×
Ad

FIFA 2026 | ಹೆಚ್ಚುವರಿ ಸಮಯದಲ್ಲಿ ವಿವಾದಿತ ಪೆನಾಲ್ಟಿ: ಸೆನೆಗಲ್ ವಿರುದ್ಧ ಬೆಲ್ಜಿಯಂಗೆ ರೋಚಕ ಜಯ

Update: 2026-07-02 13:01 IST

Photo credit: X/@FIFAWorldCup

ಸಿಯಾಟಲ್: ಪಂದ್ಯದ ಹೆಚ್ಚುವರಿ ಸಮಯದ ಕೊನೆಯ ಕ್ಷಣಗಳಲ್ಲಿ ದೊರಕಿದ ವಿವಾದಾತ್ಮಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಬೆಲ್ಜಿಯಂ 3-2 ಅಂತರದಿಂದ ಸೆನೆಗಲ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಪಂದ್ಯದ ಕೊನಯವರೆಗೂ ಮೇಲುಗೈ ಸಾಧಿಸಿದ್ದ ಸೆನೆಗಲ್‌ ತಂಡವು ನಿರಾಸೆಯೊಂದಿಗೆ ವಿಶ್ವಕಪ್‌ ನಿಂದ ನಿರ್ಗಮಿಸಬೇಕಾಯಿತು.

ಮೊದಲಾರ್ಧದಲ್ಲಿ ಸೆನೆಗಲ್ ತಂಡವು ತನ್ನ ಪ್ರಾಬಲ್ಯಕ್ಕೆ ತಕ್ಕಂತೆ ಮುನ್ನಡೆ ಸಾಧಿಸಿತು. 25ನೇ ನಿಮಿಷದಲ್ಲಿ ಇಸ್ಮಾಯಿಲಾ ಸಾರ್ ಅವರ ಹೆಡರ್ ಪೋಸ್ಟ್ ಗೆ ಬಡಿದು ಹಿಂತಿರುಗಿದ ಚೆಂಡನ್ನು ಹಬೀಬ್ ಡಿಯಾರಾ ಗೋಲಾಗಿ ಪರಿವರ್ತಿಸಿ ಸೆನೆಗಲ್ ಗೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧ ದಲ್ಲಿ ಕೇವಲ ಆರು ನಿಮಿಷಗಳಲ್ಲೇ ಇಸ್ಮಾಯಿಲಾ ಸಾರ್ ಸೆನೆಗಲ್ ನ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಬೆಲ್ಜಿಯಂ ರಕ್ಷಣಾ ಆಟಗಾರರನ್ನು ಬೇಧಿಸಿ ಬಂದ ದೀರ್ಘ ಪಾಸ್ ಅನ್ನು ಅವರು ಅದ್ಭುತವಾಗಿ ಗೋಲಾಗಿ ಪರಿವರ್ತಿಸಿದರು. ಪಂದ್ಯದ 86ನೇ ನಿಮಿಷದವರೆಗೂ ಸೆನೆಗಲ್ 2-0 ಮುನ್ನಡೆಯಲ್ಲಿತ್ತು.

ಆದರೆ ನಿಗದಿತ ಸಮಯ ಮುಗಿಯಲು ಕೇವಲ ನಾಲ್ಕು ನಿಮಿಷಗಳು ಬಾಕಿ ಇರುವಾಗ ರೊಮೆಲು ಲುಕಾಕು ಗೋಲು ಗಳಿಸುವ ಮೂಲಕ ಬೆಲ್ಜಿಯಂ ತಂಡದ ಅದ್ಭುತ ಕಮ್ ಬ್ಯಾಕ್ಗೆ ಚಾಲನೆ ನೀಡಿದರು. ಬಳಿಕ ಕೇವಲ 2 ನಿಮಿಷಗಳಲ್ಲಿ ಲಿಯಾಂಡ್ರೊ ಟ್ರೋಸಾರ್ಡ್ ನೀಡಿದ ಕ್ರಾಸ್ನ್ನು ಯೂರಿ ಟೀಲೆಮ್ಯಾನ್ಸ್ ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿದರು. ಇದು ಸೆನೆಗಲ್ ತಂಡವನ್ನು ಒತ್ತಡಕ್ಕೊಳಪಡಿಸಿತು. ಪಂದ್ಯದ ಸಮಬಲಗೊಂಡ ಕಾರಣ ಹೆಚ್ಚುವರಿ ಸಮಯದ ಮೊರೆಹೋಗಬೇಕಾಯಿತು.

ಪಂದ್ಯವು ಪೆನಾಲ್ಟಿ ಶೂಟೌಟ್ಗೆ ಸಾಗುವ ಸಾಧ್ಯತೆ ಇದ್ದಾಗ, ಡೋಡಿ ಲುಕೆಬಾಕಿಯೊ ಅವರ ಶಾಟ್ ಅಡ್ಡಕಂಬಕ್ಕೆ ತಾಗಿತು. ಆದರೆ ಅದರ ಮಧ್ಯದಲ್ಲಿ ಲಮಿನ್ ಕಾಮಾರಾ ಅವರು ಯೂರಿ ಟೀಲೆಮ್ಯಾನ್ಸ್ ವಿರುದ್ಧ ಫೌಲ್ ಮಾಡಿರುವುದನ್ನು ವಿಎಆರ್ ಗುರುತಿಸಿತು. ಬಳಿಕ ರೆಫರಿ ಮೈದಾನದ ಪಕ್ಕದಲ್ಲಿರುವ ಮಾನಿಟರ್ನಲ್ಲಿ ದೀರ್ಘಕಾಲ ಪರಿಶೀಲನೆ ನಡೆಸಿದ ನಂತರ ಪೆನಾಲ್ಟಿ ನೀಡಿದರು.

ಯೂರಿ ಟೀಲೆಮ್ಯಾನ್ಸ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಬೆಲ್ಜಿಯಂಗೆ 3-2 ಅಂತರದ ರೋಚಕ ಗೆಲುವು ತಂದುಕೊಟ್ಟರು. ಈ ಗೋಲು 124 ನಿಮಿಷ 44 ಸೆಕೆಂಡ್ ಗಳಲ್ಲಿ ದಾಖಲಾಗಿ, ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ತಡವಾಗಿ ದಾಖಲಾದ ಗೋಲು ಎಂಬ ದಾಖಲೆಯನ್ನೂ ನಿರ್ಮಿಸಿತು.

ಈ ಮೊದಲು ಜನವರಿಯಲ್ಲಿ ನಡೆದ ಆಫ್ರಿಕಾ ಕಪ್ ಆಫ್ ನೇಶನ್ಸ್ ಫೈನಲ್ ನಲ್ಲಿ ಮೊರೊಕ್ಕೊಗೆ ಕೊನೆಯ ಕ್ಷಣದಲ್ಲಿ ವಿವಾದಾತ್ಮಕ ಪೆನಾಲ್ಟಿ ನೀಡಿದ್ದನ್ನು ವಿರೋಧಿಸಿ ಸೆನೆಗಲ್ ತಂಡವು ಪಂದ್ಯದಿಂದ ಹೊರನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News