×
Ad

ಕದನವಿರಾಮ ಘೋಷಣೆಯ ಬಳಿಕದ ಉತ್ತರವಿಲ್ಲದ ಪ್ರಶ್ನೆಗಳು

Update: 2025-05-12 06:59 IST

ಸಾಂದರ್ಭಿಕ ಚಿತ್ರ | PC : PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಆಪರೇಷನ್ ಸಿಂದೂರ’ ತಿರುವು ಪಡೆದುಕೊಂಡಿದೆ. ಪಾಕಿಸ್ತಾನದ ಉಗ್ರಗಾಮಿ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿ ನಿಧಾನಕ್ಕೆ ಪಾಕಿಸ್ತಾನ-ಭಾರತದ ನಡುವಿನ ಸಂಘರ್ಷವಾಗಿ ಬದಲಾಯಿತು. ಉಗ್ರಗಾಮಿಗಳ ಸಹಿತ, ಪಾಕಿಸ್ತಾನದ ಹಲವು ಸೈನಿಕರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಪ್ರತಿದಾಳಿಗೆ ಭಾರತದ ಸೈನಿಕರೂ ಬಲಿಯಾಗಿದ್ದಾರೆ. ಭಾರತದ ಕಾರ್ಯಾಚರಣೆಯು ‘ಉಗ್ರರ ವಿಷಯಕ್ಕೆ’ ಒಂದು ತಾರ್ಕಿಕ ಅಂತ್ಯವನ್ನು ಕಾಣಿಸಬೇಕು, ಪಾಕಿಸ್ತಾನ ಪ್ರೇರಿತವಾದ ಯಾವುದೇ ಭಯೋತ್ಪಾದನಾ ದಾಳಿಯನ್ನು ದೇಶದ ವಿರುದ್ಧ ನಡೆಸುವ ಯುದ್ಧವೆಂದು ಬಗೆದು ಪ್ರತೀಕಾರವನ್ನು ತೆಗೆದುಕೊಳ್ಳಬೇಕು ಎನ್ನುವುದು ಎಲ್ಲ ಭಾರತೀಯರ ಒಳ ಆಸೆಯಾಗಿತ್ತು. ಭಯೋತ್ಪಾದನೆಯೆನ್ನುವುದು ನರಭಕ್ಷಕ ಹುಲಿ. ಅದರ ಬಾಲವನ್ನು ಚುಚ್ಚುವುದರಿಂದ ನಿಯಂತ್ರಣ ಸಾಧ್ಯವಿಲ್ಲ. ಆದುದರಿಂದ, ಭಾರತವು ಅದರ ಮೆದುಳಿಗೆ ಗುರಿಯಿಡಬೇಕು. ಗಡಿಭಾಗದ ಭಯೋತ್ಪಾದನೆಯ ಮೆದುಳು ಪಾಕಿಸ್ತಾನವಾದುದರಿಂದ ಅದಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದು ಜನರು ನಿರೀಕ್ಷಿಸಿದ್ದರು. ಆದರೆ ಹೇಗೆ? ಎನ್ನುವುದರ ಬಗ್ಗೆ ರಾಜಕಾರಣಿಗಳಿಗಾಗಲಿ, ಮಾಧ್ಯಮಗಳಿಗಾಗಲಿ ಸ್ಪಷ್ಟತೆ ಇರಲಿಲ್ಲ ಎನ್ನುವುದು