ಶಿಕ್ಷಣದ ಬಿಡುಗಡೆಗಾಗಿ ವಾಂಗ್ಚುಕ್ ಸತ್ಯಾಗ್ರಹ
ಸೋನಂ ವಾಂಗ್ಚುಕ್ | Photo Credit : X \ @Wangchuk66
ಭಾರತವನ್ನು ಆಳಿದ ಬ್ರಿಟಿಷರು ಅದೆಷ್ಟೇ ಕ್ರೂರಿಗಳಾಗಿದ್ದರೂ, ಸರ್ವಾಧಿಕಾರಿಗಳಾಗಿದ್ದರೂ ಮಹಾತ್ಮಾ ಗಾಂಧೀಜಿಯ ಉಪವಾಸಕ್ಕೆ ಅಂಜುವಷ್ಟು ನೈತಿಕತೆಯನ್ನು ಉಳಿಸಿಕೊಂಡಿದ್ದರು. ಇಲ್ಲದೇ ಇದ್ದರೆ, ಗಾಂಧೀಜಿ ಉಪವಾಸ ಮಾಡುತ್ತಲೇ ತಮ್ಮ ಪ್ರಾಣವನ್ನು ಬಿಡಬೇಕಾಗಿತ್ತು ಮತ್ತು ಗಾಂಧೀಜಿಯ ಸಾವಿನ ಹೊಣೆಯನ್ನು ಬ್ರಿಟಿಷರ ತಲೆಗೆ ಕಟ್ಟ ಬಹುದಿತ್ತು. ವಿಪರ್ಯಾಸವೆನ್ನುವಂತೆ, ಗಾಂಧೀಜಿಯ ಹತ್ಯೆಯಾದುದು ಭಾರತೀಯ ಉಗ್ರಗಾಮಿ ನಾಥೂರಾಂ ಗೋಡ್ಸೆಯಿಂದ. ಅದೂ ಬ್ರಿಟಿಷರು ದೇಶದಿಂದ ತೊಲಗಿದ ಬಳಿಕ. ರಾಮನ ಪ್ರಾರ್ಥನೆಗೆಂದು ಸಿದ್ಧನಾಗುತ್ತಿದ್ದ, ಒಬ್ಬ ನಿಶ್ಶಸ್ತ್ರಧಾರಿ, ಅಹಿಂಸಾವಾದಿ ವೃದ್ಧನ ಮೇಲೆ ಗುಂಡೆಸೆಯುವಾಗ ಈ ನಾಥೂರಾಂ ಗೋಡ್ಸೆಯನ್ನು ಯಾವ ನೈತಿಕ ಪ್ರಜ್ಞೆಯೂ ಕಾಡಲಿಲ್ಲ. ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನ್ಯಾಯವನ್ನು ದೊರಕಿಸಿಕೊಡಲು ಜಂತರ್ ಮಂತರ್‌ನಲ್ಲಿ ಕಳೆದ 16 ದಿನಗಳಿಂದ ಉಪವಾಸ ಕುಳಿತಿರುವ ಶಿಕ್ಷಣ ತಜ್ಞ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಮತ್ತೊಮ್ಮೆ ಗಾಂಧಿಯನ್ನು ದೇಶಕ್ಕೆ ನೆನಪಿಸುತ್ತಿದ್ದಾರೆ. ಇಡೀ ದೇಶದ ಯುವ ಸಮೂಹ ಅವರ ಬೆನ್ನಿಗಿದ್ದರೂ, ಈ ದೇಶದ ಆಳುವವರಿಗೆ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಇನ್ನೂ ಅರಿವಿಗೆ ಬಂದಿಲ್ಲ. ಈ ದೇಶವನ್ನೇನಾದರೂ ಬ್ರಿಟಿಷರು ಆಳುತ್ತಿದ್ದರೆ, ವಾಂಗ್ಚುಕ್ ಅವರ ಹಿರಿತನವನ್ನು, ಕಾಳಜಿಯನ್ನು ಗೌರವಿಸಿ ಅದಕ್ಕೆ ತಕ್ಷಣ ಸ್ಪಂದಿಸುತ್ತಿದ್ದರೇನೋ. ಜಗತ್ತಿಗೆ ಅಂಜಿ ಬ್ರಿಟಿಷರು ತಕ್ಷಣ ವಾಂಗ್ಚುಕ್ ಬೇಡಿಕೆಯನ್ನು ಈಡೇರಿಸುತ್ತಿದ್ದರು. ಆದರೆ ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋಗಿ ಏಳು ದಶಕಗಳು ಕಳೆದುಹೋಗಿವೆೆ. ಪ್ರಜಾಸತ್ತೆಯ ಹೆಸರಿನಲ್ಲಿ ಈ ದೇಶವನ್ನು ಆಳುತ್ತಿರುವವರು ಸರ್ವಾಧಿಕಾರದಲ್ಲಿ ಬ್ರಿಟಿಷರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಆದುದರಿಂದಲೇ, ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ನಮ್ಮನ್ನಾಳುವವರಿಗೆ ಏನೂ ಅನ್ನಿಸುತ್ತಿಲ್ಲ.
ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆ 25ನೇ ದಿನಕ್ಕೆ ಕಾಲಿಟ್ಟಿದ್ದು, ಇದನ್ನು ದೇಶ ಗಂಭೀರವಾಗಿ ಸ್ವೀಕರಿಸಿದ್ದು ವಾಂಗ್ಚುಕ್ ಅವರ ಪ್ರವೇಶದ ಬಳಿಕ. ನೀಟ್‌ನಲ್ಲಿ ನಡೆದಿರುವ ಅಕ್ರಮ ಇಡೀ ದೇಶದ ಯುವ ಸಮೂಹವನ್ನು ಆಕ್ರೋಶಕ್ಕೆ ತಳ್ಳಿದೆ. 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅತಂತ್ರಕ್ಕ ತಳ್ಳಿದ, 20ಕ್ಕೂ ಅಧಿಕ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾದ, ಇಡೀ ವೈದ್ಯಕೀಯ ಕ್ಷೇತ್ರವನ್ನು ಆತಂಕಕ್ಕೆ ದೂಡಿದ ನೀಟ್ ಅಕ್ರಮ, ಈ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ನಡೆದ ಅತಿ ದೊಡ್ಡ ಭಯೋತ್ಪಾದನಾ ದಾಳಿಯಾಗಿದೆ. ಇಷ್ಟು ದೊಡ್ಡ ಅಕ್ರಮ, ಅನ್ಯಾಯ ನಡೆದಿದ್ದರೂ ಅದರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿಲ್ಲ. ದೇಶಾದ್ಯಂತ ಯುವ ಸಮೂಹ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರೂ ಸರಕಾರ ಅದಕ್ಕೆ ಸ್ಪಂದಿಸುತ್ತಿಲ್ಲ. ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದಲ್ಲಿ ದೇಶದ ಜನತೆ ಅಧಿಕೃತವಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಿಳಿದಾಗ ಸರಕಾರ, ಪ್ರತಿಭಟನೆಯನ್ನು ದಮನಿಸುವುದಕ್ಕಾಗಿ ಸಂಘಟನೆಯ ಮುಖಂಡರ ಬಗ್ಗೆಯೇ ಅಪಪ್ರಚಾರ ಮಾಡಲು ಮುಂದಾಯಿತು. ಸಿಜೆಪಿಯ ಹಿಂದೆ ವಿದೇಶಿ ಹಿತಾಸಕ್ತಿಗಳಿವೆ ಎಂದು ಬಿಂಬಿಸಲು ಪ್ರಯತ್ನಿಸಿತು. ಆದರೆ, ನೀಟ್ ಅಕ್ರಮಗಳ ಹಿಂದೆ ಯಾರಿದ್ದಾರೆ ಎನ್ನುವುದನ್ನು ಮುಚ್ಚಿಹಾಕಿತು. ಯಾವಾಗ ಸಿಜೆಪಿ ಪ್ರತಿಭಟನೆಗೆ ವಾಂಗ್ಚುಕ್ ಕೈ ಜೋಡಿಸಿದರೋ ಅಲ್ಲಿಂದ ಪ್ರತಿಭಟನೆ ತಿರುವು ಪಡೆದಿದೆ. ಸರಕಾರ ಗಮನಿಸಲಿ, ಗಮನಿಸದೇ ಇರಲಿ, ವಾಂಗ್ಚುಚ್ ಉಪವಾಸ ಸತ್ಯಾಗ್ರಹ ನಮ್ಮನ್ನಾಳುವವರ ಮುಖವಾಡಗಳನ್ನು ಕಳಚಿ ಹಾಕುತ್ತಿದೆ.
