ನನ್ನ ಮೇಲೆ ವಿಶ್ವಾಸವಿರಿಸಿರುವ ಆರ್ಸಿಬಿಗೆ ಕೃತಜ್ಞತೆ: ಯಶ್ ದಯಾಳ್
Photo Courtesy: PTI
ಮುಂಬೈ: ಕಳೆದೊಂದು ವರ್ಷದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊರತಾಗಿಯೂ ಇತ್ತೀಚೆಗೆ 5 ಕೋ.ರೂ.ಗೆ ತನ್ನನ್ನು ಉಳಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೃತಜ್ಞತೆ ಸಲ್ಲಿಸಿರುವ ಯಶ್ ದಯಾಳ್ 2027ರ ಐಪಿಎಲ್ನಲ್ಲಿ ತನ್ನ ಫ್ರಾಂಚೈಸಿ ಪರ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ.
‘‘ಇದು ನನ್ನ ಪಾಲಿಗೆ ಮಹತ್ವದ ವಿಚಾರವಾಗಿದೆ. ಆರ್ಸಿಬಿ ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ಯೋಚಿಸಿಯೇ ಇರಲಿಲ್ಲ. ಆರ್ಸಿಬಿ ನನ್ನನ್ನು ಉಳಿಸಿಕೊಂಡು ನನ್ನ ಮೇಲೆ ವಿಶ್ವಾಸವಿರಿಸಿದೆ. ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಯತ್ನಿಸುವೆ. ನನ್ನಲ್ಲಿರುವ ಎಲ್ಲ ಅನುಭವವನ್ನು ಬಳಸಿಕೊಂಡು ಈ ವರ್ಷ ನೂರು ಶೇಕಡಾ ಪ್ರದರ್ಶನ ನೀಡುವೆ’’ ಎಂದು ದಯಾಳ್ ಹೇಳಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ ಟೂರ್ನಿಯಲ್ಲಿ ನಾಲ್ಕು ಓವರ್ಗಳಲ್ಲಿ 29 ರನ್ಗೆ ಎರಡು ವಿಕೆಟ್ಗಳನ್ನು ಪಡೆದು ಉತ್ತರಪ್ರದೇಶ ತಂಡವು ಹಾಲಿ ಚಾಂಪಿಯನ್ ಜಾರ್ಖಂಡ್ ತಂಡವನ್ನು 12 ರನ್ನಿಂದ ಸೋಲಿಸಲು ಪ್ರಮುಖ ಪಾತ್ರವಹಿಸಿದ್ದ ದಯಾಳ್ ರವಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಡಗೈ ವೇಗದ ಬೌಲರ್ 15 ಪಂದ್ಯಗಳಲ್ಲಿ 9.59ರ ಇಕಾನಮಿ ರೇಟ್ನಲ್ಲಿ ಒಟ್ಟು 13 ವಿಕೆಟ್ಗಳನ್ನು ಪಡೆದಿದ್ದಾರೆ. 2025ರಲ್ಲಿ ಆರ್ಸಿಬಿ ತಂಡವು ತನ್ನ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ಆದರೆ ಕೆಲವೊಂದು ಕಾನೂನು ಪ್ರಕರಣಗಳಿಂದಾಗಿ 2026ರ ಐಪಿಎಲ್ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ.
ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ ಟೂರ್ನಿಯಲ್ಲಿ ಉತ್ತರಪ್ರದೇಶದ ಪರ ಈ ತನಕ ನಾಲ್ಕು ಪಂದ್ಯಗಳನ್ನಾಡಿರುವ ದಯಾಳ್ 9.71ರ ಇಕಾನಮಿ ರೇಟ್ನಲ್ಲಿ ಆರು ವಿಕೆಟ್ಗಳನ್ನು ಪಡೆದಿದ್ದಾರೆ. ದಯಾಳ್ ಹಿರಿಯ ವೇಗದ ಬೌಲರ್ ಭುವನೇಶ್ವರ ಕುಮಾರ್ಗೆ ಉತ್ತಮ ಸಾಥ್ ನೀಡಿದ್ದಾರೆ. ಕುಮಾರ್ 39 ರನ್ಗೆ ಮೂರು ವಿಕೆಡ್ಗಳನ್ನು ಉರುಳಿಸಿ ಜಾರ್ಖಂಡ್ ವಿರುದ್ಧ ಉತ್ತರ ಪ್ರದೇಶ ತಂಡ ಗೆಲ್ಲುವಲ್ಲಿ ನೆರವಾಗಿದ್ದರು.
ದಯಾಳ್ ಒಟ್ಟು 75 ಟಿ-20 ಪಂದ್ಯಗಳಲ್ಲಿ 8.76ರ ಇಕಾನಮಿ ರೇಟ್ನಲ್ಲಿ 72 ವಿಕೆಟ್ಗಳನ್ನು ಪಡೆದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ ಟೂರ್ನಿಯಲ್ಲಿ ‘ಸ್ವಿಂಗ್ ಕಿಂಗ್’ ಭುವನೇಶ್ವರ ಜೊತೆ ಬೌಲಿಂಗ್ ಮಾಡಿ ಸಾಕಷ್ಟು ಪಾಠ ಕಲಿತ್ತಿದ್ದಾರೆ.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಆರ್ಸಿಬಿ 43 ಪಂದ್ಯಗಳನ್ನು ಆಡಿರುವ ದಯಾಳ್ 9.57ರ ಇಕಾನಮಿ ರೇಟ್ನಲ್ಲಿ ಒಟ್ಟು 41 ವಿಕೆಟ್ಗಳನ್ನು ಪಡೆದಿದ್ದಾರೆ.