ಕಳೆದ ಒಂದು ವಾರದ ಬೆಳವಣಿಗೆಗಳಲ್ಲಿ ನಾವು ಕಂಡುಕೊಂಡಿದ್ದೇವೆ. ಗಡಿಯಲ್ಲಿ ಸೇನೆ ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಭಾರತದೊಳಗಿನ ಮಾಧ್ಯಮಗಳು, ರಾಜಕಾರಣಿಗಳು, ಕೋಮುವಾದಿ ಸಂಘಟನೆಗಳು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದವು. ಭಾರತದ ಆಂತರಿಕ ಭದ್ರತೆಯನ್ನು ಛಿದ್ರಗೊಳಿಸುವುದು ಭಯೋತ್ಪಾದಕರ ಗುರಿಯಾಗಿದ್ದರೆ, ಮಾಧ್ಯಮಗಳ ಮತ್ತು ರಾಜಕಾರಣಿಗಳ ವರ್ತನೆೆ ಭಯೋತ್ಪಾದಕರಿಗೆ ಪೂರಕವಾಗಿಯೇ ಇತ್ತು. ಸಂದರ್ಭದ ಗಂಭೀರತೆಗಿಂತ ಯುದ್ಧದ ರೋಚಕತೆ ಇವರಿಗೆ ಮುಖ್ಯವಾಯಿತು. ಇವೆಲ್ಲದರ ನಡುವೆ ಅನಿರೀಕ್ಷಿತವಾಗಿ ‘ಭಾರತ-ಪಾಕ್’ ನಡುವೆ ‘ಕದನವಿರಾಮ’ ಘೋಷಣೆಯಾಗಿದೆ. ಈ ಕದನವಿರಾಮವು ಉಭಯ ದೇಶಗಳ ನಾಯಕರ ನಡುವಿನ ಮಾತುಕತೆಯ ಫಲವಾಗಿ ಹೊರ ಬಿದ್ದದ್ದು ಹೌದಾಗಿದ್ದರೆ ಸಮಸ್ಯೆಯಿರುತ್ತಿರಲಿಲ್ಲ. ಪಾಕಿಸ್ತಾನವು ಭಾರತಕ್ಕೆ ನೀಡುತ್ತಾ ಬಂದಿರುವ ನಿರಂತರ ಕಿರುಕುಳವನ್ನು ದೂರ ನಿಂತು ಆಟ ನೋಡುತ್ತಿದ್ದ ಅಮೆರಿಕ ಈ ಕದನ ವಿರಾಮದ ಮಧ್ಯಸ್ಥಿಕೆ ವಹಿಸಿರುವುದು ಅನುಮಾನಗಳನ್ನು ಹುಟ್ಟಿಸಿ ಹಾಕಿದೆ. ‘‘ಅಮೆರಿಕದ ಮಧ್ಯಸ್ಥಿಕೆಯಲ್ಲಿ ಸುದೀರ್ಘ ರಾತ್ರಿ ನಡೆದ ಮಾತುಕತೆಯ ಬಳಿಕ ಭಾರತ ಹಾಗೂ ಪಾಕಿಸ್ತಾನವು ತಕ್ಷಣದಿಂದಲೇ ಸಂಪೂರ್ಣ ಕದನವಿರಾಮಕ್ಕೆ ಸಮ್ಮತಿಸಿವೆಯೆಂಬುದಾಗಿ ಘೋಷಿಸಲು ಸಂತೋಷ ಪಡುತ್ತೇನೆ’’ ಎಂದು ಡೊನಾಲ್ಡ್ ಟ್ರಪ್ ಹೇಳಿಕೆ ನೀಡಿದ ಬೆನ್ನಿಗೇ ಭಾರತೀಯ ಸೇನೆ ಕೂಡ ಕದನವಿರಾಮ ಘೋಷಣೆಯನ್ನು ಅಧಿಕೃತವಾಗಿ ಮಾಧ್ಯಮಗಳ ಮುಂದಿಟ್ಟಿತು.

