Australian Open | ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್, ಇಗಾ ಸ್ವಿಯಾಟೆಕ್ ಕ್ವಾರ್ಟರ್ ಫೈನಲ್ ಗೆ
ಜನ್ನಿಕ್ ಸಿನ್ನರ್, ಇಗಾ ಸ್ವಿಯಾಟೆಕ್ | Photo Credit : AP \ PTI
ಮೆಲ್ಬರ್ನ್, ಜ.26: ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಹಾಗೂ ಪೋಲ್ಯಾಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅನುಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ಪ್ರಿ–ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಟಲಿ ಆಟಗಾರ ಜನ್ನಿಕ್ ಸಿನ್ನರ್ ತಮ್ಮದೇ ದೇಶದ ಲುಸಿಯಾನೊ ಡಾರ್ಡೆರಿ ಅವರನ್ನು 6–1, 6–3, 7–6(2) ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಅವರು ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ ಸೋಮವಾರ ಸಂಜೆ ನಡೆದ ಪಂದ್ಯದಲ್ಲಿ ತಾಪಮಾನವು 33 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು. ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಎಲಿಯಟ್ ಸ್ಪಿಝಿರ್ರಿ ವಿರುದ್ಧ ಆಡುತ್ತಿದ್ದ ವೇಳೆ ವಿಪರೀತ ಸೆಖೆಯಿಂದ ಬಳಲಿದ್ದ ಸಿನ್ನರ್ ಮೇಲೆ ಎಲ್ಲರ ಗಮನ ಹರಿದಿತ್ತು. ಸೋಮವಾರ ನಡೆದ ಪಂದ್ಯದಲ್ಲಿ ಸಿನ್ನರ್ ಸಂಪೂರ್ಣ ಜೋಶ್‌ನಲ್ಲಿ ಆಡಿದರು. ಎರಡು ಗಂಟೆ 9 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 22ನೇ ಶ್ರೇಯಾಂಕದ ಡಾರ್ಡೆರಿ ಅವರನ್ನು ಸುಲಭವಾಗಿ ಮಣಿಸಿದರು.
ಸಿನ್ನರ್ ಸೆಮಿ ಫೈನಲ್ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಲು ಬೆನ್ ಶೆಲ್ಟನ್ ಅಥವಾ ಕಾಸ್ಪರ್ ರೂಡ್ ಅವರನ್ನು ಎದುರಿಸಲಿದ್ದಾರೆ.
ಇಟಲಿಯ ಆರಡಿ ಒಂದು ಇಂಚು ಎತ್ತರದ ಲೊರೆನ್ಜೊ ಮುಸೆಟ್ಟಿ ಮತ್ತೊಂದು ಪುರುಷರ ಸಿಂಗಲ್ಸ್ ಪ್ರಿ–ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಆಟಗಾರ ಟೇಲರ್ ಫ್ರಿಟ್ಜ್ ಅವರನ್ನು 6–2, 7–5, 6–4 ಸೆಟ್‌ಗಳ ಅಂತರದಿಂದ ಮಣಿಸಿದರು. 23ರ ಹರೆಯದ ಮುಸೆಟ್ಟಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕನೇ ಬಾರಿ ಹಾಗೂ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಮುಸೆಟ್ಟಿ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.4 ಆಟಗಾರ ನೊವಾಕ್ ಜೊಕೊವಿಕ್ ಅವರಿಂದ ಕಠಿಣ ಸವಾಲನ್ನು ಎದುರಿಸಲಿದ್ದಾರೆ. ಸರ್ಬಿಯಾದ ಸ್ಟಾರ್ ಜೊಕೊವಿಕ್ ವಿರುದ್ಧ ಹೆಡ್–ಟು–ಹೆಡ್ ದಾಖಲೆಯಲ್ಲಿ ಮುಸೆಟ್ಟಿ 1–9 ಅಂತರದಿಂದ ಹಿಂದಿದ್ದಾರೆ.
ಕೆಲವೇ ದಿನಗಳ ಹಿಂದೆ ಥಾಮಸ್ ಮಚಾಕ್ ವಿರುದ್ಧ ನಾಲ್ಕು ಗಂಟೆ 27 ನಿಮಿಷಗಳ ಕಾಲ ನಡೆದ ಐದು ಸೆಟ್‌ಗಳ ಪಂದ್ಯದಲ್ಲಿ ಜಯಶಾಲಿಯಾಗಿದ್ದ ಮುಸೆಟ್ಟಿ, ಇಂದಿನ ಪಂದ್ಯದಲ್ಲಿ ಎಲ್ಲಿಯೂ ದಣಿದಂತೆ ಕಂಡುಬರಲಿಲ್ಲ.
*ಸ್ವಿಯಾಟೆಕ್ ಮೂರನೇ ಬಾರಿ ಕ್ವಾರ್ಟರ್ ಫೈನಲ್‌ಗೆ
ಒಂದು ಗಂಟೆ 13 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಮ್ಯಾಡಿಸನ್ ಇಂಗ್ಲಿಸ್ ಅವರನ್ನು 6–0, 6–3 ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಆರು ಬಾರಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಇಗಾ ಸ್ವಿಯಾಟೆಕ್ ಮೆಲ್ಬರ್ನ್ ಪಾರ್ಕ್‌ನಲ್ಲಿ ಟ್ರೋಫಿ ಗೆಲ್ಲುವ ಆಸ್ಟ್ರೇಲಿಯಾದ ವಿಶ್ವಾಸಕ್ಕೆ ಧಕ್ಕೆ ತಂದರು.
