×
Ad

ವಾಂಗ್ಚುಕ್ ಉಪವಾಸ ಸತ್ಯಾಗ್ರಹ: ಬಾಲಿವುಡ್ ದಿಗ್ಗಜರೇಕೆ ಮೌನ?

Update: 2026-07-16 07:38 IST

 Photo Credit : X / @Wangchuk66

ನೀಟ್ ಅಕ್ರಮಗಳ ವಿರುದ್ಧ ಸೋನಂ ವಾಂಗ್ಚುಕ್ ಸತ್ಯಾಗ್ರಹ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ದೇಶ ವಿದೇಶಗಳ ಗಣ್ಯರು ಅವರ ಆರೋಗ್ಯದ ಬಗ್ಗೆ ಆತಂಕ, ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣ, ಪರಿಸರ, ವಿಜ್ಞಾನ, ಸ್ಥಳೀಯ ಉದ್ಯಮ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನ್ನು ನೀಡಿದ ವಾಂಗ್ಚುಕ್ ಲಡಾಖ್ ಜನರ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದವರು. ಲಡಾಖ್‌ನಲ್ಲಿ ಚೀನಾ ನಡೆಸುತ್ತಿರುವ ಹಸ್ತಕ್ಷೇಪಗಳನ್ನು ಖಂಡಿಸಿ, ಅವುಗಳ ವಿರುದ್ಧ ಜನರನ್ನು ಸಂಘಟಿಸಿದವರು. ತಮ್ಮ ಸಾಧನೆಗಳಿಗಾಗಿ ಅಂತರ್‌ರಾಷ್ಟ್ರೀಯ ಗೌರವಗಳನ್ನು ತನ್ನದಾಗಿಸಿಕೊಂಡಿರುವ ವಾಂಗ್ಚುಕ್ ಈ ದೇಶದ ಆಸ್ತಿ. ಇಂದು ಅವರು ನೀಟ್ ಅಕ್ರಮಗಳ ವಿರುದ್ಧದ ಹೋರಾಟದ ನೇತೃತ್ವವನ್ನು ವಹಿಸಿದ್ದಾರೆ. ತನ್ನನ್ನು ತಾನು ‘ಚೌಕಿದಾರ್’ ಎಂದು ಘೋಷಿಸಿಕೊಂಡಿರುವ ಪ್ರಧಾನಿ ಮೋದಿಯವರು ನೀಟ್ ಪರೀಕ್ಷೆಯ ಕಾವಲು ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದು, ದೇಶ ಚೌಕಿದಾರನ ಕರ್ತವ್ಯಪರತೆಯ ಬಗ್ಗೆ ಸಂಶಯವನ್ನು ವ್ಯಕ್ತಪಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯನ್ನು ಪಡೆದು, ನೀಟ್ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವುದು ಪ್ರಧಾನಮಂತ್ರಿಯ ಕರ್ತವ್ಯವಾಗಿತ್ತು. ಆ ಮೂಲಕ ಚೌಕಿದಾರ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾಗಿತ್ತು. ಆದರೆ ಪ್ರಧಾನ ಮಂತ್ರಿ ನೀಟ್ ಅಕ್ರಮಗಳ ಬಗ್ಗೆ ಈವರೆಗೆ ಒಂದು ಹೇಳಿಕೆಯನ್ನೂ ನೀಡಿಲ್ಲ. ಈ ದೇಶದ ಯುವಜನತೆಗೆ ಮಾಡಿದ ಮಹಾ ವಂಚನೆಯಾಗಿದೆ ನೀಟ್ ಅಕ್ರಮ. ಇಂತಹ ಅಕ್ರಮಗಳ ವಿರುದ್ಧ ವಾಂಗ್ಚುಕ್‌ರಂತಹ ಹಿರಿಯ ನಾಯಕರು ಅಹಿಂಸಾ ಸತ್ಯಾಗ್ರಹ ನಡೆಸುತ್ತಿರುವಾಗ, ಕನಿಷ್ಠ ಅದಕ್ಕಾದರೂ ಪ್ರಧಾನಿ ಸ್ಪಂದಿಸಬೇಕಾಗಿತ್ತು. ಆದರೆ ಕೇಂದ್ರ ಸರಕಾರ ಪರೋಕ್ಷವಾಗಿ ವಾಂಗ್ಚುಕ್ ಅವರ ಆರೋಗ್ಯ ಸಂಪೂರ್ಣ ಹದಗೆಡುವುದನ್ನೇ ಎದುರು ನೋಡುತ್ತಿದೆ. ಹೇಗೆ, ಸ್ಟ್ಯಾನ್ ಸ್ವಾಮಿ ಜೈಲಿನಲ್ಲಿ ಸೂಕ್ತ ವೈದ್ಯಕೀಯ ನೆರವು ಸಿಗದೆ ಜೀವ ತೆತ್ತರೋ ಅದೇ ರೀತಿಯಲ್ಲಿ ಹೋರಾಟಗಾರ ವಾಂಗ್ಚುಕ್ ಅವರನ್ನು ಬಲಿ ಹಾಕಲು ಕೇಂದ್ರ ಸರಕಾರ ಹುನ್ನಾರ ನಡೆಸುತ್ತಿದೆ ಎಂದು ಜನತೆ ಆರೋಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಬೇರೆ ಬೇರೆ ಕ್ಷೇತ್ರಗಳ ದಿಗ್ಗಜರು ವಾಂಗ್ಚುಕ್‌ಗೆ ಬೆಂಬಲ ನೀಡಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ.

ವಾಂಗ್ಚುಕ್ ಅವರ ಬದುಕನ್ನು ಆಧರಿಸಿ ಮಾಡಿದ ‘ತ್ರೀ ಈಡಿಯಟ್ಸ್’ ಚಿತ್ರವು ಬಾಲಿವುಡ್‌ನಲ್ಲಿ ಭಾರೀ ಸುದ್ದಿ ಮಾಡಿತ್ತು. ಈ ಸಿನೆಮಾ ದೇಶದ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿತ್ತು. ಆಮಿರ್ ಖಾನ್ ಈ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಹೊಸ ವರ್ಚಸ್ಸನ್ನು ತಮ್ಮದಾಗಿಸಿಕೊಂಡರು. ಜನರು ಮುಗಿ ಬಿದ್ದು ಈ ಸಿನೆಮಾವನ್ನು ನೋಡಿ ಆನಂದಿಸಿದ್ದರು. ಆದರೆ ಸಿನೆಮಾದ ನಿಜವಾದ ನಾಯಕ ಇಂದು ವಾಸ್ತವದಲ್ಲಿ ಜನರ ಸಮಸ್ಯೆಗಳಿಗಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಾ ತಮ್ಮ ಪ್ರಾಣವನ್ನು ಪಣಕ್ಕೆ ಒಡ್ಡಿದ್ದಾರೆ. ‘ತ್ರೀ ಈಡಿಯಟ್ಸ್’ನ್ನು ಮುಗಿ ಬಿದ್ದು ನೋಡಿದ ಜನರಿಗೆ ಅದರ ನಿಜ ನಾಯಕ ವಾಸ್ತವ ಬದುಕಿನಲ್ಲಿ ದೇಶದ ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ ಅವರ ಜೊತೆಗೆ ಕೈ ಜೋಡಿಸಬೇಕು ಅನ್ನಿಸದೇ ಇರುವುದೇ ವಿಪರ್ಯಾಸವಾಗಿದೆ. ವಾಂಗ್ಚುಕ್ ಬದುಕನ್ನು ಆಧರಿಸಿ ಸಿನೆಮಾ ಮಾಡಿದ ನಿರ್ಮಾಪಕ, ನಿರ್ದೇಶಕರಾಗಲಿ, ನಟ ಆಮಿರ್ ಖಾನ್ ಆಗಲಿ ಈವರೆಗೆ ವಾಂಗ್ಚುಕ್ ಅವರನ್ನು ಭೇಟಿ ಮಾಡುವ ಸೌಜನ್ಯವನ್ನು ತೋರಿಸಿಲ್ಲ. ಈ ಸಿನೆಮಾದಲ್ಲಿ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿರುವ ನಟ ಓಮಿ ವೈದ್ಯ ಎಂಬ ತರುಣ ಮಾತ್ರ ವಾಂಗ್ಚುಕ್ ಪರವಾಗಿ ಮಾತನಾಡಿದ್ದಾರೆ. ವಾಂಗ್ಚುಕ್ ಅವರಿಗೆ ಬೆಂಬಲವನ್ನು ಸೂಚಿಸಿರುವ ಓಮಿ ವೈದ್ಯ ‘‘ವಿನಮ್ರ ಮತ್ತು ಪ್ರಭಾವಶಾಲಿ ವ್ಯಕ್ತಿಯಾಗಿರುವ ವಾಂಗ್ಚುಕ್ ಅವರು ಸಾಯುವುದನ್ನು ನಾನು ಬಯಸುವುದಿಲ್ಲ. ದಯವಿಟ್ಟು ಅವರ ಆರೋಗ್ಯದ ಬಗ್ಗೆ ಗಮನ ಹರಿಸಿ’’ ಎಂದು ಕೇಳಿಕೊಂಡಿದ್ದಾರೆ. ಹಾಗೆಯೇ ತ್ರೀ ಈಡಿಯಟ್ಸ್ ಸಿನೆಮಾವನ್ನು ಅವರು ನೆನೆದುಕೊಂಡಿದ್ದಾರೆ. ತ್ರೀ ಈಡಿಯಟ್ಸ್ ಚಿತ್ರದಲ್ಲಿ ಸಣ್ಣ ಪ್ರಮಾಣದ ವಿಲನ್ ಆಗಿ ಪಾತ್ರ ನಿರ್ವಹಿಸಿದ್ದ ಓಮಿ ವೈದ್ಯ ತೋರಿಸಿದ ಧೈರ್ಯವನ್ನು, ವಾಂಗ್ಚುಕ್ ಪಾತ್ರವನ್ನು ನಿರ್ವಹಿಸಿದ್ದ ಆಮಿರ್ ಖಾನ್ ಇನ್ನೂ ಪ್ರದರ್ಶಿಸಿಲ್ಲ. ವಾಂಗ್ಚುಕ್ ಹೆಸರಿನಲ್ಲಿ ಕೋಟಿ ಕೋಟಿ ಹಣ ಬಾಚಿಕೊಂಡಿರುವ ನಿರ್ಮಾಪಕ, ನಿರ್ದೇಶಕರೂ ಮೌನವಾಗಿದ್ದಾರೆ. ವಾಂಗ್ಚುಕ್ ಪರವಾಗಿ ಮಾತನಾಡಿದರೆ ಎಲ್ಲಿ ಈ.ಡಿ. ದಾಳಿಯಾಗಿ ಬಿಡಬಹುದೋ ಎನ್ನುವ ಭಯ ಹೊರತು ಪಡಿಸಿದರೆ ಇದರ ಹಿಂದೆ ಇನ್ನೇನೂ ಇಲ್ಲ.

ವಿಪರ್ಯಾಸವೆಂದರೆ ನೀಟ್ ಅಕ್ರಮಗಳ ವಿರುದ್ಧ ದೇಶಾದ್ಯಂತ ಹೋರಾಟವನ್ನು ಸಂಘಟಿಸುತ್ತಿರುವ ರಾಹುಲ್ ಗಾಂಧಿಯವರೂ ಔಪಚಾರಿಕವಾಗಿಯೂ ವಾಂಗ್ಚುಕ್ ಅವರನ್ನು ಭೇಟಿ ಮಾಡಿಲ್ಲ. ಸಿಜೆಪಿ ಪ್ರತಿಭಟನೆಯನ್ನು ರಾಹುಲ್ ಗಾಂಧಿಯವರು ‘ನಾಲಗೆ ಸುಟ್ಟ ತೆನಾಲಿ ರಾಮನ ಬೆಕ್ಕಿನಂತೆ’ ನೋಡುತ್ತಿದ್ದಾರೆ. ಈ ಹಿಂದೆ ಅಣ್ಣಾ ಹಝಾರೆ ಅವರು ಕೇಂದ್ರ ಸರಕಾರದ ವಿರುದ್ಧ ನಡೆಸಿದ ಪ್ರತಿಭಟನೆ ಕೊನೆಗೆ ಆಮ್ ಆದ್ಮಿ ಪಕ್ಷ ಉಗಮಕ್ಕೆ ಕಾರಣವಾಗಿ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನೇ ಮೂಲೆಗುಂಪು ಮಾಡಿತು. ಇದೀಗ ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟನೆ ಸಂಘಟಿಸಿರುವುದು ಕಾಕ್ರೋಚ್ ಜನತಾ ಪಾರ್ಟಿಯಾಗಿರುವುದರಿಂದ, ಪ್ರತಿಭಟನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಅದು ಸ್ವತಂತ್ರ ಪಕ್ಷವಾಗಿ ಕಾಂಗ್ರೆಸ್‌ಗೆ ತಲೆನೋವಾಗಬಹುದು ಎನ್ನುವ ಭಯ ಅವರನ್ನು ಕಾಡುವಂತಿದೆ. ಇತರ ಪ್ರಾದೇಶಿಕ ಪಕ್ಷಗಳೂ ಇದೇ ಭಯದಿಂದ ವಾಂಗ್ಚುಕ್ ಸತ್ಯಾಗ್ರಹದಲ್ಲಿ ಕೈ ಜೋಡಿಸುತ್ತಿಲ್ಲ. ನೀಟ್ ಅಕ್ರಮದ ವಿರುದ್ಧ ಸಂಘಟಿತವಾಗಿ ಹೋರಾಟ ಮಾಡಬೇಕಾಗಿರುವ, ವಾಂಗ್ಚುಕ್ ನೇತೃತ್ವವನ್ನು ಪರಿಣಾಮಕಾರಿಯಾಗಿ ಬಳಸಬೇಕಾಗಿರುವ ವಿರೋಧ ಪಕ್ಷಗಳು ವಾಂಗ್ಚುಕ್ ಅವರನ್ನು ಒಂಟಿಯಾಗಿಸಿರುವುದು ವಿಷಾದನೀಯವಾಗಿದೆ.

ಇದೇ ಸಂದರ್ಭದಲ್ಲಿ ವಾಂಗ್ಚುಕ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಹೈಕೋರ್ಟ್‌ನಲ್ಲಿ ಒಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಸ್ವೀಕರಿಸಿರುವ ಹೈಕೋರ್ಟ್, ಕೇಂದ್ರ ಹಾಗೂ ದಿಲ್ಲಿ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈಗಾಗಲೇ ವಾಂಗ್ಚುಕ್ ಆರೋಗ್ಯ ತೀರಾ ಹದಗೆಟ್ಟಿದ್ದು, ಅವರ ಪ್ರಾಣಕ್ಕೇನಾದರೂ ಅಪಾಯವಾದರೆ ಅದು ಭಾರತದ ವರ್ಚಸ್ಸಿಗೆ ಭಾರೀ ಕಳಂಕವನ್ನು ತರಲಿದೆ. ಭಾರತದ ಅಹಿಂಸಾ ಸತ್ಯಾಗ್ರಹದ ಪರಂಪರೆಗೆ ಅದು ಭಾರೀ ಧಕ್ಕೆಯನ್ನು ತರಲಿದ್ದು, ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಜನರು ನಿಧಾನಕ್ಕೆ ವಿಶ್ವಾಸವನ್ನು ಕಳೆದುಕೊಳ್ಳುವ ಅಪಾಯವಿದೆ. ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಈ ದೇಶದ ಜನರ ಆಕ್ರೋಶ, ಸಿಟ್ಟನ್ನು ಉಗ್ರವಾದದ ತೆಕ್ಕೆಗೆ ಒಪ್ಪಿಸುವ ಕೆಲಸಕ್ಕೆ ಸರಕಾರವೇ ಮುಂದಾದಂತೆ ಆದೀತು. ಯಾವ ಕಾರಣಕ್ಕೂ ಸರಕಾರ ಇದಕ್ಕೆ ಆಸ್ಪದವನ್ನು ಕೊಡಬಾರದು. ತಕ್ಷಣ ಪ್ರಧಾನಿ ಮಧ್ಯಪ್ರವೇಶಿಸಿ ವಾಂಗ್ಚುಕ್ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವಂತೆ ಒತ್ತಾಯಿಸಬೇಕು. ನೀಟ್ ಅಕ್ರಮಗಳ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು. ಸ್ವತಂತ್ರ ತನಿಖಾ ಸಂಸ್ಥೆ ತನಿಖೆ ನಡೆಸಿ ನೀಟ್ ಅಕ್ರಮಗಳ ಹಿಂದಿರುವ ತಲೆಗಳನ್ನು ಗುರುತಿಸಿ, ಶಿಕ್ಷಣ ವ್ಯವಸ್ಥೆಯನ್ನು ಭ್ರಷ್ಟರಿಂದ ರಕ್ಷಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News