ಒಂದು ಕಾಲದಲ್ಲಿ ಇದೇ ವಾಂಗ್ಚುಕ್ ಅವರನ್ನು ಮೋದಿಯವರು ಮೆಚ್ಚಿ ಮಾತನಾಡಿದ್ದರು. ಕಾಶ್ಮೀರದಿಂದ ಲಡಾಖ್ ಪ್ರತ್ಯೇಕವಾದಾಗ, ಅದನ್ನು ಸ್ವಾಗತಿಸಿದವರಲ್ಲಿ ವಾಂಗ್ಚುಕ್ ಒಬ್ಬರು. ಲಡಾಖ್‌ನ ಭೂಮಿಗಾಗಿ, ಪರಿಸರಕ್ಕಾಗಿ, ಜನರಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದ ವಾಂಗ್ಚುಕ್, ಲಡಾಖ್‌ನಲ್ಲಿ ಚೀನಾ ಅತಿಕ್ರಮಣದ ವಿರುದ್ಧವೂ ಸ್ಥಳೀಯರನ್ನು ಸಂಘಟಿಸಿದವರು. ಆದರೆ ಯಾವಾಗ ಕೇಂದ್ರ ಸರಕಾರ, ಲಡಾಖ್‌ನ ಜನರಿಗೆ ಕೊಟ್ಟ ಮಾತುಗಳನ್ನು ಈಡೇರಿಸಲಿಲ್ಲವೋ ಆಗ ಸ್ಥಳೀಯರ ಹಕ್ಕುಗಳಿಗಾಗಿ ಕೇಂದ್ರ ಸರಕಾರದ ವಿರುದ್ಧವೇ ಪ್ರತಿಭಟನೆಗಳನ್ನು ಸಂಘಟಿಸುತ್ತಾ ಬಂದರು. ಲಡಾಖ್‌ನ ಪರಿಸರದ ಮೇಲೆ ಕಾರ್ಪೊರೇಟ್ ಹಸ್ತಕ್ಷೇಪವನ್ನು ವಿರೋಧಿಸಿ ಈ ಹಿಂದೆ ಸೋನಮ್ ವಾಂಗ್ಚುಕ್ ಮೈನಸ್ 10 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಸುಮಾರು 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಸುದ್ದಿಯಾಗಿದ್ದರು. ಸಾವಿರಾರು ಲಡಾಖ್ ನಿವಾಸಿಗಳು ಈ ಸಂದರ್ಭದಲ್ಲಿ ವಾಂಗ್ಚುಕ್ ಜೊತೆ ಉಪವಾಸ ಕುಳಿತಿದ್ದರು. ಜಮ್ಮು ಕಾಶ್ಮೀರವೂ ಸೇರಿದಂತೆ ಲಡಾಖ್‌ನ್ನು ಭಾರತಕ್ಕೆ ಸೇರಿಸಿದ್ದೇವೆ ಎಂದು ಪುಂಗಿ ಬಿಟ್ಟಿದ್ದ ಬಿಜೆಪಿ ನಾಯಕರ ಮುಖವಾಡ ವಾಂಗ್ಚುಕ್ ಅವರಿಂದ ಹರಿದು ಬ್ದಿದ್ದಿತ್ತು. ಬಳಿಕ ಲೇಹ್‌ನಿಂದ ದಿಲ್ಲಿಗೆ ಸುದೀರ್ಘ ಪಾದಯಾತ್ರೆಯನ್ನು ಅವರು ಹಮ್ಮಿಕೊಂಡರು. ಈ ರ್ಯಾಲಿಯನ್ನೂ ಸರಕಾರ ದಮನಿಸುವುದಕ್ಕೆ ಯತ್ನಿಸಿತ್ತು.
