂಡ ಮುಂಬೈ ದಾಳಿಯಲ್ಲಿ ನಿಗೂಢವಾಗಿ ಸಾಮೂಹಿಕವಾಗಿ ಕೊಲ್ಲಲ್ಪಟ್ಟಾಗಲೇ ಪ್ರಕರಣ ಅರ್ಧ ಸತ್ತು ಹೋಗಿತ್ತು. ಇದಾದ ಬಳಿಕ ಮೋದಿ ನೇತೃತ್ವದ ಸರಕಾರ ಪ್ರಕರಣವನ್ನು ಎನ್‌ಐಎಗೆ ವಹಿಸಿದಾಗ ಅದರ ಉದ್ದೇಶ ತನಿಖೆಯನ್ನು ದುರ್ಬಲಗೊಳಿಸುವುದೇ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ವಾದಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ನೀಡಬೇಕಾಗಿದ್ದ ಸರಕಾರಿ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್ ಅವರು ಏಕಾಏಕಿ ತನ್ನ ಸ್ಥಾನದಿಂದ ಹಿಂದೆ ಸರಿದರು. ಈ ಸಂದರ್ಭದಲ್ಲಿ ''ಸ್ಪೋಟ ಆರೋಪಿಗಳ ಕುರಿತಂತೆ ಮೃದುವಾಗಿರುವಂತೆ ನನಗೆ ಸೂಚಿಸಲಾಗಿತ್ತು" ಎಂದು ಅವರು ಆರೋಪಿಸಿದ್ದರು. ಆಗಲೇ, ಈ ಪ್ರಕರಣದ ಗತಿಯನ್ನು ಎನ್‌ಐಎ ಎಲ್ಲಿಗೆ ತಲುಪಿಸುತ್ತದೆ ಎನ್ನುವುದು ಸ್ಪಷ್ಟವಾಗಿತ್ತು. ಸಾಲಿಯಾನ್ ಅವರು ಬಳಿಕ ತಮ್ಮ ವೃತ್ತಿ ಜೀವನದಿಂದಲೇ ದೂರ ಸರಿದರು. ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ, ಬಿಜೆಪಿಯು ಶಂಕಿತ ಉಗ್ರಳಿಗೆ ತನ್ನ ಪಕ್ಷದಿಂದ ಟಿಕೆಟ್ ನೀಡುವ ಮೂಲಕ, ಪರೋಕ್ಷವಾಗಿ ಆಕೆಗೆ ಕ್ಲೀನ್ ಚಿಟ್ ನೀಡಿತ್ತು. ಭರ್ಜರಿ ಬಹುಮತದಿಂದ ಆಕೆ ಗೆದ್ದು ಸಂಸತ್ತನ್ನು ಪ್ರವೇಶಿಸಿದ್ದರು. ಹೀಗೆ, ವಿಚಾರಣೆಯ ಹಂತದಲ್ಲಿರುವ ಶಂಕಿತ ಉಗ್ರಗಾಮಿಯೊಬ್ಬಳನ್ನು ಸಂಸತ್ ಪ್ರವೇಶಿಸುವಂತೆ ನೋಡಿಕೊಂಡ ಹೆಗ್ಗಳಿಕೆ ಮೋದಿ ನೇತೃತ್ವದ ಸರಕಾರಕ್ಕೆ ಸಂದಿತು. ಇದು ತನಿಖಾಧಿಕಾರಿಗಳ ಅಳಿದುಳಿದ ನೈತಿಕ ಸ್ಥೆರ್ಯವನ್ನು ಕುಗ್ಗಿಸಿತು.

