×
Ad

ಏಶ್ಯಕಪ್ ಸೂಪರ್-4 ಪಂದ್ಯ: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 6 ರನ್ ಸೋಲು

Update: 2023-09-15 23:15 IST

Photo: X \ @ICC

ಕೊಲಂಬೊ: ಆರಂಭಿಕ ಬ್ಯಾಟರ್ ಶುಭಮನ್ ಗಿಲ್ (121 ರನ್, 133 ಎಸೆತ, 8 ಬೌಂಡರಿ, 5 ಸಿಕ್ಸರ್) ಶತಕದ ಹೊರತಾಗಿಯೂ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ತಂಡದ ವಿರುದ್ಧದ ಏಶ್ಯಕಪ್‌ನಲ್ಲಿ ತನ್ನ ಕೊನೆಯ ಸೂಪರ್-4 ಪಂದ್ಯದಲ್ಲಿ 6 ರನ್ ಅಂತರದಿಂದ ಸೋಲುಂಡಿದೆ.

ಶುಕ್ರವಾರ ಗೆಲ್ಲಲು 266 ರನ್ ಗುರಿ ಬೆನ್ನಟ್ಟಿದ ಭಾರತವು 49.5 ಓವರ್‌ಗಳಲ್ಲಿ 259 ರನ್ ಗಳಿಸಿ ಆಲೌಟಾಯಿತು. ಆಲ್‌ರೌಂಡರ್ ಅಕ್ಷರ್ ಪಟೇಲ್(42 ರನ್, 34 ಎಸೆತ) ಹಾಗೂ ಶಾರ್ದೂಲ್ ಠಾಕೂರ್(11 ರನ್) ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡಿದ ಗಿಲ್ 117 ಎಸೆತಗಳಲ್ಲಿ 5ನೇ ಶತಕ ಗಳಿಸಿದರು.

ನಾಯಕ ರೋಹಿತ್ ಶರ್ಮಾ(0)ಇನಿಂಗ್ಸ್‌ನ 2ನೇ ಎಸೆತದಲ್ಲಿ ತಂಝಿಮ್ ಹಸನ್‌ಗೆ ವಿಕೆಟ್ ಒಪ್ಪಿಸಿದರು. ಚೊಚ್ಚಲ ಪಂದ್ಯವನ್ನಾಡಿದ ತಿಲಕ್ ವರ್ಮಾ(5 ರನ್)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ನಿರಾಸೆಗೊಳಿಸಿದರು. ಆಗ ಕೆ.ಎಲ್.ರಾಹುಲ್(19 ರನ್) ಹಾಗೂ ಗಿಲ್ 3ನೇ ವಿಕೆಟಿಗೆ 57 ರನ್ ಜೊತೆಯಾಟ ನಡೆಸಿ ತಂಡವನ್ನು ಆಧಸಿದರು. ಇಶಾನ್ ಕಿಶನ್(5 ರನ್)ಬೇಗನೆ ಔಟಾದರು. ಭಾರತ 94 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಸೂರ್ಯಕುಮಾರ್(26 ರನ್)ಹಾಗೂ ಗಿಲ್ 5ನೇ ವಿಕೆಟಿಗೆ 45 ರನ್ ಸೇರಿಸಿ ಇನಿಂಗ್ಸ್ ಆಧರಿಸಿದರು. ರವೀಂದ್ರ ಜಡೇಜ 7 ರನ್ ಗಳಿಸಿ ಔಟಾದರು. ಬಾಂಗ್ಲಾದೇಶದ ಪರ ಮುಸ್ತಫಿಝುರ್ರಹ್ಮಾನ್ (3-50) ಯಶಸ್ವಿ ಪ್ರದರ್ಶ ನೀಡಿದರು. ತಂಝಿಮ್ ಹಸನ್(2-32) ಹಾಗೂ ಮೆಹಿದಿ ಹಸನ್(2-50) ತಲಾ ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಾಯಕ ಶಾಕಿಬ್ ಅಲ್ ಹಸನ್ (80 ರನ್, 85 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ತೌಹಿದ್ ಹ್ರಿದಯ್ (54 ರನ್, 81 ಎಸೆತ, 5 ಬೌಂಡರಿ, 2 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 265 ರನ್ ಗಳಿಸುಲ್ಲಿ ಶಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News