ಹಗರಣಗಳ ಕೂಪವಾದ ಕೆಪಿಎಸ್‌ಸಿ
Photo: facebook.com/kpscblr
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರಕಾರಿ ಸೇವೆಯ ಕನಸು ಕಟ್ಟಿಕೊಂಡಿರುವ ನಾಡಿನ ಸಾವಿರಾರು ವಿದ್ಯಾವಂತ ಯುವಕರ ಪಾಲಿಗೆ ಅವಕಾಶಗಳ ದ್ವಾರವಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಭ್ರಷ್ಟಾಚಾರ ಮತ್ತು ಹಗರಣಗಳ ಕೂಪವಾಗಿದೆ. ಕುಖ್ಯಾತಿಗೆ ಹೆಸರಾದ ಈ ಆಯೋಗದ ಅಧ್ಯಕ್ಷ ಶಿವಲಿಂಗಪ್ಪ ಎಸ್. ಸಾಹುಕಾರ್ ಅಮಾನತು ಪ್ರಕರಣ ಇದು ತಲುಪಿದ ಅಧೋಗತಿಗೆ ಮತ್ತೊಂದು ಉದಾಹರಣೆಯಾಗಿದೆ. ಅಮಾನತುಗೊಳಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಾಹುಕಾರ್ ವಿರುದ್ಧದ ಆರೋಪಗಳ ಕುರಿತು ತನಿಖೆಗೆ ಸಂವಿಧಾನದ 317(1)ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ಗಮನಕ್ಕೆ ತರುವಂತೆ ರಾಷ್ಟ್ರಪತಿ ಅವರಿಗೆ ಶಿಫಾರಸು ಮಾಡಿದ್ದಾರೆ. ಸಾಹುಕಾರ್ ಅವರು ತಮ್ಮ ಇಬ್ಬರು ಪುತ್ರಿಯರಿಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಆಯ್ಕೆಯಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿ ಇರುವುದು ಸ್ಪಷ್ಟವಾಗಿದೆ. ಆಯ್ಕೆಯ ಪ್ರಕ್ರಿಯೆಯಿಂದ ದೂರ ಉಳಿಯದಿರುವುದು ಮತ್ತು ಪ್ರಮುಖ ಮಾಹಿತಿಗಳನ್ನು ಮರೆ ಮಾಚುವ ಮೂಲಕ ಪುತ್ರಿಯರಿಗೆ ಮೀಸಲಾತಿ ಸೌಲಭ್ಯ ದೊರೆಯುವಂತೆ ಅವರು ಮಾಡಿದ್ದಾರೆ ಎಂಬುದು ಕಂಡು ಬಂದಿದೆ.
ಶಿವಲಿಂಗಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್‌ವಿರುದ್ಧ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಲ್ಲಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಈ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಆಯೋಗದ ಸಭೆಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಗಳಿಂದ ಅಧ್ಯಕ್ಷರನ್ನು ದೂರ ಇಡುವ ನಿರ್ಣಯವನ್ನು ಲೋಕಸೇವಾ ಆಯೋಗದ ಎಲ್ಲ ಸದಸ್ಯರು ಸರ್ವಾನುಮತದಿಂದ ಕೈಗೊಂಡಿದ್ದರು. ಈ ನಿರ್ಣಯವನ್ನು ಪ್ರಕ್ರಿಯಾತ್ಮಕ ಕಾರಣಗಳಿಗಾಗಿ ಹೈಕೋರ್ಟ್ ತಡೆ ಹಿಡಿದಿದೆ. ಹೀಗಿದ್ದರೂ ಈಗ ರಾಜ್ಯಪಾಲರ ಮಧ್ಯ ಪ್ರವೇಶದಿಂದಾಗಿ ಸದರಿ ಪ್ರಕರಣದ ಗಂಭೀರತೆ ಇನ್ನೂ ಹೆಚ್ಚಿದಂತಾಗಿದೆ.
