ದೇಶಕ್ಕೆ ನಿರಾಶೆ ಮಾಡಿದ ಪ್ರಧಾನಿ ಮೋದಿ
Photo : ANI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಅರ್ಧದಲ್ಲೇ ನಿಂತು, ಕದನ ವಿರಾಮ ಘೋಷಣೆಯಾದ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರಾತ್ರಿ ಎಂಟು ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿಯವರು ಹೀಗೆ ಟಿ.ವಿ.ಯಲ್ಲಿ ಕಾಣಿಸಿಕೊಂಡಾಗಲೆಲ್ಲ ದೇಶಕ್ಕೆ ಯಾವುದೋ ಗಂಡಾಂತರ ಕಾದಿದೆ ಎನ್ನುವ ಆತಂಕ ಜನರನ್ನು ಆವರಿಸಿ ಬಿಡುತ್ತದೆ. ಯಾಕೆಂದರೆ ಈ ಹಿಂದೆ ಅನಿರೀಕ್ಷಿತ ನೋಟು ನಿಷೇಧದ ಮೂಲಕ ದೇಶದ ಜನತೆಯ ಮೇಲೆ ಇದೇ ರೀತಿಯಲ್ಲಿ ಸರ್ಜಿಕಲ್ ದಾಳಿ ನಡೆಸಿದ್ದರು. ಹೀಗೆಯೇ ಅನಿರೀಕ್ಷಿತವಾಗಿ ಟಿ.ವಿ.ಯಲ್ಲಿ ಕಾಣಿಸಿಕೊಂಡು ದೇಶದ ಮೇಲೆ ಲಾಕ್‌ಡೌನ್ ಹೇರಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನ-ಭಾರತದ ನಡುವಿನ ಸಂಘರ್ಷ ಯುದ್ಧದ ರೂಪ ಪಡೆದಿತ್ತು. ಉಭಯದೇಶಗಳೂ ಸೇನಾನೆಲೆಗಳ ಮೇಲೆ ದಾಳಿ ನಡೆಸಲು ಆರಂಭಿಸಿದ್ದವು. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಶಾಶ್ವತವಾಗಿ ತಡೆಯುವುದು ಭಾರತದ ಗುರಿಯಾಗಿತ್ತು. ಭಾರತದ ಸೇನೆಗೆ ಪೂರ್ಣ ಸ್ವಾತಂತ್ರವನ್ನು ನೀಡಿದ್ದೇನೆ ಎಂದು ಪ್ರಧಾನಿ ಮೋದಿಯವರೇ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು. ವಿಪರ್ಯಾಸವೆಂದರೆ, ಭಾರತವು ಅಮೆರಿಕದ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆಯಿಂದ ಹಿಂದೆ ಸರಿಯುವಂತಹ ಸ್ಥಿತಿ ನಿರ್ಮಾಣವಾಯಿತು. ಇದು ದೇಶದ ಪಾಲಿಗೆ ಬಹುದೊಡ್ಡ ಆಘಾತವಾಗಿತ್ತು.
ಪಾಕಿಸ್ತಾನವು ಭಾರತದ ಮೇಲೆ ಭಯೋತ್ಪಾದನಾ ದಾಳಿ ನಡೆಸುವಾಗ ಕಂಡೂ ಕಾಣದಂತೆ ಇದ್ದ ಅಮೆರಿಕ, ಇದೀಗ ಭಾರತವು ತನ್ನ ಜನರ ರಕ್ಷಣೆಯ ದೃಷ್ಟಿಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವಾಗ ತಡೆದಿರುವುದು ಎಷ್ಟು ಸರಿ? ಇಷ್ಟಕ್ಕೂ ಅಮೆರಿಕದ ಮಧ್ಯಸ್ಥಿಕೆಯನ್ನು ಭಾರತ ಯಾಕೆ ಒಪ್ಪಿತು? ಇದು ಪರೋಕ್ಷವಾಗಿ ಕಾಶ್ಮೀರ ವಿಷಯಕ್ಕೂ ಮೂಗು ತೂರಿಸಲು ಅಮೆರಿಕಕ್ಕೆ ಅವಕಾಶ ನೀಡಿದಂತಲ್ಲವೆ? ಪ್ರಧಾನಿ ಮೋದಿಯವರು ಸೇನೆಗೆ ನೀಡಿದ ಸ್ವಾತಂತ್ರ್ಯದ ಮಿತಿ ಇಷ್ಟೆಯೆ? ಅರ್ಧದಲ್ಲೇ ನಿಲ್ಲಿಸಲ್ಪಟ್ಟ ಈ ಕಾರ್ಯಾಚರಣೆಯಿಂದ ಭಾರತ ತನ್ನ ಗುರಿಯನ್ನು ಸಾಧಿಸಿಕೊಂಡಿದೆಯೆ? ಮುಂದಿನ ದಿನಗಳಲ್ಲಿ ಪಾಕಿಸ್ತಾನ ಭಯೋತ್ಪಾದಕರ ಮೂಲಕ ದಾಳಿ ನಡೆಸುವುದಿಲ್ಲ ಎಂದು ನಂಬಬಹುದೇ? ಈ ಎಲ್ಲ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಉತ್ತರಿಸುತ್ತಾರೆ ಎಂದು ಜನರು ಭಾವಿಸಿದ್ದರು. ಆದರೆ, ಅವರ ಭಾಷಣ ಬಿಹಾರದ ಮತದಾರರನ್ನಷ್ಟೇ ಗುರಿಯಾಗಿಸಿದಂತಿತ್ತು. ಹೊಸ ವಿಷಯವೇನೂ ಅಲ್ಲಿರಲಿಲ್ಲ. ಅವರು ಹೇಳಿರುವುದನ್ನೆಲ್ಲ ಈಗಾಗಲೇ ಸೇನಾ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿ ಆಗಿತ್ತು.
