×
Ad

ಭಾರತದ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವುದೇ ಪಾಕ್?

ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿಡಲು ಪಿಸಿಬಿಗೆ ಪಾಕ್ ಪ್ರಧಾನಿ ಸೂಚನೆ

Update: 2026-01-26 22:30 IST

ಮುಹ್ಸಿನ್ ನಖ್ವಿ | Photo Credit : PTI

ಲಾಹೋರ್, ಜ. 26: ಮುಂಬರುವ ಪುರುಷರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ತನ್ನ ಭಾಗವಹಿಸುವಿಕೆ ಕುರಿತ ನಿರ್ಧಾರವನ್ನು ವಿಳಂಬಿಸುವುದಾಗಿ ಪಾಕಿಸ್ತಾನ ಸೋಮವಾರ ಹೇಳಿದೆ. ಪಂದ್ಯಾವಳಿಯಿಂದ ಹೊರದಬ್ಬಲಾಗಿರುವ ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಆತಿಥೇಯ ಭಾರತ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವ ಸಾಧ್ಯತೆ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ. ಹೀಗಾಗಿ, ಕನಿಷ್ಠ ಶುಕ್ರವಾರದವರೆಗೆ ತನ್ನ ಭಾಗವಹಿಸುವಿಕೆ ಕುರಿತ ವಿಷಯವನ್ನು ಪಿಸಿಬಿ ಮುಕ್ತವಾಗಿಟ್ಟಿದೆ.

ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಅವರು ಪ್ರಧಾನಿ ಶೆಹಬಾಝ್ ಶರೀಫ್ ಅವರನ್ನು ಇಸ್ಲಾಮಾಬಾದ್‌ನಲ್ಲಿ ಭೇಟಿಯಾಗಿದ್ದು, ಶುಕ್ರವಾರ ಅಥವಾ ಮುಂದಿನ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಿಸಿಬಿ ತಿಳಿಸಿದೆ.

ಪ್ರಧಾನಿಯೊಂದಿಗೆ ನಡೆದ ಸಭೆಯಲ್ಲಿ ಈ ವಿಷಯವನ್ನು ವಿವರವಾಗಿ ಚರ್ಚಿಸಲಾಗಿದೆ ಎಂದು ನಖ್ವಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

‘‘ನಾನು ಪ್ರಧಾನಿಯೊಂದಿಗೆ ಈ ವಿಷಯದಲ್ಲಿ ಫಲಪ್ರದ ಮಾತುಕತೆ ನಡೆಸಿದ್ದೇನೆ. ಅವರಿಗೆ ಎಲ್ಲಾ ಅಂಶಗಳನ್ನು ವಿವರಿಸಿದ್ದೇನೆ. ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡು ವಿಷಯವನ್ನು ಇತ್ಯರ್ಥಪಡಿಸಬೇಕು ಎಂಬ ಸೂಚನೆಯನ್ನು ಅವರು ನೀಡಿದ್ದಾರೆ’’ ಎಂದು ನಖ್ವಿ ಹೇಳಿದ್ದಾರೆ.

‘‘ಅಂತಿಮ ನಿರ್ಧಾರವನ್ನು ಶುಕ್ರವಾರ ಅಥವಾ ಮುಂದಿನ ಸೋಮವಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ’’ ಎಂದು ಅವರು ತಿಳಿಸಿದರು.

ಬಾಂಗ್ಲಾದೇಶಕ್ಕೆ ಎಲ್ಲಾ ಸಾಧ್ಯವಿರುವ ಬೆಂಬಲವನ್ನು ನೀಡುವಂತೆ ಪ್ರಧಾನಿ ಪಿಸಿಬಿ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಟಿ20 ಪಂದ್ಯಾವಳಿಯು ಫೆಬ್ರವರಿ 7ರಂದು ಆರಂಭಗೊಳ್ಳಲಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿರುವ ಬಾಂಗ್ಲಾದೇಶ ತಂಡವನ್ನು ಕೂಟದಿಂದ ಹೊರಗಿಡಲಾಗಿದೆ. ತನ್ನ ಪಂದ್ಯಗಳನ್ನು ಆತಿಥೇಯ ಶ್ರೀಲಂಕಾದಲ್ಲಿ ನಡೆಸಬೇಕೆಂಬ ಅದರ ಮನವಿಯನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿರಾಕರಿಸಿದೆ. ಬಾಂಗ್ಲಾದೇಶದ ಸ್ಥಾನದಲ್ಲಿ ಆಡಲು ಸ್ಕಾಟ್‌ಲ್ಯಾಂಡ್ ತಂಡವನ್ನು ಸೇರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News