ರಾಜ್ಯ ಲೋಕಸೇವಾ ಆಯೋಗದ ಈ ಹಗರಣ ಇದೇನು ಮೊದಲನೆಯದಲ್ಲ. ಆಕಸ್ಮಿಕವೂ ಅಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಈ ಲೋಕಸೇವಾ ಆಯೋಗ ಸದಾ ಇಂಥ ಹಗರಣಗಳ, ವಿವಾದಗಳ ಕೇಂದ್ರವಾಗಿದೆ. ಈ ಕುಖ್ಯಾತಿಯ ಚರಿತ್ರೆಗೆ ಈಗ ಇನ್ನೊಂದು ಪುಟ ಸೇರಿದಂತಾಗಿದೆ. ಲೋಕಸೇವಾ ಆಯೋಗದಲ್ಲಿ ನೇಮಕಾತಿ ಹಗರಣಗಳು, ಲಂಚದ ಆರೋಪಗಳು, ಉತ್ತರ ಪತ್ರಿಕೆಗಳ ತಿರುಚುವಿಕೆ, ನೇಮಕಾತಿಯಲ್ಲಿ ವಿಳಂಬ ಹಾಗೂ ದೀರ್ಘ ಕಾಲದ ನ್ಯಾಯಾಂಗ ಹೋರಾಟಗಳಂಥ ಕುಖ್ಯಾತಿ ಲೋಕಸೇವಾ ಆಯೋಗಕ್ಕೆ ಅಂಟಿಕೊಂಡಿದೆ.
ನಾಡಿನ ಅತ್ಯುತ್ತಮ ಪ್ರತಿಭಾವಂತರನ್ನು ಸಾರ್ವಜನಿಕ ಸೇವೆಗೆ ಆಯ್ಕೆ ಮಾಡಿ ಅಣಿಗೊಳಿಸುವ ಹೊಣೆಯನ್ನು ಹೊತ್ತಿರುವ ಲೋಕಸೇವಾ ಆಯೋಗ ಈಗ ಕುಖ್ಯಾತಿ ಗಳಿಸಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇದರ ಬಗ್ಗೆ ಸಾರ್ವಜನಿಕರ ವಿಶ್ವಾಸ ಎಷ್ಟು ಕುಸಿದಿದೆ ಅಂದರೆ ಈ ಸಂಸ್ಥೆಯ ಪ್ರತಿಯೊಂದು ನೇಮಕಾತಿಯನ್ನು ಸಂಶಯದಿಂದ ನೋಡಬೇಕಾದ ಪರಿಸ್ಥಿತಿ ಬಂದಿದೆ. ಇದು ನಿಜಕ್ಕೂ ಆತಂಕದ ಸಂಗತಿಯಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಈ ದುರವಸ್ಥೆಗೆ ಇದನ್ನು ಸರಿಪಡಿಸುವ, ಸುಧಾರಿಸುವ ಪ್ರಯತ್ನಗಳು ನಡೆಯದಿರುವುದು ಕಾರಣವಲ್ಲ. ಇದನ್ನು ಸರಿಪಡಿಸಲು, ಸುಧಾರಿಸಲು ಸಾಕಷ್ಟು ತೀರ್ಮಾನಗಳನ್ನು ಕೈಗೊಂಡರೂ ಆ ತೀರ್ಮಾನಗಳನ್ನು ಜಾರಿಗೊಳಿಸಲು ಸಾಧ್ಯವಾಗದಿರುವ ವೈಫಲ್ಯವೇ ಕಾರಣವಾಗಿದೆ. ಲೋಕಸೇವಾ ಆಯೋಗದ ಕಾರ್ಯ ನಿರ್ವಹಣೆಯನ್ನು ಸುಧಾರಿಸುವ ದೃಷ್ಟಿಯಿಂದ ರಾಜ್ಯ ಸರಕಾರ ಇತ್ತೀಚೆಗೆ ‘ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳ ತಿದ್ದುಪಡಿ) ವಿಧೇಯಕ-2025’ನ್ನು ಜಾರಿಗೆ ತಂದಿದೆ. ಇದಕ್ಕೂ ಮುಂಚೆ ಪಿ.ಸಿ.