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ 'ಭಯೋತ್ಪಾದನೆಯ ಕುರಿತಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ದ್ವಂದ್ವ ನಿಲುವನ್ನು ಜಗತ್ತಿಗೆ ಬಹಿರಂಗಪಡಿಸಿದೆ. ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ಸರಿಯಾದ ಹಾದಿಯಲ್ಲಿ ನಡೆದಿದ್ದರೆ ಅದು ಈ ದೇಶದಲ್ಲಿ ಸಕ್ರಿಯವಾಗಿರುವ ಕೇಸರಿ ಉಗ್ರವಾದದ ದೊಡ್ಡ ಜಾಲವನ್ನೇ ಬಹಿರಂಗಪಡಿಸುತ್ತಿತ್ತು. ಪ್ರಜ್ಞಾಸಿಂಗ್ ಮತ್ತು ಅವರ ತಂಡವನ್ನು ರಕ್ಷಿಸುವ ಮೂಲಕ ರಾಜಕೀಯ ಶಕ್ತಿಗಳು, ದೇಶದಲ್ಲಿ ಸದ್ದುಗದ್ದಲವಿಲ್ಲದೆ ಕಾರ್ಯಾಚರಣೆಯಲ್ಲಿರುವ ಕೇಸರಿ ಭಯೋತ್ಪಾದನಾ ಸಂಘಟನೆಗಳನ್ನು ರಕ್ಷಿಸಿತು ಎನ್ನುವ ಆರೋಪಗಳಿವೆ. ಹೇಮಂತ್ ಕರ್ಕರೆ ತಂಡ ಮಾಲೆಗಾಂವ್ ಸೇರಿದಂತೆ ದೇಶದ ಹಲವು ಸ್ಪೋಟ ಪ್ರಕರಣಗಳ ತನಿಖೆಯ ಆಳಕ್ಕಿಳಿದಾಗ ಬಯಲಾದದ್ದು ಈ ಕೇಸರಿ ಭಯೋತ್ಪಾದನಾ ಜಾಲ. ಅಷ್ಟೇ ಅಲ್ಲ, ಅದರ ಜೊತೆಗೆ ಈ ದೇಶದ ರಾಜಕೀಯ ನಾಯಕರ ಪರೋಕ್ಷ ನಂಟು. ಈ ತನಿಖೆ ಇನ್ನೂ ಒಂದಿಷ್ಟು ಮುಂದುವರಿದಿದ್ದರೆ ಹಲವರ ಮುಖವಾಡ ಬಯಲಾಗಿ ಬಿಡುತ್ತಿತ್ತು. ದೇಶಪ್ರೇಮದ ಮಾತನಾಡುತ್ತಿರುವವರೇ ದೇಶದ್ರೋಹಿಗಳಾಗಿ ಕಟಕಟೆಯಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ ಅದಕ್ಕೆ ಆಸ್ಪದವೇ ನೀಡದಂತೆ, ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ತನಿಖಾ ತಂಡ ಸಾಮೂಹಿಕವಾಗಿ ಹತ್ಯೆಗೈಯಲ್ಪಟ್ಟಿತು. ಮುಂಬೈ ದಾಳಿಯಲ್ಲಿ ಹುತಾತ್ಮರಾದ ಈ ಅಧಿಕಾರಿಗಳ ನಿಗೂಢ ಸಾವಿನ ತನಿಖೆಯನ್ನು ಪ್ರತ್ಯೇಕವಾಗಿ ನಡೆಸಬೇಕು ಎಂದು ಆಗ ಓರ್ವ ಕೇಂದ್ರ ಸಚಿವರು ಆಗ್ರಹಿಸಿದರಾದರೂ, ಅವರ ಬಾಯಿ ಮುಚ್ಚಿಸಲಾಯಿತು. ಕರ್ಕರೆ ಮತ್ತು ಅವರ ತಂಡದ ಹತ್ಯೆಯ ನಿಗೂಢತೆಗಳ ಬಗ್ಗೆ ಹಲವು ಬರಹಗಳು ಬಂದಿವೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಒಂದು ಕೃತಿಯನ್ನೇ ಬರೆದಿದ್ದಾರೆ. ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ, ಈ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರಬಲ್ಲ ಕೇಸರಿ ಭಯೋತ್ಪಾದನಾ ಸಂಘಟನೆಗಳಿಗೆ ಸಿಕ್ಕಿದ ಪರೋಕ್ಷ ಪರವಾನಿಗೆ ಎಂದು ನಾವು ಆತಂಕಪಡಬೇಕಾಗಿದೆ.

