ಕರ್ನಾಟಕಕ್ಕೆ 217 ರನ್ ಸೋಲುಣಿಸಿದ ಮಧ್ಯಪ್ರದೇಶ
ರಣಜಿ ಎಲಿಟ್ ‘ಬಿ’ ಗುಂಪಿನ ಪಂದ್ಯ
ಬೆಂಗಳೂರು, ಜ. 25: ರಣಜಿ ಟ್ರೋಫಿ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ರವಿವಾರ ಮಧ್ಯಪ್ರದೇಶ ತಂಡವು ಆತಿಥೇಯ ಹಾಲಿ ಚಾಂಪಿಯನ್ ಕರ್ನಾಟಕವನ್ನು 217 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ.
ಆಲೂರಿನ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನ ಮಧ್ಯಪ್ರದೇಶದ ಸ್ಪಿನ್ನರ್‌ಗಳಾದ ಸಾರಾಂಶ್ ಜೈನ್ ಮತ್ತು ಸಾಗರ್ ಸೋಳಂಕಿ ಒಟ್ಟು ಆರು ವಿಕೆಟ್‌ಗಳನ್ನು ಕಬಳಿಸಿ ಕರ್ನಾಟಕದ ಬ್ಯಾಟರ್‌ಗಳ ಮೇಲೆ ಸವಾರಿ ಮಾಡಿದರು.
ಪಂದ್ಯದ ಕೊನೆಯ ದಿನ ಮಧ್ಯಪ್ರದೇಶ ತನ್ನ ದ್ವಿತೀಯ ಇನಿಂಗ್ಸ್ ಅನ್ನು 6 ವಿಕೆಟ್ ನಷ್ಟಕ್ಕೆ 204 ರನ್ ಇದ್ದಲ್ಲಿಂದ ಮುಂದುವರಿಸಿತು. ತಂಡದ ಮೊತ್ತ 8 ವಿಕೆಟ್ ನಷ್ಟಕ್ಕೆ 229 ರನ್ ಆದಾಗ ಇನಿಂಗ್ಸ್ ಘೋಷಿಸಿತು.
ಗೆಲುವಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ 362 ರನ್‌ಗಳ ಗುರಿ ಪಡೆದ ಕರ್ನಾಟಕ ಕೇವಲ 144 ರನ್‌ಗಳಿಗೆ ಸರ್ವಪತನ ಕಂಡಿತು.
ಮಧ್ಯಪ್ರದೇಶದ ಆಫ್‌ಸ್ಪಿನ್ನರ್ ಸಾರಾಂಶ್ ಜೈನ್ 37 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಎಡಗೈ ಸ್ಪಿನ್ನರ್ ಸಾಗರ್ ಸೋಳಂಕಿ 20 ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು.
ಮೊದಲ ಇನಿಂಗ್ಸ್‌ನಲ್ಲಿ 92 ರನ್ ಗಳಿಸಿದ್ದ ಆರಂಭಿಕ ಆಟಗಾರ ಕೆ.ವಿ. ಅನೀಶ್, ದ್ವಿತೀಯ ಇನಿಂಗ್ಸ್‌ನಲ್ಲಿ 142 ಎಸೆತಗಳಲ್ಲಿ 57 ರನ್ ಗಳಿಸಿ ಪ್ರತಿರೋಧ ನೀಡಿದರು.
ಕರುಣ್ ನಾಯರ್ ಸ್ಥಾನದಲ್ಲಿ ಆಡಿದ ನಿಕಿನ್ ಜೋಸ್ 101 ಎಸೆತಗಳಲ್ಲಿ 26 ರನ್ ಗಳಿಸಿದರು. ವಿದ್ಯಾಧರ್ ಪಾಟೀಲ್ 69 ಎಸೆತಗಳಲ್ಲಿ 26 ರನ್ ಗಳಿಸಿ ಔಟಾಗದೆ ಉಳಿದರು.
ಈ ಗೆಲುವಿನಿಂದ ಮಧ್ಯಪ್ರದೇಶ ಎಲಿಟ್ ‘ಬಿ’ ಗುಂಪಿನಲ್ಲಿ 22 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಕರ್ನಾಟಕ 21 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಗೋವಾವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿರುವ ಮಹಾರಾಷ್ಟ್ರ 24 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.