×
Ad

ಭಾರತದ ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ ಯಾರು?

Update: 2025-06-30 19:53 IST

ಆಯುಷ್ ಶೆಟ್ಟಿ | PC : X \ @BAI_Media

ಬೆಂಗಳೂರು: ಯು.ಎಸ್. ಓಪನ್ ಸೂಪರ್-300 ಟೂರ್ನಿಯಲ್ಲಿ ತನ್ನ ಮೊದಲ ಸೀನಿಯರ್ ಟೂರ್ ಪ್ರಶಸ್ತಿಯನ್ನು ಗೆದ್ದಿರುವ ಆಯುಷ್ ಶೆಟ್ಟಿ ಕನ್ನಡಿಗ ಎನ್ನುವುದು ಹೆಮ್ಮೆ ವಿಚಾರ. ಮಂಗಳೂರಿನವರಾದ ಆಯುಷ್ ಸದ್ಯ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿಶ್ವದ ನಂ.31ನೇ ಆಟಗಾರ ಆಯುಷ್ ಅವರು ಭಾರತದ ಪುರುಷರ ಸಿಂಗಲ್ಸ್ ಆಟಗಾರರ ಪೈಕಿ ಎರಡನೇ ಗರಿಷ್ಠ ರ‍್ಯಾಂಕ್ ಹೊಂದಿದ್ದಾರೆ.

ಆಯುಷ್ ಅವರು ಯು.ಎಸ್. ಓಪನ್‌ನ ಸೆಮಿ ಫೈನಲ್‌ ನಲ್ಲಿ ಅತ್ಯಂತ ಅನುಭವಿ ಆಟಗಾರರ ಪೈಕಿ ಒಬ್ಬರಾಗಿರುವ ಹಾಗೂ ವಿಶ್ವದ ನಂ.6ನೇ ಆಟಗಾರ ಚೌ ಟಿಯೆನ್ ಚೆನ್‌ರನ್ನು ಸೋಲಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಆಯುಷ್ ಅವರು ಕಳೆದ ಕೆಲವು ವರ್ಷಗಳಿಂದ ಬ್ಯಾಡ್ಮಿಂಟನ್‌ನಲ್ಲಿ ಉನ್ನತ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದೀಗ ಯು.ಎಸ್. ಓಪನ್ ಟೂರ್ನಿಯ ಮೂಲಕ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಸೆಮಿ ಫೈನಲ್‌ ನಲ್ಲಿ ಚೌ ವಿರುದ್ಧ 3 ಗೇಮ್‌ ಗಳ ಪಂದ್ಯದಲ್ಲಿ ಜಯಶಾಲಿಯಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಆಯುಷ್ ರವಿವಾರ ಅಮೆರಿಕದ ಲೋವಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೆನಡಾದ ಬ್ರಿಯಾನ್ ಯಾಂಗ್‌ರನ್ನು ಮಣಿಸುವ ಮೂಲಕ 2025ರಲ್ಲಿ ತನ್ನ ಮೊದಲ ಪ್ರಮುಖ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಈ ಮೂಲಕ ಈ ವರ್ಷ ಹಿರಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ಭಾರತದ ಮೊದಲ ಆಟಗಾರನಾಗಿದ್ದಾರೆ.

ಲೋವಾದಲ್ಲಿ ಭಾರತೀಯರು ಗಣನೀಯ ಪ್ರಮಾಣದಲ್ಲಿರುವ ಕಾರಣ ಆಯುಷ್ ಶೆಟ್ಟಿಗೆ ಈ ವಾರ ಪೂರ್ತಿ ಪ್ರೇಕ್ಷಕರ ಬೆಂಬಲ ಸಾಕಷ್ಟು ಲಭಿಸಿದೆ.

‘‘ಇದು ಬಹಳಷ್ಟು ಅರ್ಥಪೂರ್ಣವಾಗಿದೆ. ಸೀನಿಯರ್ ಮಟ್ಟದಲ್ಲಿ ನಾನು ಗೆದ್ದಿರುವ ಮೊದಲ ಪ್ರಶಸ್ತಿ ಇದಾಗಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಈ ಪಂದ್ಯದಲ್ಲಿ ಬಹಳಷ್ಟು ಸಕಾರಾತ್ಮಕ ಅಂಶಗಳಿದ್ದವು. ನಾನು ಅಮೆರಿಕದಲ್ಲಿ ಕೆಲವು ಅತ್ಯುತ್ತಮ ಬ್ಯಾಡ್ಮಿಂಟನ್ ಆಡಿದ್ದೇನೆ. ಮುಂದಿನ ವಾರ ಕೆನಡಾ ಓಪನ್ ಟೂರ್ನಿಗಾಗಿ ಎದುರು ನೋಡುತ್ತಿದ್ದೇನೆ’’ ಎಂದು ಆಯುಷ್ ಶೆಟ್ಟಿ ಹೇಳಿದ್ದಾರೆ.

ಆರಡಿ, 4 ಇಂಚು ಎತ್ತರದ ಆಯುಷ್ ಶೆಟ್ಟಿಯವರನ್ನು ಸಾಮಾಜಿಕ ಮಾಧ್ಯಮದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್‌ ಸೆನ್‌ ಗೆ ಹೋಲಿಸಲಾಗುತ್ತಿದೆ.

