ನಾಡಹಬ್ಬ ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ ಯಾಕೆ ಬೇಡ?
ಸಾಂದರ್ಭಿಕ ಚಿತ್ರ
ಮೈಸೂರು ದಸರಾದಲ್ಲಿ ‘ಮಹಿಷ’ ಮತ್ತೆ ಸುದ್ದಿಯಲ್ಲಿದ್ದಾನೆ. ಮೈಸೂರು ದಸರಾಕ್ಕೆ ಪರ್ಯಾಯವಾಗಿ ನಾಡಿನ ಪ್ರಗತಿಪರ ವರ್ಗ ‘ಮಹಿಷ ದಸರಾ’ ಆಚರಣೆ ಮಾಡಲು ಮುಂದಾದದ್ದು ಈ ಹಿಂದೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದರ ವಿರುದ್ಧ ಸ್ಥಳೀಯ ಬಿಜೆಪಿ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು ಮಾತ್ರವಲ್ಲ, ಮಹಿಷ ದಸರಾ ಆಚರಣೆ ನಡೆಯದಂತೆ ನೋಡಿಕೊಳ್ಳಲು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದರು. ಬಳಿಕ ಪೊಲೀಸರ ಸಮಕ್ಷಮದಲ್ಲಿ ಔಪಚಾರಿಕವಾಗಿ ಮಹಿಷ ದಸರಾ ಆಚರಿಸುವುದಕ್ಕೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಮಹಿಷಾಸುರನಿಂದಾಗಿಯೇ ಆ ಭಾಗಕ್ಕೆ ಮೈಸೂರು ಎನ್ನುವ ಹೆಸರು ಬಂದಿದೆ. ಮಹಿಷನನ್ನು ಹೊರಗಿಟ್ಟು ಮೈಸೂರು ಇಲ್ಲವೇ ಇಲ್ಲ. ಎಮ್ಮೆ, ಕೋಣಗಳ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಹಿಷಾಸುರನ ಅಸ್ಮಿತೆಯನ್ನು ಮತ್ತೆ ಜೀವಂತಗೊಳಿಸುವುದು ಮಹಿಷ ದಸರಾ ಆಚರಣೆಯ ಉದ್ದೇಶವಾಗಿತ್ತು. ವಿಶೇಷವೆಂದರೆ, ಈ ಬಾರಿಯ ದಸರಾದಲ್ಲೂ ಮಹಿಷ ಸುದ್ದಿಯಲ್ಲಿದ್ದಾನೆ. ಆದರೆ, ಈ ಬಾರಿ ಮೈಸೂರು ದಸರಾಕ್ಕೆ ಮಹಿಷ ಆಗಮಿಸಿರುವುದು ಕರಾವಳಿಯ ಸಂಸ್ಕೃತಿಯ ಭಾಗವಾಗಿರುವ ‘ಕಂಬಳ’ದ ಮೂಲಕ. ರಾಜ್ಯ ಸರಕಾರ ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಮುಂದಾಗಿದೆ. ವಿಪರ್ಯಾಸವೆಂದರೆ, ಕರಾವಳಿಯ ಸಂಸ್ಕೃತಿಯನ್ನು ಮೈಸೂರಿನ ಮೇಲೆ ಯಾಕೆ ಹೇರುತ್ತೀರಿ ಎಂದು ಬಿಜೆಪಿ ನಾಯಕರು ಕಂಬಳವನ್ನು ವಿರೋಧಿಸುತ್ತಿದ್ದಾರೆ.