ಪ್ರಧಾನಿ ಮೋದಿಯವರು ಮಾತನಾಡುವುದಕ್ಕೆ ಅರ್ಧಗಂಟೆ ಮೊದಲು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘‘ನಾನು ಯುದ್ಧವನ್ನು ನಿಲ್ಲಿಸಿದೆ’ ಎಂದು ಘೋಷಿಸಿದ್ದರು. ಆ ಬಗ್ಗೆಯಾದರೂ ಪ್ರಧಾನಿ ಮೋದಿಯವರು ಸ್ಪಷ್ಟೀಕರಣ ನೀಡುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಮೂಲಕ ಟ್ರಂಪ್ ಹೇಳಿದ್ದು ನಿಜ ಎಂದು ಪ್ರಧಾನಿ ಮೋದಿಯವರೇ ಒಪ್ಪಿಕೊಂಡಂತಾಗಿದೆ.
‘ಆಪರೇಷನ್ ಸಿಂಧೂರ’ದಲ್ಲಿ ಏನು ನಡೆಯಿತು ಎನ್ನುವ ವಿವರಕ್ಕಿಂತ ಮುಖ್ಯವಾಗಿ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಯಾವ ಆತಂಕವೂ ಇಲ್ಲದೆ ದಾಳಿ ನಡೆಯುವಂತಹ ಸ್ಥಿತಿ ಯಾಕೆ ನಿರ್ಮಾಣವಾಯಿತು ಎನ್ನುವುದರ ಬಗ್ಗೆ ಪ್ರಧಾನಿ ಮೋದಿಯವರು ವಿವರಿಸುತ್ತಾರೆ ಮತ್ತು ಭದ್ರತಾ ವೈಫಲ್ಯಕ್ಕೆ ಕಾರಣರಾಗಿ ದೇಶವನ್ನು ಯುದ್ಧದಂತಹ ಸ್ಥಿತಿಗೆ ನೂಕಿದವರ ಮೇಲೆ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದೇನೆ ಎನ್ನುವುದನ್ನು ಘೋಷಿಸುತ್ತಾರೆ ಎಂದು ಜನರು ನಂಬಿದ್ದರು. ಆದರೆ ಅವರು ದೇಶದ ಜನರಿಗೆ ನಿರಾಸೆಯನ್ನುಂಟು ಮಾಡಿದರು.
ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವುದು ಗುಟ್ಟಿನ ವಿಷಯವೇನೂ ಅಲ್ಲ. ಆದರೆ ಅದನ್ನು ತಡೆಯಲು ಭಾರತ ಯಾಕೆ ವಿಫಲವಾಯಿತು? ತನ್ನದೇ ಜನರಿಗೆ ಭದ್ರತೆಯನ್ನು ನೀಡುವಲ್ಲಿ ಯಾಕೆ ಲೋಪವುಂಟಾಯಿತು? ಮನೆ ಬಾಗಿಲನ್ನು ಕಳ್ಳರಿಗಾಗಿ ತೆರೆದುಕೊಟ್ಟು, ಇದೀಗ ಮನೆಯೊಡೆಯ ಎಲ್ಲ ತೊಂದರೆಗೂ ಕೇವಲ ಕಳ್ಳರನ್ನೇ ಹೊಣೆ ಮಾಡಿದರೆ ಅದಕ್ಕೆ ಅರ್ಥವೇನಿದೆ? ಸೈನಿಕರು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಯಾಕೆ ವಿಫಲರಾದರು? ಪಹಲ್ಗಾಮ್ ಭದ್ರತಾ ವೈಫಲ್ಯದ ಹೊಣೆ ಹೊತ್ತು ದೇಶದ ಕನಿಷ್ಟ ಗೃಹ ಸಚಿವರು ರಾಜೀನಾಮೆ ನೀಡಿದ್ದರೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಬಲಿಯಾದ ಸೇನಾನಿಗಳ ತ್ಯಾಗಕ್ಕೆ ಇನ್ನಷ್ಟು ಅರ್ಥ ಬರುತ್ತಿತ್ತು.