20ರ ವಯಸ್ಸಿನ ಮಂಗಳೂರಿನ ಆಟಗಾರ ಆಯುಷ್ ಪಾಲಿಗೆ 2025 ಅದೃಷ್ಟದ ವರ್ಷವಾಗಿದೆ. ಈ ವರ್ಷಾರಂಭದಲ್ಲಿ ಒರ್ಲಿಯನ್ಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೀವ್ ಹಾಗೂ ರಾಸ್ಮಸ್ ಗೆಮ್ಕೆ ಅವರಂತಹ ಘಟಾನುಘಟಿ ಆಟಗಾರರನ್ನು ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದ್ದರು.

ಮೇ ತಿಂಗಳಲ್ಲಿ ಭಾರತದ ಹಿರಿಯ ಆಟಗಾರ ಕಿಡಂಬಿ ಶ್ರೀಕಾಂತ್‌ರನ್ನು ಸೋಲಿಸಿ ತೈಪೆ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ ಗೆ ತಲುಪಿದ್ದರು.

ತನ್ನ ತಂದೆಯಿಂದ ಪ್ರೇರಿತರಾಗಿ 8ನೇ ವಯಸ್ಸಿನಲ್ಲಿ ಆಯುಷ್, ಬ್ಯಾಡ್ಮಿಂಟನ್ ಆಡಲು ಆರಂಭಿಸಿದರು. ಆರಂಭದಲ್ಲಿ ಕಾರ್ಕಳ ಹಾಗೂ ಮಂಗಳೂರಿನಲ್ಲಿ ಸ್ಥಳೀಯ ತರಬೇತುದಾರರಾದ ಸುಭಾಷ್ ಹಾಗೂ ಚೇತನ್ ಅವರ ಬಳಿ ತರಬೇತಿ ಪಡೆದಿದ್ದರು. ಆಯುಷ್ 12ನೇ ವಯಸ್ಸಿನವರಾಗಿದ್ದಾಗ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಅಲ್ಲಿ ಅವರಿಗೆ ಉತ್ತಮ ತರಬೇತಿ ಲಭಿಸಿತು. ಅವರು ತಮ್ಮ ಶಿಕ್ಷಣವನ್ನು ಮುಂದುವರಿಸುವ ಜೊತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಿದರು.

ಅಮೆರಿಕದಲ್ಲಿ ನಡೆದಿದ್ದ ವಿಶ್ವ ಜೂನಿಯರ್ ಚಾಂಪಿಯನ್‌ ಶಿಪ್‌ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಆಯುಷ್ ಎಲ್ಲ ಗಮನ ಸೆಳೆದರು. ಈ ಚಾಂಪಿಯನ್‌ ಶಿಪ್‌ ನಲ್ಲಿ ಪದಕ ಗೆದ್ದಿರುವ ಆರನೇ ಸಿಂಗಲ್ಸ್ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದರು. ಆ ನಂತರ ಭಾರತದ ಜೂನಿಯರ್ ಸಿಂಗಲ್ಸ್ ವಿಭಾಗದಲ್ಲಿ ನಂ.1 ರ‍್ಯಾಂಕ್ ಪಡೆದರು. ವಿಶ್ವ ಜೂನಿಯರ್ ಚಾಂಪಿಯನ್‌ ಶಿಪ್‌ ನಲ್ಲಿ ಸೆಮಿ ಫೈನಲ್‌ ನಲ್ಲಿ ಇಂಡೋನೇಶ್ಯದ ಅಲ್ವಿ ಫರ್ಹಾನ್ ವಿರುದ್ಧ ಸೋಲುವ ಮೊದಲು ಕ್ವಾರ್ಟರ್ ಫೈನಲ್‌ ನಲ್ಲಿ ಜಪಾನಿನ ಆಟಗಾರ ಯುಡೈ ಒಕಿಮೊಟೊರನ್ನು ಸೋಲಿಸಿ ಶಾಕ್ ನೀಡಿದ್ದರು.

ತನ್ನ ಪವರ್-ಹಿಟ್ಟಿಂಗ್‌ ನಿಂದ ಹೆಸರುವಾಸಿಯಾಗಿರುವ ಆಯುಷ್ ಶೆಟ್ಟಿ ತನ್ನ ಡಿಫೆನ್ಸ್ ಸುಧಾರಿಸಲು ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವುದು ಫಲಪ್ರದವಾಗಿದ್ದು ಆಲ್‌ರೌಂಡ್ ಗೇಮ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.

ಆಯುಷ್ ತಮ್ಮ ಹೆಚ್ಚಿನ ಸಮಯವನ್ನು ಬ್ಯಾಡ್ಮಿಂಟನ್‌ಗೆ ಮೀಸಲಿಟ್ಟಿದ್ದರೂ ಬೆಂಗಳೂರಿನ ರೇವಾ ಯುನಿವರ್ಸಿಟಿಯಲ್ಲಿ ಕ್ರೀಡಾ ವಿಜ್ಞಾನದಲ್ಲಿ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಆಯುಷ್ ಈ ವರ್ಷದ ಜೂನ್‌ ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.31ನೇ ಆಟಗಾರನಾಗಿ ಹೊರಹೊಮ್ಮಿದ್ದರು. ಲಕ್ಷ್ಯ ಸೇನ್ ನಂತರ ಭಾರತದ ಎರಡನೇ ಗರಿಷ್ಠ ರ‍್ಯಾಂಕಿನ ಆಟಗಾರನಾಗಿದ್ದಾರೆ.

ಅಮೆರಿಕದಲ್ಲಿ ಚೊಚ್ಚಲ ಸೀನಿಯರ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಆಯುಷ್ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿದ್ದಾರೆ ಎಂದು ಬ್ಯಾಡ್ಮಿಂಟನ್ ಅಭಿಮಾನಿಗಳು ಹಾಗೂ ತಜ್ಞರು ನಂಬಿಕೆ ಇಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News