×
Ad

3ನೇ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ 276 ರನ್‌ ಗಳಿಂದ ಗೆದ್ದ ಆಸ್ಟ್ರೇಲಿಯ

ಏಕದಿನ ಕ್ರಿಕೆಟ್‌ ನಲ್ಲಿ 2ನೇ ಅತಿದೊಡ್ಡ ಗೆಲುವು ಪಡೆದ ಆಸೀಸ್ ಹರಿಣ ಪಡೆಗೆ ಸರಣಿ

Update: 2025-08-24 21:52 IST

PC:  NDTV 

ಮಕಾಯ, ಆ. 24: ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 276 ರನ್‌ ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಏಕದಿನ ಕ್ರಿಕೆಟ್‌ ನಲ್ಲಿ 2ನೇ ಅತಿ ದೊಡ್ಡ ಗೆಲುವು ದಾಖಲಿಸಿದೆ. 3 ಪಂದ್ಯಗಳ ಸರಣಿಯಲ್ಲಿ ಸಮಾಧಾನಕರ ಗೆಲುವು ಪಡೆದಿದೆ.

ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 432 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವು ಎಡಗೈ ಸ್ಪಿನ್ನರ್ ಕೂಪರ್ ಕೊನೊಲ್ಲಿ (5-22)ನೇತೃತ್ವದ ಆಸೀಸ್ ಬೌಲರ್‌ಗಳ ದಾಳಿಗೆ ತತ್ತರಿಸಿ 24.5 ಓವರ್‌ ಗಳಲ್ಲಿ ಕೇವಲ 155 ರನ್‌ಗೆ ಆಲೌಟಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ 2 ವಿಕೆಟ್‌ಗಳ ನಷ್ಟಕ್ಕೆ 431 ರನ್ ಗಳಿಸಿತು.

ದಕ್ಷಿಣ ಆಫ್ರಿಕಾದ ಪರ ಡೆವಾಲ್ಡ್ ಬ್ರೆವಿಸ್(49 ರನ್, 28 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಕೂಪರ್ ಮಧ್ಯಮ, ಕೆಳ ಸರದಿಯ ಬ್ಯಾಟರ್‌ ಗಳನ್ನು ಕಾಡಿದರೆ, ಅಬಾಟ್(2-27)ಹಾಗೂ ಕ್ಸೇವಿಯರ್ ಬಾರ್ಟ್ಲೆಟ್(2-45)ಅಗ್ರ ಸರದಿಯಲ್ಲಿ ತಲಾ ಎರಡು ವಿಕೆಟ್‌ ಗಳನ್ನು ಪಡೆದರು.

ಹರಿಣ ಪಡೆ ಇಂದು 50 ಓವರ್‌ ಗಳ ಕ್ರಿಕೆಟ್‌ ನಲ್ಲಿ ಹೀನಾಯವಾಗಿ ಸೋತಿದ್ದರೂ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಆಸ್ಟ್ರೇಲಿಯವು 2023ರ ವಿಶ್ವಕಪ್‌ ನಲ್ಲಿ ಹೊಸದಿಲ್ಲಿಯಲ್ಲಿ ನೆದರ್‌ಲ್ಯಾಂಡ್ಸ್ ತಂಡದ ವಿರುದ್ಧ 309 ರನ್ ಅಂತರದಿಂದ ಜಯ ದಾಖಲಿಸಿತ್ತು. ಇದೀಗ 2ನೇ ಅತಿ ದೊಡ್ಡ ಜಯ ದಾಖಲಿಸಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದು ಆರನೇ ಅತಿ ದೊಡ್ಡ ಅಂತರದ ಜಯವಾಗಿದೆ.

*ಹೆಡ್, ಮಾರ್ಷ್, ಗ್ರೀನ್ ಶತಕ, ಆಸ್ಟ್ರೇಲಿಯ 431/2

ಏಕದಿನ ಅಂತರ್‌ ರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆಸ್ಟ್ರೇಲಿಯದ ಮೂವರು ಆಟಗಾರರು ಒಂದೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ 3ನೇ ಏಕದಿನ ಪಂದ್ಯದ ವೇಳೆ ಟ್ರಾವಿಸ್ ಹೆಡ್(142 ರನ್, 103 ಎಸೆತ, 17 ಬೌಂಡರಿ, 5 ಸಿಕ್ಸರ್)ಮಿಚೆಲ್ ಮಾರ್ಷ್(100 ರನ್, 106 ಎಸೆತ, 6 ಬೌಂಡರಿ,5 ಸಿಕ್ಸರ್) ಹಾಗೂ ಕ್ಯಾಮರೂನ್ ಗ್ರೀನ್(ಔಟಾಗದೆ 118, 55 ಎಸೆತ) ಶತಕ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯ ತಂಡ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 431 ರನ್ ಗಳಿಸುವಲ್ಲಿ ನೆರವಾದರು. ಆಸ್ಟ್ರೇಲಿಯವು ಏಕದಿನ ಕ್ರಿಕೆಟ್‌ ನಲ್ಲಿ ತನ್ನ 2ನೇ ಗರಿಷ್ಠ ಸ್ಕೋರ್ ಕಲೆ ಹಾಕಿತು.