ಯುದ್ಧದ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಾಧ್ಯವೇ? ಎನ್ನುವ ಪ್ರಶ್ನೆಗೆ ಉತ್ತರ ಸುಲಭವಿಲ್ಲ. ಅತ್ಯಂತ ಬಲಾಢ್ಯ ದೇಶವಾಗಿರುವ ರಶ್ಯವು ಉಕ್ರೇನ್ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ಈವರೆಗೆ ತಾರ್ಕಿಕ ಅಂತ್ಯವನ್ನು ತಲುಪಿಲ್ಲ. ಪುಟ್ಟ ದೇಶವಾಗಿರುವ ಉಕ್ರೇನ್‌ನ್ನು ತನ್ನ ಮೂಗಿನ ನೇರಕ್ಕೆ ಮಣಿಸುವುದು ರಶ್ಯಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಆದರೆ ಉಭಯ ದೇಶಗಳೂ ಈ ಯುದ್ಧಕ್ಕಾಗಿ ಸಾಕಷ್ಟು ಬೆಲೆಯನ್ನು ತೆತ್ತಿದೆ ಎನ್ನುವುದು ವಾಸ್ತವ. ಶಸ್ತ್ರಾಸ್ತ್ರಕ್ಕಾಗಿ ಅಮೆರಿಕವನ್ನು ದೀರ್ಘಕಾಲದಿಂದ ಅವಲಂಬಿಸಿಕೊಂಡು ಬಂದಿರುವ ಪಾಕಿಸ್ತಾನವು ಭಾರತದಷ್ಟು ಸಾಮರ್ಥ್ಯ ಹೊಂದಿಲ್ಲದಿರಬಹುದು. ಆದರೆ ಅದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು , ಅಣುಬಾಂಬ್‌ಗಳನ್ನು ಹೊಂದಿರುವ ದೇಶ. ಭಾರತದ ಶತ್ರುವಾಗಿ ಗುರುತಿಸಿಕೊಂಡಿರುವ ಚೀನಾದ ಜೊತೆಗೆ ಮಿತ್ರತ್ವವನ್ನು ಹೊಂದಿರುವ, ಅತ್ತ ಅಮೆರಿಕದ ಜೊತೆಗೂ ಕೂಡಿಕೆ ಮಾಡಿಕೊಂಡಿರುವ ದೇಶ. ಪಾಕಿಸ್ತಾನದ ಜೊತೆಗೆ ಏಕಾಏಕಿ ಪೂರ್ಣಪ್ರಮಾಣದ ಯುದ್ಧವೊಂದನ್ನು ಘೋಷಿಸಲು ಇದು ಸೂಕ್ತ ಸಮಯ ಖಂಡಿತ ಅಲ್ಲ. ಜಗತ್ತು ಆರ್ಥಿಕವಾಗಿ ಇನ್ನೊಂದು ಶೀತಲ ಯುದ್ಧವನ್ನು ಎದುರಿಸುತ್ತಿದೆ. ಈಗಾಗಲೇ ಸುಂಕಗಳ ಮೂಲಕ ಯುದ್ಧ ಜಾರಿಯಲ್ಲಿದೆ ಮತ್ತು ಇದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ದಾರಿಗಳನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹುಡುಕುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತವು ಆರ್ಥಿಕವಾಗಿ ತನಗಿಂತಲೂ ದಯನೀಯವಾಗಿರುವ ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ನಿಂತು ಬಿಟ್ಟರೆ, ಪಾಕಿಸ್ತಾನದ ಜೊತೆ ಜೊತೆಗೆ ಭಾರತವೂ ಜರ್ಜರಿತವಾಗುತ್ತದೆ. ಅಭಿವೃದ್ಧಿಶೀಲ ದೇಶಗಳ ನಿಯಂತ್ರಣವನ್ನು ಸಂಪೂರ್ಣ ತನ್ನ ಕೈಗೆ ತೆಗೆದುಕೊಳ್ಳಲು ಹಂಬಲಿಸುತ್ತಿರುವ ಟ್ರಂಪ್ ನೇತೃತ್ವದ ಅಮೆರಿಕಕ್ಕೆ ಇದರಿಂದ ಅನುಕೂಲವಾಗುತ್ತದೆ.

