ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಎಡಗೈ ಬೌಲರ್ ಗಳು; ಅಗ್ರ ಸ್ಥಾನಕ್ಕೇರಿ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್
ಮಿಚೆಲ್ ಸ್ಟಾರ್ಕ್ | Photo Credit : AP
ಡಾರ್ವಿನ್, ಆ. 13: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಎಡಗೈ ಬೌಲರ್ ಎನಿಸಿಕೊಂಡ ಮಿಚೆಲ್ ಸ್ಟಾರ್ಕ್ ತಮ್ಮ ಮಹತ್ವದ ಟೆಸ್ಟ್ ಪರಂಪರೆಯನ್ನು ಮುಂದುವರಿಸಿದ್ದಾರೆ.
ಗುರುವಾರ ಡಾರ್ವಿನ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯ ತಂಡ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ಕ್ ಈ ಸಾಧನೆ ಮಾಡಿದ್ದಾರೆ.
ಮೊದಲ ಇನಿಂಗ್ಸ್ ನ 9ನೇ ಓವರ್ ನಲ್ಲಿ ಬಾಂಗ್ಲಾದೇಶದ ಆರಂಭಿಕ ಆಟಗಾರ ಶಾದ್ಮನ್ ಇಸ್ಲಾಮ್ ಅವರ ವಿಕೆಟ್ ಪಡೆದ ಸ್ಟಾರ್ಕ್ ಈ ಮೈಲಿಗಲ್ಲು ತಲುಪಿದ್ದಾರೆ. ಈ ಮೂಲಕ ಟೆಸ್ಟ್ ನಲ್ಲಿ ಒಟ್ಟು 434 ವಿಕೆಟ್ ಗಳನ್ನು ಉರುಳಿಸಿ ಶ್ರೀಲಂಕಾದ ದಿಗ್ಗಜ ರಂಗನ ಹೆರಾತ್ ಅವರ ದಾಖಲೆಯನ್ನು ಮುರಿದರು. ಟೆಸ್ಟ್ನಲ್ಲಿ ಗರಿಷ್ಠ ವಿಕೆಟ್ ಗಳನ್ನು ಪಡೆದ ಎಡಗೈ ಬೌಲರ್ ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಸ್ಟಾರ್ಕ್ ತಮ್ಮ ಈ ಮಹತ್ವದ ಸಾಧನೆಯ ಮೂಲಕ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಗಳ ಪಟ್ಟಿಯಲ್ಲಿ ಭಾರತದ ಲೆಜೆಂಡ್ ಕಪಿಲ್ದೇವ್ ಅವರೊಂದಿಗೆ ಸ್ಥಾನ ಹಂಚಿಕೊಂಡರು. ಕಪಿಲ್ ಅವರು 1978 ಹಾಗೂ 1994ರ ನಡುವೆ 131 ಟೆಸ್ಟ್ ಪಂದ್ಯಗಳಲ್ಲಿ 434 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಸ್ಟಾರ್ಕ್ ಅವರು ಇದೀಗ ಮತ್ತೊಂದು ಪ್ರಮುಖ ದಾಖಲೆಯ ಸಮೀಪದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆಯಲು ಕೇವಲ ಆರು ವಿಕೆಟ್ ಗಳ ಅಗತ್ಯವಿದೆ. ದಕ್ಷಿಣ ಆಫ್ರಿಕಾದ ದಿಗ್ಗಜ ಡೇಲ್ ಸ್ಟೇಯ್ನ್ 93 ಟೆಸ್ಟ್ ಪಂದ್ಯಗಳಲ್ಲಿ 439 ವಿಕೆಟ್ ಗಳನ್ನು ಪಡೆದು 10ನೇ ಸ್ಥಾನದಲ್ಲಿದ್ದಾರೆ.