×
Ad

ಶಾಲಾ ವಾಹನಗಳಲ್ಲಿ ಮಕ್ಕಳ ರಕ್ಷಣೆಯ ಹೊಣೆ ಯಾರದ್ದು?

Update: 2026-07-06 06:58 IST

ಸಾಂದರ್ಭಿಕ ಚಿತ್ರ  Photo: chatgpt

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಶಾಲಾ ಬಸ್‌ಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷೆ ಮತ್ತು ರಕ್ಷಣೆಯ ಜವಾಬ್ದಾರಿ ಆಯಾ ಶಾಲಾ ಆಡಳಿತ ಮಂಡಳಿಗಳದ್ದೇ ಆಗಿರಲಿದೆ ಎಂದು ಹೈಕೋರ್ಟ್ ಹೇಳಿದೆ. 2025ರ ಆ. 1ರಂದು ಮಂಡ್ಯದಲ್ಲಿ ಶಾಲಾ ಬಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿ ಕಣ್ಣು ಕಳೆದು ಕೊಂಡ ಘಟನೆಗೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯ ಪೀಠ, ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ‘ಶಾಲಾ ಆವರಣದಲ್ಲಷ್ಟೇ ಅಲ್ಲ, ಮಗು ಬಸ್ ಹತ್ತಿದಾಗಿನಿಂದ ಸುರಕ್ಷಿತವಾಗಿ ಪೋಷಕರಲ್ಲಿ ಸೇರುವ ತನಕ ಮಗುವಿನ ರಕ್ಷಣೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರಲಿದೆ’ ಎಂದು ಹೈಕೋರ್ಟ್ ಹೇಳಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯ ಇದೆಯೇ ಇಲ್ಲವೇ ಎನ್ನುವುದು ತನಿಖೆಯ ಬಳಿಕವಷ್ಟೇ ಸಾಬೀತಾಗಬೇಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಹಿಂದೆಲ್ಲ ಮಕ್ಕಳು ಹಲವು ಕಿಲೋಮೀಟರ್ ನಡೆದು ಶಾಲೆ ಸೇರುತ್ತಿದ್ದರು. ವ್ಯಾಯಾಮದ ಜೊತೆ ಜೊತೆಗೇ ಮಕ್ಕಳು ಪರಿಸರದೊಂದಿಗೆ ಬೆರೆಯುತ್ತಾ ಜೊತೆ ಜೊತೆಯಾಗಿ ಶಾಲೆಯ ಕಡೆಗೆ ನಡೆಯುವುದು ಒಂದು ರೀತಿಯ ಶಿಕ್ಷಣವೇ ಆಗಿತ್ತು. ಪೋಷಕರಿಗಾಗಲಿ, ಮಕ್ಕಳಿಗಾಗಲಿ ಈ ಶಾಲೆಯ ದಾರಿ ಒಂದು ಸಮಸ್ಯೆಯಾಗಿರಲಿಲ್ಲ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹಲವು ಕಿಲೋಮೀಟರ್ ನಡೆದು ಶಾಲೆ ಸೇರುವ ಮಕ್ಕಳಿದ್ದಾರೆ. ಮಳೆಗಾಲದಲ್ಲಿ ಹತ್ತು ಹಲವು ಸವಾಲುಗಳನ್ನು ದಾಟಿ ಶಾಲೆ ಕಲಿಯಬೇಕಾದ ಪರಿಸ್ಥಿತಿ ಗ್ರಾಮೀಣ ಪ್ರದೇಶಗಳಲ್ಲಿವೆ. ಆದರೆ ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವುದರ ಜೊತೆ ಜೊತೆಗೇ ಶಾಲಾವಾಹನದ ಶುಲ್ಕ ಕಟ್ಟುವುದು ಅನಿವಾರ್ಯ ಎನ್ನುವ ಪರಿಸ್ಥಿತಿಯಿದೆ. ಇಂದು ನಗರ ಪ್ರದೇಶಗಳಲ್ಲಿ ಎಲ್‌ಕೆಜಿಯಿಂದ ಹಿಡಿದು ಎಸ್‌ಎಸ್‌ಎಲ್‌ಸಿವರೆಗೆ ಖಾಸಗಿ ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ತಲುಪಬೇಕಾದರೆ ವಾಹನಗಳ ಬಳಕೆ ಅತ್ಯಗತ್ಯ ಎನ್ನಿಸಿ ಬಿಟ್ಟಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳಿಗೆ ಪ್ರತೀ ತಿಂಗಳು ಶುಲ್ಕ ಪಾವತಿ ಮಾಡುವುದು ಅನಿವಾರ್ಯ. ಈ ಶುಲ್ಕವನ್ನು ಶಾಲಾ ಮಂಡಳಿ ವಾರ್ಷಿಕ ಮುಂಗಡವಾಗಿಯೇ ವಸೂಲಿ ಮಾಡುತ್ತದೆೆ. ಇಂದು ಪೋಷಕರು ಶಾಲೆಗಳ ಶುಲ್ಕಗಳಿಗೆ ನೀಡುವ ಹಣದಷ್ಟೇ ಶಾಲಾ ವಾಹನಗಳಿಗಾಗಿಯೂ ಪಾವತಿಸುತ್ತಾರೆ. ಆದರೆ ವಿದ್ಯಾರ್ಥಿಗಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತಲುಪಿಸುವ ಸಂದರ್ಭದಲ್ಲಿ ಈ ಶಾಲಾ ವಾಹನಗಳು ಎಷ್ಟರಮಟ್ಟಿಗೆ ತನ್ನ ಹೊಣೆಗಾರಿಕೆಗಳನ್ನು ನಿಭಾಯಿಸುತ್ತವೆ ಎನ್ನುವುದನ್ನು ಆಡಳಿತ ಮಂಡಳಿ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಪರಿಣಾಮವಾಗಿ ಈ ಶಾಲಾ ವಾಹನಗಳೇ ವಿದ್ಯಾರ್ಥಿಗಳ ಪಾಲಿಗೆ ಅಪಾಯಕಾರಿಯಾಗಿ ಬಿಡುತ್ತವೆ. ಶಾಲಾ ವಾಹನಗಳು ಅವಘಡ ಸಂಭವಿಸಿದಾಗ ಅಥವಾ ಚಾಲಕರ ಬೇಜವಾಬ್ದಾರಿಯಿಂದ ಮಕ್ಕಳಿಗೆ ತೊಂದರೆಯಾದಾಗ ಆಡಳಿತ ಮಂಡಳಿ ಮಾತ್ರ ಹೆಗಲು ಜಾರಿಸಿಕೊಳ್ಳುತ್ತವೆ.