ಯುದ್ಧವು ಉಭಯ ದೇಶಗಳನ್ನೂ ಅರಾಜಕತೆಗೆ ತಳ್ಳಬಹುದು. ಅರಾಜಕತೆಯೇ ಭಯೋತ್ಪಾದನೆ ಮತ್ತು ಉಗ್ರವಾದದ ತಾಯಿ ಎನ್ನುವ ಎಚ್ಚರಿಕೆ ನಮಗೂ ಇರಬೇಕು. ಯುದ್ಧದ ಮೂಲಕ ಯಾವುದೇ ಒಂದು ದೇಶವನ್ನು ತನ್ನ ಕೈವಶ ಮಾಡಬಹುದು, ಅದರ ನಿಯಂತ್ರಣವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎನ್ನುವ ಮಾತು ಕೇಳುವುದಕ್ಕೆ ರೋಚಕವಾಗಿರುತ್ತದೆ. ಆದರೆ ವಾಸ್ತವದಲ್ಲಿ ಇದು ಅಸಾಧ್ಯ. ಪಾಕಿಸ್ತಾನ ತಾನು ಸಂಪೂರ್ಣ ನಾಶವಾಗುವ ಹೊತ್ತಿನಲ್ಲಿ, ಭಾರತವನ್ನು ಭಾಗಶಃ ನಾಶ ಮಾಡಿರುತ್ತದೆ. ಯಾಕೆಂದರೆ ಅದರ ಕೈಯಲ್ಲಿ ಅಣು ಬಾಂಬಿದೆ. ಅತ್ಯಾಧುನಿಕ ಶಸತ್ತ್ರಗಳಿವೆ. ಇದೇ ಸಂದರ್ಭದಲ್ಲಿ ಯುದ್ಧವು ಎರಡೂ ದೇಶಗಳನ್ನು ಅರಾಜಕಗೊಳಿಸಿದಾಗ, ಕಾನೂನು ವ್ಯವಸ್ಥೆ ಸಹಜವಾಗಿ ದುರ್ಬಲಗೊಳ್ಳುತ್ತದೆ. ದೇಶದೊಳಗೆ ನಿರುದ್ಯೋಗ, ಹಸಿವು, ಬಡತನ, ಅನಾರೋಗ್ಯ, ದೊಂಬಿ, ಗಲಭೆಗಳು ಏಕಾಏಕಿ ಹೆಚ್ಚಿ ಇದು ಭಯೋತ್ಪಾದಕರಿಗೆ, ಉಗ್ರರಿಗೆ ಇನ್ನಷ್ಟು ಪೂರಕ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತದೆ. ಯುದ್ಧದ ನಿಜವಾದ ಫಲಾನುಭವಿಗಳು ಉಗ್ರರು ಮತ್ತು ಭಯೋತ್ಪಾದಕರೇ ಆಗಿರುತ್ತಾರೆ. ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವುದು ಈ ನಿಟ್ಟಿನಲ್ಲಿ ನಮಗೆ ಪಾಠವಾಗಬೇಕಾಗಿದೆ. ಯುದ್ಧದಿಂದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಬಹುದೇ ಹೊರತು, ಯಾವುದೇ ಪರಿಹಾರಗಳು ಸಿಗಲು ಸಾಧ್ಯವಿಲ್ಲ. ಆದರಿಂದ ಪರಿಸ್ಥಿತಿ ಕೈ ಮೀರುವ ಮೊದಲೇ ‘ಕದನ ವಿರಾಮ’ ಘೋಷಣೆಯಾಗಿದ್ದು ಒಳಿತೇ ಆಯಿತು. ಆದರೆ ಅದು ‘ಅಮೆರಿಕದ ಮಧ್ಯಸ್ಥಿಕೆ’ಯಿಂದ ನಡೆದಿರುವುದು ಮಾತ್ರ ಇರಿಸು ಮುರಿಸಿನ ವಿಷಯವಾಗಿದೆ. ಯಾಕೆಂದರೆ, ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲದ ಬಗ್ಗೆ ಯಾವತ್ತೂ ಅಮೆರಿಕ ಗಟ್ಟಿ ಧ್ವನಿಯಲ್ಲಿ ಮಾತನಾಡಿಲ್ಲ. ತನ್ನ ಬುಡಕ್ಕೆ ಬಂದಾಗ ಪಾಕಿಸ್ತಾನದ ಒಳಗೆ ನುಗ್ಗಿ ಲಾದೆನ್‌ನನ್ನು ಕೊಂದು ಹಾಕಿದ ಅಮೆರಿಕ, ಭಾರತದ ವಿಷಯ ಬಂದಾಗ ದ್ವಂದ್ವ ನಿಲುವನ್ನು ತಳೆಯುತ್ತಾ ಬಂದಿದೆ. ಅದಕ್ಕೆ ಕಾರಣ, ಪಾಕಿಸ್ತಾನದ ಜೊತೆಗೆ ಅಮೆರಿಕ ಮಾಡಿಕೊಂಡಿರುವ ಒಪ್ಪಂದಗಳು.

