×
Ad

ನೊಯ್ಡಾ ದುರಂತ: ಯಾರು ಹೊಣೆ?

Update: 2026-01-24 08:57 IST

PC: x.com/IndiaLiveIN

ಈ ದೇಶದಲ್ಲಿ ರಸ್ತೆಗಳಿರುವುದೇ ಅಪಘಾತ ಸಂಭವಿಸುವುದಕ್ಕಾಗಿ ಎಂದು ನಾವು ನಂಬಿಕೊಂಡು ಬಂದಿದ್ದೇವೆ. ಸರಕಾರದ ಅಂಕಿಅಂಶಗಳ ಪ್ರಕಾರ ಈ ದೇಶದಲ್ಲಿ ಪ್ರತಿದಿನ 485 ಜನರು ರಸ್ತೆ ಅಪಘಾತದಿಂದ ಮೃತಪಡುತ್ತಾರೆ. ದಿನಾ ಸಾಯುವವರಿಗೆ ಅಳುವವರು ಯಾರು? ಎಂಬಂತೆ, ಇದರ ಹಿಂದಿರುವ ವ್ಯವಸ್ಥೆಯ ವೈಫಲ್ಯಗಳು ಚರ್ಚೆಯಾಗುವುದು ಅಪರೂಪ. ಹೀಗಿರುವ ಹೊತ್ತಿನಲ್ಲೇ ನೊಯ್ಡಾದಲ್ಲಿ ನಡೆದಿರುವ ಕಾರು ಅವಘಡವೊಂದು ದೇಶಾದ್ಯಂತ ಭಾರೀ ಚರ್ಚೆಗೊಳಗಾಗುತ್ತಿದೆ. ಘಟನೆ ನಡೆದಿರುವುದು ಉತ್ತರ ಪ್ರದೇಶದ ನೊಯ್ಡಾದಲ್ಲಿ. ಸಾಫ್ಟ್‌ವೇರ್ ಇಂಜಿನಿಯರ್ ಯುವರಾಜ್ ಮೆಹ್ತಾ ಎಂಬವರು ಗುರುಗ್ರಾಮ್‌ನಲ್ಲಿರುವ ತನ್ನ ಕಚೇರಿಯಿಂದ ನೊಯ್ಡಾದಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ನೀರು ತುಂಬಿದ ಹೊಂಡಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಯಾರಾದರೂ ನೆರವಿಗೆ ಬಂದಿದ್ದರೆ ಆ ಯುವಕ ಬದುಕುಳಿಯುವ ಸಾಧ್ಯತೆಗಳಿತ್ತು. ಕಾರು ನೀರಿನ ಆಳಕ್ಕಿಳಿಯುತ್ತಿದ್ದಂತೆಯೇ ಯುವಕ ಕಾರಿನ ಮೇಲೆ ಏರಿ ನಿಂತು ಸಹಾಯಕ್ಕಾಗಿ ಕೂಗಿದ್ದಾರೆೆ. ಮಧ್ಯೆ ತನ್ನ ತಂದೆಗೆ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆೆ. ಮೆಹ್ತಾ ಅವರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಹಾಯಕ್ಕಾಗಿ ಕೂಗುತ್ತಲೇ ಇದ್ದರು. ಈ ನಡುವೆ ಕಾರು ನಿಧಾನವಾಗಿ ನೀರಿನಲ್ಲಿ ಮುಳುಗಿತು.ಯುವಕನೂ ನೀರು ಪಾಲಾದ.

ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಯುವಕ ಸಹಾಯಕ್ಕಾಗಿ ಮೊರೆಯಿಟ್ಟಿದ್ದ. ಇಷ್ಟು ಸಮಯಾವಕಾಶವಿದ್ದರೂ ಆತನನ್ನು ರಕ್ಷಿಸಲು ನಮ್ಮ ವ್ಯವಸ್ಥೆ ಯಾಕೆ ವಿಫಲವಾಯಿತು ಎನ್ನುವುದು ಇದೀಗ ಚರ್ಚೆಯ ವಿಷಯವಾಗಿದೆ. ಕಾರು ಮುಳುಗುವವರೆಗೆ ಅಂದರೆ ಸುಮಾರು 90 ನಿಮಿಷಗಳ ಕಾಲ ಮೆಹ್ತಾ ಅವರು ಕಾರಿನ ಮೇಲೆಯೇ ಇದ್ದರು. ಸಹಾಯ ಯಾಚಿಸುತ್ತಿದ್ದರು. ವಿಪರ್ಯಾಸವೆಂದರೆ ಅದಾಗಲೇ ಅಲ್ಲಿ ಜನರು ನೆರೆದಿದ್ದರು. ಆದರೆ ಯಾರೂ ನೆರವಿಗೆ ಧಾವಿಸಲಿಲ್ಲ. ಹಲವರು ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಸುಮಾರು 2:30ರ ಹೊತ್ತಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿದರಾದರೂ ತಕ್ಷಣ ಕಾರ್ಯಾಚರಣೆ ನಡೆಸಲು ಹಿಂಜರಿದರು. ಆರುಗಂಟೆಗಳ ಬಳಿಕ ಯುವಕನ ಮೃತದೇಹವನ್ನು ಮೇಲೆತ್ತುವಲ್ಲಿ ತಂಡವು ಯಶಸ್ವಿಯಾಯಿತು.