ಶಾಲಾ ವಾಹನಗಳು ಶಾಲೆಯ ಒಂದು ಭಾಗವೇ ಆಗಿದೆ. ಶಾಲೆಯ ಆವರಣದಲ್ಲಿ ಅವಘಡಗಳು ಸಂಭವಿಸುವುದಿಲ್ಲ ಎನ್ನುವ ಕಾರಣಕ್ಕಾಗಿ ಅದರ ಹೊಣೆಗಾರಿಕೆಯಿಂದ ಆಡಳಿತ ಮಂಡಳಿ ಯಾವ ಕಾರಣಕ್ಕೂ ನುಣುಚಿಕೊಳ್ಳುವಂತಿಲ್ಲ. ಶಾಲಾ ವಾಹನಗಳಲ್ಲಿ ಮನೆಗೆ ಸಾಗುವ ದಾರಿಯಲ್ಲಿ ವಿದ್ಯಾರ್ಥಿಗಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಕೇವಲ ಚಾಲಕ, ನಿರ್ವಾಹಕರ ಮೇಲೆ ಕ್ರಮ ತೆಗೆದುಕೊಂಡರೆ ಸಾಕಾಗುವುದಿಲ್ಲ. ಯಾಕೆಂದರೆ ಅಂತಹ ಬೇಜವಾಬ್ದಾರಿ ಚಾಲಕನನ್ನು, ನಿರ್ವಾಹಕನನ್ನು ನೇಮಕ ಮಾಡಿರುವುದು ಶಾಲಾ ಆಡಳಿತ ಮಂಡಳಿಯಾಗಿರುವುದರಿಂದ, ಮೊದಲು ಶಿಕ್ಷೆಯಾಗಬೇಕಾಗಿರುವುದು ಆ ಮಂಡಳಿ ಮುಖ್ಯಸ್ಥರಿಗೆ. ಶಾಲಾ ವಾಹನಗಳಲ್ಲಿ ಸಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹತ್ತು ಹಲವು ಅಪಾಯಗಳನ್ನು ಎದುರಿಸುವ ಸಂದರ್ಭಗಳಿವೆ. ಚಾಲಕ ಮದ್ಯ ವ್ಯಸನಿಯಾಗಿದ್ದರೆ ಅಥವಾ ಬೇಜವಾಬ್ದಾರಿ ಚಾಲನೆಯನ್ನು ಮಾಡುತ್ತಿದ್ದರೆ ಅಪಘಾತಗಳಿಗೆ ಕಾರಣವಾಗಬಹುದು. ಇದೇ ಸಂದರ್ಭದಲ್ಲಿ ಪುಟ್ಟ ವಿದ್ಯಾರ್ಥಿಗಳು ಇತರ ಪ್ರಯಾಣಿಕರಂತಲ್ಲ. ಅವರೊಂದಿಗೆ ಅತ್ಯಂತ ಸೂಕ್ಷ್ಮವಾಗಿ, ಪ್ರಬುದ್ಧವಾಗಿ ವ್ಯವಹರಿಸಬೇಕಾಗುತ್ತದೆ. ಅವರ ಆತಂಕ, ಬೇಡಿಕೆ, ಅಳಲುಗಳಿಗೆ ಕಿವಿಯಾಗುವ ಹೃದಯವನ್ನು ಅವರು ಹೊಂದಿರುವುದು ಅತ್ಯಗತ್ಯ. ಯಾವುದೇ ಪೂರ್ವಾಪರ ವಿಚಾರಿಸದೆ ಚಾಲಕರನ್ನು ಮತ್ತು ನಿರ್ವಾಹಕರನ್ನು ಆಡಳಿತ ಮಂಡಳಿ ನೇಮಕ ಮಾಡಿದರೆ ಅದು ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು.

ಮನೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಶಾಲಾ ವಾಹನದ ಚಾಲಕ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವ ಹಲವು ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಆಡಳಿತ ಮಂಡಳಿ ಕಡಿಮೆ ವೇತನಕ್ಕೆ ಸಿಗುವ ಚಾಲಕನನ್ನು ಹುಡುಕುವ ಭರದಲ್ಲಿ ಆತನ ಹಿನ್ನೆಲೆಯ ಬಗ್ಗೆ ವಿಚಾರಣೆ ನಡೆಸುವುದಿಲ್ಲ. ಕೆಲವೊಮ್ಮೆ ಆತನ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರಬಹುದು. ಆತ ಮದ್ಯ, ಗಾಂಜಾ ವ್ಯಸನಿಯಾಗಿದ್ದು ಆ ಕುರಿತಂತೆ ಯಾವುದೋ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರಬಹುದು. ಅಂತಹ ಹಿನ್ನೆಲೆಯಿರುವ ಚಾಲಕರನ್ನು ಶಾಲಾ ವಾಹನಗಳಿಗೆ ನೇಮಕ ಮಾಡುವುದು ಆಡಳಿತ ಮಂಡಳಿಯ ಅಪರಾಧವೇ ಆಗಿದೆ. ಆದುದರಿಂದ, ಏನಾದರೂ ದುರ್ಘಟನೆ ಸಂಭವಿಸಿದರೆ ಮೊದಲು ಪ್ರಕರಣ ದಾಖಲಿಸಬೇಕಾದುದು ಶಾಲಾ ಆಡಳಿತ ಮಂಡಳಿಯ ಮೇಲೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಹೇಗೆ ವರ್ತಿಸಬೇಕು, ವಿದ್ಯಾರ್ಥಿಗಳನ್ನು ಹೇಗೆ ಜೋಪಾನವಾಗಿ ಮನೆಗೆ ತಲುಪಿಸಬೇಕು, ಹೇಗೆ ಜೋಪಾನವಾಗಿ ರಸ್ತೆ ದಾಟಿಸಬೇಕು ಇತ್ಯಾದಿಗಳ ಬಗ್ಗೆ ಚಾಲಕರಿಗೆ, ನಿರ್ವಾಹಕರಿಗೆ ಆಡಳಿತ ಮಂಡಳಿ ವಿಶೇಷ ತರಬೇತಿಯನ್ನು ನೀಡಬೇಕಾಗಿದೆ. ಆದುದರಿಂದ, ಎಲ್ಲ ಖಾಸಗಿ ಶಾಲೆಗಳ ಶಾಲಾವಾಹನಗಳಿಗೆ ಸಂಬಂಧಿಸಿದ ವಿವರಗಳನ್ನು, ವರದಿಗಳನ್ನು ಶಿಕ್ಷಣ ಇಲಾಖೆ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಹಾಗೆಯೇ ಶಾಲಾವಾಹನಗಳಿಗೆ ದುಬಾರಿ ಶುಲ್ಕಗಳನ್ನು ವಿಧಿಸುವ ಶಾಲೆಗಳ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪೋಷಕರ ಅನಿವಾರ್ಯವನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಶೋಷಿಸುವ ಶಾಲೆಗಳಿಗೆ ಕಡಿವಾಣ ವಿಧಿಸಬೇಕಾಗಿದೆ.

ಶಾಲಾ ಬಸ್ಸುಗಳು ಮನೆ ಮತ್ತು ಶಾಲೆಗಳನ್ನು ಬೆಸೆಯುವ ಸೇತುವೆಯಾಗಿದೆ. ಮನೆಯಿಂದ ಯಾವಾಗ ಬಸ್ಸಿನ ಮೆಟ್ಟಿಲನ್ನು ವಿದ್ಯಾರ್ಥಿಗಳು ತುಳಿಯುತ್ತಾರೋ ಆಗಲೇ ಅವರು ಶಾಲೆಯ ಆವರಣದಲ್ಲಿರುತ್ತಾರೆ ಎನ್ನುವ ಎಚ್ಚರಿಕೆ ಶಾಲಾ ಆಡಳಿತ ಮಂಡಳಿಗೆ ಬೇಕಾಗಿದೆ. ಹೇಗೆ ಶಿಕ್ಷಕರ ದುರ್ವರ್ತನೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಾಯಗಳನ್ನುಂಟು ಮಾಡಬಹುದೋ ಹಾಗೆಯೇ ಬಸ್ ಚಾಲಕ, ನಿರ್ವಾಹಕರ ದುರ್ವರ್ತನೆಗಳೂ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಶಾಲಾ ವಾಹನಗಳ ಜವಾಬ್ದಾರಿಗೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪು ಮಹತ್ವ ಪೂರ್ಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News