×
Ad

ವಿಶ್ವಕಪ್‌ನಲ್ಲಿ ಭಾಗವಹಿಸುವಿಕೆ ಖಚಿತಪಡಿಸಲು ಬಾಂಗ್ಲಾದೇಶಕ್ಕೆ ಐಸಿಸಿ ಗಡುವು: ವರದಿ

Update: 2026-01-19 20:59 IST

Photo Credit : @ICCMediaComms

ಹೊಸದಿಲ್ಲಿ: ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆಯ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.

ಬಾಂಗ್ಲಾದೇಶ ತಂಡವು ಭಾರತಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಪ್ರಯಾಣಿಸುತ್ತದೆಯೇ ಎಂಬುದನ್ನು ಖಚಿತಪಡಿಸಲು ಐಸಿಸಿ ಜನವರಿ 21ರ ತನಕ ಗಡುವು ನೀಡಿದೆ. ಒಂದು ವೇಳೆ ಬಾಂಗ್ಲಾದೇಶವು ತನ್ನ ಪಂದ್ಯಗಳನ್ನು ಭಾರತ ನೆಲದಲ್ಲಿ ಆಡಲು ಒಪ್ಪದಿದ್ದರೆ ಪಂದ್ಯಾವಳಿಯಿಂದಲೇ ಹೊರಹಾಕಲ್ಪಡಲಿದೆ. ಅದರ ಬದಲಿಗೆ ಸ್ಕಾಟ್ಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡಲು ಒಪ್ಪಿಕೊಳ್ಳಬೇಕು ಅಥವಾ ಪಂದ್ಯಾವಳಿಯಿಂದ ಹೊರಹಾಕಲ್ಪಡುವ ಸಾಧ್ಯತೆಯನ್ನು ಎದುರಿಸುವಂತೆ ಐಸಿಸಿ ಬಾಂಗ್ಲಾದೇಶಕ್ಕೆ ಸಂದೇಶ ರವಾನಿಸಿದೆ ಎಂದು ವರದಿಯಾಗಿದೆ.

ಭದ್ರತಾ ಕಳವಳವನ್ನು ಉಲ್ಲೇಖಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಭಾರತಕ್ಕೆ ಪ್ರಯಾಣಿಸಲು ಹಿಂಜರಿಯುತ್ತಿದೆ. ಬಾಂಗ್ಲಾದೇಶದ ಪಂದ್ಯಗಳನು ಸಹ ಆತಿಥೇಯ ರಾಷ್ಟ್ರ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಐಸಿಸಿಗೆ ಮತ್ತೊಮೆ ವಿನಂತಿಸಿದೆ.

ವಾರಾಂತ್ಯದಲ್ಲಿ ಬಿಸಿಬಿ ಅಧಿಕಾರಿಗಳು ಹಾಗೂ ಐಸಿಸಿ ಪ್ರತಿನಿಧಿಗಳ ನಡುವಿನ ಢಾಕಾದಲ್ಲಿ ನಡೆದ ಸಭೆಗಳಲ್ಲಿ ಈ ವಿಷಯವನ್ನು ಚರ್ಚಿಸಲಾಯಿತು. ಆದರೆ ಯಾವುದೇ ನಿರ್ಣಯಕ್ಕೆ ಬರಲಾಗಿಲ್ಲ.

ಚರ್ಚೆಯ ವೇಳೆ ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಔಪಚಾರಿಕ ವಿನಂತಿಯನ್ನು ಬಿಸಿಬಿ ಪುನರುಚ್ಚರಿಸಿದ್ದು, ಪರ್ಯಾಯ ಪರಿಹಾರಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಹೇಳಿಕೆಯೊಂದರಲ್ಲಿ ಬಿಸಿಬಿ ತಿಳಿಸಿದೆ.

ಐರ್ಲ್ಯಾಂಡ್ ಆಡುತ್ತಿರುವ ‘ಬಿ’ ಗುಂಪಿನಲ್ಲಿ ಬಾಂಗ್ಲಾದೇಶ ತಂಡ ಆಡುವ ಕುರಿತಂತೆಯೂ ಚರ್ಚೆ ನಡೆದಿದೆ. ಐರ್ಲ್ಯಾಂಡ್ ತನ್ನೆಲ್ಲಾ ‘ಬಿ’ ಗುಂಪಿನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

ಬಾಂಗ್ಲಾದೇಶ ತಂಡಕ್ಕೆ ಈಗಿರುವ ವೇಳಾಪಟ್ಟಿಯಂತೆಯೇ ತನ್ನ ಭಾಗವಹಿಸುವಿಕೆಯನ್ನು ದೃಢಪಡಿಸಲು ಬುಧವಾರ ತನಕ ಐಸಿಸಿ ಗಡುವು ನೀಡಿದೆ ಎಂದು ಕ್ರಿಕ್ಇನ್ಫೋ ಹಾಗೂ ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಐಸಿಸಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಾಂಗ್ಲಾದೇಶ ತಂಡವು ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದರೆ ಅಥವಾ ಹೊರ ನಡೆದರೆ ಅರ್ಹತೆ ಪಡೆಯದ ಉನ್ನತ ಶ್ರೇಯಾಂಕದ ತಂಡವಾದ ಸ್ಕಾಟ್ಲ್ಯಾಂಡ್, ಬಾಂಗ್ಲಾದೇಶದ ಬದಲಿಗೆ ಆಡಬಹುದು ಎಂದು ವರದಿಯಾಗಿದೆ.

