ಭಾರತ ಕ್ರಿಕೆಟ್ ತಂಡವನ್ನು ಕಾಡುತ್ತಿದೆ ಗಾಯದ ಸಮಸ್ಯೆ : 2027ರ ಏಕದಿನ ವಿಶ್ವಕಪ್ ತಯಾರಿಗೆ ಭಾರೀ ಹಿನ್ನಡೆ
ಶುಭಮನ್ ಗಿಲ್ | Photo Credit : PTI
ಹೊಸದಿಲ್ಲಿ, ಜು.21: ಸಾಮಾನ್ಯವಾಗಿ ತಾಳ್ಮೆ ಹಾಗೂ ಸಮತೋಲನದಿಂದ ವರ್ತಿಸುವ ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್, ಇಂಗ್ಲೆಂಡ್ ತಂಡದ ವಿರುದ್ದ ಲಾರ್ಡ್ಸ್‌ನಲ್ಲಿ ಮೂರನೇ ಏಕದಿನ ಪಂದ್ಯವನ್ನು ಸೋತ ನಂತರ ಹತಾಶೆಗೊಂಡಂತೆ ಕಂಡುಬಂದರು. ಆಸ್ಟ್ರೇಲಿಯ ಪ್ರವಾಸಕ್ಕಿಂತ ಮೊದಲು ರೋಹಿತ್ ಶರ್ಮಾರಿಂದ ನಾಯಕತ್ವ ವಹಿಸಿಕೊಂಡ ನಂತರ ಗಿಲ್ ಮೂರನೇ ಬಾರಿ ಏಕದಿನ ಸರಣಿ ಸೋತಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ತನ್ನ ತಂಡದ ಆಡಿದ ರೀತಿಗೆ ಗಿಲ್ ಹತಾಶೆರಾಗಿರಲಿಲ್ಲ. ಸತತವಾಗಿ ಆಟಗಾರರು ಗಾಯದ ಸಮಸ್ಯೆಗಳಿಗೆ ಒಳಗಾಗಿ, ತಂಡದ ತಯಾರಿಗೆ ತೊಡಕಾಗುತ್ತಿರುವುದು, ಬಲಿಷ್ಠ ಆಡುವ 11ರ ಬಳಗವನ್ನು ಇಳಿಸಲು ಸಾಧ್ಯವಾಗದೇ ಇರುವುದಕ್ಕೆ ಬೇಸರಗೊಂಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಲು ಭಾರತ ತಂಡದ ಗಾಯಾಳು ಬಿಕ್ಕಟ್ಟು ಗಂಭೀರ ಕಳವಳದ ವಿಚಾರವಾಗಿದೆ.
ವಿಶ್ವಕಪ್‌ನಂತಹ ಬಹುರಾಷ್ಟ್ರಗಳ ಸ್ಪರ್ಧೆಗಳ ಕುರಿತು ಚರ್ಚೆ ನಡೆದಾಗ ಟೀಮ್ ಮ್ಯಾನೇಜ್‌ಮೆಂಟ್ ಸಾಕಷ್ಟು ವೇಗದ ಬೌಲಿಂಗ್ ಆಯ್ಕೆಗಳನ್ನು ಸಿದ್ದಪಡಿಸಲು ಉತ್ಸುಕವಾಗುತ್ತಿತ್ತು. ಆದರೆ, ಪ್ರಾಥಮಿಕ ಹಾಗೂ ಮೀಸಲು ಆಯ್ಕೆಗಳಾದ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ ರೆಡ್ಡಿ ಬೆಂಗಳೂರಿನ ಬಿಸಿಸಿಐ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ.
ರೆಡ್ಡಿ ಅವರು ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಗೊಂಡಿದ್ದರು. 2025ರ ಮಾರ್ಚ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಡಿದ ನಂತರ ಪಾಂಡ್ಯ ಅವರು ಭಾರತದ ಏಕದಿನ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಎಂಟನೇ ಕ್ರಮಾಂಕದಲ್ಲಿ ಆಡುವುದಕ್ಕೆ ಸಜ್ಜಗೊಳ್ಳುತ್ತಿರುವ ನಿತೀಶ್ ರಾಣಾ ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಗಾಯಗೊಂಡಿದ್ದಾರೆ.
ಸ್ಪಿನ್ ಬೌಲಿಂಗ್ ವಿಭಾಗ ಕೂಡ ಗಾಯದ ಸಮಸ್ಯೆಯಿಂದ ಮುಕ್ತವಾಗಿಲ್ಲ, ಕಳೆದ ಆರು ತಿಂಗಳಲ್ಲಿ ವಾಶಿಂಗ್ಟನ್ ಸುಂದರ್ ಹಲವು ಬಾರಿ ಗಾಯಗೊಂಡಿದ್ದಾರೆ. ಟಿ-20 ವಿಶ್ವಕಪ್‌ಗಿಂತ ಮೊದಲು ಗಾಯಗೊಂಡಿದ್ದ ಸುಂದರ್, ಈ ತಿಂಗಳು ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು.
