8 ವಿಶ್ವಕಪ್ ಪಂದ್ಯಗಳಲ್ಲಿ 790 ಪಾಸ್ ಪೂರ್ಣಗೊಳಿಸಿದ ಸ್ಪೇನ್ ನಾಯಕ ರೋಡ್ರಿ : ಫಿಫಾ ವಿಶ್ವಕಪ್, ಚಾಂಪಿಯನ್ಸ್ ಲೀಗ್, ಯುರೋ ಕಪ್ ಜಯಿಸಿ ಅಪರೂಪದ ಸಾಧನೆ

Update: 2026-07-21 21:04 IST

ಮಿಡ್ ಫೀಲ್ಡರ್ ರೋಡ್ರಿ | Photo Credit : X

ಮ್ಯಾಡ್ರಿಡ್, ಜು.21: ಚಾಂಪಿಯನ್ಸ್ ಲೀಗ್, ಫಿಫಾ ವಿಶ್ವಕಪ್, ಯುರೋ ಕಪ್ ಹಾಗೂ ಬ್ಯಾಲನ್ ಡಿ’ಓರ್ ಪ್ರಶಸ್ತಿಗಳನ್ನು ಗೆದ್ದಿರುವ ಸ್ಪೇನ್‌ನ 30ರ ವಯಸ್ಸಿನ ಮಿಡ್ ಫೀಲ್ಡರ್ ರೋಡ್ರಿ ತನ್ನ ವೃತ್ತಿಜೀವನದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.

ಸ್ಪೇನ್ ತಂಡವು ಎರಡನೇ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ನಾಯಕತ್ವ ವಹಿಸಿರುವ ರೋಡ್ರಿ ಕಳೆದ ಎರಡು ವರ್ಷಗಳಲ್ಲಿ 416 ದಿನಗಳನ್ನು ಗಾಯದಿಂದಾಗಿ ವ್ಯರ್ಥ ಮಾಡಿಕೊಂಡಿದ್ದರು. ಈ ಬಾರಿಯ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ರೋಡ್ರಿ ‘ಗೋಲ್ಡನ್ ಬಾಲ್’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

2024ರಲ್ಲಿ ರೋಡ್ರಿ ಅವರ ಬಲ ಮೊಣಕಾಲಿನ ಮುಂಭಾಗದ ಅಸ್ಥಿರಜ್ಜು ಛಿದ್ರಗೊಂಡಿತ್ತು. ಆಗ ಮ್ಯಾಂಚೆಸ್ಟರ್ ಸಿಟಿ ಹಾಗೂ ಸ್ಪೇನ್ ಪರ ಅದ್ಭುತ ಪ್ರದರ್ಶನ ನೀಡಿದ್ದ ರೋಡ್ರಿ ಅವರ ವೃತ್ತಿಜೀವನ ಅಂತ್ಯವಾಯಿತು ಎಂದು ಹಲವು ಭಾವಿಸಿದ್ದರು.

ಕಳೆದ ವರ್ಷ ಅಕ್ಟೋಬರ್ ಸುಮಾರಿಗೆ ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಕೋಚ್ ಪೆಪ್ ಗಾರ್ಡಿಯೊಲಾ ಅವರು ‘ರಿಯಲ್ ರೋಡ್ರಿ’ಅವರು 2026ರಲ್ಲಿ ಉತ್ತರ ಅಮೆರಿಕದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಮರಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.

ಸ್ಪೇನ್ ತಂಡ ವಿಶ್ವಕಪ್ ಟೂರ್ನಮೆಂಟ್‌ಗೆ ಪ್ರವೇಶಿಸಿದಾಗ ಯುವ ಆಟಗಾರ ಲಾಮಿನ್ ಯಮಾಲ್ ‘ಪೋಸ್ಟರ್ ಬಾಯ್’ ಆಗಿದ್ದರು. ಯಮಾಲ್ ಸ್ಪೇನ್ ಯಶಸ್ಸಿನ ಟ್ರಂಪ್ ಕಾರ್ಡ್ ಆಗಲಿದ್ದಾರೆಂದು ಬಿಂಬಿಸಲಾಗಿತ್ತು. ಆದರೆ ಸ್ಪೇನ್ ಅಡಿದ ಪಂದ್ಯಗಳನ್ನು ನೋಡಿದವರಿಗೆ ಅದು ಮಿಡ್ ಫೀಲ್ಡ್ ಮೂಲಕವೇ ಚಾಂಪಿಯನ್‌ಶಿಪ್ ಗೆದ್ದಿದೆ ಎಂದು ಗೊತ್ತಾಗುತ್ತದೆ.

ರೋಡ್ರಿ 2026ರ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ ಎಂಟು ಪಂದ್ಯಗಳಲ್ಲಿ 790 ಪಾಸ್‌ಗಳನ್ನು ಪೂರೈಸಿ ನಾಲ್ಕು ವರ್ಷಗಳ ಹಿಂದೆ ಒಂದೇ ಆವೃತ್ತಿಯ ಟೂರ್ನಿಯಲ್ಲಿ ನಿರ್ಮಿಸಿದ್ದ ತನ್ನದೇ ಸಾರ್ವಕಾಲಿಕ ದಾಖಲೆ(638)ಯನ್ನು ಪುಡಿಗಟ್ಟಿದರು. 2022ರಲ್ಲಿ ರೋಡ್ರಿ ಅವರು ಪಂದ್ಯಾವಳಿಯ ಬಹುತೇಕ ಅವಧಿಯಲ್ಲಿ ಸೆಂಟರ್-ಬ್ಯಾಕ್‌ನಲ್ಲಿ ಆಡಿದ್ದರು. ಈ ಬಾರಿ ಅವರು ಮಿಡ್‌ಫೀಲ್ಡ್‌ನಲ್ಲಿ ಆಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News