ಸಂಸತ್ ಚಲೋ ಯಶಸ್ವಿಯಾಗಲಿ
ಸೋನಂ ವಾಂಗ್ಚುಕ್ | Photo Credit : PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನೀಟ್ ಅಕ್ರಮಗಳ ವಿರುದ್ಧ ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರನ್ನು ಮಣಿಸಲು ಕೇಂದ್ರ ಸರಕಾರ ಅಕ್ರಮವಾಗಿ ಪೊಲೀಸರನ್ನು ಬಳಸಿದೆ. ಸೋನಂ ವಾಂಗ್ಚುಕ್ ಆಗ್ರಹಗಳಿಗೆ ಸ್ಪಂದಿಸಿ ಅವರೊಂದಿಗೆ ಮಾತುಕತೆ ನಡೆಸಲು ತನ್ನ ಸಹೋದ್ಯೋಗಿಗಳನ್ನು ಕಳುಹಿಸುವ ಬದಲು ಪ್ರಧಾನಿ ಮೋದಿಯವರು ಪೊಲೀಸರನ್ನು ಕಳುಹಿಸಿದ್ದಾರೆ. ನೀಟ್ ಅಕ್ರಮಗಳಿಗೆ ಕಾರಣವಾಗಿರುವ ಅಧಿಕಾರಿಗಳು, ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಅಕ್ರಮಗಳನ್ನು ಪ್ರಶ್ನಿಸಿದ ಜನನಾಯಕನನ್ನೇ ಪರೋಕ್ಷವಾಗಿ ಬಂಧಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್‌ನ ಆದೇಶ ಮತ್ತು ವೈದ್ಯಕೀಯ ತಜ್ಞರ ಸಲಹೆಗೆ ಅನುಗುಣವಾಗಿ ಅವರನ್ನು ತೆರವುಗೊಳಿಸಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸರಕಾರ ಸಬೂಬು ಹೇಳಿದೆ. ನಿಜಕ್ಕೂ ಪ್ರಜಾಸತ್ತೆಯ ಮೇಲಿನ ಕಾಳಜಿಯಿಂದ ಈ ತೆರವು ಕಾರ್ಯಕ್ರಮ ನಡೆದಿದ್ದರೆ, ಪೊಲೀಸರು ಕಾರ್ಯಾಚರಣೆಯ ಸಂದರ್ಭದಲ್ಲಿ ಬಿಳಿ ಬಟ್ಟೆಯನ್ನು ಯಾಕೆ ಅಡ್ಡ ಹಿಡಿದಿದ್ದರು? ವಾಂಗ್ಚುಕ್ ಅವರನ್ನು ಬಲವಂತದಿಂದ ತೆರವು ಮಾಡುತ್ತಿರುವುದನ್ನು ಅವರು ಯಾರಿಂದ ಮರೆ ಮಾಡಲು ಮುಂದಾಗಿದ್ದರು ಎನ್ನುವುದನ್ನು ಸರಕಾರ ಸ್ಪಷ್ಟಪಡಿಸಬೇಕು. ತಮ್ಮ ಕೃತ್ಯವನ್ನು ಜನರಿಂದ, ಮಾಧ್ಯಮಗಳಿಂದ ಮುಚ್ಚಿ ಹಾಕಲು ಅವರು ಮರೆ ಮಾಡಿದ ಬಟ್ಟೆಯೇ ಸರಕಾರದ ಮನಸ್ಥಿತಿಯನ್ನು ಹೇಳುತ್ತಿತ್ತು. ಕಾರ್ಯಾಚರಣೆಯನ್ನು ಮರೆ ಮಾಚಲು ಅಡ್ಡ ಹಿಡಿದ ಆ ಬಟ್ಟೆ ಸರಕಾರದ ಮಾನವನ್ನು ಜಗತ್ತಿನ ಮುಂದೆ ಬೆತ್ತಲು ಮಾಡಿತ್ತು.
