Asian Games 2026 | ಪುರುಷರ ಮ್ಯಾರಥಾನ್ ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಭಾರತದ ಸಾವನ್ ಬರ್ವಾಲ್
Photo: x.com/ani_digital
ಹೊಸದಿಲ್ಲಿ / ನಗೋಯಾ: ಏಷ್ಯನ್ ಗೇಮ್ಸ್ 2026ರ ಪುರುಷರ ಮ್ಯಾರಥಾನ್ ಫೈನಲ್ ನಲ್ಲಿ ಭಾರತದ ಸಾವನ್ ಬರ್ವಾಲ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಮ್ಯಾರಥಾನ್ ನಲ್ಲಿ ಭಾರತದ 44 ವರ್ಷಗಳ ಪದಕದ ಬರ ಕೊನೆಗೊಂಡಿದೆ.
ಹಿಮಾಚಲ ಪ್ರದೇಶ ಮೂಲದ ಸಾವನ್, ಶನಿವಾರ ನಡೆದ ಪುರುಷರ ಮ್ಯಾರಥಾನನ್ನು 2 ಗಂಟೆ 11 ನಿಮಿಷ 37 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ದ್ವಿತೀಯ ಸ್ಥಾನ ಪಡೆದರು.
1982ರ ನವದೆಹಲಿ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಕೊನೆಯ ಬಾರಿ ಮ್ಯಾರಥಾನ್ ನಲ್ಲಿ ಪದಕ ಗೆದ್ದಿತ್ತು. ಗಮನಾರ್ಹವೆಂದರೆ, ಈ ವಿಭಾಗದಲ್ಲಿ ಭಾರತ ಗೆದ್ದಿರುವ ಎಲ್ಲ ಪದಕಗಳೂ ಭಾರತದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲೇ ಬಂದಿವೆ.
28 ವರ್ಷದ ಸಾವನ್ ಬರ್ವಾಲ್ 35 ಕಿಲೋಮೀಟರ್ವರೆಗೆ ಮುಂಚೂಣಿ ಗುಂಪಿನಲ್ಲೇ ಓಡಿದರು. ಅಂತಿಮ 7 ಕಿಲೋಮೀಟರ್ ನಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದ ಅವರು, ಕಂಚಿನ ಪದಕ ಗೆದ್ದ ಚೀನಾದ ಪೀಯು ಫೆಂಗ್ಗಿಂತ 36 ಸೆಕೆಂಡುಗಳ ಮುನ್ನಡೆಯೊಂದಿಗೆ ಗುರಿ ತಲುಪಿದರು.
ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಜಪಾನ್ನ ಇಚಿತಾಕಾ ಯಮಶಿತಾ 2 ಗಂಟೆ 10 ನಿಮಿಷ 49 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರು. ಅವರು ಬರ್ವಾಲ್ ಗಿಂತ 48 ಸೆಕೆಂಡುಗಳ ಮುನ್ನಡೆ ಸಾಧಿಸಿದರು.
ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಓಟಗಾರ ಕಾರ್ತಿಕ್ ಕರ್ಕೇರಾ 19 ಸ್ಪರ್ಧಿಗಳ ಪೈಕಿ 17ನೇ ಸ್ಥಾನ ಪಡೆದರು.