×
Ad

ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಶಿಪ್ಸ್ 2025 : ಐತಿಹಾಸಿಕ ಸಾಧನೆಗೈದ ಭಾರತ ತಂಡಕ್ಕೆ ಭವ್ಯ ಸ್ವಾಗತ

Update: 2025-09-23 22:32 IST

PC : ANI 

ಹೊಸದಿಲ್ಲಿ, ಸೆ. 23: ಚೀನಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿರುವ ಭಾರತೀಯ ತಂಡವು ಮಂಗಳವಾರ ಭಾರತಕ್ಕೆ ಮರಳಿದೆ. ಈ ಸಂದರ್ಭದಲ್ಲಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಂಡಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಪಂದ್ಯಾವಳಿಯು ಸೆಪ್ಟಂಬರ್ 13ರಿಂದ 21ರವರೆಗೆ ನಡೆದಿದೆ.

ಈ ಪಂದ್ಯಾವಳಿಯಲ್ಲಿ ಭಾರತವು ದಾಖಲೆಯ ಮೂರು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಈವರೆಗಿನ ಅತ್ಯಂತ ಯಶಸ್ವಿ ಪ್ರದರ್ಶನವಾಗಿದೆ.

ಹಿರಿಯ ಸ್ಕೇಟರ್ ಆನಂದ್‌ಕುಮಾರ್ ವೇಲ್ಕುಮಾರ್ ಅತ್ಯುತ್ತಮ ನಿರ್ವಹಣೆಯೊಂದಿಗೆ ಸೀನಿಯರ್ ಪುರುಷರ 1,000 ಮೀಟರ್ ಸ್ಪ್ರಿಂಟ್‌ನಲ್ಲಿ ಒಂದು ನಿಮಿಷ 24.924 ಸೆಕೆಂಡ್ ಹೊತ್ತುಗಾರಿಕೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಇದು ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವಾಗಿದೆ. ಬಳಿಕ, ಅವರು ಪುರುಷರ ಮ್ಯಾರಥನ್ ವಿಭಾಗದಲ್ಲಿ ಇನ್ನೊಂದು ಚಿನ್ನವನ್ನು ಗೆದ್ದರು ಮತ್ತು 500 ಮೀಟರ್ ಸ್ಪ್ರಿಂಟ್‌ನಲ್ಲಿ ಕಂಚಿನ ಪದಕ ಜಯಿಸಿದರು. ಅವರು ಈ ಕೂಟದಲ್ಲಿ ಒಟ್ಟು ಮೂರು ಪದಕಗಳನ್ನು ಗೆದ್ದಿದ್ದಾರೆ.

ಸಾಂಪ್ರದಾಯಿಕವಾಗಿ ಯುರೋಪ್ ಮತ್ತು ಪೂರ್ವ ಏಶ್ಯದ ದೇಶಗಳು ಪ್ರಾಬಲ್ಯ ಹೊಂದಿರುವ ಕ್ರೀಡೆಯೊಂದರಲ್ಲಿ ಆನಂದ್‌ಕುಮಾರ್ ಅವರ ಸಾಧನೆಯು ಭಾರತದ ಪಾಲಿಗೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ವರ್ಲ್ಡ್ ಸ್ಕೇಟ್‌ನ ಅಧಿಕೃತ ವೆಬ್‌ಸೈಟ್ ಬಣ್ಣಿಸಿದೆ.

ಈ ಪಂದ್ಯಾವಳಿಯಲ್ಲಿ, ಜೂನಿಯರ್ ಪುರುಷರ 1,000 ಮೀಟರ್ ಸ್ಪ್ರಿಂಟ್‌ನಲ್ಲಿ ಭಾರತದ ಕೃಷ್ ಶರ್ಮಾ ಚಿನ್ನದ ಪದಕ ಗೆದ್ದಿದ್ದಾರೆ. ಅದೇ ವೇಳೆ, ಜೂನಿಯರ್ ಪುರುಷರ ವನ್-ಲ್ಯಾಪ್ ಸ್ಪ್ರಿಂಟ್ ವಿಭಾಗದಲ್ಲಿ ಅನೀಶ್ ರಾಜ್ ಕಂಚಿನ ಪದಕ ಪಡೆದರು.

‘‘ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ನಾನು ಇತ್ತೀಚೆಗೆ ಎರಡು ಚಿನ್ನದ ಪದಕಗಳನ್ನು ಗೆದಿದ್ದೇನೆ. ನನಗೆ ತುಂಬಾ ಸಂತೋಷವಾಗುತ್ತಿದೆ. ಇಡೀ ತಂಡವು ಸಂಭ್ರಮಿಸುತ್ತಿದೆ. ಯಾಕೆಂದರೆ, ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ನಾವು ಇಷ್ಟೊಂದು ಪದಕಗಳನ್ನು ಗೆದ್ದಿರುವುದು ಇದೇ ಮೊದಲು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್‌ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News