ಪಮೇಲಾ ಕೊಂಟಿ U17 ಮಹಿಳಾ ಫುಟ್ಬಾಲ್ ತಂಡದ ಪ್ರಧಾನ ಕೋಚ್
Photo : X
ಹೊಸದಿಲ್ಲಿ, ಜ. 25: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಭಾರತೀಯ ಅಂಡರ್–17 ಮಹಿಳಾ ರಾಷ್ಟ್ರೀಯ ತಂಡದ ಪ್ರಧಾನ ಕೋಚ್ ಆಗಿ ಇಟಲಿಯ ಪಮೇಲಾ ಕೊಂಟಿ ಅವರನ್ನು ನೇಮಿಸಿದೆ.
43 ವರ್ಷದ ಪಮೇಲಾ ಆಂಧ್ರಪ್ರದೇಶದ ಅನಂತಪುರದಲ್ಲಿರುವ ಮಹಿಳಾ ತರಬೇತಿ ಶಿಬಿರವನ್ನು ಸೇರಿಕೊಂಡಿದ್ದಾರೆ. ಈ ತರಬೇತಿ ಶಿಬಿರದಲ್ಲಿ ಹದಿನೇಳು ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರ್ತಿಯರು ಎಎಫ್‌ಸಿ ಅಂಡರ್–17 ಮಹಿಳಾ ಏಷ್ಯನ್ ಕಪ್ ಪಂದ್ಯಾವಳಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಪಂದ್ಯಾವಳಿ ಚೀನಾದಲ್ಲಿ ಏಪ್ರಿಲ್ 30ರಿಂದ ಮೇ 17ರವರೆಗೆ ನಡೆಯಲಿದೆ.
ಕೊಂಟಿಯ ಜೊತೆಗೆ ಸಹಾಯಕ ಕೋಚ್ ಆಗಿ ಅವರ ಸಹೋದರ ವಿನ್ಸೆನ್ಜೊ ಕೊಂಟಿ ತಂಡಕ್ಕೆ ಬರಲಿದ್ದಾರೆ. ಇನ್ನೋರ್ವ ಸಹಾಯಕ ಕೋಚ್ ನಿವೇತಾ ರಾಮದಾಸ್ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಎಸ್ಎಎಎಫ್‌ಎಫ್ ಅಂಡರ್–19 ಮಹಿಳಾ ಚಾಂಪಿಯನ್‌ಶಿಪ್ 2026 ಕೊಂಟಿಯ ಮೊದಲ ಅಧಿಕೃತ ಪಂದ್ಯಾವಳಿಯಾಗಿರಲಿದೆ. ಈ ಪಂದ್ಯಾವಳಿ ನೇಪಾಳದ ಪೋಖರಾದಲ್ಲಿ ಜನವರಿ 31ರಿಂದ ಫೆಬ್ರವರಿ 7ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾರತವು ತನ್ನ ಅಂಡರ್–17 ತಂಡವನ್ನು ಆಡಿಸಲಿದೆ.
ಇಟಲಿಯ ಅಂತರರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಮಿಡ್‌ಫೀಲ್ಡರ್ ಆಗಿ ಆಡಿರುವ ಕೊಂಟಿ ತಮ್ಮೊಂದಿಗೆ ಅಪಾರ ಅನುಭವವನ್ನು ತರಲಿದ್ದಾರೆ.