ದಿವ್ಯಾಂಗ ಕ್ರಿಕೆಟ್ ನಿಯಂತ್ರಣ ಮಂಡಳಿ: ಮೀನಾಕ್ಷಿ ಲೇಖಿ ಅಧ್ಯಕ್ಷೆ
ಮೀನಾಕ್ಷಿ ಲೇಖಿ | Photo Credit : Meenakshi Lekhi \ @MLekhiBJP
ಆಗ್ರಾ, ಆ. 13: ಕೇಂದ್ರದ ಮಾಜಿ ಸಚಿವೆ ಹಾಗೂ ಮಾಜಿ ಸಂಸದೆ ಮೀನಾಕ್ಷಿ ಲೇಖಿ ಭಾರತದ ದಿವ್ಯಾಂಗ ಕ್ರಿಕೆಟ್ ನಿಯಂತ್ರಣ ಮಂಡಳಿ (DCCIB) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಸಂಸ್ಥೆಯು ಭಾರತೀಯ ದಿವ್ಯಾಂಗ ಕ್ರಿಕೆಟ್ ತಂಡ ಹಾಗೂ ಭಾರತೀಯ ವೀಲ್ ಚೇರ್ ಕ್ರಿಕೆಟ್ ತಂಡದ ಮೇಲ್ವಿಚಾರಣೆ ನಡೆಸುತ್ತದೆ.
ಆಗ್ರಾದಲ್ಲಿ ನಡೆದ ದಿವ್ಯಾಂಗ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಈ ಘೋಷಣೆ ಮಾಡಲಾಗಿದ್ದು, ಲೇಖಿ ಔಪಚಾರಿಕವಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು.
ಆಟಗಾರರು, ಅಧಿಕಾರಿಗಳು ಹಾಗೂ ಆಯೋಜಕರನ್ನು ಉದ್ದೇಶಿಸಿ ಮಾತನಾಡಿದ ಮೀನಾಕ್ಷಿ ಲೇಖಿ, ‘‘ನಾನು ಬದ್ಧತೆಯಿಂದ ದಿವ್ಯಾಂಗ ಕ್ರಿಕೆಟ್ ಅನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಏರಿಸುವತ್ತ ಕೆಲಸ ಮಾಡುವೆ’’ ಎಂದರು.
ದಿವ್ಯಾಂಗ ಕ್ರೀಡಾಪಟುಗಳ ಸಾಧನೆಗಳು ಹಾಗೂ ಹೋರಾಟವನ್ನು ಒತ್ತಿ ಹೇಳಿದ ಲೇಖಿ, ಈ ಕ್ರೀಡಾಪಟುಗಳು ದೇಶದ ಹೆಮ್ಮೆಯಾಗಿದ್ದಾರೆ. ದಿವ್ಯಾಂಗ ಆಟಗಾರರ ಬಗೆಗಿನ ಜವಾಬ್ದಾರಿ ಕ್ರೀಡಾಕ್ಷೇತ್ರವನ್ನು ಮೀರಿ ವಿಸ್ತರಿಸಬೇಕು. ಸಮಾಜ ಅವರಿಗೆ ಗೌರವ, ಅವಕಾಶ ಹಾಗೂ ಭವಿಷ್ಯಕ್ಕಾಗಿ ಉತ್ತಮ ನಿರೀಕ್ಷೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.