ಅಪಘಾತಕ್ಕೆ ದಟ್ಟ ಮಂಜು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ತಡೆ ಗೋಡೆಗೆ ಢಿಕ್ಕಿ ಹೊಡೆದು ಬಳಿಕ ನೀರಿನ ಹೊಂಡಕ್ಕೆ ಬಿದ್ದಿದೆ. ಇದನ್ನು ಅಪಘಾತ ಎಂದು ಕರೆಯಬಹುದು. ಆದರೆ ಆ ಬಳಿಕ ನಡೆದಿರುವುದು ಅಪಘಾತದ ಭಾಗವಾಗಿರಲಿಲ್ಲ. ಆತ ಮೃತಪಟ್ಟಿರುವುದು ಅವಘಡದಿಂದಲ್ಲ. ಬದಲಿಗೆ ವ್ಯವಸ್ಥೆಯ ಬೇಜವಾಬ್ದಾರಿ ಯಿಂದ. ಯಾವುದೋ ದಟ್ಟಾರಣ್ಯದ ಮಧ್ಯೆ ನಡೆದ ದುರಂತ ಇದಾಗಿರಲಿಲ್ಲ. ರಕ್ಷಣಾ ಕಾರ್ಯಾಚರಣೆಯು ತರಾತುರಿಯಲ್ಲಿ ನಡೆದಿದ್ದರೆ ಯುವಕನ ಪ್ರಾಣವನ್ನು ಉಳಿಸುವುದಕ್ಕೆ ಅವಕಾಶವಿತ್ತು. ಅವಘಡ ನಡೆದ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಯ ಕಾಲ ಮೀನಾಮೇಷ ಎಣಿಸುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಿಪರ್ಯಾಸವೆಂದರೆ, ಸೇರಿದ ಜನರು ಕೂಡ ಸಂತ್ರಸ್ತನ ನೆರವಿಗೆ ಮುಂದಾಗುವ ಬದಲು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ನೆರೆದ ಮಂದಿಯಲ್ಲಿ ಒಂದಿಷ್ಟು ಮಾನವೀಯತೆ ಜೀವಂತವಾಗಿದ್ದಿದ್ದರೆ ಯುವಕನೂ ಇಂದು ಜೀವಂತವಾಗಿರುತ್ತಿದ್ದ.

