ಕಲುಷಿತ ನೀರಿನಲ್ಲಿ ಕಂಡ ಸ್ವಚ್ಛ ನಗರದ ಅಸಲಿ ಮುಖ
PC: X.com/CNNnews18/PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹೊಸ ವರ್ಷದ ಆಗಮನದ ಹೊತ್ತಿಗೆ ಮದ್ಯದ ಹೊಳೆ ಹರಿಯುವುದು ಸಾಮಾನ್ಯ. ಮದ್ಯ ಸೇವಿಸಿ ಸಂಭವಿಸುವ ಅವಘಡಗಳು ಮಾಧ್ಯಮಗಳಲ್ಲಿ ಪ್ರತೀ ವರ್ಷವ ಕೊನೆಯಲ್ಲಿ ಪತ್ರಿಕೆಗಳ ಮುಖ ಪುಟಗಳಲ್ಲಿ ರಾರಾಜಿಸುತ್ತಿರುತ್ತವೆ. ಆದರೆ ಈ ಬಾರಿ ಮಾಧ್ಯಮಗಳಲ್ಲಿ ಹೊಸ ವರ್ಷದ ದಿನ ‘ನೀರು ಕುಡಿದು ಸತ್ತವರು’ ಸುದ್ದಿಯಾದರು. ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರ ಎಂದು ಸತತ ಎಂಟು ವರ್ಷಗಳಿಂದ ಗುರುತಿಸಲ್ಪಡುತ್ತಿದೆ. ಆದರೆ ಈ ಸ್ವಚ್ಛ ನಗರದ ಅಸಲಿ ಮುಖ ಇದೀಗ ಬಹಿರಂಗವಾಗಿದೆ. ಇಂದೋರ್‌ನ ಭಗೀರಥ ಪುರ ಪ್ರದೇಶದಲ್ಲಿ ಕಲುಷಿತ ನೀರನ್ನು ಕುಡಿದು 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸತ್ತವರ ಸಂಖ್ಯೆ ಹೆಚ್ಚಿದೆ, ಆದರೆ ಸರಕಾರ ಮುಚ್ಚಿಡುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನೀರು ಕುಡಿದು ಆಸ್ಪತ್ರೆಯಲ್ಲಿ ನೂರಾರು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಗೆ ದಾಖಲಾಗದ ಅಸ್ವಸ್ಥರ ಸಂಖ್ಯೆಯೂ ದೊಡ್ಡದಿದೆ. ಅವರ ಲೆಕ್ಕ ಅಧಿಕೃತವಾಗಿ ಇನ್ನೂ ಸರಕಾರಕ್ಕೆ ಸಿಕ್ಕಿಲ್ಲ. ಯಾವುದೇ ಕಳ್ಳಭಟ್ಟಿ ಸಾರಾಯಿ ಕುಡಿದಾಗ ಸಂಭವಿಸಬಹುದಾದ ದುರಂತ ಇಂದೋರ್‌ನಲ್ಲಿ ನೀರು ಕುಡಿದು ಸಂಭವಿಸಿದೆ. ಭಾರತದ ಅತ್ಯಂತ ಸ್ವಚ್ಛ ನಗರದ ಸ್ಥಿತಿಯೇ ಈ ರೀತಿಯಾದರೆ ಇನ್ನು ಉಳಿದ ನಗರಗಳ ಗತಿಯೇನು? ಎಂದು ಜನರು ಕೇಳುವಂತಾಗಿದೆ.
