×
Ad

ಐತಿಹಾಸಿಕ ಸಾಧನೆಯೊಂದಿಗೆ ಆಲ್‌ ರೌಂಡರ್ ಕ್ಲಬ್‌ ಗೆ ಬೆನ್ ಸ್ಟೋಕ್ಸ್ ಸೇರ್ಪಡೆ

Update: 2025-07-26 21:15 IST

ಬೆನ್ ಸ್ಟೋಕ್ಸ್ | PC : PTI 

ಮ್ಯಾಂಚೆಸ್ಟರ್, ಜು.26: ಇಂಗ್ಲೆಂಡ್ ಆಲ್‌ ರೌಂಡರ್ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 7,000ಕ್ಕೂ ಅಧಿಕ ರನ್ ಹಾಗೂ 200 ವಿಕೆಟ್‌ ಗಳನ್ನು ಕಬಳಿಸಿದ ಮೂರನೇ ಆಟಗಾರ ಎನಿಸಿಕೊಳ್ಳುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಸ್ಟೋಕ್ಸ್ ಅವರು ವೆಸ್ಟ್‌ಇಂಡೀಸ್ ದಿಗ್ಗಜ ಗ್ಯಾರಿ ಸೋಬರ್ಸ್ ಹಾಗೂ ದಕ್ಷಿಣ ಆಫ್ರಿಕದ ಲೆಜೆಂಡ್ ಜಾಕಸ್ ಕಾಲಿಸ್ ಅವರಿದ್ದ ವಿಶೇಷ ಕ್ಲಬ್‌ ಗೆ ಸೇರ್ಪಡೆಯಾದರು. ಈ ಸಾಧನೆ ಮಾಡಿದ ಇಂಗ್ಲೆಂಡ್‌ ನ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ಸ್ಟೋಕ್ಸ್ ಅವರು ಭಾರತ ತಂಡದ ವಿರುದ್ಧದ 4ನೇ ಟೆಸ್ಟ್ ಪಂದ್ಯದ 4ನೇ ದಿನವಾದ ಶನಿವಾರ ಈ ಮೈಲಿಗಲ್ಲು ತಲುಪಿದರು. ಅತ್ಯುತ್ತಮ ಪ್ರದರ್ಶನ ನೀಡಿದ ಸ್ಟೋಕ್ಸ್ ಅವರು ತನ್ನ 14ನೇ ಟೆಸ್ಟ್ ಶತಕವನ್ನು ಪೂರೈಸಿದರು.

ಮೂರನೇ ದಿನವಾದ ಶುಕ್ರವಾರ ಸ್ಟೋಕ್ಸ್ ಅವರು ಎಲ್ಲ ಮಾದರಿಗಳ ಕ್ರಿಕೆಟ್‌ ನಲ್ಲಿ 11,000 ಇಂಟರ್‌ ನ್ಯಾಶನಲ್ ರನ್ ಗಳಿಸಿದರು. 3ನೇ ದಿನದಂತ್ಯಕ್ಕೆ ಔಟಾಗದೆ 77 ರನ್ ಗಳಿಸಿದ್ದ ಸ್ಟೋಕ್ಸ್ ಅವರು ಇಂಗ್ಲೆಂಡ್ ತಂಡವು 7 ವಿಕೆಟ್‌ ಗಳ ನಷ್ಟಕ್ಕೆ 544 ರನ್ ಗಳಿಸಿ 186 ರನ್ ಮುನ್ನಡೆ ಪಡೆಯುವಲ್ಲಿ ನೆರವಾದರು. ಕಾಲಿಗೆ ಆದ ನೋವಿನಿಂದಾಗಿ ಗಾಯಗೊಂಡು ನಿವೃತ್ತಿಯಾಗಿದ್ದ ಸ್ಟೋಕ್ಸ್ ಅವರು ಲಿಯಾಮ್ ಡಾಸನ್ ಜೊತೆ ತನ್ನ ಇನಿಂಗ್ಸ್ ಮುಂದುವರಿಸಿದರು.

ಸ್ಟೋಕ್ಸ್ ಇದೀಗ 272 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ 35.88ರ ಸರಾಸರಿಯಲ್ಲಿ 19 ಶತಕಗಳು ಹಾಗೂ 61 ಅರ್ಧಶತಕಗಳ ಸಹಿತ ಒಟ್ಟು 11,048 ರನ್ ಗಳಿಸಿದ್ದಾರೆ.

ಭಾರತ ತಂಡದ ವಿರುದ್ಧದ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಒಟ್ಟು 16 ವಿಕೆಟ್‌ ಗಳನ್ನು ಪಡೆದಿರುವ ಸ್ಟೋಕ್ಸ್ ಆಲ್‌ ರೌಂಡ್ ಪ್ರದರ್ಶನದಿಂದ ಮಿಂಚುತ್ತಿದ್ದಾರೆ.

ಜೋ ರೂಟ್ ಅವರು ಶುಕ್ರವಾರ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿ 38ನೇ ಶತಕ ಸಿಡಿಸಿದರು. ರಿಕಿ ಪಾಂಟಿಂಗ್‌ ರನ್ನು ಹಿಂದಿಕ್ಕುವುದರೊಂದಿಗೆ ಟೆಸ್ಟ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

*ಟೆಸ್ಟ್ ಕ್ರಿಕೆಟ್: 7,000+ ರನ್, 200 ವಿಕೆಟ್‌ ಗಳನ್ನು ಪಡೆದ ಆಟಗಾರರು

ಆಟಗಾರ                          ತಂಡ                       ರನ್                  ವಿಕೆಟ್

ಜಾಕಸ್ ಕಾಲಿಸ್                ದ.ಆಫ್ರಿಕಾ             13,289                  292

ಗ್ಯಾರಿ ಸೋಬರ್ಸ್         ವೆಸ್ಟ್‌ಇಂಡೀಸ್             8,032                   235

ಬೆನ್ ಸ್ಟೋಕ್ಸ್                 ಇಂಗ್ಲೆಂಡ್                 7,005*              229 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News