ಹಾಗೆಯೇ ಕದನ ವಿರಾಮದ ಘೋಷಣೆಯ ಬೆನ್ನಿಗೇ, ಸಂದರ್ಭದ ಲಾಭ ಪಡೆದುಕೊಂಡು ಅಮೆರಿಕವು ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸುವ ಪ್ರಯತ್ನ ಮಾಡಿದೆ. ಆದರೆ ಭಾರತವು ಕಾಶ್ಮೀರಕ್ಕೆ ಸಂಬಂಧಿಸಿ ಅಮೆರಿಕದ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಇದು ಸಮಾಧಾನ ತರುವ ವಿಷಯ. ಆದರೆ ಅಮೆರಿಕವು ಪಾಕಿಸ್ತಾನದ ಕುರಿತಂತೆ ಮೃದು ನಿಲುವನ್ನು ಹೊಂದಿದೆ ಎನ್ನುವುದು ಅದರ ವರ್ತನೆಯಿಂದ ಸ್ಪಷ್ಟವಾಗಿದೆ. ಆಪರೇಷನ್ ಸಿಂಧೂರ ಭಾರತ ಸೇನೆಯ ನಿರ್ಧಾರವಾಗಿದೆಯೇ ಹೊರತು, ಅಮೆರಿಕದ ಆದೇಶದಂತೆ ಎಸಗಿದ ಕಾರ್ಯಾಚರಣೆಯಲ್ಲ. ಹೀಗಿರುವಾಗ, ಅಮೆರಿಕ ‘ನಿಲ್ಲಿಸಿ’ ಎಂದಾಕ್ಷಣ ನಿಲ್ಲಿಸುವುದಾಗಿದ್ದರೆ, ಈ ಕಾರ್ಯಾಚರಣೆಯ ಅಗತ್ಯವೇನಿತ್ತು?

ಕದನ ವಿರಾಮ ಘೋಷಣೆಯ ಬಳಿಕ ಕೆಲವು ಪ್ರಶ್ನೆಗಳು ಉತ್ತರವಿಲ್ಲದೆ ಬಿದ್ದುಕೊಂಡಿವೆ. ಅದರಲ್ಲಿ ಮೊದಲನೆಯದು, ಈ ಕಾರ್ಯಾಚರಣೆಯಲ್ಲಿ ಭಾರತಕ್ಕೂ ಅಪಾರ ನಾಶ, ನಷ್ಟವುಂಟಾಗಿದೆ. ಆದರೆ, ಕಾರ್ಯಾಚರಣೆ ತನ್ನ ಉದ್ದೇಶವನ್ನು ಸಾಧಿಸಿಕೊಂಡಿದೆಯೆ? ಮುಂದಿನ ದಿನಗಳಲ್ಲಿ ಉಗ್ರರಿಂದ ಭಾರತದ ಮೇಲೆ ಯಾವುದೇ ದಾಳಿ ನಡೆಯುವುದಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಂತಿದೆಯೆ? ಇಷ್ಟು ನಾಶ ನಷ್ಟಕ್ಕೆ ಪಾಕಿಸ್ತಾನ ಎಷ್ಟು ಹೊಣೆಯೋ, ಭಾರತ ಸರಕಾರದ ಭದ್ರತಾ ವೈಫಲ್ಯವೂ ಅಷ್ಟೇ ಹೊಣೆಯಲ್ಲವೆ? ಬರೇ ನಾಲ್ಕೇ ನಾಲ್ಕು ಭಯೋತ್ಪಾದಕರು