ಕಾಕತಾಳೀಯ ಎಂಬಂತೆ ದುರಂತ ಸಂಭವಿಸಿದ ಪ್ರದೇಶದ ಹೆಸರೇ ಭಗೀರಥ ಪುರ. ಅತ್ಯಂತ ಪವಿತ್ರ ನದಿಯಾದ ಗಂಗೆಯನ್ನು ಭೂಮಿಗೆ ತಂದವನೇ ಭಗೀರಥ ಮುನಿ ಎನ್ನುವ ನಂಬಿಕೆ ಭಾರತದಲ್ಲಿದೆ. ಪುರಾಣದ ಕತೆಯ ಪ್ರಕಾರ, ನೀರಿನ ಹಾಹಾಕಾರ ಎದ್ದಾಗ ಸ್ವರ್ಗದಲ್ಲಿದ್ದ ಗಂಗೆಯನ್ನು ಶತ ಪ್ರಯತ್ನದಿಂದ ಭೂಮಿಗೆ ತಂದವನು ಭಗೀ ರಥ ಮುನಿ. ಅಂತಹ ಭಗೀರಥನ ಹೆಸರನ್ನು ಹೊಂದಿದ ಪ್ರದೇಶದಲ್ಲಿ ನೀರನ್ನು ಕುಡಿದು ಸಾವಿರಾರು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನುವುದು ಭಾರತದ ಇಂದಿನ ಸ್ಥಿತಿಗೆ ಒಂದು ವಿಕಟ ರೂಪಕವೇ ಸರಿ. ನಿಜಕ್ಕೂ ಎಷ್ಟು ಸಾವುಗಳು ಸಂಭವಿಸಿವೆ ಎನ್ನುವುದನ್ನು ಜಿಲ್ಲಾಡಳಿತ ಬಹಿರಂಗ ಪಡಿಸುತ್ತಿಲ್ಲ. ಮುಖ್ಯಮಂತ್ರಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಿದ್ದರೆ, ಮೇಯರ್ ಏಳು ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ. ಸ್ಥಳೀಯರು ಮಾತ್ರ 13ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಾರು ಜನರು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಚಿವ ಕೈಲಾಸ್ ವಿಜಯ ವರ್ಗೀಯ ಅವರು ಈ ಸಾವಿನ ಹಿಂದಿನ ಕಾರಣಗಳನ್ನು ಚರ್ಚಿಸುವುದಕ್ಕೆ ಸಿದ್ಧರಿಲ್ಲ. ‘‘ತಪ್ಪು ನಡೆದಿದೆ ಹೌದು. ಆದರೆ ಅದನ್ನೇ ಚರ್ಚಿಸುವ ಬದಲು ಮೊದಲು ರೋಗಿಗಳು ಚೇತರಿಸಿಕೊಳ್ಳುವುದರ ಕಡೆಗೆ ಗಮನ ನೀಡಬೇಕು’’ ಎಂದು ಜಾರಿಕೊಳ್ಳುತ್ತಿದ್ದಾರೆ. ಕನಿಷ್ಠ ರೋಗಿಗಳ ಚಿಕಿತ್ಸೆಯ ಕಡೆಗಾದರೂ ಸರಕಾರ ಗಮನವನ್ನು ನೀಡಿದೆಯೇ ಎಂದರೆ ಅದೂ ಇಲ್ಲ. ನೀರು ಕುಡಿದು ಅಸ್ವಸ್ಥರಾಗಿರುವ ಹಲವರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಅಲ್ಲಿನ ದುಬಾರಿ ಬಿಲ್‌ನಿಂದಾಗಿ ಅವರು ತತ್ತರಿಸಿದ್ದಾರೆ. ಸರಕಾರ ಚಿಕಿತ್ಸೆಗೆ ಬೇಕಾದ ಸಹಕಾರ ನೀಡುವುದಾಗಿ ಹೇಳಿದ್ದರೂ, ವೈದ್ಯಕೀಯ ವೆಚ್ಚಗಳ ಮರುಪಾವತಿ ಇನ್ನೂ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಬೇಕಾಗಿದ್ದ ಸಚಿವರು, ಪತ್ರಕರ್ತರ ಮೇಲೆಯೇ ಎರಗಿ ಬಿದ್ದಿದ್ದಾರೆ. ಕೆಟ್ಟ ಪದವನ್ನು ಬಳಸಿ ಪತ್ರಕರ್ತರ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ.