ಏಕದಿನ ಕ್ರಿಕೆಟ್‌ನ ಇನಿಂಗ್ಸ್‌ ವೊಂದರಲ್ಲಿ ಮೂರು ಶತಕ ದಾಖಲಾಗಿದ್ದು ಇದು 5ನೇ ದೃಷ್ಟಾಂತ. ದಕ್ಷಿಣ ಆಫ್ರಿಕಾ ತಂಡ 3 ಬಾರಿ ಈ ಸಾಧನೆ ಮಾಡಿದ್ದರೆ, ಇಂಗ್ಲೆಂಡ್ ತಂಡ ಒಮ್ಮೆ ಈ ಸಾಧನೆ ಮಾಡಿತ್ತು.

2015ರಲ್ಲಿ ಜೋಹಾನ್ಸ್‌ ಬರ್ಗ್‌ ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ದ.ಆಫ್ರಿಕಾದ ಹಾಶಿಮ್ ಅಮ್ಲ, ರೊಸ್ಸೌ, ಎಬಿ ಡಿ ವಿಲಿಯರ್ಸ್, 2015ರಲ್ಲಿ ವಾಂಖೆಡೆಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್, ಎಫ್ ಡು ಪ್ಲೆಸಿಸ್, ಡಿವಿಲಿಯರ್ಸ್ ಶತಕ ಗಳಿಸಿದ್ದರು. 2022ರಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಇಂಗ್ಲೆಂಡ್‌ನ ಫಿಲ್ ಸಾಲ್ಟ್, ಡೇವಿಡ್ ಮಲನ್, ಜೋಸ್ ಬಟ್ಲರ್ ಶತಕ ದಾಖಲಿಸಿದ್ದರು.

2023ರಲ್ಲಿ ಹೊಸದಿಲ್ಲಿಯಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್, ರಾಸ್ಸಿ ವಾನ್‌ಡರ್ ಡುಸೆನ್, ಮರ್ಕ್ರಮ್ ಶ್ರೀಲಂಕಾದ ವಿರುದ್ಧ ಶತಕ ಗಳಿಸಿದ್ದರು.

ಆರಂಭಿಕ ಬ್ಯಾಟರ್‌ಗಳಾದ ಹೆಡ್ ಹಾಗೂ ಮಾರ್ಷ್ ಶತಕಗಳನ್ನು ಸಿಡಿಸಿದ್ದಲ್ಲದೆ, ಮೊದಲ ವಿಕೆಟ್‌ಗೆ 250 ರನ್ ಕಲೆ ಹಾಕಿ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿದರು. 3ನೇ ಕ್ರಮಾಂಕದ ಬ್ಯಾಟರ್ ಕ್ಯಾಮರೂನ್ ಗ್ರೀನ್ ಕೇವಲ 47 ಎಸೆತಗಳಲ್ಲಿ ಶತಕ ಗಳಿಸಿ ಹರಿಣ ಪಡೆಯ ಬೌಲರ್‌ಗಳನ್ನು ಬೆಂಡೆತ್ತಿದರು. ಅಲೆಕ್ಸ್ ಕಾರಿ(ಔಟಾಗದೆ 50)ಅರ್ಧಶತಕ ಗಳಿಸಿದರು.

*ಆಸ್ಟ್ರೇಲಿಯದ ಪರ 2ನೇ ವೇಗದ ಶತಕ ಗಳಿಸಿದ ಗ್ರೀನ್

ಆಸ್ಟ್ರೇಲಿಯದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ತನ್ನ ಚೊಚ್ಚಲ ಏಕದಿನ ಶತಕ ಗಳಿಸಿದರು.

ಗ್ರೀನ್ 47 ಎಸೆತಗಳಲ್ಲಿ ಶತಕ ಪೂರೈಸಿದರು, ಏಕದಿನ ಕ್ರಿಕೆಟ್‌ನಲ್ಲಿ 11ನೇ ವೇಗದ ಶತಕ ದಾಖಲಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್(40 ಎಸೆತ)ನಂತರ ವೇಗದ ಶತಕ ದಾಖಲಿಸಿದ ಆಸ್ಟ್ರೇಲಿಯದ 2ನೇ ಆಟಗಾರ ಎನಿಸಿಕೊಂಡರು.

ಆಸ್ಟ್ರೇಲಿಯ ತಂಡವು 250 ರನ್ ಗಳಿಸಿದ್ದಾಗ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಗ್ರೀನ್ ಆಸ್ಟ್ರೇಲಿಯವು ಏಕದಿನ ಕ್ರಿಕೆಟ್‌ನಲ್ಲಿ 2ನೇ ಗರಿಷ್ಠ ಮೊತ್ತ(431)ಕಲೆ ಹಾಕುವಲ್ಲಿ ನೆರವಾದರು.

ಗ್ರೀನ್ 55 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಹಿತ ಔಟಾಗದೆ 118 ರನ್ ಗಳಿಸಿದರು.

*ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಅತಿ ದೊಡ್ಡ ಗೆಲುವು

309 ರನ್-ನೆದರ್‌ಲ್ಯಾಂಡ್ಸ್ ವಿರುದ್ಧ-ಹೊಸದಿಲ್ಲಿ-2023

276 ರನ್-ದಕ್ಷಿಣ ಆಫ್ರಿಕಾ ವಿರುದ್ಧ-ಮಕಾಯ್-2025

275 ರನ್-ಅಫ್ಘಾನಿಸ್ತಾನದ ವಿರುದ್ಧ, ಪರ್ತ್-2015

256 ರನ್-ನಮೀಬಿಯಾ ವಿರುದ್ಧ-ಪೊಚೆಫ್‌ಸ್ಟ್ರೂಮ್-2003

232 ರನ್-ಶ್ರೀಲಂಕಾ ವಿರುದ್ಧ-ಅಡಿಲೇಡ್-1985

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News