‘‘ಮೈಸೂರು ದಸರಾ ವೇಳೆ ಕಂಬಳ ನಡೆಸುವುದು ಬೇಡ. ರಾಜ್ಯ ಸರಕಾರ ಮೈಸೂರಿನ ಜನರ ಭಾವನೆಗೆ ಬೆಲೆ ನೀಡಬೇಕು. ಕರಾವಳಿಯ ಪರಂಪರೆಯನ್ನು ಮೈಸೂರಿಗೆ ತುರುಕಬೇಡಿ’’ ಹೀಗೆಂದಿದ್ದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಬಿ. ವೈ. ವಿಜಯೇಂದ್ರ. ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೂ ‘ಕಂಬಳ’ದ ವಿರುದ್ಧ್ದ ತಮ್ಮ ಅಸಹಸೆೆಯನ್ನು ವ್ಯಕ್ತಪಡಿಸಿದ್ದಾರೆ. ‘‘ಕರಾವಳಿ ಭಾಗದ ಆಚರಣೆ ಮೈಸೂರಿನಲ್ಲಿ ಬೇಡ. ಇದೊಂದು ಅನವಶ್ಯಕವಾದ ಬೆಳವಣಿಗೆ. ಕಂಬಳದ ವಿರುದ್ಧ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದೇನೆ’’ ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಅಭಿಪ್ರಾಯಕ್ಕೆ ಜೆಡಿಎಸ್ ಮುಖಂಡ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕೂಡ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ‘‘ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ. ಭೌಗೋಳಿಕವಾಗಿ ಈ ಭಾಗಕ್ಕೆ ಅದು ಸರಿ ಹೊಂದದು’’ ಎಂದು ಅವರು ದಸರಾದಲ್ಲಿ ಕಂಬಳ ನಡೆಸುವುದರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಇನ್ನೂ ಹಲವು ನಾಯಕರು ಕಂಬಳದ ವಿರುದ್ಧ ತಮ್ಮ ಪ್ರತಿಭಟನೆಯ ಚಾಟಿಯನ್ನು ಬೀಸಿದ್ದಾರೆ.
ಕಂಬಳದ ವಿರುದ್ಧ ಈ ಹಿಂದೆಯೂ ಕೆಲವರು ಕೆಲವು ಕಾರಣಗಳಿಗಾಗಿ ವಿರೋಧಿಸುತ್ತಿದ್ದರು. ಪ್ರಾಣಿ ಪ್ರಿಯರು, ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತದೆ ಎನ್ನುವುದನ್ನು ಮುಂದಿಟ್ಟುಕೊಂಡು ಕಂಬಳದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಸಂದರ್ಭದಲ್ಲಿ, ಕೆಲವು ಪ್ರಗತಿ ಪರ ಗುಂಪುಗಳು ‘‘ಕಂಬಳವೆನ್ನುವುದು ಊಳಿಗಮಾನ್ಯ ವ್ಯವಸ್ಥೆಯ ಭಾಗವಾಗಿದೆ. ಅದರಲ್ಲಿ ಕೆಳ ಜಾತಿಯ ಜನರ ಶೋಷಣೆ ನಡೆಯುತ್ತದೆ’’ ಎಂದು ವಿರೋಧಿಸುತ್ತಾ ಬರುತ್ತಿವೆ. ಕಂಬಳದಲ್ಲಿ ಕೊರಗರೂ ಸೇರಿದಂತೆ ಕೆಳ ಜಾತಿಯ ಜನರನ್ನು ಅಜಲು ಪದ್ಧತಿಗೆ ಬಳಸಲಾಗುತ್ತದೆ ಎನ್ನುವ ಆರೋಪಗಳೂ ಇವೆ. ಆದರೆ ಭಾರತದ ಯಾವುದೇ ಧಾರ್ಮಿಕ ಜಾತ್ರೆ, ಸಾಂಸ್ಕೃತಿಕ ಆಚರಣೆಗಳಲ್ಲಿ ಜಾತಿ ಒಂದಲ್ಲ ಒಂದು ರೀತಿಯಲ್ಲಿ ನುಸುಳಿಯೇ ಬಿಡುತ್ತದೆ. ಇದು ಕೇವಲ ಕಂಬಳಕ್ಕಷ್ಟೇ ಸೀಮಿತವಾದ ವಿಷಯವಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ. ಕಂಬಳವನ್ನು ಊಳಿಗಮಾನ್ಯ ವ್ಯವಸ್ಥೆಯ ಭಾಗವೆಂದು ವಿರೋಧಿಸುವುದಾದರೆ, ಮೈಸೂರು ದಸರಾವನ್ನು ರಾಜ ಪ್ರಭುತ್ವದ ವೈಭವೀಕರಣ ಎಂದು ವಿರೋಧಿಸುವುದು ಅನಿವಾರ್ಯವಾಗುತ್ತದೆ. ದಸರಾದಲ್ಲಿ ನಡೆಯುವ ಎಲ್ಲ ಆಚರಣೆಗಳೂ ರಾಜ ಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ಹಾಗೆಂದು ದಸರಾವನ್ನು ನಾಡಹಬ್ಬವಾಗಿ ಆಚರಿಸುವುದನ್ನು ವಿರೋಧಿಸುವುದು ನ್ಯಾಯೋಚಿತವೆ? ಕಂಬಳ ಹಿಂಸೆಗೆ ಪ್ರೇರಣೆ ನೀಡುತ್ತದೆ ಎಂದಾದರೆ, ದಸರಾ ಹಬ್ಬವೂ ಮಹಿಷಾಸುರನ ಕಗ್ಗೊಲೆಯನ್ನು ಪರೋಕ್ಷವಾಗಿ ಸಂಭ್ರಮಿಸುವ, ಆಚರಿಸುವ ಕಾರ್ಯಕ್ರಮವಲ್ಲವೆ? ಎಂದು ಕೆಲವು ಪ್ರಗತಿಪರ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಆದರೆ ಇಲ್ಲಿ ಬಿಜೆಪಿ ಮುಖಂಡರು ಮತ್ತು ಮೈಸೂರಿನ ರಾಜಕೀಯ ನಾಯಕರು ಕಂಬಳವನ್ನು ವಿರೋಧಿಸುತ್ತಿರುವುದು ಅದು ಕರಾವಳಿಯ ಸಂಸ್ಕೃತಿ ಎನ್ನುವ ಕಾರಣಕ್ಕೆ. ಮೈಸೂರು ದಸರಾದಲ್ಲಿ ಕಂಬಳವನ್ನು ಹಮ್ಮಿಕೊಂಡರೆ ದಸರಾದ ಪರಂಪರೆಗೆ, ಅದರ ಸಾಂಸ್ಕೃತಿಕ ಮಹತ್ವಕ್ಕೆ ಧಕ್ಕೆಯಾಗುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ‘‘ಕರಾವಳಿಯ ಸಂಸ್ಕೃತಿ ಮೈಸೂರಿನ ಮೇಲೆ ಯಾಕೆ ಹೇರಲಾಗುತ್ತಿದೆ?’’ ಎಂದು ಅವರು ಕೇಳುತ್ತಿದ್ದಾರೆ. ಕರಾವಳಿ ಸಂಸ್ಕೃತಿ ಮೈಸೂರಿನ ಜನರಿಗೆ ಯಾಕೆ ಅಪಥ್ಯ? ಎನ್ನುವ ಪ್ರಶ್ನೆಯನ್ನು ಕರಾವಳಿಯ ಜನರು ಇದೀಗ ಬಿಜೆಪಿ ನಾಯಕರನ್ನು ಕೇಳುತ್ತಿದ್ದಾರೆ. ‘ಮೈಸೂರು ದಸರಾ’ವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತದೆ. ನಾಡ ಹಬ್ಬ ಎಂದರೆ ಇಡೀ ನಾಡಿನ ಜನರನ್ನು ಅದು ಒಳಗೊಳ್ಳುವಂತಾಗಬೇಕು. ಕಳೆದ ವರ್ಷ, ಬಾನುಮುಷ್ತಾಕ್ ಅವರು ದಸರಾವನ್ನು ಉದ್ಘಾಟಿಸುವ ಸಂದರ್ಭದಲ್ಲಿಯೂ ಬಿಜೆಪಿ ಇದೇ ರೀತಿಯ ತಗಾದೆಯನ್ನು