ಚಿಕಿತ್ಸೆ ನೀಡುವುದು ಮಾತ್ರವಲ್ಲ, ಜನರಿಗೆ ಪರ್ಯಾಯ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸರಕಾರ ಮಾಡಬೇಕು. ಅದರಲ್ಲೂ ಸಚಿವರು ವಿಫಲರಾಗಿದ್ದಾರೆ. ಮೃತರ ಕುಟುಂಬವನ್ನು ಭೇಟಿ ಮಾಡುವ ಹೊಣೆಗಾರಿಕೆಯಿಂದ ಸ್ಥಳೀಯ ಶಾಸಕರು ನುಣುಚಿಕೊಳ್ಳುತ್ತಿದ್ದಾರೆ. ಜನರನ್ನು ಎದುರುಗೊಳ್ಳಲು ಶಾಸಕರು, ಸಚಿವರು ಹಿಂಜರಿಯುತ್ತಿದ್ದಾರೆ. ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಇವರ ಬಳಿ ಉತ್ತರವಿಲ್ಲ. ಆದುದರಿಂದ ಸಂತ್ರಸ್ತರ ಭೇಟಿಗೆ ಸಿದ್ಧರಿಲ್ಲ. ಕುಡಿಯುವ ನೀರಿನ ಸಮಸ್ಯೆಯಿಂದ ಈ ಭಾಗದಲ್ಲಿ ಹಲವರು ಈ ಹಿಂದೆ ಅಸ್ವಸ್ಥರಾದಾಗಲೆಲ್ಲ ಆ ಪ್ರಕರಣವನ್ನು ನಿರ್ಲಕ್ಷಿಸಲಾಗಿದೆ. ‘‘ಅವರು ಅಸ್ವಸ್ಥರಾಗಿರುವುದು ಬೇರೆಯೇ ಕಾರಣಕ್ಕಾಗಿ’’ ಎಂದು ಜನರನ್ನು ಬಾಯಿ ಮುಚ್ಚಿಸಲಾಗಿದೆ. ಏಕಾಏಕಿ ನೂರಾರು ಪ್ರಕರಣಗಳು ಬಹಿರಂಗವಾಗುತ್ತಿದ್ದಂತೆಯೇ ಸರಕಾರ ಎಚ್ಚೆತ್ತುಕೊಂಡಿದೆ. ಇಂದೋರ್‌ನ ದುರಂತ ಈ ದೇಶ ಭವಿಷ್ಯದಲ್ಲಿ ಎದುರಿಸಲಿರುವ ಇನ್ನೊಂದು ಆಪತ್ತನ್ನು ಮುನ್ನೆಲೆಗೆ ತಂದಿದೆ. ದೇಶದಲ್ಲೀಗ ಚರ್ಚೆಯಲ್ಲಿರುವುದು ವಾಯು ಮಾಲಿನ್ಯ. ದಿಲ್ಲಿ, ಮುಂಬೈ, ಕೋಲ್ಕತಾದಂತಹ ನಗರಗಳು ಉಸಿರಾಡುವುದಕ್ಕೆ ಒದ್ದಾಡುತ್ತಿವೆ. ದಿಲ್ಲಿಯ ಸ್ಥಿತಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ದೇಶದ ವಾಯುಮಾಲಿನ್ಯ ಕಳಪೆಯಾಗಿರುವುದನ್ನು, ಸೂಚ್ಯಂಕ ಪಾತಾಳ ತಲುಪಿರುವುದನ್ನು ಈಗಾಗಲೇ ವಿಶ್ವಸಂಸ್ಥೆ ಬಹಿರಂಗಗೊಳಿಸಿದೆ. ವಾಯುಮಾಲಿನ್ಯದಿಂದಾಗಿ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿವೆ. ಅಸ್ತಮಾ ಉಲ್ಬಣಿಸುತ್ತಿದೆ. ಆದರೆ ಸರಕಾರ ಇದನ್ನು ಮುಚ್ಚಿ ಡುವ, ವರದಿಗಳನ್ನು ಅಲ್ಲಗಳೆಯುವ ಮೂಲಕ ತನ್ನ ಮಾನವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ.
