Australian Open | ಸಬಲೆಂಕ, ಜೊವಿಚ್, ಅಲ್ಕರಾಝ್ ಕ್ವಾರ್ಟರ್ ಫೈನಲ್ ಗೆ
ಸಬಲೆಂಕ| Photo Credit : AP \ PTI
ಮೆಲ್ಬರ್ನ್, ಜ. 25: ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ರವಿವಾರ ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಅರೈನಾ ಸಬಲೆಂಕ ಕೆನಡಾದ ವಿಕ್ಟೋರಿಯಾ ಎಂಬೊಕೊರನ್ನು ಸೋಲಿಸಿ ಸತತ ನಾಲ್ಕನೇ ಬಾರಿ ಕ್ವಾರ್ಟರ್‌ಫೈನಲ್ ತಲುಪಿದರು. ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾದರು.
ಎರಡು ಬಾರಿಯ ಚಾಂಪಿಯನ್ ಸಬಲೆಂಕ ತಮ್ಮ ಎದುರಾಳಿಯನ್ನು 6–1, 7–6(1) ಸೆಟ್‌ಗಳಿಂದ ಸೋಲಿಸಿದರು. ರಾಡ್ ಲೇವರ್ ಅರೀನಾದಲ್ಲಿ ನಡೆದ ಪಂದ್ಯದಲ್ಲಿ ಸಬಲೆಂಕ ಮೊದಲ ಸೆಟ್ ಅನ್ನು 31 ನಿಮಿಷಗಳಲ್ಲಿ ಗೆದ್ದರು. ಆದರೆ, ಎರಡನೇ ಸೆಟ್‌ನಲ್ಲಿ 17ನೇ ಶ್ರೇಯಾಂಕದ ವಿಕ್ಟೋರಿಯಾ ತೀವ್ರ ಪ್ರತಿಹೋರಾಟ ನೀಡಿದರೂ 4–1ರ ಮುನ್ನಡೆಯನ್ನು ಕಳೆದುಕೊಂಡರು.
ಸಬಲೆಂಕ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಇವಾ ಜೊವಿಚ್ ಅವರನ್ನು ಎದುರಿಸಲಿದ್ದಾರೆ.
ರವಿವಾರ ನಡೆದ ಇನ್ನೊಂದು ಪ್ರೀ–ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇವಾ ಜೊವಿಚ್ ಕಝಖಿಸ್ತಾನದ ಯೂಲಿಯಾ ಪುಟಿನ್ಟ್ಸೇವಾರನ್ನು 6–0, 6–1 ಸೆಟ್‌ಗಳಿಂದ ಸೋಲಿಸಿದರು. ಜಾನ್ ಕೇನ್ ಅರೀನಾದಲ್ಲಿ ನಡೆದ ಈ ಪಂದ್ಯ ಕೇವಲ 53 ನಿಮಿಷಗಳಲ್ಲಿ ಮುಗಿಯಿತು.
ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ಕಾರ್ಲೋಸ್ ಅಲ್ಕರಾಝ್ ಸತತ ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್‌ಫೈನಲ್ ತಲುಪಿದರು. ರಾಡ್ ಲೇವರ್ ಅರೀನಾದಲ್ಲಿ ನಡೆದ ಪ್ರೀ–ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಅಮೆರಿಕದ ಟಾಮಿ ಪಾಲ್ ಅವರನ್ನು 7–6(6), 6–4, 7–5 ಸೆಟ್‌ಗಳಿಂದ ಸೋಲಿಸಿದರು.
ಮೊದಲ ಸೆಟ್ ಟೈಬ್ರೇಕ್ ಹಂತದಲ್ಲಿದ್ದಾಗ ಪ್ರೇಕ್ಷಕರಲ್ಲಿ ಒಬ್ಬ ಹಿರಿಯ ಮಹಿಳೆ ಅಸ್ವಸ್ಥರಾದ ಕಾರಣ 14 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿತು. ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ ನಂತರ ಅವರನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ಯಲಾಯಿತು.
► ಆಡದೇ ಕ್ವಾರ್ಟರ್‌ಫೈನಲ್ ತಲುಪಿದ ಜೊಕೊವಿಕ್!