ಟಿ-20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7ರಂದು ಆರಂಭವಾಗಲಿದ್ದು, ಬಾಂಗ್ಲಾದೇಶ ತಂಡವು ‘ಸಿ’ ಗುಂಪಿನಲ್ಲಿ ವೆಸ್ಟ್ಇಂಡೀಸ್, ಇಟಲಿ, ಇಂಗ್ಲೆಂಡ್ ಹಾಗೂ ನೇಪಾಳ ತಂಡದೊಂದಿಗೆ ಸ್ಥಾನ ಪಡೆದಿದೆ. ವೇಳಾಪಟ್ಟಿಯ ಪ್ರಕಾರ ತನ್ನೆಲ್ಲಾ ಗ್ರೂಪ್ ಪಂದ್ಯಗಳನ್ನು ಕೋಲ್ಕತಾ ಹಾಗೂ ಮುಂಬೈನಲ್ಲಿ ಆಡಲಿದೆ.

ಪಾಕಿಸ್ತಾನ ತಂಡವು ಐಸಿಸಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ತಟಸ್ಥ ಸ್ಥಳವಾದ ಕೊಲಂಬೊದಲ್ಲಿ ತನ್ನ ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ಆಡಲಿದೆ.

ಜನವರಿ 3ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್‌ರನ್ನು ಐಪಿಎಲ್‌ನಿಂದ ಕೈಬಿಟ್ಟ ನಂತರ ಭಾರತ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ನಡುವಿನ ಸಂಬಂಧ ಹದಗೆಟ್ಟಿತ್ತು.

ಈಗಿನ ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶ ತಂಡವು ಕೋಲ್ಕತಾದ ಪ್ರತಿಷ್ಠಿತ ಈಡನ್ಗಾರ್ಡನ್ಸ್ ಸ್ಟೇಡಿಯನಲ್ಲಿ ಮೂರು ಗ್ರೂಪ್ ಪಂದ್ಯಗಳನ್ನು ಆಡಲಿದ್ದು, ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ತನ್ನ ಕೊನೆಯ ಗ್ರೂಪ್ ಪಂದ್ಯವನ್ನು ಆಡಲಿದೆ.

ನಮಗೆ ಐಸಿಸಿ ಗಡುವು ನೀಡಿಲ್ಲ ಎಂದ ಬಿಸಿಬಿ

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವಿಕೆಯ ಬಗ್ಗೆ ಖಚಿತಪಡಿಸಲು ಐಸಿಸಿ ಜನವರಿ 21ರ ತನಕ ಗಡುವು ವಿಧಿಸಿದೆ ಎಂಬ ವರದಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ನಿರಾಕರಿಸಿದೆ.

ನಮಗೆ ಅಂತಹ ಯಾವುದೇ ಗಡುವು ನೀಡಲಾಗಿಲ್ಲ. ನಮ್ಮ ತಂಡದ ಪಂದ್ಯಗಳನ್ನು ಬೇರಡೆಗೆ ಸ್ಥಳಾಂತರಿಸಲು ಮತ್ತೊಮ್ಮೆ ವಿನಂತಿಸಲಾಗಿದೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.

‘‘ಕಳೆದ ಶನಿವಾರ ಜ.17ರಂದು ಐಸಿಸಿ ಪ್ರತಿನಿಧಿಗಳು ಆಗಮಿಸಿದ್ದರು. ನಮ್ಮ ಕ್ರಿಕೆಟ್ ಮಂಡಳಿಯ ನಿಯೋಗದೊಂದಿಗೆ ಸಭೆ ನಡೆಸಲಾಗಿದೆ. ವಿಶ್ವಕಪ್‌ನಲ್ಲಿ ಭಾಗವಹಿಸುವಿಕೆಯ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೆವು. ನಿರ್ದಿಷ್ಟ ಸ್ಥಳಗಳಲ್ಲಿ ನಮಗೆ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ಪರ್ಯಾಯ ಸ್ಥಳಕ್ಕಾಗಿ ವಿನಂತಿಸಿದ್ದೇವೆ. ಐಸಿಸಿ ಪ್ರತಿನಿಧಿಗಳೊಂದಿಗೆ ವಿವರವಾದ ಚರ್ಚೆ ನಡೆದಿದೆ. ಈ ಎಲ್ಲ ವಿಚಾರಗಳನ್ನು ಐಸಿಸಿಗೆ ತಿಳಿಸಲಾಗುವುದು. ನಂತರ ನಿರ್ಧಾರವನ್ನು ತಿಳಿಸಲಾಗುವುದು ಎಂದು ಐಸಿಸಿ ಪ್ರತಿನಿಧಿಗಳು ನಮಗೆ ತಿಳಿಸಿದ್ದಾರೆ. ಯಾವಾಗ ಮಾಹಿತಿ ನೀಡುತ್ತೇವೆಂದು ನಿರ್ದಿಷ್ಟ ದಿನಾಂಕವನ್ನು ನಮೂದಿಸಿಲ್ಲ’’ಎಂದು ಬಿಸಿಬಿ ನಿರ್ದೇಶಕ ಅಮ್ಚಾದ್ ಹುಸೇನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News