ಸೋನಂ ವಾಂಗ್ಚುಕ್ ಮೇಲೆ ಸರಕಾರಕ್ಕೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಅವರ ಬೇಡಿಕೆಗಳನ್ನು ಚರ್ಚಿಸುವುದಕ್ಕೆ ಸರಕಾರದಿಂದ ಒಂದು ನಿಯೋಗವನ್ನಾದರೂ ಇಷ್ಟರಲ್ಲಿ ಪ್ರಧಾನಿ ಮೋದಿಯವರು ಕಳುಹಿಸಬೇಕಾಗಿತ್ತು. ನೀಟ್ ಅಕ್ರಮಗಳು ದೇಶದ ಇಡೀ ಶಿಕ್ಷಣ ವ್ಯವಸ್ಧೆಯನ್ನೇ ಅಸ್ತವ್ಯಸ್ತಗೊಳಿಸುತ್ತಿದೆ. ಈಗಾಗಲೇ 20ಕ್ಕೂ ಅಧಿಕ ನೀಟ್ ಆಕಾಂಕ್ಷಿಗಳು ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ವೈದ್ಯಕೀಯ ಕ್ಷೇತ್ರದ ಮೇಲೆ ಇದು ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಧ್ವನಿಯಾಗಿ ವಾಂಗ್ಚುಕ್ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ಈ ಸತ್ಯಾಗ್ರಹ ದೇಶ ವಿದೇಶಗಳಲ್ಲಿ ಚರ್ಚೆಯಾಗುತ್ತಿದೆ. ಕೇಂದ್ರ ಸರಕಾರ ವಾಂಗ್ಚುಕ್ ಅವರೊಂದಿಗೆ ಬೇಡಿಕೆಗಳ ಬಗ್ಗೆ ಕನಿಷ್ಠ ಮಾತುಕತೆಯನ್ನಾದರೂ ಮಾಡುವ ಅಗತ್ಯವಿತ್ತು. ಮಾತುಕತೆ ವಿಫಲವಾದ ಬಳಿಕ ವಾಂಗ್ಚುಕ್ ಅವರ ಬಲವಂತದ ತೆರವು ಕಾರ್ಯಾಚರಣೆ ನಡೆದಿದ್ದರೆ ಅದನ್ನು ಸಮರ್ಥಿಸಿಕೊಳ್ಳುವ ಅವಕಾಶ ಸರಕಾರಕ್ಕೂ ಇತ್ತು. ಆದರೆ ಸತ್ಯಾಗ್ರಹದ ಕಡೆಗೆ ಈವರೆಗೆ ತಿರುಗಿಯೂ ನೋಡದ ಸರಕಾರ, ಏಕಾಏಕಿ ಪೊಲೀಸರನ್ನು ಬಳಸಿಕೊಂಡು ವಾಂಗ್ಚುಕ್ ಅವರನ್ನು ತೆರವು ಮಾಡಲು ಆಸಕ್ತಿ ತೋರಿಸಿತು. ಇದರ ಹಿಂದೆ ಪ್ರತಿಭಟನೆಯನ್ನು ದಮನಿಸುವ ದುರುದ್ದೇಶ ಎದ್ದು ಕಾಣುತ್ತಿದೆ.
