ಹಸನ್ ಮಹ್ಮೂದ್ ಗೆ 6 ವಿಕೆಟ್ | ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯ 198 ರನ್ ಗೆ ಆಲೌಟ್
Photo Credit ; PTI
ಡಾರ್ವಿನ್, ಆ. 13: ವೇಗದ ಬೌಲರ್ ಹಸನ್ ಮಹ್ಮೂದ್ ಅವರ ಜೀವನಶ್ರೇಷ್ಠ ಬೌಲಿಂಗ್ (6-55) ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ 198 ರನ್ಗೆ ಆಲೌಟ್ ಆಗಿದೆ.
ಗುರುವಾರ ಟಾಸ್ ಗೆದ್ದ ಆಸ್ಟ್ರೇಲಿಯ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಹಸನ್ ತಮ್ಮ ಆರನೇ ಓವರ್ ನಲ್ಲಿ ವಿಕೆಟ್ ಬೇಟೆ ಆರಂಭಿಸುವ ಮೊದಲು ಆಸ್ಟ್ರೇಲಿಯ ತಂಡ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿ ತುರುಸಿನ ಆರಂಭ ಪಡೆದಿತ್ತು. ಆರಂಭಿಕ ಆಟಗಾರ ಜೇಕ್ ವೆದರಾಲ್ಡ್ (23 ರನ್) ಅವರ ವಿಕೆಟ್ ಪಡೆದ ಹಸನ್, ಮುಂದಿನ ಓವರ್ ನಲ್ಲಿ ಇನ್ನೋರ್ವ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (22 ರನ್) ಅವರ ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶ ಕಲ್ಪಿಸಿದರು.
ಹಸನ್, ತಸ್ಕಿನ್ ಅಹ್ಮದ್ ಹಾಗೂ ಎಬಾಡಾಟ್ ಹುಸೇನ್ ಪರಿಸ್ಥಿತಿಯ ಲಾಭ ಪಡೆದರು. ತಸ್ಕಿನ್ (2-55) ಹಾಗೂ ಎಬಾಡಾಟ್ (2-39) ತಲಾ ಎರಡು ವಿಕೆಟ್ ಗಳನ್ನು ಪಡೆದರು. ಮೊದಲೆರಡು ಸೆಷನ್ಗಳಲ್ಲಿ ಬಾಂಗ್ಲಾದೇಶದ ವೇಗಿಗಳು ಆಸ್ಟ್ರೇಲಿಯ ಬ್ಯಾಟರ್ ಗಳಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
109 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 71 ರನ್ ಗಳಿಸಿದ ಸ್ಟೀವ್ ಸ್ಮಿತ್ ಆಸ್ಟ್ರೇಲಿಯದ ಇನಿಂಗ್ಸ್ಗೆ ಆಸರೆಯಾದರು. ಸ್ಮಿತ್ ಹಾಗೂ ವಿಕೆಟ್ಕೀಪರ್ ಅಲೆಕ್ಸ್ ಕ್ಯಾರಿ (19 ರನ್) ಐದನೇ ವಿಕೆಟ್ಗೆ 55 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಇದು ಆಸ್ಟ್ರೇಲಿಯ ಇನಿಂಗ್ಸ್ ನಲ್ಲಿ ಹೊರಬಂದ ಗರಿಷ್ಠ ರನ್ ಜೊತೆಯಾಟವಾಗಿದೆ.
ಆದರೆ, ಸ್ಥಿರವಾಗಿ ಶಿಸ್ತುಬದ್ಧ ಬೌಲಿಂಗ್ ಮಾಡಿದ ಬಾಂಗ್ಲಾದೇಶದ ಬೌಲರ್ ಗಳು ಆಸ್ಟ್ರೇಲಿಯ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ವೇಗದ ಬೌಲರ್ ಗಳು ಆಸ್ಟ್ರೇಲಿಯ ತಂಡವನ್ನು 198 ರನ್ಗೆ ನಿಯಂತ್ರಿಸಿದರು.
ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡವು 1 ವಿಕೆಟ್ ನ ನಷ್ಟಕ್ಕೆ 96 ರನ್ ಗಳಿಸಿದೆ. ತಂಝೀದ್ ಹಸನ್ (ಔಟಾಗದೆ 32, 67 ಎಸೆತ, 4 ಸಿಕ್ಸರ್) ಹಾಗೂ ಮೂಮಿನುಲ್ ಹಕ್ (ಔಟಾಗದೆ 35, 49 ಎಸೆತ, 6 ಬೌಂಡರಿ) ಎರಡನೇ ವಿಕೆಟ್ಗೆ 96 ಎಸೆತಗಳಲ್ಲಿ 60 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
►ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 198 ರನ್ಗೆ ಆಲೌಟ್
(ಸ್ಟೀವನ್ ಸ್ಮಿತ್ 71, ವೆದರಾಲ್ಡ್ 23, ಟ್ರಾವಿಸ್ ಹೆಡ್ 22, ಅಲೆಕ್ಸ್ ಕ್ಯಾರಿ 19, ಹಸನ್ ಮಹ್ಮೂದ್ 6-55, ಹುಸೇನ್ 2-39, ತಸ್ಕಿನ್ ಅಹ್ಮದ್ 2-55)
ಬಾಂಗ್ಲಾದೇಶ ಮೊದಲ ಇನಿಂಗ್ಸ್: 96/1
(ತಂಝೀದ್ ಹಸನ್ ಔಟಾಗದೆ 32, ಮೂಮಿನುಲ್ ಹಕ್ ಔಟಾಗದೆ 35, ಶಾದ್ಮಾನ್ ಇಸ್ಲಾಮ್ 20, ಸ್ಟಾರ್ಕ್ 1-28)