ಪಾಕಿಸ್ತಾನ ಅಣ್ವಸ್ತ್ರ ಬೆದರಿಕೆಯನ್ನು ಒಡ್ಡಿತ್ತು. ಭಾರತ-ಪಾಕ್ ಅಣ್ವಸ್ತ್ರ ಸಮರ ತಪ್ಪಿಸುವ ಮೂಲಕ ಅಮೆರಿಕ ಕೋಟ್ಯಂತರ ಜನರ ಪ್ರಾಣ ಉಳಿಸಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಉಭಯ ದೇಶಗಳ ಜೊತೆಗೆ ವ್ಯಾಪಾರವನ್ನು ನಿಲ್ಲಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿ ‘ಕದನ ವಿರಾಮ’ ಘೋಷಿಸುವಂತೆ ಮಾಡಿದ್ದೇನೆ ಎಂದು ಅವರು ಕೊಚ್ಚಿಕೊಂಡಿದ್ದಾರೆ. ಈ ಬೆಳವಣಿಗೆಗಳಿಂದ ಅಮೆರಿಕ ತನಗೆ ಬೇಕಾದ ಲಾಭವನ್ನು ಮಾಡಿಕೊಂಡಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಐಎಂಎಫ್ ಒಂದು ಬಿಲಿಯನ್ ಡಾಲರ್ ಸಾಲವನ್ನೂ ನೀಡಿದೆ. ಅಮೆರಿಕ ಸೇರಿದಂತೆ ಯಾವ ದೇಶಗಳೂ ಭಾರತದ ಜೊತೆಗೆ ಗಟ್ಟಿಯಾಗಿ ನಿಲ್ಲಲಿಲ್ಲ. ಪಾಕಿಸ್ತಾನದ ವಿರುದ್ಧದ ಭಯೋತ್ಪಾದನಾ ವಿರೋಧಿ ಯುದ್ಧದಲ್ಲಿ ಇತರ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಭಾರತ ಸಂಪೂರ್ಣ ವಿಫಲವಾಯಿತು. ಇದು ಪ್ರಧಾನಿ ಮೋದಿಯ ಆಡಳಿತದ ವಿದೇಶಾಂಗ ನೀತಿಯ ವೈಫಲ್ಯವಾಗಿದೆ.
ಪುಲ್ವಾಮಾ, ಪಹಲ್ಗಾಮ್‌ನಲ್ಲಿ ಅಷ್ಟೊಂದು ಸುಲಭವಾಗಿ ಭಯೋತ್ಪಾದಕರು ತಮ್ಮ ಕೃತ್ಯಗಳನ್ನು ಎಸಗಲು ಹೇಗೆ ಸಾಧ್ಯವಾಯಿತು? ಎನ್ನುವುದರ ಬಗ್ಗೆ ಇನ್ನಾದರೂ ಸರಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಪಾಕಿಸ್ತಾನಕ್ಕೆ ತನ್ನ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ, ಭಾರತದ ಆಂತರಿಕ ಭದ್ರತೆಯ ಬಗ್ಗೆ ಸರಕಾರ ಕಾಳಜಿವಹಿಸಬೇಕು. ಹಾಗೆಯೇ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಆಳುವ ರಾಜಕೀಯಕ್ಕೆ ಇನ್ನಾದರೂ ಕೊನೆಹಾಡಬೇಕು. ಎಲ್ಲ ಧರ್ಮೀಯರನ್ನು ಭಾರತೀಯರೆನ್ನುವ ನೆಲೆಯಲ್ಲಿ ಜೊತೆಯಾಗಿ ಕೊಂಡು ಹೋಗಬೇಕು. ಪ್ರಧಾನಿ ಮೋದಿಯವರು ಇಷ್ಟನ್ನು ಮಾಡಿದರೆ ನಮ್ಮ ಸೈನಿಕರ ತ್ಯಾಗ ಬಲಿದಾನ ಸಾರ್ಥಕವಾಗುತ್ತದೆ.
ಮಣಿಪುರದಲ್ಲಿ ನಡೆಯುತ್ತಿರುವ ದಂಗೆಯಲ್ಲಿ ನೂರಾರು ಜನರು ಮೃತಪಟ್ಟರು. ಹಲವಾರು ಮನೆಗಳು ಧ್ವಂಸವಾದವು. ಇವೆಲ್ಲವನ್ನು ಎಸಗಿರುವುದು ಪಾಕಿಸ್ತಾನ ಕಳುಹಿಸಿದ ಭಯೋತ್ಪಾದಕರಲ್ಲ. ನಮ್ಮದೇ ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಈ ದಾಳಿಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರು ಈ ಬಗ್ಗೆ ರಾತ್ರಿ ಎಂಟು ಗಂಟೆಗೆ ಟಿ.ವಿ.ಯಲ್ಲಿ ಬಂದು ರಾಷ್ಟ್ರವನ್ನುದ್ದೇಶಿಸಿ ವಿಶೇಷ ಭಾಷಣವನ್ನು ಮಾಡುವುದನ್ನು ದೇಶದ ಜನರು ಕಾಯುತ್ತಿದ್ದಾರೆ. ಅದು ಸಾಧ್ಯವಾದ ದಿನ, ಭಯೋತ್ಪಾದಕರ ವಿರುದ್ಧದ ಅರ್ಧ ಯುದ್ಧವನ್ನು ಗೆದ್ದಂತಾಗುತ್ತದೆ.