ಸ್ವಿಯಾಟೆಕ್ ಮೂರನೇ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದು, ಮುಂದಿನ ಸುತ್ತಿನಲ್ಲಿ ಕಝಕ್‌ಸ್ತಾನದ ಆಟಗಾರ್ತಿ ಎಲೆನಾ ರೈಬಾಕಿನಾರನ್ನು ಎದುರಿಸಲಿದ್ದಾರೆ.
ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿರುವ ಸ್ವಿಯಾಟೆಕ್ ತಮ್ಮ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಪರಿಪೂರ್ಣತೆ ಸಾಧಿಸಲು ಬಯಸಿದ್ದಾರೆ.
28ರ ಹರೆಯದ ಇಂಗ್ಲಿಸ್, ಮೂರನೇ ಸುತ್ತಿನ ಎದುರಾಳಿ ಜಪಾನಿನ ನವೊಮಿ ಒಸಾಕಾ ಅನಾರೋಗ್ಯದಿಂದಾಗಿ ಸ್ಪರ್ಧೆಯಿಂದ ಹೊರಗುಳಿದ ನಂತರ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದರು.
ವಿಶ್ವದ ನಂ.168ನೇ ಆಟಗಾರ್ತಿ ಇಂಗ್ಲಿಸ್ ಮಹಿಳೆಯರ ಸಿಂಗಲ್ಸ್ ಡ್ರಾದಲ್ಲಿ ಆಸ್ಟ್ರೇಲಿಯಾದ ಕೊನೆಯ ಆಟಗಾರ್ತಿಯಾಗಿದ್ದರು.
ಹಿಂದಿನ ಸುತ್ತಿನಲ್ಲಿ ರಷ್ಯಾದ ಅನ್ನಾ ಕಾಲಿನ್‌ಸ್ಕಾಯಾರನ್ನು ಮೂರು ಸೆಟ್‌ಗಳಿಂದ ಮಣಿಸಿದ್ದ ಸ್ವಿಯಾಟೆಕ್, ಇಂದು ಪ್ರಬಲ ಪ್ರದರ್ಶನ ನೀಡಿ ಇಂಗ್ಲಿಸ್‌ಗೆ ಸೋಲುಣಿಸಿದರು.
*ಹಾಲಿ ಚಾಂಪಿಯನ್ ಮ್ಯಾಡಿಸನ್‌ಗೆ ಸೋಲು
ಹಾಲಿ ಚಾಂಪಿಯನ್ ಮ್ಯಾಡಿಸನ್ ಕೀಸ್ ಅವರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದ ಜೆಸ್ಸಿಕಾ ಪೆಗುಲಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಸೋಮವಾರ ನಡೆದ ಅಂತಿಮ–16ರ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಪೆಗುಲಾ ತಮ್ಮದೇ ದೇಶದ ಮ್ಯಾಡಿಸನ್ ಕೀಸ್ ಅವರನ್ನು 6–3, 6–4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
2024ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್–ಅಪ್ ಆಗಿದ್ದ ಪೆಗುಲಾ, ಈಗಲೂ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗಿಟ್ಟಿಸಲು ಹೋರಾಟ ಮುಂದುವರಿಸಿದ್ದಾರೆ.
ಪೆಗುಲಾ ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2021 ಹಾಗೂ 2023ರ ನಡುವೆ ಮೂರು ಬಾರಿ ಅಂತಿಮ–8ರ ಹಂತವನ್ನು ತಲುಪಿದ್ದರು. 31ರ ಹರೆಯದ ಪೆಗುಲಾ ಮೆಲ್ಬರ್ನ್ ಪಾರ್ಕ್‌ನಲ್ಲಿ ಇನ್ನಷ್ಟೇ ಸೆಮಿ ಫೈನಲ್ ತಲುಪಬೇಕಾಗಿದೆ.
ಮ್ಯಾಡಿಸನ್ ಕೀಸ್ ಕಳೆದ ವರ್ಷದ ಫೈನಲ್‌ನಲ್ಲಿ ಆರ್ಯನಾ ಸಬಲೆಂಕಾಗೆ ಆಘಾತಕಾರಿ ಸೋಲುಣಿಸಿ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಸೋಮವಾರದ ಪಂದ್ಯದಲ್ಲಿ 27 ಅನಗತ್ಯ ತಪ್ಪುಗಳನ್ನು ಎಸಗಿದ್ದಲ್ಲದೆ, ಸ್ಥಿರ ಪ್ರದರ್ಶನ ನೀಡುವಲ್ಲಿಯೂ ಪರದಾಟ ನಡೆಸಿದರು.
ಪೆಗುಲಾ ಆರಂಭದಲ್ಲೇ ಹಿಡಿತ ಸಾಧಿಸಿದ್ದು, ಮೊದಲ ಸೆಟ್‌ನಲ್ಲಿ 2–0 ಮುನ್ನಡೆ ಪಡೆದರು.