×
Ad

ಟಿ-20 ವಿಶ್ವಕಪ್‌ಗಿಂತ ಮೊದಲು ಕಮಿನ್ಸ್, ಮ್ಯಾಕ್ಸ್‌ವೆಲ್, ಹೇಝಲ್ವುಡ್‌ಗೆ ವಿಶ್ರಾಂತಿ

Update: 2026-01-19 20:54 IST

PC | PTI 

ಮೆಲ್ಬರ್ನ್: ಟಿ-20 ವಿಶ್ವಕಪ್ ಟೂರ್ನಿಗಿಂತ ಮೊದಲು ಪಾಕಿಸ್ತಾನ ತಂಡದ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಆಸ್ಟ್ರೇಲಿಯ ತಂಡವು ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್ವೆಲ್ ಸಹಿತ ಐವರು ಅಗ್ರ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಈ ವಿಚಾರವನ್ನು ಆಯ್ಕೆಗಾರರು ಸೋಮವಾರ ದೃಢಪಡಿಸಿದ್ದಾರೆ.

ಜೋಶ್ ಹೇಝಲ್ವುಡ್, ಟಿಮ್ ಡೇವಿಡ್ ಹಾಗೂ ನಾಥನ್ ಎಲ್ಲಿಸ್ ಕೂಡ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಸರಣಿಯಿಂದ ಹೊರಗುಳಿಯಲಿದ್ದಾರೆ.

ಪ್ರಮುಖ ಆಟಗಾರರ ಅನುಪಸ್ಥಿತಿಯು ಶಾನ್ ಅಬೊಟ್, ಮಹ್ಲಿ ಬೀಯರ್ಡ್ಮನ್, ಬೆನ್ ಡ್ವಾರ್ಶುಯಿಸ್, ಜಾಕ್ ಎಡ್ವರ್ಡ್ಸ್, ಮಿಚ್ಚ್ ಓವೆನ್, ಜೋಶ್ ಫಿಲಿಪ್ ಹಾಗೂ ಮ್ಯಾಟ್ ರೆನ್ಶಾ ಅವರಿಗೆ 17 ಸದಸ್ಯರ ತಂಡದಲ್ಲಿ ಅವಕಾಶ ಕಲ್ಪಿಸಿದೆ.

ಗಾಯದಿಂದ ಚೇತರಿಸಿಕೊಂಡು ವಾಪಸಾದವರು ಹಾಗೂ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಐವರು ಆಟಗಾರರಿಗೆ ಫೆಬ್ರವರಿ 7ರಿಂದ ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗಿಂತ ಮೊದಲು ವಿಶ್ರಾಂತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.

ಆಸ್ಟ್ರೇಲಿಯ ತಂಡವು ಪಾಕಿಸ್ತಾನದ ವಿರುದ್ಧ ಲಾಹೋರ್‌ನಲ್ಲಿ ಜನವರಿ 29 ಹಾಗೂ 31, ಫೆಬ್ರವರಿ 1ರಂದು ಆಡಲಿದೆ. ಆ ನಂತರ ಫೆಬ್ರವರಿ 11ರಂದು ಕೊಲಂಬೊದಲ್ಲಿ ಐರ್ಲ್ಯಾಂಡ್ ತಂಡದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದೆ.

ಪಾಕಿಸ್ತಾನದ ವಿರುದ್ಧ ಟಿ-20 ಸರಣಿಗಾಗಿ ಆಸ್ಟ್ರೇಲಿಯ ತಂಡ

ಮಿಚೆಲ್ ಮಾರ್ಷ್(ನಾಯಕ), ಶಾನ್ ಅಬೊಟ್, ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬೀಯರ್ಡ್ಮನ್, ಕೂಪರ್ ಕೊನೊಲ್ಲಿ, ಬೆನ್ ಡ್ವಾರ್ಶುಯಿಸ್, ಜಾಕ್ ಎಡ್ವರ್ಡ್ಸ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚ್ ಓವೆನ್, ಜೋಶ್ ಫಿಲಿಪ್, ಮ್ಯಾಥ್ಯೂ ರೆನ್ಶಾ, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೋನಿಸ್, ಆ್ಯಡಮ್ ಝಂಪಾ.

ಟಿ-20 ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಪ್ಯಾಟ್ ಕಮಿನ್ಸ್ ಅಲಭ್ಯ: ಬೈಲಿ

ವಿಶ್ವಕಪ್ ಟೂರ್ನಿಗೆ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್ವುಡ್ ಹಾಗೂ ಟಿಮ್ ಡೇವಿಡ್ ಲಭ್ಯತೆ ಕುರಿತಂತೆ ಆಸ್ಟ್ರೇಲಿಯದ ಆಯ್ಕೆ ಸಮಿತಿಯ ಮುಖ್ಯಸ್ಥ ಜಾರ್ಜ್ ಬೈಲಿ ಮಾಹಿತಿ ನೀಡಿದ್ದಾರೆ.

ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಪ್ಯಾಟ್ ಕಮಿನ್ಸ್ ಪಂದ್ಯಾವಳಿಯ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದು, ಅಲ್ಪ ಮಟ್ಟಿನ ಗಾಯದಿಂದ ಚೇತರಿಕೆಯ ಹಾದಿಯಲ್ಲಿರುವ ಟಿಮ್ ಡೇವಿಡ್ ಲಭ್ಯ ಇರಲಿದ್ದಾರೆ ಎಂದು ಬೈಲಿ ತಿಳಿಸಿದ್ದಾರೆ.

ಮುಂಬರುವ ಪಾಕಿಸ್ತಾನ ತಂಡ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಕಮಿನ್ಸ್ ವಿಶ್ವಕಪ್‌ಗಾಗಿ ಶ್ರೀಲಂಕಾಕ್ಕೆ ತೆರಳುವುದಿಲ್ಲ.

ಆಸ್ಟ್ರೇಲಿಯ ತಂಡವು ಫೆಬ್ರವರಿ 13ರಂದು ಝಿಂಬಾಬ್ವೆ ವಿರುದ್ಧ ಎರಡನೇ ಗ್ರೂಪ್ ಪಂದ್ಯವನ್ನು ಆಡಿದ ನಂತರವೇ ವೇಗದ ಬೌಲರ್ ಕಮಿನ್ಸ್ ತಂಡವನ್ನು ಸೇರ್ಪಡೆಯಾಗಲಿದ್ದಾರೆ. ಹೇಝಲ್ವುಡ್ ಅವರು ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕೆ ಲಭ್ಯವಿರುವ ನಿರೀಕ್ಷೆ ಇದೆ ಎಂದು ಬೈಲಿ ಹೇಳಿದ್ದಾರೆ.

ಆ್ಯಶಸ್ ಸರಣಿಯ ವೇಳೆ ಕೇವಲ ಒಂದು ಪಂದ್ಯದಲ್ಲಿ ಕಾಣಿಸಿಕೊಂಡ ನಂತರ ಕಮಿನ್ಸ್ ಸಕ್ರಿಯ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಕಮಿನ್ಸ್ ಅವರು ಅಡಿಲೇಡ್ನಲ್ಲಿ ಆಸ್ಟ್ರೇಲಿಯ ತಂಡದ ಗೆಲುವಿಗೆ ನಿರ್ಣಾಯಕ ಪಾತ್ರವಹಿಸಿದ್ದರು.

ಆಸ್ಟ್ರೇಲಿಯ ತಂಡಕ್ಕೆ ವಿಶ್ವಕಪ್ ಟೂರ್ನಿಗಾಗಿ ತನ್ನ ತಂಡವನ್ನು ಅಂತಿಮಗೊಳಿಸಲು ಜನವರಿ 31ರ ತನಕ ಸಮಯಾವಕಾಶವಿದೆ. ಪಂದ್ಯಾವಳಿಗೆ ಮೀಸಲು ಆಟಗಾರರನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.

ಟಿಮ್ ಡೇವಿಡ್ ಕಳೆದ ವಾರ ಪುನಶ್ಚೇತನ ಶಿಬಿರದಲ್ಲಿದ್ದಾಗ ಅಲ್ಪಮಟ್ಟಿನ ಗಾಯವಾಗಿತ್ತು. ಇದರಿಂದಾಗಿ ಅವರು ರನ್ನಿಂಗ್ ಸೆಶನ್ ಪೂರ್ಣಗೊಳಿಸಿರಲಿಲ್ಲ. ಸ್ಕ್ಯಾನಿಂಗ್‌ನಲ್ಲಿ ಯಾವುದೇ ಹಾನಿಯಾಗಿರುವುದು ಕಂಡುಬಂದಿಲ್ಲ ಎಂದು ಬೈಲಿ ಖಚಿತಪಡಿಸಿದರು.

ಬಾಕ್ಸಿಂಗ್ ಡೇಯಂದು ಹೊಬರ್ಟ್ ಹ್ಯೂರಿಕೇನ್ಸ್ ಪರ ಬ್ಯಾಟಿಂಗ್ ಮಾಡುವಾಗ ಮೊಣಕಾಲು ನೋವಿಗೆ ಒಳಗಾಗಿದ್ದ ಡೇವಿಡ್ ಅವರ ಬಿಬಿಎಲ್ ಅಭಿಯಾನ ಮೊಟಕುಗೊಂಡಿತ್ತು. ಶೀಫೀಲ್ಡ್ ಶೀಲ್ಡ್‌ನಲ್ಲಿ ನ್ಯೂ ಸೌತ್ ವೇಲ್ಸ್ ಪರ ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದ ಹೇಝಲ್ವುಡ್ ನವೆಂಬರ್ ಆದಿಯಿಂದ ಯಾವುದೇ ಪಂದ್ಯವನ್ನು ಆಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News