ಜಾಮೀನಿನಲ್ಲಿ ಹೊರ ಬಂದಾಗ ಪ್ರಜ್ಞಾಸಿಂಗ್, ಹೇಮಂತ್ ಕರ್ಕರೆ ತಂಡವನ್ನು ಹೀನಾಯವಾಗಿ ನಿಂದಿಸಿದ್ದರು. ಭಯೋತ್ಪಾದಕರ ವಿರುದ್ದ ಹೋರಾಡುತ್ತಾ ಹುತಾತ್ಮರಾದ ಅಧಿಕಾರಿಗಳ ವಿರುದ್ದ ಆಕೆ ಬಳಸಿದ ಪದಗಳೇ ಆಕೆಯ ಹಿನ್ನೆಲೆಯನ್ನು ಹೇಳುತ್ತಿತ್ತು. ಪ್ರಕರಣದಲ್ಲಿ ಇವರ ಖುಲಾಸೆಯು ಈ ದೇಶದಲ್ಲಿ ಸಂಭವಿಸಿದ ಹಲವು ಸ್ಪೋಟಗಳ ತನಿಖೆಗಳಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಯಾಕೆಂದರೆ, ಮಾಲೆಗಾಂವ್ ಸ್ಪೋಟ ಮಾತ್ರವಲ್ಲ, ಇದರ ಜೊತೆಗೆ ದೇಶದಲ್ಲಿ ಸಂಭವಿಸಿದ ಸಂಜೋತಾ ಎಕ್ಸ್‌ಪ್ರೆಸ್, ಅಜೀರ್ ಸ್ಪೋಟಗಳಲ್ಲೂ ಕೇಸರಿ ಭಯೋತ್ಪಾದನೆಯ ಕೈವಾಡವನ್ನು ಶಂಕಿಸಲಾಗಿತ್ತು. ಆ ಎಲ್ಲ ತನಿಖೆಗಳ ಗತಿ ಭವಿಷ್ಯದಲ್ಲಿ ಏನಾಗಲಿದೆ ಎನ್ನುವುದರ ಸೂಚನೆ ಈ ಮೂಲಕ ಸಿಕ್ಕಿದಂತಾಗಿದೆ. ಈ ತಂಡ ಸ್ಪೋಟ ನಡೆಸಿಲ್ಲ ಎಂದಾದರೆ ಮಾಲೆಗಾಂವ್‌ ನಲ್ಲಿ ಸ್ಪೋಟ ನಡೆದದ್ದು ಹೇಗೆ? ತನಿಖೆ ಹೊಸದಾಗಿ ನಡೆಯಬೇಕಾಗುತ್ತದೆ. ಅಂದರೆ, ಕೇಸರಿ ಭಯೋತ್ಪಾದಕರನ್ನು ರಕ್ಷಿಸುವುದರ ಜೊತೆಗೆ, ಅವರ ಜಾಗದಲ್ಲಿ ಅಮಾಯಕರನ್ನು ತಂದು ನಿಲ್ಲಿಸುವ ಪರೋಕ್ಷ ರಾಜಕೀಯ ಸಂಚು ನಡೆಯುತ್ತಿದೆಯೇ ಎಂದು ಅನುಮಾನ ಪಡಬೇಕಾಗುತ್ತದೆ.

2006ರಲ್ಲಿ ಮುಂಬೈ ರೈಲು ಸ್ಪೋಟಕ್ಕೆ ಸಂಬಂಧಿಸಿ 12 ಜನರನ್ನು ನ್ಯಾಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿತ್ತು 2015ರಲ್ಲಿ ಇವರನ್ನು ಅಪರಾಧಿಗಳು ಎಂದು ಗುರುತಿಸಿ ಐವರಿಗೆ ಗಲ್ಲು ಶಿಕ್ಷೆಯನ್ನೂ ನೀಡಲಾಗಿತ್ತು. ಸುಮಾರು 19 ವರ್ಷ ಅವರೆಲ್ಲ ಜೈಲಲ್ಲಿ ಕಳೆದರು. ಇದೀಗ ಅವರೆಲ್ಲರನ್ನು ನ್ಯಾಯಾಲಯ ನಿರಪರಾಧಿಗಳು ಎಂದು ಘೋಷಿಸಿದೆ. ಮಾತ್ರವಲ್ಲ ಬೇಜವಾಬ್ದಾರಿಯಿಂದ ತನಿಖೆ ನಡೆಸಿದ ತನಿಖಾ ಸಂಸ್ಥೆಯನ್ನು ಕಟು ಪದಗಳಲ್ಲಿ ನ್ಯಾಯಾಲಯ ಟೀಕಿಸಿದೆ. ಪ್ರಜ್ಞಾಸಿಂಗ್ ಠಾಕೂರ್‌ಸ್ಪೋಟ ಆರೋಪಿಗಳಲ್ಲಿ ಒಬ್ಬರಾಗಿದ್ದರೂ ಸುಲಭದಲ್ಲಿ ಜಾಮೀನು ದೊರಕಿತು. ವಿಚಾರಣೆ ಎದುರಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿಯಿಂದ ಟಿಕೆಟ್ ಸಿಕ್ಕಿ, ಸಂಸತ್ ಗೂ ಆಯ್ಕೆಯಾದರು. ಆದರೆ ಅವರಿಗೆ ಸಿಕ್ಕಿದ ಸೌಲಭ್ಯ ಮುಂಬೈ ರೈಲು ಸ್ಪೋಟ ಆರೋಪಿಗಳಿಗೆ ಸಿಗಲಿಲ್ಲ. ಕರ್ಕರೆಯವರು ಮಾಲೆಗಾಂವ್ ಸ್ಫೋಟ ತನಿಖೆ ನಡೆಸುವ ಮುನ್ನ, ದೇಶದಲ್ಲಿ ಯಾವುದೇ ಸ್ಪೋಟ ನಡೆದರೂ ಅದಕ್ಕೆ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ವ್ಯಕ್ತಿಗಳನ್ನೇ ತನಿಖಾ ಸಂಸ್ಥೆ ಹೊಣೆಯಾಗಿಸುತ್ತಾ ಬರುತ್ತಿತ್ತು. ನಿಜವಾದ ಆರೋಪಿಗಳು ರಕ್ಷಿಸಲ್ಪಡುತ್ತಿದ್ದರು ಮಾತ್ರವಲ್ಲ, ಅಮಾಯಕರು ಜೈಲು ಪಾಲಾಗುತ್ತಿದ್ದರು. ಇದೀಗ ಮಾಲೆಗಾಂವ್ ಸ್ಪೋಟದಲ್ಲಿ ಪ್ರಜ್ಞಾಸಿಂಗ್ ಮತ್ತು ಅವರ ತಂಡ ಖುಲಾಸೆಗೊಂಡಿದೆ. ಇವರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಭಾರತವನ್ನು ಭಯೋತ್ಪಾದನಾ ಮುಕ್ತ ದೇಶವನ್ನಾಗಿಸುವುದು ಸರಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರ ತೀರ್ಪನ್ನು ಪ್ರಶ್ನಿಸಬೇಕು. ಆದರೆ ತನಿಖೆಯೇ ದುರ್ಬಲವಾಗಿದ್ದರೆ, ಎನ್‌ಐಎ ಉದ್ದೇಶಪೂರ್ವಕ ತನಿಖೆಯನ್ನು ದುರ್ಬಲಗೊಳಿಸಿದ್ದರೆ ಯಾವ ಮೇಲ್ಮನವಿಯೂ ಮಾಲೆಗಾಂವ್ ಸ್ಫೋಟ ಸಂತ್ರಸ್ತರಿಗೆ ನ್ಯಾಯ ನೀಡಲಾರದು. ಮರು ತನಿಖೆ ನಡೆದರೆ, ಅದು ವಿಚಾರಣೆ ನೆಪದಲ್ಲಿ ಇನ್ನಷ್ಟು ಅಮಾಯಕರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಬಹುದೇ ಹೊರತು, ಇನ್ನಾವ ಪ್ರಯೋಜನವೂ ಆಗದು. ಒಟ್ಟಿನಲ್ಲಿ ಭಯೋತ್ಪಾದನೆಯ ಕುರಿತಂತೆ ಕೇಂದ್ರ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಲು ಇದು ಸರಿಯಾದ ಸಮಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News