ಸೋಮವಾರ ಸಂಸತ್ ಅಧಿವೇಶನ ಆರಂಭವಾಗುತ್ತಿದೆ. ಇದೇ ಸಂದರ್ಭದಲ್ಲಿ ಜಂತರ್‌ಮಂತರ್‌ನಲ್ಲಿ ನೆರೆದಿರುವ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ಸಂಸತ್ ಚಲೋ ನಡೆಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಯುವ ಸಮೂಹಕ್ಕೆ ವಾಂಗ್ಚುಕ್ ನೇತೃತ್ವವಿದ್ದರೆ ಪ್ರತಿಭಟನೆಯನ್ನು ದಮನಿಸುವುದು ಕೇಂದ್ರಕ್ಕೆ ಕಷ್ಟವಾಗುತ್ತದೆ. ಪೊಲೀಸರು ವಿದ್ಯಾರ್ಥಿಗಳ ಮೇಲೆ ದಂಡ ಪ್ರಯೋಗಿಸುವ ಸಂದರ್ಭದಲ್ಲಿ ವಾಂಗ್ಚುಕ್ ಅವರಿಗೆ ಏನಾದರೂ ತೊಂದರೆಯಾದಲ್ಲಿ ಅದು ಸರಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಬಹುದು ಎನ್ನುವ ಭಯ ಪ್ರಧಾನಿ ಮೋದಿಯವರಿಗೆ ಇದ್ದಂತಿದೆ. ಆದುದರಿಂದಲೇ ಆರೋಗ್ಯ ಸ್ಥಿತಿಯನ್ನು ಮುಂದಿಟ್ಟುಕೊಂಡು ಪೊಲೀಸರಿಂದ ಬಲವಂತವಾಗಿ ವಾಂಗ್ಚುಕ್ ಅವರನ್ನು ತೆರವು ಗೊಳಿಸಿದ್ದಾರೆ. ‘‘ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಅನಾಹುತ ಸೃಷ್ಟಿಸಲು ಆಡಳಿತಾ ರೂಢ ಬಿಜೆಪಿಯ ಗೂಂಡಾಗಳು ಮತ್ತು ದಿಲ್ಲಿ ಪೊಲೀಸರು ಹೊಂಚು ಹಾಕುತ್ತಿದ್ದಾರೆ’’ ಎಂದು ಕಾಕ್ರೋಚ್ ಜನತಾ ಪಾರ್ಟಿ ರವಿವಾರ ಆರೋಪಿಸಿದೆ. ಶಾಹೀನ್‌ಬಾಗ್‌ನಲ್ಲಿ ಮಹಿಳೆಯರ ಪ್ರತಿಭಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದಾಗ ಸರಕಾರ ಅದನ್ನು ಹೇಗೆ ಬಗ್ಗು ಬಡಿಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಸಿಎಎ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಸ್ಫೋಟಿಸಿದಾಗ, ಸರಕಾರದ ನೇತೃತ್ವದಲ್ಲೇ ದಂಗೆಯನ್ನು ಸೃಷ್ಟಿಸಲಾಯಿತು. ಈ ದಂಗೆಯಲ್ಲಿ ಬಿಜೆಪಿಯ ಹಲವು ನಾಯಕರು ನೇರವಾಗಿ ಪಾಲ್ಗೊಂಡಿದ್ದರು ಮಾತ್ರವಲ್ಲ ಹಿಂಸೆಗೆ ಕರೆಕೊಟ್ಟಿದ್ದರು. ಆದರೆ, ಹಿಂಸಾಚಾರದ ಬಳಿಕ ಸಿಎಎ ಪ್ರತಿಭಟನೆಯ ನೇತೃತ್ವ ವಹಿಸಿದ ಹಲವು ನಾಯಕರನ್ನು ಬಂಧಿಸಲಾಯಿತು. ಅವರೆಲ್ಲರ ತಲೆಗೆ ದಿಲ್ಲಿ ಗಲಭೆಯ ಹೊಣೆಗಾರಿಕೆಯನ್ನು ಕಟ್ಟಲಾಯಿತು. ಸಿಎಎ ಪ್ರತಿಭಟನೆಗೆ ಮುಂದಾಳತ್ವ ವಹಿಸಿದ ಹಲವು ನಾಯಕರು, ಯುವಕರು, ವಿದ್ಯಾರ್ಥಿಗಳು ಈಗಲೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಇದೀಗ ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಯುವಕರನ್ನೂ ಅದೇ ತಂತ್ರದಿಂದ ಬಗ್ಗು ಬಡಿಯಲು ಸರಕಾರ ಯತ್ನಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಅದರ ಭಾಗವಾಗಿಯೇ ವಾಂಗ್ಚುಕ್ ಅವರನ್ನು ಬಲವಂತವಾಗಿ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ.
ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆಯಾದರೂ, ಅವರ ಖಾಸಗಿ ವೈದ್ಯರಿಗೆ ಭೇಟಿ ಮಾಡಲು ಸರಕಾರ ಅನುಮತಿ ನೀಡುತ್ತಿಲ್ಲ. ಅವರು ಸರಕಾರದ ಸರ್ಪಗಾವಲಲ್ಲಿದ್ದಾರೆ. ಸರಕಾರದ ಪರವಾಗಿ ಚಿಕಿತ್ಸೆ ನಡೆಸುತ್ತಿರುವ ವೈದ್ಯರು ಮತ್ತು ವಾಂಗ್ಚುಕ್‌ರಿಗೆ ಇದುವರೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಹೇಳಿಕೆಗಳಲ್ಲಿ ಅಜಗಜಾಂತರವಿದೆ. ‘‘ಸೋನಂ ವಾಂಗ್ಚುಕ್ ಅವರು ಶುಕ್ರವಾರ ಚೆನ್ನಾಗಿಯೇ ಇದ್ದರು. ಅವರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿರಲಿಲ್ಲ. ಕಳೆದ 20 ದಿನಗಳಿಂದ ಸೋನಂ ವಾಂಗ್ಚುಕ್ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿರುವ ವೈದ್ಯರು, ಕುಟುಂಬದ ಸಮ್ಮತಿ ಪಡೆಯದೇ ಅವರಿಗೆ ಯಾವುದೇ ಚಿಕಿತ್ಸೆ ನೀಡಬಾರದು’’ ಎಂದು ಅವರ ಪತ್ನಿ ಗೀತಾಂಜಲಿ ಆಂಗ್ಮೊ ಈಗಾಗಲೇ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಸರಕಾರ ಇದನ್ನು ಕಿವಿಗೆ ಹಾಕಿಕೊಂಡಿಲ್ಲ. ವಾಂಗ್ಚುಕ್ ಅವರಿಗೆ ಬಲವಂತವಾಗಿ ಆಹಾರ ಕೊಟ್ಟು ಅವರನ್ನು ಉಳಿಸುವ ಮೂಲಕ ತನ್ನ ಮಾನ ಉಳಿಸುವ ಪ್ರಯತ್ನದಲ್ಲಿದೆ. ಆದರೆ ದೇಶದ ಶಿಕ್ಷಣ ಕ್ಷೇತ್ರದ ಪ್ರಾಣವನ್ನು ಉಳಿಸುವ ಬಗ್ಗೆ ಸರಕಾರಕ್ಕೆ ಯಾವುದೇ ಆಸಕ್ತಿಯಿಲ್ಲ.
ಸೋಮವಾರದ ಸಂಸತ್ ಚಲೋವನ್ನು ಯಶಸ್ವಿಗೊಳಿಸಲು ವಾಂಗ್ಚುಕ್ ಅವರು ಆಸ್ಪತ್ರೆಯಿಂದಲೇ ಕರೆ ನೀಡಿದ್ದಾರೆ. ಮುಖ್ಯವಾಗಿ ಈ ಸಂಸತ್ ಚಲೋವನ್ನು ದಾರಿ ತಪ್ಪಿಸಿ, ಗಲಭೆಗೆ ಪ್ರಚೋದನೆ ನೀಡುವ ಪ್ರಯತ್ನವನ್ನು ಹೋರಾಟಗಾರರು ವಿಫಲಗೊಳಿಸಬೇಕು. ಪೊಲೀಸರು ಪ್ರಚೋದಿಸಿದರೂ ಸಂಸತ್ ಚಲೋ ಹಿಂಸೆಗೆ ತಿರುಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಇದೇ ಸಂದರ್ಭದಲ್ಲಿ ದೇಶದ ಎಲ್ಲ ಹಿರಿಯರು, ಕಿರಿಯರು ನೇರ ಮತ್ತು ಪರೋಕ್ಷವಾಗಿ ಈ ಚಲೋ ಜೊತೆಗೆ ಹೆಜ್ಜೆಯಿಡಬೇಕಾಗಿದೆ. ಸಂಸತ್ ಚಲೋಗಾಗಿ ನಾವಿಡುವ ಪ್ರತೀ ಹೆಜ್ಜೆಗಳು ಭ್ರಷ್ಟಾಚಾರ ರಹಿತ ಶಿಕ್ಷಣ ವ್ಯವಸ್ಥೆಯ ಕಡೆಗೆ ಭಾರತ ಇಡುವ ಹೆಜ್ಜೆಗಳಾಗಿವೆ.