ಸಾವಿರಾರು ಜನ ಪ್ರವಾಸಿಗರು ನೆರೆದಿರುವ ಪ್ರದೇಶಕ್ಕೆ ಬಂದು ದಾಳಿ ನಡೆಸುತ್ತಿರುವಾಗ ಅಲ್ಲಿ ಭಾರತ ಸರಕಾರ ನಾಲ್ಕು ಯೋಧರನ್ನು ಗಸ್ತಿಗೆ ಇಟ್ಟಿದ್ದರೂ ಪಹಲ್ಗಾಮ್ ದುರಂತ ಸಂಭವಿಸುತ್ತಿರಲಿಲ್ಲ. ಉಗ್ರರನ್ನು ಅಲ್ಲೇ ಕೊಂದು ಹಾಕಿ ಸಾವು ನೋವುಗಳನ್ನು ತಪ್ಪಿಸಬಹುದಾಗಿತ್ತು. ಈ ಭದ್ರತಾ ವೈಫಲ್ಯದಲ್ಲಿ ಯಾರೆಲ್ಲ ಪಾಲುದಾರರೋ ಅವರು ಪ್ರವಾಸಿಗರ ಸಾವಿಗೆ ಮಾತ್ರವಲ್ಲ, ಆಪರೇಷನ್ ಸಿಂಧೂರದ ಬಳಿಕ ಸಂಭವಿಸಿದ ಎಲ್ಲ ನಾಶ ನಷ್ಟಕ್ಕೆ ಪರೋಕ್ಷ ಕಾರಣರು. ಪಾಕಿಸ್ತಾನದ ಕಡೆ ಕೈ ತೋರಿಸಿ, ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಇನ್ನಾದರೂ ಪಹಲ್ಗಾಮ್ ಭದ್ರತಾ ವೈಫಲ್ಯಕ್ಕೆ ಕಾರಣರಾದವರ ತಲೆದಂಡವಾಗಬೇಕು. ಇದೇ ಸಂದರ್ಭದಲ್ಲಿ, ಕದನವಿರಾಮಕ್ಕೆ ಮುನ್ನ ಪಾಕಿಸ್ತಾನ ಮತ್ತು ಭಾರತ ಜಂಟಿಯಾಗಿ ಭಯೋತ್ಪಾದನೆಯ ವಿರುದ್ಧ ತಮ್ಮ ನಿಲುವನ್ನು ಘೋಷಿಸುವುದು ಅತ್ಯಗತ್ಯವಾಗಿತ್ತು. ಅಂತಹದೇನು ಸಂಭವಿಸದೇ ಇರುವುದರಿಂದ ಈ ವಿರಾಮ ಯಾವುದೇ ಸಮಯದಲ್ಲಿ ಮತ್ತೆ ಕದನದ ರೂಪದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಆದುದರಿಂದ ಪ್ರಧಾನಿ ಮೋದಿ, ಇನ್ನಾದರೂ ದೇಶದ ಭದ್ರತೆಗೆ ಸಂಬಂಧಿಸಿದ ಸರ್ವಪಕ್ಷ ಸಭೆಯಿಂದ ತಲೆಮರೆಸಿ ಓಡಾಡುವುದನ್ನು ನಿಲ್ಲಿಸಬೇಕು. ಸರ್ವಪಕ್ಷ ಸಭೆಯಲ್ಲಿ ಧೈರ್ಯದಿಂದ ಭಾಗವಹಿಸಿ, ದೇಶದ ಜನತೆ ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News