ದುರಂತ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಮೆಹ್ತಾರ ಕಾರು ಉರುಳಿ ಬಿದ್ದ ಆಳವಾದ ಹೊಂಡದ ಸ್ಥಳದ ಮಾಲಕತ್ವ ಹೊಂದಿದ್ದ ಎರಡು ಕಟ್ಟಡ ಸಂಸ್ಥೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತನಿಖೆಗೆ ಮೂವರು ಸದಸ್ಯರನ್ನು ಒಳಗೊಂಡ ಸಿಟ್ ತಂಡವನ್ನು ನೇಮಕ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಆದರೆ, ಸಂತ್ರಸ್ತನನ್ನು ಬದುಕಿಸಲು ಸಮಯಾವಕಾಶವಿದ್ದರೂ ಅದರಲ್ಲಿ ವಿಫಲರಾಗಿರುವ ರಕ್ಷಣಾ ದಳಗಳ ವಿರುದ್ಧ ಇನ್ನೂ ದೂರು ದಾಖಲಾಗಿಲ್ಲ. ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಕಾರು ಇನ್ನೂ ಪೂರ್ಣವಾಗಿ ಹೊಂಡದಲ್ಲಿ ಮುಳುಗಿರಲಿಲ್ಲ. ಆದರೆ ಹೇಗೆ ರಕ್ಷಿಸುವುದು ಎನ್ನುವ ಗೊಂದಲದಲ್ಲೇ ಸಿಬ್ಬಂದಿ ಕಾಲ ಕಳೆದಿದ್ದರು. ಈ ಹೊತ್ತಿಗೆ ಅಲ್ಲಿಗೆ ಬಂದಿದ್ದ ಒಬ್ಬ ಗಿಗ್ ಏಜೆಂಟ್ ಸೊಂಟಕ್ಕೆ ಹಗ್ಗ ಕಟ್ಟಿ ನೀರಿಗಿಳಿಯಬೇಕಾಯಿತು. ‘ನೀರು ತುಂಬಾತಣ್ಣಗಿದೆ ಮಾತ್ರವಲ್ಲ, ಹೊಂಡದೊಳಗೆ ಕಟ್ಟಡ ನಿರ್ಮಾಣಕ್ಕೆ ಬಳಸಿದ ಕಬ್ಬಿಣದ ರಾಡ್‌ಗಳಿವೆ’ ಎಂಬ ಕಾರಣದಿಂದ ಸಿಬ್ಬಂದಿ ನೀರಿಗಿಳಿಯಲು ಹಿಂಜರಿದಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆದಿದ್ದರೆ ಸಂತ್ರಸ್ತ ಬದುಕಿ ಉಳಿಯುತ್ತಿದ್ದ ಎನ್ನುವುದು ಸ್ಥಳೀಯರ ಅಭಿಪ್ರಾಯ. ರಕ್ಷಣಾ ಕಾರ್ಯಕ್ಕೆ ಬೇಕಾಗಿರುವ ಯಾವುದೇ ಅತ್ಯಾಧುನಿಕ ಉಪಕರಣಗಳು ಸಿಬ್ಬಂದಿಯ ಬಳಿ ಇಲ್ಲದೇ ಇರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಈಜು ಬರದೇ ಇರುವುದೂ ಅವರು ನೀರಿಗಿಳಿಯದೇ ಇರಲು ಇನ್ನೊಂದು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂತ್ರಸ್ತ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವುದರಿಂದ ಈ ದುರಂತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಸಾಮಾನ್ಯ ಕೂಲಿಕಾರ್ಮಿಕನಾಗಿದ್ದರೆ ಆತನ ಕೂಗು ಆ ಹೊಂಡದೊಳಗೇ ಹೂತು ಹೋಗಿ ಬಿಡುತ್ತಿತ್ತು. ದುರಂತ ಸಂಭವಿಸಿದ ಬಳಿಕವಾದರೂ ಇಲ್ಲಿ ಹೊಂಡದ ಮಾಲಕರ ವಿರುದ್ಧ ದೂರು ದಾಖಲಾಗಿ ಅವರ ಬಂಧನವಾಯಿತು. ಅದೆಷ್ಟೋ ಅಕ್ರಮ ಕಲ್ಲು ಕೋರೆಯ ಗಣಿ ಹೊಂಡಗಳು ಮಳೆಗಾಲದಲ್ಲಿ ನೀರು ತುಂಬಿ ಪ್ರತಿ ವರ್ಷ ನೂರಾರು ಸಾವುಗಳಿಗೆ, ಅವಘಡಗಳಿಗೆ ಕಾರಣವಾಗುತ್ತವೆೆ. ಆದರೆ ಯಾರ ವಿರುದ್ಧವೂ ಪ್ರಕರಣ ದಾಖಲಾಗುವುದಿಲ್ಲ. ಆ ಹೊಂಡಗಳು ಮುಚ್ಚಲ್ಪಡುವುದೂ ಇಲ್ಲ. ಯಾಕೆಂದರೆ ಇಲ್ಲಿ ಅವಘಡಗಳು ಸುದ್ದಿಯಾಗಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದರೆ ಸಂತ್ರಸ್ತನ ಹಿನ್ನೆಲೆ, ಜಾತಿ, ವರ್ಗವೂ ಮುಖ್ಯವಾಗುತ್ತದೆ. ಕನಿಷ್ಠ ನೊಯ್ಡಾದ ದುರಂತ ಜನರ ಗಮನವನ್ನಾದರೂ ಸೆಳೆಯಿತಲ್ಲ, ದುರಂತ ಸಂಭವಿಸಿದ ಬಳಿಕವಾದರೂ ಅಪಾಯಕಾರಿ ಹೊಂಡವನ್ನು ತೆರೆದಿಟ್ಟವರ ಬಂಧನವಾಯಿತಲ್ಲ ಎಂದು ಜನರು ಸಮಾಧಾನ ಪಡಬೇಕಾಗಿದೆ. ಅಂತಹ ನೂರಾರು ಹೊಂಡಗಳು ರಸ್ತೆಯ ಪಕ್ಕದಲ್ಲೇ ಅಮಾಯಕರ ಜೀವಕ್ಕಾಗಿ ಬಾಯಿ ತೆರೆದು ಕಾಯುತ್ತಿವೆ. ಅವೆಲ್ಲ ಮುಚ್ಚಬೇಕಾದರೆ ಮತ್ತು ಆ ಹೊಂಡದ ಮಾಲಕರ ವಿರುದ್ಧ ಪ್ರಕರಣ ದಾಖಲಾಗಬೇಕಾದರೆ ಇನ್ನೆಷ್ಟು ಮಹ್ತಾಗಳು ಬಲಿಯಾಗಬೇಕು? ಎಂದು ಜನರು ಕೇಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News