ವಾಂಗ್ಚುಕ್ ಅವರನ್ನು ಬಾಯಿ ಮುಚ್ಚಿಸುವುದು ಸುಲಭವಿಲ್ಲ ಎಂದಾಗ, ಅಂತಿಮವಾಗಿ ಎನ್‌ಎಸ್‌ಎ ಕಾಯ್ದೆಯಡಿ ಅವರನ್ನು ಬಂಧಿಸಿತು. ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂದು ಹೋರಾಟ ನಡೆಸಿದ್ದ ವಾಂಗ್ಚುಕ್ ಅವರಿಗೆ ಪಾಕಿಸ್ತಾನದ ಜೊತೆಗೆ ನಂಟನ್ನು ಕಲ್ಪಿಸಿತು. ಭಾರತದ ಪಾಲಿಗೆ ಇತ್ತೀಚಿನವರೆಗೂ ಹೀರೋ ಆಗಿದ್ದ ವಾಂಗ್ಚುಕ್ ಅವರನ್ನು ಏಕಾಏಕಿ ವಿಲನ್ ಆಗಿ ಪರಿವರ್ತಿಸಿದ್ದು ಮಾತ್ರವಲ್ಲ, ದೇಶದ್ರೋಹಿಯಾಗಿ ಬಿಂಬಿಸುವುದಕ್ಕೆ ಹೊರಟಿತು. ಆದರೆ ವಾಂಗ್ಚುಕ್ ಅವರ ಕಾಳಜಿ, ಪ್ರಾಮಾಣಿಕತೆ, ದೇಶಪ್ರೇಮವನ್ನು ಜೈಲಿನ ಕಂಬಿಗಳೂ ಬಂಧಿಸಿಡಲು ವಿಫಲವಾಯಿತು. ಪರಿಣಾಮವಾಗಿ ಅವರು ಜೈಲಿನಿಂದ ಹೊರ ಬಂದರು ಮಾತ್ರವಲ್ಲ, ಸರಕಾರದ ಯಾವುದೇ ಬೆದರಿಕೆಗಳಿಗೆ ಜಗ್ಗದೇ ಈ ದೇಶದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಮತ್ತೆ ಹೋರಾಟಕ್ಕಿಳಿದಿದ್ದಾರೆ. ಈ ಸತ್ಯಾಗ್ರಹದಿಂದ ಅವರು ಸುಮಾರು 9 ಕಿ. ಗ್ರಾಂ ತೂಕ ಕಳೆದುಕೊಂಡಿದ್ದು, ಅವರ ಆರೋಗ್ಯ ಕ್ಷೀಣಿಸುತ್ತಿದೆ. ಒಂದು ಕಾಲದಲ್ಲಿ ಅಣ್ಣಾ ಹಝಾರೆ ನೇತೃತ್ವದ ಸತ್ಯಾಗ್ರಹವನ್ನು ‘ಎರಡನೇ ಸ್ವಾತಂತ್ರ್ಯ ಹೋರಾಟ’ ಎಂದು ಬಣ್ಣಿಸಿದ್ದ ಮಾಧ್ಯಮಗಳಿಗೆ, ಕೇಂದ್ರದ ಅಕ್ರಮಗಳ ವಿರುದ್ಧ ವಾಂಗ್ಚುಕ್ ನಡೆಸುತ್ತಿರುವ ಸತ್ಯಾಗ್ರಹ ಕಾಣಿಸುತ್ತಲೇ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳಾಗಬೇಕು ಎಂದು ಹೇಳುತ್ತಾ ಬಲಪಂಥೀಯ ಸಿದ್ಧಾಂತಗಳನ್ನು ತುರುಕಿಸಲು ಹೊರಟಿರುವ ಆರೆಸ್ಸೆಸ್‌ನಂತಹ ಸಂಘಟನೆಗಳೂ ನೀಟ್ ಅಕ್ರಮಗಳ ಬಗ್ಗೆ ಮೌನವಾಗಿವೆ. ನೀಟ್‌ನಲ್ಲಿ ಸಂತ್ರಸ್ತರಾಗಿರುವ ಬಹುಸಂಖ್ಯಾತ ವಿದ್ಯಾರ್ಥಿಗಳು ಹಿಂದೂಧರ್ಮೀಯರು ಎನ್ನುವ ಕಾರಣಕ್ಕಾಗಿಯಾದರೂ ಸಂಘಪರಿವಾರ ವಾಂಗ್ಚುಕ್ ಜೊತೆಗೆ ನಿಲ್ಲಬಹುದಿತ್ತು. ಆದರೆ, ಆರೆಸ್ಸೆಸ್‌ನಂತಹ ಸಂಘಟನೆಗಳು ಪರೋಕ್ಷವಾಗಿ ಅಕ್ರಮಗಳ ಬೆನ್ನಿಗೆ ಬೆಂಗಾವಲಾಗಿ ನಿಂತಿವೆ.
ಸಿಜೆಪಿ ಸಂಘಟನೆಯ ಬಗ್ಗೆ ಹಲವರಿಗೆ ಅನುಮಾನಗಳಿರಬಹುದು. ಶಂಕೆಗಳಿರಬಹುದು. ಆದರೆ ವಾಂಗ್ಚುಕ್ ಹೋರಾಟದ ಪ್ರಾಮಾಣಿಕತೆಯ ಬಗ್ಗೆ ಯಾರಿಗೂ ಅನುಮಾನವಿಲ್ಲ. ವಾಂಗ್ಚುಕ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಈ ದೇಶದ ಶಿಕ್ಷಣ ವ್ಯವಸ್ಥೆಯ ಬಿಡುಗಡೆಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಭ್ರಷ್ಟ ರಾಜಕಾರಣಿಗಳ ಕೈಯಿಂದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು, ಆರೋಗ್ಯ ವ್ಯವಸ್ಥೆಯನ್ನು ಬಿಡುಗಡೆಗೊಳಿಸಲು ನಡೆಸುತ್ತಿರುವ ಸಂಘರ್ಷವಾಗಿದೆ. ಈ ಸಂಘರ್ಷದಲ್ಲಿ ವಾಂಗ್ಚುಕ್ ಸೋತರೆ ದೇಶವೇ ಸೋತ ಹಾಗೆ. ಇದೇ ಸಂದರ್ಭದಲ್ಲಿ ವಾಂಗ್ಚುಕ್ ಆರೋಗ್ಯವೂ ದೇಶದ ಪಾಲಿಗೆ ಮುಖ್ಯವಾಗಿದೆ. ವಾಂಗ್ಚುಕ್‌ನ್ನು ಉಳಿಸಿಕೊಳ್ಳುತ್ತಾ ಹೋರಾಟವನ್ನು ಮುಂದುವರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ದೇಶದ ಯುವಕರ ಜೊತೆಗೆ ಹಿರಿಯರೂ ಈ ಹೋರಾಟದಲ್ಲಿ ಪಾಲುಗೊಳ್ಳುವುದು ಅನಿವಾರ್ಯ. ಮಾಡು-ಮಡಿ ಹೋರಾಟದಲ್ಲಿ ದೇಶ ಗೆಲ್ಲಲಿ. ಭ್ರಷ್ಟ ರಾಜಕಾರಣಿಗಳು ಸೋಲಲಿ.