ಹೋಟಾ ಸಮಿತಿಯು ಲೋಕಸೇವಾ ಆಯೋಗದ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ಮಾಡಿತ್ತು. ನೇಮಕಾತಿಗೆ ಸಂಬಂಧಿಸಿದಂತೆ ವಾರ್ಷಿಕ ವೇಳಾಪಟ್ಟಿಯನ್ನು ರೂಪಿಸುವುದು, ಸಂದರ್ಶನ ಸಮಿತಿಯ ವಿವೇಚನಾ ಅಧಿಕಾರವನ್ನು ಸೀಮಿತಗೊಳಿಸುವುದು ಹಾಗೂ ಮೌಲ್ಯ ಮಾಪನ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಆಯೋಗದ ಸದಸ್ಯರ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಖಾತರಿ ಪಡಿಸುವುದು ಸಮಿತಿಯ ಶಿಫಾರಸುಗಳಲ್ಲಿ ಇರುವ ಪ್ರಮುಖ ಅಂಶಗಳಾಗಿವೆ.
ಈ ಶಿಫಾರಸುಗಳಲ್ಲದೆ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿಯನ್ನು ರಚಿಸಲಾಗಿದೆ. ವಾಸ್ತವವಾಗಿ ಲೋಕಸೇವಾ ಆಯೋಗಕ್ಕೆ ಅಗತ್ಯವಾಗಿ ಬೇಕಾಗಿರುವುದು ಮತ್ತೊಂದು ತನಿಖಾ ಸಮಿತಿ ಅಥವಾ ಅದರ ವರದಿಗಳಲ್ಲ. ಆಯೋಗದ ರಚನಾತ್ಮಕ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಲೋಕಸೇವಾ ಆಯೋಗದ ಸದಸ್ಯರ ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿರಬೇಕು. ನೇಮಕಾತಿಯಲ್ಲಿ ಅರ್ಹತೆ ಮತ್ತು ಪ್ರಾಮಾಣಿಕತೆ ಮೊದಲ ಮಾನದಂಡವಾಗಿರಬೇಕು. ಉದ್ಯೋಗ ನೇಮಕಾತಿಗಳು ತಂತ್ರಜ್ಞಾನವನ್ನು ಆಧರಿಸಿ ನಿಗದಿತ ಕಾಲ ಮಿತಿಯೊಳಗೆ ಹಾಗೂ ಸ್ವತಂತ್ರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಅರ್ಹತೆಯೇ ಏಕೈಕ ಮಾನದಂಡವಾಗಿರುವ ನೇಮಕಾತಿ ವ್ಯವಸ್ಥೆ ರಾಜ್ಯದ ಯುವಕರಿಗೆ ಅಗತ್ಯವಾಗಿ ಬೇಕಾಗಿದೆ.
ರಾಜ್ಯದ ವಿದ್ಯಾವಂತ ಯುವಕರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸುವ ಲೋಕಸೇವಾ ಆಯೋಗದಂಥ ಸಂಸ್ಥೆ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಾರದು. ಆದರೆ ಈಗ ಅದು ಸಂಪೂರ್ಣವಾಗಿ ಅಪಖ್ಯಾತಿ ಗಳಿಸಿದೆ. ಅದರ ವಿಶ್ವಾಸಾರ್ಹತೆಯನ್ನು ಪುನರ್ ಸ್ಥಾಪಿಸುವುದು ಆಡಳಿತಾತ್ಮಕ ಅಗತ್ಯ ಮಾತ್ರವಲ್ಲ ಅದು ಸಂವಿಧಾನ ಬದ್ಧ ಹೊಣೆಗಾರಿಕೆಯೂ ಆಗಿದೆ ಎಂಬುದನ್ನು ಮರೆಯಬಾರದು.