ಜಾತಿ ಗಣತಿ ಇನ್ನಾದರೂ ಮಂಡನೆಯಾಗಲಿ
Photo: chatgpt
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿ ಮತ್ತೆ ಸದ್ದು ಮಾಡುತ್ತಿದೆ. ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ ಚರ್ಚೆ ನಡೆಸಿ ಎಂದು ಈ ಬಾರಿ ಬಿಜೆಪಿ ಮುಖಂಡರೇ ಬೀದಿಗಿಳಿದಿದ್ದಾರೆ. ‘ವರದಿಯ ಕುರಿತಂತೆ ರಾಜ್ಯ ಸರಕಾರ ತನ್ನ ನಿಲುವನ್ನು ಪ್ರಕಟ ಮಾಡಬೇಕು. ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸಬೇಕು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಅವರು ಮಾಧ್ಯಮಗಳ ಮುಂದೆ ಆಗ್ರಹಿಸಿದ್ದಾರೆ. ‘‘450 ಕೋಟಿ ರೂ.ಗಳಿಗೂ ಹೆಚ್ಚು ಜನರ ತೆರಿಗೆಯನ್ನು ವೆಚ್ಚ ಮಾಡಿ ನಡೆಸಲಾದ ಸಮೀಕ್ಷೆಯ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ. ಅಧಿವೇಶನದಲ್ಲಿ ಅದಕ್ಕಾಗಿ ಪ್ರತ್ಯೇಕ ಸಮಯ ನಿಗದಿ ಪಡಿಸಬೇಕು. ವರದಿಯಲ್ಲಿ ಏನಿದೆ ಎಂದು ತಿಳಿಯಲು ನಾವು ಬಯಸಿದ್ದೇವೆ’’ ಎಂದು ಅವರು ಒತ್ತಾಯಿಸಿದ್ದಾರೆ. ಒಂದು ಕಾಲದಲ್ಲಿ ಇದೇ ಬಿಜೆಪಿಯು ‘‘ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಮೂಲಕ ಕಾಂಗ್ರೆಸ್ ಸರಕಾರವು ಹಿಂದೂ ಧರ್ಮದಲ್ಲಿ ಒಡಕನ್ನುಂಟು ಮಾಡಲು ಪ್ರಯತ್ನಿಸುತ್ತಿದೆ’’ ಎಂದು ಆರೋಪಿಸಿತ್ತು. ಈ ಸಮೀಕ್ಷೆ ಅಥವಾ ಜಾತಿ ಗಣತಿಯನ್ನು ಯಾವ ಕಾರಣಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದ್ದರು. ಕಳೆದ ಹತ್ತು ವರ್ಷಗಳಿಂದ ಜಾತಿ ಗಣತಿ ವರದಿಯನ್ನು ಸರಕಾರ ಸ್ವೀಕರಿಸದೇ ಇರುವುದಕ್ಕೆ ಬಿಜೆಪಿಯ ಕೊಡುಗೆಯೂ ಸಾಕಷ್ಟಿದೆ. ಬೇರೆ ಬೇರೆ ನೆಪಗಳನ್ನು ಮುಂದಿಟ್ಟುಕೊಂಡು ಈ ಹಿಂದಿನ ಸಮೀಕ್ಷೆಯನ್ನು ಬಿಜೆಪಿ ವಿರೋಧಿಸಿತ್ತು. ಕಟ್ಟ ಕಡೆಗೆ ತಾನೇ ನಡೆಸಿದ ಸಮೀಕ್ಷೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಸದ ಬುಟ್ಟಿಗೆ ಹಾಕಿ, ಮತ್ತೆ ಹೊಸದಾಗಿ ಸಮೀಕ್ಷೆ ಕಾರ್ಯಕ್ಕೆ ಮುಂದಾಗಬೇಕಾಯಿತು. ಕಳೆದ ಮೇ ತಿಂಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿದ್ದರು. ಆದರೆ ಅದನ್ನು ಜಾರಿಗೊಳಿಸುವ ಬಗ್ಗೆ ಈವರೆಗೆ ಸರಕಾರ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.
ವರದಿ ಜಾರಿಗೊಳಿಸುವಲ್ಲಿ ಸರಕಾರದ ಮುಂದಿರುವ ಪ್ರಮುಖ ತಡೆಯೊಂದು ನಿವಾರಣೆಯಾದಂತಾಗಿದೆ. ವರದಿಯ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದ ವಿರೋಧ ಪಕ್ಷಗಳೇ ವರದಿ ಜಾರಿಗೊಳಿಸಲು ಒತ್ತಾಯಿಸುತ್ತಿರುವುದರಿಂದ ಸರಕಾರ ಹಿಂಜರಿಯುವ ಅಗತ್ಯವಿಲ್ಲ. ಆದರೆ, ಬಿಜೆಪಿ ಈ ವರದಿಯನ್ನು ಜಾರಿಗೊಳಿಸಲು ಯಾಕೆ ಒತ್ತಾಯಿಸುತ್ತಿದೆ ಎನ್ನುವುದು ಗೊತ್ತಿಲ್ಲದೇ ಇರುವುದೇನೂ ಅಲ್ಲ. ಸರಕಾರದೊಳಗೇ ಈ ವರದಿಯ ಬಗ್ಗೆ ಬಿನ್ನಾಭಿಪ್ರಾಯಗಳಿರುವುದು, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಮುಖಂಡರು ಈ ವರದಿಯ ಬಗ್ಗೆ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿರುವುದು ಭವಿಷ್ಯದಲ್ಲಿ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಬಹುದು. ವಿವಿಧ ಜಾತಿ, ಸಮುದಾಯಗಳು ಈ ವರದಿಯನ್ನು ಮುಂದಿಟ್ಟುಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದೆ ಎನ್ನುವ ನಿರೀಕ್ಷೆಯಿಂದ ಬಿಜೆಪಿ ಈ ವರದಿಯನ್ನು ಮಂಡಿಸಿ ಚರ್ಚಿಸುವುದಕ್ಕೆ ಒತ್ತಾಯಿಸುತ್ತಿದೆ. ಬೇರೆ ಬೇರೆ ಜಾತಿ ಸಮುದಾಯಗಳನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವುದು ಕೂಡ ಬಿಜೆಪಿ ಮುಖಂಡರ ಉದ್ದೇಶವಾಗಿದೆ. ಜಾತಿ ಗಣತಿಯನ್ನು ಮೊದಲು ಘೋಷಿಸಿದ್ದು ಕರ್ನಾಟಕ ರಾಜ್ಯ. ಕರ್ನಾಟಕದ ಬಳಿಕ ಜಾತಿ ಗಣತಿ ಮಾಡಿದ ಹಲವು ರಾಜ್ಯಗಳು ಈಗಾಗಲೇ ವರದಿಗಳನ್ನು ಮಂಡಿಸಿವೆ. ಆದರೆ ರಾಜ್ಯದಲ್ಲಿ ಮಾತ್ರ ಈ ವರದಿ ಮಂಡನೆಗೆ ಸ್ವತಃ ಕಾಂಗ್ರೆಸ್ ಸರಕಾರವೇ ಮೀನಾ ಮೇಷ ಎಣಿಸುತ್ತಿದೆ.
ಮುಖ್ಯವಾಗಿ ಕಾಂಗ್ರೆಸ್ ಸರಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿ ಮಂಡನೆಗೆ ಪಕ್ಷದೊಳಗೆ ಸಹಮತ ಮೂಡಿಸುವಲ್ಲಿ ಯಶಸ್ವಿಯಾಗಬೇಕು. ಕಾಂಗ್ರೆಸ್‌ನೊಳಗಿರುವ ಕೆಲವು ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಈ ವರದಿಯ ಕುರಿತಂತೆ ಅಸಮಾಧಾನವನ್ನು ಹೊಂದಿದ್ದಾರೆ ಅಥವಾ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ವರದಿಯ ಬಗ್ಗೆ ಹರಡಿರುವ ವದಂತಿಗಳನ್ನು ನಂಬಿ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್‌ನ ನಾಯಕರೇ ಈ ಹಿಂದೆ ಬಿಜೆಪಿ ನಾಯಕರ ಜೊತೆ ಸೇರಿ ಸಮೀಕ್ಷೆಯನ್ನು ವಿರೋಧಿಸಿದ್ದರು. ಈಗಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕೂಡ ಒಕ್ಕಲಿಗ ಮುಖಂಡರ ಒತ್ತಡಕ್ಕೆ ಮಣಿದು ವರದಿಯ ಬಗ್ಗೆ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ನೂತನ ಸಮೀಕ್ಷೆಯ ಸಂದರ್ಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು ಸಮೀಕ್ಷೆಯ ಬಗ್ಗೆ ಹತ್ತು ಹಲವು ಆಕ್ಷೇಪಗಳು ಈಗಾಗಲೇ ಬಂದಿವೆ. ಆದರೆ ಸರಕಾರ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿದ ಮೇಲೆ ಅದನ್ನು ಮಂಡಿಸಿ, ಅದನ್ನು ಚರ್ಚಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಸಮೀಕ್ಷೆ ವರದಿಯ ಬಗ್ಗೆ ತಮ್ಮ ಮೌನವನ್ನು ಮುರಿಯಬೇಕು. ವಿರೋಧ ಪಕ್ಷಗಳು ಹಾಕುತ್ತಿರುವ ಸವಾಲನ್ನು ಸ್ವೀಕರಿಸಿ, ಸಮೀಕ್ಷೆಯನ್ನು ಮಂಡಿಸುವ ಧೈರ್ಯವನ್ನು ಪ್ರದರ್ಶಿಸಬೇಕು.
ಎಸ್‌ಐಆರ್‌ನಲ್ಲಿ ಹೆಸರಿಲ್ಲದೇ ಇದ್ದವರಿಗೆ ಸರಕಾರದ ಕಲ್ಯಾಣ ಯೋಜನೆಗಳು, ಗ್ಯಾರಂಟಿ ಯೋಜನೆಗಳನ್ನು ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಬೆದರಿಕೆಯೊಡ್ಡಿದ್ದಾರೆ. ಎಸ್‌ಐಆರ್‌ಗೂ ಸರಕಾರದ ಕಲ್ಯಾಣ ಯೋಜನೆಗಳಿಗೂ ಏನು ಸಂಬಂಧ? ಈಗಾಗಲೇ ತಾಂತ್ರಿಕ ಕಾರಣಗಳಿಂದ ಲಕ್ಷಾಂತರ ಮಂದಿ ಅರ್ಹ ಮತದಾರರು ಎಸ್‌ಐಆರ್‌ನಿಂದ ಹೊರ ಬಿದ್ದಿದ್ದಾರೆ. ಇದರ ಅರಿವಿದ್ದೂ ಅವರು ಕಲ್ಯಾಣ ಯೋಜನೆಗಳ ಅನುಷ್ಠಾನಗಳಿಗೆ ಎಸ್‌ಐಆರ್‌ನಲ್ಲಿ ಹೆಸರಿರುವುದು ಕಡ್ಡಾಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಿಜಕ್ಕೂ ಸರಕಾರದ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಬೇಕಾದರೆ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆಯ ವರದಿ ಬಹಿರಂಗವಾಗಬೇಕು. ಸರಕಾರದ ಬಳಿ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶವೇ ಇಲ್ಲದಿದ್ದರೆ ಬಜೆಟ್ ಕಾರ್ಯಕ್ರಮಗಳನ್ನು ಹೇಗೆ ಮಾಡಲು ಸಾಧ್ಯ? ಸೌಲಭ್ಯಗಳನ್ನು ಹೇಗೆ ಹಂಚಲು ಸಾಧ್ಯ? ಈ ಪ್ರಶ್ನೆಯನ್ನು ಸ್ವತಃ ವಿರೋಧ ಪಕ್ಷಗಳೇ ಕೇಳುತ್ತಿವೆ. ಯಾವ್ಯಾವ ಸಮುದಾಯಗಳು ಎಷ್ಟು ಜನಸಂಖ್ಯೆಯನ್ನು ಹೊಂದಿವೆ, ಅವುಗಳ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳು ಹೇಗಿವೆ ಎನ್ನುವ ಮಾಹಿತಿಯ ಆಧಾರದಲ್ಲಿ ಸರಕಾರದ ಸೌಲಭ್ಯಗಳನ್ನು ನ್ಯಾಯಯುತವಾಗಿ ಹಂಚುವ ಕೆಲಸವಾಗಬೇಕೇ ಹೊರತು, ಎಸ್‌ಐಆರ್‌ನ್ನು ಮಾನದಂಡವಾಗಿಟ್ಟುಕೊಂಡು ಅಲ್ಲ. ಯಾಕೆಂದರೆ, ಈ ದೇಶದಲ್ಲಿ ಮತದಾರರ ಪಟ್ಟಿಯಿಂದ ಹೊರ ಬಿದ್ದ ಲಕ್ಷಾಂತರ ಅರ್ಹ ಮತದಾರರು ಸರಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಿರುವ ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿಯು ಈ ವರ್ಗದ ಜನರ ಕುರಿತಂತೆ ಏನು ಹೇಳುತ್ತದೆ ಎನ್ನುವುದನ್ನು ಕೇಳುವುದಕ್ಕೆ ನಾಡು ಕಾತರದಿಂದ ಕಾಯುತ್ತಿದೆ. ಆದುದರಿಂದ ಸಮೀಕ್ಷೆಯ ವರದಿಯನ್ನು ಚರ್ಚಿಸುವುದಕ್ಕೆ ಸರಕಾರ ಇನ್ನಾದರೂ ಧೈರ್ಯ ತೋರಬೇಕು.