ಚಾಂಪಿಯನ್ಸ್ ಲೀಗ್ ಗೆಲುವಿನ ವೇಳೆ ಭಾರತದ ಪ್ರಮುಖ ಅಸ್ತ್ರವಾಗಿದ್ದ ವರುಣ್ ಚಕ್ರವರ್ತಿ ಅವರು ಕೂಡ ಅಸ್ಥಿರಜ್ಜು ಗಾಯದಿಂದ ಬಳಲುತ್ತಿದ್ದಾರೆ.
ಗಾಯದ ಮೇಲೆ ಉಪ್ಪು ಸವರಿದ ಹಾಗೆ, ಭಾರತದ ಸ್ಟಾರ್ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರು ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಕೇವಲ ಎರಡು ಏಕದಿನ ಪಂದ್ಯಗಳನ್ನು ಆಡಿದ್ದರು. ಲಾರ್ಡ್ಸ್‌ನಲ್ಲಿ ನಡೆದಿದ್ದ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ನಾಯಕ ಗಿಲ್ ಅವರು ಅನನುಭವಿ ಬೌಲರ್‌ಗಳಾದ ಗುರ್ನೂರ್ ಬ್ರಾರ್ ಹಾಗೂ ಪ್ರಿನ್ಸ್ ಯಾದವ್‌ರನ್ನು ನೆಚ್ಚಿಕೊಳ್ಳಬೇಕಾಯಿತು.
ಸರಣಿಯುದ್ದಕ್ಕೂ ಪ್ರಮುಖ ಆಟಗಾರರ ಅಲಭ್ಯದ ಕುರಿತ ಪ್ರಶ್ನೆಗೆ ನಾಯಕ ಗಿಲ್ ನಿರುತ್ತರರಾದರು.
‘‘ನಾನು ವಿಶ್ವಕಪ್ ಗೆಲ್ಲುವ ಗುರಿ ಇಟ್ಟುಕೊಂಡಾಗ ಸತತ 11 ಪಂದ್ಯಗಳನ್ನು ಆಡಬೇಕಾಗುತ್ತದೆ. ಇಲ್ಲಿ ನಮ್ಮಲ್ಲಿರುವ ಆಟಗಾರರಿಗೆ ಎರಡು ಅಥವಾ ಮೂರು ಪಂದ್ಯಗಳ ಸರಣಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ಮಿತಿಯಿರುವ ಕಾರಣ ನಮ್ಮ ಆಟಗಾರರಿಗೆ ನಿರಂತರವಾಗಿಆಡಲು ಸಾಧ್ಯವಾಗುತ್ತಿಲ್ಲ . ಒಂದರಿಂದ ಎರಡು ಪಂದ್ಯಗಳನ್ನು ಆಡಿದರೆ ಗಾಯಗೊಳ್ಳುತ್ತಾರೆ. ಆಗ ನಾವು ವಿಭಿನ್ನ ಕಾಂಬಿನೇಶನ್ ಆಡಿಸಬೇಕಾಗುತ್ತದೆ. ಆಗ ನಾವು ಮೊದಲು ಯೋಜಿಸಿದಂತೆ ಆಡಲು ಸಾಧ್ಯವಾಗುವುದಿಲ್ಲ’’ ಎಂದರು.
ಪಾಂಡ್ಯ, ರೆಡ್ಡಿ, ಚಕ್ರವರ್ತಿ ಹಾಗೂ ರಾಣಾ ಸದ್ಯ ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲ್‌ದ್ದಾರೆ. ಸುಂದರ್ ಕೂಡ ಅವರನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ರೆಡ್ಡಿ ಹೊರತುಪಡಿಸಿ ಇತರ ನಾಲ್ವರು ಭಾರತದ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದಲ್ಲಿದ್ದರು. ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ರಾಣಾರನ್ನು ಹೊರತುಪಡಿಸಿ ಇತರ ನಾಲ್ವರು 2026ರ ಟಿ-20 ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡದಲ್ಲಿದ್ದರು.
ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸಂಪೂರ್ಣ ಸಿದ್ಧತೆ ನಡೆಸಲು ಎಲ್ಲ ಐವರು ಆಟಗಾರರು ಫಿಟ್ನೆಸ್ ಪಡೆಯಬೇಕಾಗುತ್ತದೆ. ತಂಡದ ಉಳಿದ ಆಟಗಾರರು ಮೈದಾನದೊಳಗೆ ಇನ್ನಷ್ಟು ಸಮಯ ಕಳೆಯಬೇಕಾಗಿದೆ.