ಪುರುಷರ ಸಿಂಗಲ್ಸ್‌ನಲ್ಲಿ 10 ಬಾರಿಯ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಕ್ ಆಡದೇ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರು. ಅವರ ಎದುರಾಳಿಯಾಗಿದ್ದ ಝೆಕ್‌ನ ಜಾಕೂಬ್ ಮೆನ್ಸಿಕ್ ಹೊಟ್ಟೆ ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದಿದ್ದರು.
ಹೀಗಾಗಿ, ಜೊಕೊವಿಕ್ ಕ್ವಾರ್ಟರ್‌ಫೈನಲ್‌ನಲ್ಲಿ ಇಟಲಿಯ ಐದನೇ ಶ್ರೇಯಾಂಕದ ಲೊರೆನ್ಜೊ ಮುಸೆಟ್ಟಿ ಅಥವಾ ಅಮೆರಿಕದ ಒಂಭತ್ತನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರನ್ನು ಎದುರಿಸಲಿದ್ದಾರೆ.
ಪಾಕ್ T20 ವಿಶ್ವಕಪ್ ತಂಡ ಪ್ರಕಟ: ಆದರೆ, ಭಾಗವಹಿಸುವುದು ಖಚಿತವಿಲ್ಲ ಎಂದ ಪಿಸಿಬಿ!(w)
ಲಾಹೋರ್, ಜ. 25: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಯ್ಕೆ ಸಮಿತಿಯು ರವಿವಾರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆಡುವ ತನ್ನ 15 ಆಟಗಾರರ ತಂಡವನ್ನು ಘೋಷಿಸಿದೆ. ಆದರೆ, ಪಂದ್ಯಾವಳಿಯಲ್ಲಿ ಭಾಗವಹಿಸುವುದು ಖಚಿತವಲ್ಲ ಎಂದು ಹೇಳಿದೆ.
ಬಾಂಗ್ಲಾದೇಶದ ಸ್ಥಾನಕ್ಕೆ ಸ್ಕಾಟ್ಲ್ಯಾಂಡ್ ತಂಡವನ್ನು ಐಸಿಸಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವೂ ವಿಶ್ವಕಪ್‌ನಿಂದ ಹಿಂದೆ ಸರಿಯಬಹುದು ಎಂಬ ಎಚ್ಚರಿಕೆಯನ್ನು ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಕೆಲ ದಿನಗಳ ಹಿಂದೆ ನೀಡಿದ್ದರು.
ಲಾಹೋರಿನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಸಿಬಿಯ ಹೈಪರ್ಫಾರ್ಮನ್ಸ್ ನಿರ್ದೇಶಕ ಆಕಿಬ್ ಜಾವೇದ್ ಮತ್ತು ಪ್ರಧಾನ ಕೋಚ್ ಮೈಕಲ್ ಜೇಮ್ಸ್ ಹೆಸನ್ ತಂಡವನ್ನು ಪ್ರಕಟಿಸಿದರು. ಆದರೆ, ಭಾಗವಹಿಸುವುದರ ಕುರಿತು ಅಂತಿಮ ನಿರ್ಧಾರ ಸರ್ಕಾರದ ಕೈಯಲ್ಲಿದೆ ಎಂದು ಜಾವೇದ್ ಸ್ಪಷ್ಟಪಡಿಸಿದರು.
► ತಂಡದಲ್ಲಿ ಏನೂ ಅಚ್ಚರಿಯಿಲ್ಲ
ಟೀಂ: ಸಲ್ಮಾನ್ ಅಲಿ ಅಘ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಅಝಮ್, ಫಾಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮುಹಮ್ಮದ್ ನಫಾಯ್ (ವಿಕೆಟ್‌ಕೀಪರ್), ಮುಹಮ್ಮದ್ ನವಾಝ್, ಮುಹಮ್ಮದ್ ಸಲ್ಮಾನ್ ಮಿರ್ಝಾ, ನಸೀಮ್ ಶಾ, ಸಾಹಿಬ್ಝಾದಾ ಫರ್ಹಾನ್ (ವಿಕೆಟ್‌ಕೀಪರ್), ಸಯೀಮ್ ಅಯೂಬ್, ಶಹೀನ್ ಶಾ ಅಫ್ರಿದಿ, ಶದಬ್ ಖಾನ್, ಉಸ್ಮಾನ್ ಖಾನ್ (ವಿಕೆಟ್‌ಕೀಪರ್) ಮತ್ತು ಉಸ್ಮಾನ್ ತಾರಿಖ್.