ವಿದ್ಯಾ ರಾಮ್‌ರಾಜ್‌ | Photo Credit : PTI 

ನಗೋಯ: ಏಶ್ಯನ್ ಗೇಮ್ಸ್‌ನ ಮಹಿಳೆಯರ 400 ಮೀ. ಹರ್ಡಲ್ಸ್ ಫೈನಲ್‌ನಲ್ಲಿ ಸೋಮವಾರ ಮೂರನೇ ಸ್ಥಾನ ಪಡೆದ ವಿದ್ಯಾ ರಾಮ್‌ರಾಜ್ ಕಂಚಿನ ಪದಕ ಜಯಿಸಿದರು.

54.75 ಸೆಕೆಂಡ್‌ನಲ್ಲಿ ಗುರಿ ತಲುಪಿದ ವಿದ್ಯಾ ರಾಮ್‌ರಾಜ್ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿ ಏಶ್ಯನ್ ಗೇಮ್ಸ್‌ನಲ್ಲಿ ತನ್ನ ಎರಡನೇ ಪದಕ ಜಯಿಸಿದರು. ಯುಎಇಯ ಮರಿಯಮ್ ಕರೀಂ(54.31)ಚಿನ್ನದ ಪದಕ ಜಯಿಸಿದರೆ, ಕಝಕ್‌ಸ್ತಾನದ ಅಡಿಲಿನಾ ಝೆಮ್ಸ್(54.58)ಬೆಳ್ಳಿ ಪದಕ ಜಯಿಸಿದರು.

26ರ ವಯಸ್ಸಿನ ವಿದ್ಯಾ ಪ್ರಸಕ್ತ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಮಿಕ್ಸೆಡ್ 4-400 ಮೀ. ರಿಲೇ ತಂಡದ ಭಾಗವಾಗಿದ್ದರು. ಮಿಕ್ಸೆಡ್ ರಿಲೇ ತಂಡದಲ್ಲಿ ಭಾರತವು ಎರಡನೇ ಸ್ಥಾನ ಪಡೆಯಲು ನೆರವಾಗಿದ್ದರು. ಟಿ.ಎಸ್. ಮನು, ಪೂವಮ್ಮ ರಾಜು, ವಿದ್ಯಾ ಹಾಗೂ ಟಿ.ವಿಶಾಲ್ 3:14.46 ಅವಧಿಯಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು.

ಭಾರತದ ಇನ್ನೋರ್ವ ಅತ್ಲೀಟ್ ಅನು ರಾಘವನ್ 55.88 ಸೆಕೆಂಡ್‌ನಲ್ಲಿ ಗುರಿ ತಲುಪಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.

400 ಮೀ.ಹರ್ಡಲ್ಸ್‌ನಲ್ಲಿ 3ನೇ ಸ್ಥಾನ ಪಡೆದಿರುವ ವಿದ್ಯಾ ತನ್ನ ಏಶ್ಯನ್ ಗೇಮ್ಸ್ ದಾಖಲೆಗೆ ಮತ್ತೊಂದು ಪದಕ ಸೇರಿಸಿಕೊಂಡರು. ವಿದ್ಯಾ 2023ರ ಹಾಂಗ್‌ಝೌ ಗೇಮ್ಸ್‌ನಲ್ಲಿ ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪಿಟಿ ಉಷಾ ದಾಖಲೆ ಮುರಿದ ವಿದ್ಯಾ

ಮಹಿಳೆಯರ 400 ಮೀ.ಹರ್ಡಲ್ಸ್‌ನಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ವಿದ್ಯಾ ರಾಮ್‌ರಾಜ್ ನಾಲ್ಕು ದಶಕಗಳಿಗೂ ಅಧಿಕ ಹಳೆಯ ರಾಷ್ಟ್ರೀಯ ದಾಖಲೆಯೊಂದನ್ನು ಮುರಿದರು.

ಕೊಯಮತ್ತೂರಿನ ಕ್ರೀಡಾಪಟು ವಿದ್ಯಾ 54.75 ಸೆಕೆಂಡ್‌ನಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿದರು. 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ ಲೆಜೆಂಡರಿ ಭಾರತೀಯ ಅತ್ಲೀಟ್ ಪಿಟಿ ಉಷಾ (55.42 ಸೆಕೆಂಡ್)ಅವರಿಗಿಂತಲೂ ವೇಗವಾಗಿ ಗುರಿ ತಲುಪಿ ಹೊಸ ದಾಖಲೆ ನಿರ್ಮಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor