Asian Games | ಜಾವೆಲಿನ್ ಥ್ರೊ: ನೀರಜ್ ಅನುಪಸ್ಥಿತಿಯಲ್ಲಿ ರುಮೇಶ್ಗೆ ಚಿನ್ನ
ಯಶ್ವೀರ್ಗೆ ಬೆಳ್ಳಿ, ರೋಹಿತ್ ಯಾದವ್ಗೆ ಕಂಚು
ಯಶ್ವೀರ್ ಸಿಂಗ್ , ರೋಹಿತ್ ಯಾದವ್ |Photo Credit : PTI
ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ ಸೋಮವಾರ ನಡೆದ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತದ ಯಶ್ವೀರ್ ಸಿಂಗ್ ಹಾಗೂ ರೋಹಿತ್ ಯಾದವ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಈ ಋತುವಿನಲ್ಲಿ ವಿಶ್ವದ ಪ್ರಮುಖ ಥ್ರೋವರ್ ಆಗಿರುವ ಶ್ರೀಲಂಕಾದ ರುಮೇಶ್ ಪಥಿರಗೆ 88.55 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದರು. ಯಶ್ವೀರ್ ವೈಯಕ್ತಿಕ ಶ್ರೇಷ್ಠ(85.72 ಮೀ.) ಪ್ರದರ್ಶನದೊಂದಿಗೆ ಎರಡನೇ ಸ್ಥಾನ ಪಡೆದರು. ರೋಹಿತ್(84.35 ಮೀ.)ಕಂಚಿನ ಪದಕ ಜಯಿಸಿದರು.
ಗಾಯದ ಸಮಸ್ಯೆಯಿಂದಾಗಿ ಚೋಪ್ರಾ ಅವರು ಏಶ್ಯನ್ ಗೇಮ್ಸ್‌ನಿಂದ ಹೊರಗುಳಿದಿದ್ದರು. ಹೀಗಾಗಿ ಭಾರತವು ಏಶ್ಯನ್ ಗೇಮ್ಸ್‌ನಲ್ಲಿ ಅವಳಿ ಚಿನ್ನ ಗೆದ್ದಿದ್ದ ಚೋಪ್ರಾ ಅನುಪಸ್ಥಿತಿಯಲ್ಲಿ ಜಪಾನಿಗೆ ಆಗಮಿಸಿತ್ತು. ಪಾಕಿಸ್ತಾನದ ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಂ ಸ್ಪರ್ಧಾಕಣದಲ್ಲಿದ್ದ ಪ್ರಮುಖರಾಗಿದ್ದರು. ಆದರೆ ನದೀಂ 80.29 ಮೀ.ದೂರ ಈಟಿ ಎಸೆದು ನಾಲ್ಕನೇ ಸ್ಥಾನ ಪಡೆದರು.
ಯಶ್ವೀರ್ ತನ್ನ ಮೊದಲ ಪ್ರಯತ್ನದಲ್ಲಿ 83.56 ಮೀ.ದೂರಕ್ಕೆ ಜಾವೆಲಿನ್ ಎಸೆದು ಉತ್ತಮ ಪ್ರದರ್ಶನ ತೋರಿದರು. ರೋಹಿತ್ ತನ್ನ ಮೂರನೇ ಪ್ರಯತ್ನದಲ್ಲಿ 84.35 ಮೀ.ದೂರ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು.
ಮೊದಲ ಸುತ್ತುಗಳಲ್ಲಿ ಇಬ್ಬರು ಭಾರತೀಯರು ಅಗ್ರ ಎರಡು ಸ್ಥಾನಗಳನ್ನು ಪಡೆದಿದ್ದರು.
ಆದರೆ ರುಮೇಶ್ ಪಥಿರಗೆ ತನ್ನ ನಾಲ್ಕನೇ ಪ್ರಯತ್ನದಲ್ಲಿ 88.33 ಮೀ.ದೂರ ಜಾವೆಲಿನ್ ಎಸೆದು ಸ್ಪರ್ಧೆಯ ಚಿತ್ರಣ ಬದಲಿಸಿದರು. ಮೊದಲ ಸ್ಥಾನಕ್ಕೇರಿದ ರುಮೇಶ್ ಇಬ್ಬರು ಭಾರತೀಯರನ್ನು ಎರಡನೇ ಹಾಗೂ ಮೂರನೇ ಸ್ಥಾನಕ್ಕೆ ಇಳಿಸಿದರು. ತನ್ನ ಕೊನೆಯ ಪ್ರಯತ್ನದಲ್ಲಿ 88.55 ಮೀ. ದೂರ ಈಟಿ ಎಸೆದ ರುಮೇಶ್ ಚಿನ್ನದ ಪದಕ ಜಯಿಸಿದರು.
ಯಶ್ವೀರ್ ತನ್ನ ಕೊನೆಯ ಪ್ರಯತ್ನದಲ್ಲಿ 85.72 ಮೀ. ಈಟಿ ಎಸೆದು ತನ್ನ ವೈಯಕ್ತಿಕ ಪ್ರದರ್ಶನವನ್ನು ಉತ್ತಮಪಡಿಸಿಕೊಂಡು ಬೆಳ್ಳಿ ಪದಕ ಜಯಿಸಿದರು.
ಸ್ಪರ್ಧೆಯ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ರೋಹಿತ್ 84.35 ಮೀ. ಪ್ರಯತ್ನದ ಫಲವಾಗಿ ಕಂಚು ಜಯಿಸಿದರು.
ಚೋಪ್ರಾ ಅವರ ಅನುಪಸ್ಥಿತಿಯಲ್ಲೂ ಜಾವೆಲಿನ್‌ನಲ್ಲಿ ಭಾರತವು ಮತ್ತೊಂದು ಉತ್ತಮ ಪ್ರದರ್ಶನ ನೀಡಿತು. 2023ರ ಗೇಮ್ಸ್‌ನಲ್ಲಿ ಚೋಪ್ರಾ (88.88ಮೀ.)ಚಿನ್ನ ಜಯಿಸಿದ್ದರು. ಕಿಶೋರ್ ಜೆನಾ(87.54 ಮೀ.)ಬೆಳ್ಳಿ ಗೆದ್ದಿದ್ದರು. ಈ ಬಾರಿ ಕೂಡ ಭಾರತದ ಇಬ್ಬರು ಪದಕ ಗೆದ್ದಿದ್ದಾರೆ.