ಏಶ್ಯನ್ ಸರ್ಫಿಂಗ್ ಚಾಂಪಿಯನ್ಶಿಪ್: ರಮೇಶ್ ಬುದಿಹಾಳ್‌ಗೆ ಐತಿಹಾಸಿಕ ಕಂಚು
Photo Credit: Sivasankar A/Sportstar
ಹೊಸದಿಲ್ಲಿ, ಆ.10: ಮಹಾಬಲಿಪುರಂನಲ್ಲಿ ನಡೆದಿದ್ದ ಏಶ್ಯನ್ ಸರ್ಫಿಂಗ್ ಚಾಂಪಿಯನ್ಶಿಪ್‌ನ ಪುರುಷರ ಮುಕ್ತ ವಿಭಾಗದಲ್ಲಿ ಭಾರತದ ರಮೇಶ್ ಬುದಿಹಾಳ್ ಕಂಚಿನ ಪದಕವನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಸ್ಪರ್ಧಾವಳಿಯ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಭಾರತವು ವೈಯಕ್ತಿಕ ವಿಭಾಗದಲ್ಲಿ ಪದಕವನ್ನು ಜಯಿಸಿದೆ.
ರವಿವಾರ ನಡೆದ ಫೈನಲ್‌ನಲ್ಲಿ ರಮೇಶ್ 12.60 ಅಂಕ ಗಳಿಸಿದರು. ಇಂಡೋನೇಶ್ಯದ ಪಜಾರ್ ಅರಿಯಾನ(14.57) ಹಾಗೂ ದಕ್ಷಿಣ ಕೊರಿಯದ ಕನೋವಾ ಹೀಜೇ(15.17) ಮೊದಲೆರಡು ಸ್ಥಾನ ಪಡೆದರು.
ಉತ್ತಮ ಆರಂಭ ಪಡೆದಿದ್ದ ರಮೇಶ್ 6.17 ಅಂಕ ಗಳಿಸಿದರು. ರಮೇಶ್ ಎದುರಾಳಿ ಕೂಡ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದು, ಉತ್ತಮ ಸ್ಕೋರ್ ಗಳಿಸಿದರು. ಮೊದಲ ಸುತ್ತಿನ ನಂತರ ರಮೇಶ್ 2ನೇ ಸ್ಥಾನ ಪಡೆದರು. ದಕ್ಷಿಣ ಕೊರಿಯದ ಯುವ ಆಟಗಾರ ಮುನ್ನಡೆ ಪಡೆದರು.
ಅಂತಿಮವಾಗಿ ಅರಿಯಾನ ಹಾಗೂ ಹೀಜೇ ಅಗ್ರ ಎರಡು ಸ್ಥಾನ ಪಡೆದರು. ರಮೇಶ್ 3ನೇ ಸ್ಥಾನ ಗಿಟ್ಟಿಸಿಕೊಂಡರು. 12.60 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು.
‘‘ನನಗೆ ಹೇಳಲು ಹೆಚ್ಚೇನೂ ಇಲ್ಲ. ಇದು ಎಲ್ಲರಿಗೂ ಹೆಮ್ಮೆಯ ಕ್ಷಣ, ನಮ್ಮಲ್ಲಿ ಒಬ್ಬರು ಫೈನಲ್‌ಗೆ ತಲುಪಿರುವುದು ಕೂಡ ಹೆಮ್ಮೆಯ ಕ್ಷಣ. ಇಲ್ಲಿನ ಜನರ ಬೆಂಬಲವು ಕ್ರೀಡೆಯನ್ನು ಬೆಳೆಯಲು ಸಹಾಯ ಮಾಡುತ್ತದೆ’’ ಎಂದು ಕಂಚು ಗೆದ್ದ ನಂತರ ಬುದಿಹಾಲ್ ಹೇಳಿದ್ದಾರೆ.
ರಮೇಶ್ ಅವರ ಗೆಲುವು 2026ರಲ್ಲಿ ಜಪಾನ್‌ನ ನಡೆಯಲಿರುವ ಏಶ್ಯನ್ ಗೇಮ್ಸ್‌ಗೆ ಭಾರತಕ್ಕೆ ಹೆಚ್ಚುವರಿ ಕೋಟಾವನ್ನು ಒದಗಿಸಲು ಮಹತ್ವದ ಕೊಡುಗೆ ನೀಡಬಹುದು.