ಭಾರತದಲ್ಲಿ ವಾಯುಮಾಲಿನ್ಯದಷ್ಟೇ ಅಪಾಯಕಾರಿಯಾಗಿದೆ ಕಲುಷಿತ ಕುಡಿಯುವ ನೀರಿನ ಸಮಸ್ಯೆ. ಈ ದೇಶದಲ್ಲಿ ಕುಡಿಯುವ ನೀರಿನ ಮೂಲಗಳಾಗಿರುವ ನದಿಗಳೆಲ್ಲ ದೊಡ್ಡ ಮಟ್ಟದಲ್ಲಿ ಕಲುಷಿತಗೊಂಡಿವೆ. ಗಂಗಾ, ಯಮುನಾ ನದಿಗಳಷ್ಟೇ ಅಲ್ಲ, ಕರ್ನಾಟಕದಲ್ಲೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸುವ ನೀರಿನ ಪರೀಕ್ಷೆಯಲ್ಲಿ ಬಹುತೇಕ ನದಿಗಳು ಅನುತ್ತೀರ್ಣಗೊಂಡಿವೆ. ರಾಜ್ಯದ ಸುಮಾರು 12 ನದಿಗಳ ಪೈಕಿ ಯಾವ ನದಿಗಳ ನೀರೂ ನೇರವಾಗಿ ಕುಡಿಯುವುದಕ್ಕೆ ಯೋಗ್ಯವಲ್ಲ ಎನ್ನುವ ವರದಿ ಹೊರಬಿದ್ದಿದೆ. ನೇರವಾಗಿ ಕುಡಿಯುವುದಕ್ಕೆ ಯೋಗ್ಯವಾಗಿರುವ ನದಿಯ ನೀರನ್ನು ಎ ದರ್ಜೆಗೆ ಸೇರಿಸಲಾಗುತ್ತದೆ. ರಾಜ್ಯದ ಯಾವೊಂದು ನದಿಯೂ ಎ ದರ್ಜೆಯೊಳಗಿಲ್ಲ. ಶುದ್ಧೀಕರಿಸಿ ಕುಡಿಯಬಹುದಾದ ಬಿ ದರ್ಜೆಯ ನದಿಯಾಗಿ ನೇತ್ರಾವತಿಯನ್ನು ಮಾತ್ರ ಗುರುತಿಸಲಾಗಿದೆ. ಜೀವನದಿ ಎಂದು ಕರೆಯುವ ಕಾವೇರಿ ಸೇರಿದಂತೆ ತುಂಗಾ, ಭದ್ರಾ, ಕೃಷ್ಣಾ ಈ ಎಲ್ಲಾ ನದಿಗಳು ಸಿ ದರ್ಜೆಗೆ ಸೇರಿವೆ. ಡಿ ದರ್ಜೆಗೆ ಸೇರಿರುವ ಭೀಮಾ, ಅರ್ಕಾವತಿ ನದಿಗಳ ನೀರನ್ನು ಸಂಸ್ಕರಿಸಿ ಬಳಸುವುದೂ ಸಾಧ್ಯವಿಲ್ಲ. ಭಾರತದ ಶೇ. 70ರಷ್ಟು ನದಿ ನೀರು ಕುಡಿಯುವುದಕ್ಕೆ ಅನರ್ಹ
ವಾಗಿದೆ. ಭಾರತವು ಜಲಗುಣಮಟ್ಟ ಸೂಚ್ಯಂಕದಲ್ಲಿ 122 ದೇಶಗಳಲ್ಲಿ 120ನೇ ಸ್ಥಾನವನ್ನು ಹೊಂದಿದೆ. ನದಿಗಳನ್ನು ದೇವತೆಗಳೆಂದು ಪೂಜಿಸುವ ಭಾರತಕ್ಕೆ ಇದು ಭಾರೀ ಅವಮಾನವೇ ಸರಿ. ಇಂದೋರ್ ದುರಂತ ಒಂದು ಸಣ್ಣ ಸೂಚನೆ ಮಾತ್ರ. ಭವಿಷ್ಯದಲ್ಲಿ ಇಂತಹ ದುರಂತಗಳಿಗೆ ಎಲ್ಲ ನಗರಗಳೂ ಸಾಕ್ಷಿಯಾಗಲಿವೆ. ಪ್ರತಿ ದಿನ ಪತ್ರಿಕೆಗಳ ಮುಖಪುಟದಲ್ಲಿ ‘ಕಲುಷಿತ ಕುಡಿಯುವ ನೀರಿಗೆ ಬಲಿ’ಯಾದವರ ಅಂಕಿಗಳು ರಾರಾಜಿಸಲಿವೆ. ಈ ಕಲುಷಿತ ನೀರು ಈ ದೇಶದ ಆರೋಗ್ಯ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲಿದೆ. ಉಸಿರಾಡುವ ಗಾಳಿಯ ಜೊತೆಗೆ ಕುಡಿಯುವ ನೀರೂ ವಿಷವಾದರೆ ಈ ದೇಶದ ಗತಿಯೇನು? ಪರಿಸ್ಥಿತಿ ಕೈಮೀರುವ ಮೊದಲು ಸರಕಾರ ಮಾತ್ರವಲ್ಲ ಜನರೂ ಎಚ್ಚೆತ್ತುಕೊಳ್ಳಬೇಕಾಗಿದೆ.