ದಿಲ್ಲಿ ತಂಡದ ಮುಖ್ಯ ಕೋಚ್ ಆಗಿ ವಿಜಯ್ ದಹಿಯಾ ನೇಮಕ
ವಿಜಯ್ ದಹಿಯಾ | Photo Credit : PTI
ಹೊಸದಿಲ್ಲಿ, ಸೆ.25: ಭಾರತದ ಮಾಜಿ ವಿಕೆಟ್ಕೀಪರ್-ಬ್ಯಾಟರ್ ವಿಜಯ್ ದಹಿಯಾ ದಿಲ್ಲಿ ಕ್ರಿಕೆಟ್ ಅಸೋಸಿಯೇಶನ್ನ (ಡಿಡಿಸಿಎ) ಸೀನಿಯರ್ ಪುರುಷರ ತಂಡದ 2026-27ರ ದೇಶೀಯ ಋತುವಿಗೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ರಾಜ್ಯ ಸಲಹೆಗಾರರಾಗಿದ್ದಾರೆ.
ಎರಡು ಟೆಸ್ಟ್ ಹಾಗೂ 19 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ದಹಿಯಾ ತಂಡದ ಕೋಚಿಂಗ್ ಹಾಗೂ ಸಹಾಯಕ ಸಿಬ್ಬಂದಿ ವಿಭಾಗದಲ್ಲಿ ಪ್ರಮುಖ ಬದಲಾವಣೆಯ ನಂತರ ದಿಲ್ಲಿ ತಂಡಕ್ಕೆ ವಾಪಸಾಗಿದ್ದಾರೆ.
ದಹಿಯಾ ಈ ಹಿಂದೆ ದಿಲ್ಲಿಯ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2007-08ರ ಋತುವಿನಲ್ಲಿ ದಿಲ್ಲಿ ತಂಡವು ರಣಜಿ ಟ್ರೋಫಿ ಪ್ರಶಸ್ತಿ ಜಯಿಸಲು ಮಾರ್ಗದರ್ಶನ ನೀಡಿದ್ದರು.
ಫ್ರಾಂಚೈಸಿ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವ ಪಡೆದಿರುವ ದಹಿಯಾ 2012 ಹಾಗೂ 2014ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು.
ಲಕ್ನೊ ಸೂಪರ್ ಜಯಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ನ ಸಹಾಯಕ ಕೋಚ್ ಆಗಿದ್ದರು. ದೇಶೀಯ ಕ್ರಿಕೆಟ್ನಲ್ಲಿ ಉತ್ತರಪ್ರದೇಶ ತಂಡದ ಮುಖ್ಯ ಕೋಚ್ ಆಗಿದ್ದರು.