ತೆಗೆದಿತ್ತು. ಆದರೆ, ದಸರಾ ಎನ್ನುವುದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಅದು ನಾಡಿನ ಎಲ್ಲ ಧರ್ಮ, ವರ್ಗವನ್ನು ಒಳಗೊಂಡು ಆಚರಿಸುವ ಹಬ್ಬ ಎನ್ನುವುದನ್ನು ಸರಕಾರ ಸ್ಪಷ್ಟಪಡಿಸಿತ್ತು. ಇದೀಗ ಮೈಸೂರು ದಸರಾದಿಂದ ಕರಾವಳಿ ಸಂಸ್ಕೃತಿಯನ್ನು ಹೊರಗಿಡುವುದಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಮೈಸೂರಿನಲ್ಲಿ ಕರಾವಳಿಯ ಕ್ರೀಡೆಯೇಕೆ ಎಂದು ಕೇಳುತ್ತಿದ್ದಾರೆ. ಕರಾವಳಿಯ ಸಂಸ್ಕೃತಿ ಮೈಸೂರು ದಸರಾದಲ್ಲಿ ಪ್ರಕಟವಾದರೆ ಅದರಿಂದ ದಸರಾದ ಸಾಂಸ್ಕೃತಿಕ ಪರಂಪರೆಗೆ ಹೇಗೆ ಧಕ್ಕೆಯಾಗುತ್ತದೆ ಎನ್ನುವುದನ್ನು ಬಿಜೆಪಿ ನಾಯಕರು ಈವರೆಗೆ ಸ್ಪಷ್ಟಪಡಿಸಿಲ್ಲ. ನಾಡಿನ ವಿವಿಧ ಜಾನಪದ ಸಂಸ್ಕೃತಿ, ಕ್ರೀಡೆಗಳನ್ನು ದಸರಾ ಒಳಗೊಳ್ಳುವಂತಾದಾಗ ಮಾತ್ರ ಅದು ಪರಿಪೂರ್ಣವಾಗಿ ‘ನಾಡಹಬ್ಬ’ ಎಂದು ಗುರುತಿಸಲ್ಪಡುತ್ತದೆ. ದಸರಾ ಕೇವಲ ಮೈಸೂರನ್ನು ಮಾತ್ರ ಪ್ರತಿನಿಧಿಸುತ್ತದೆ ಎಂದಾದರೆ ಅದು ನಾಡಹಬ್ಬ ಹೇಗಾಗುತ್ತದೆ? ಮೈಸೂರಿನ ಹಬ್ಬ ಎಂದು ಕರೆದು ಬರೇ ಮೈಸೂರಿನ ಜನರಿಗಾಗಿ ಅದನ್ನು ಮೀಸಲಿಡುವುದು ಉಚಿತವಲ್ಲವೆ?
ನಾಡಹಬ್ಬ ದಸರಾಕ್ಕಾಗಿ ಕರಾವಳಿಯ ಜನರ ತೆರಿಗೆ ಹಣವನ್ನೂ ಬಳಸಲಾಗುತ್ತದೆ. ಕರಾವಳಿಯ ಜನರೂ ಈ ಹಬ್ಬದಲ್ಲಿ ಯಾವ ಪ್ರಾದೇಶಿಕ ಭೇದಭಾವಗಳಿಲ್ಲದೆ ಸಂಭ್ರಮದಿಂದ ಪಾಲುಗೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಕರಾವಳಿ ಪ್ರದೇಶದ ಜಾನಪದ ಕ್ರೀಡೆಗಳಲ್ಲಿ ಒಂದಾಗಿರುವ ಕಂಬಳ ದಸರಾದಲ್ಲಿ ಹಮ್ಮಿಕೊಂಡರೆ ದಸರಾದಲ್ಲಿ ಕರಾವಳಿಯ ಜನರು ಪೂರ್ಣ ಪ್ರಮಾಣದಲ್ಲಿ ಒಳಗೊಳ್ಳುವಂತಾಗುತ್ತದೆ. ಬಿಜೆಪಿ ನಾಯಕರು ಕರಾವಳಿಯ ಕ್ರೀಡೆ, ಸಂಸ್ಕೃತಿಯ ವಿರುದ್ಧ ಮೈಸೂರಿನ ಜನರನ್ನು ಎತ್ತಿ ಕಟ್ಟುವ ಕೃತ್ಯವನ್ನು ಬಿಟ್ಟು, ಕಂಬಳದ ಓಟಕ್ಕೆ ದಾರಿಯನ್ನು ಬಿಟ್ಟುಕೊಡಬೇಕು. ಕರಾವಳಿಯ ಸಂಸ್ಕೃತಿಯೂ ಈ ನಾಡಿನ ಒಂದು ಭಾಗವೆನ್ನುವುದನ್ನು ಒಪ್ಪಿಕೊಂಡು ಕರಾವಳಿಯ ಮಹಿಷನನ್ನು ಮೈಸೂರಿಗೆ ಸ್ವಾಗತಿಸಬೇಕು. ಈ ಮೂಲಕ ಮೈಸೂರು ದಸರಾ ಪ್ರಾದೇಶಿಕ ಭೇದಗಳನ್ನು ಅಳಿಸಿ ನಾಡನ್ನು ಒಂದಾಗಿಸಲಿ.