×
Ad

ಬಾಕ್ಸಿಂಗ್ ಡೇ ಟೆಸ್ಟ್ : ಪ್ಯಾಟ್ ಕಮಿನ್ಸ್ ಪ್ರಹಾರಕ್ಕೆ ಪಾಕಿಸ್ತಾನ ತತ್ತರ, ಆಸ್ಟ್ರೇಲಿಯಕ್ಕೆ ಸರಣಿ ಮುನ್ನಡೆ

Update: 2023-12-29 23:49 IST

Photo: cricbuzz.com

ಮೆಲ್ಬೋರ್ನ್: ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಪ್ರಹಾರಕ್ಕೆ ತತ್ತರಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 79 ರನ್ ಅಂತರದಿಂದ ಸೋಲುಂಡಿದೆ. ಸತತ ಎರಡನೇ ಗೆಲುವು ದಾಖಲಿಸಿರುವ ಆಸ್ಟ್ರೇಲಿಯ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ.

ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದ ಕಮಿನ್ಸ್ ಪಾಕಿಸ್ತಾನಕ್ಕೆ ಸಿಂಹಸ್ವಪ್ನರಾದರು.

ನಾಲ್ಕನೇ ದಿನದಾಟವಾದ ಶುಕ್ರವಾರ ಗೆಲ್ಲಲು 317 ರನ್ ಗುರಿ ಪಡೆದ ಪಾಕಿಸ್ತಾನ 67.2 ಓವರ್ಗಳಲ್ಲಿ 237 ರನ್‌ ಗೆ ತನ್ನೆಲ್ಲಾ ವಿಕೆಟ್‌ ಗಳನ್ನು ಕಳೆದುಕೊಂಡಿತು. 18 ರನ್‌ ಗೆ ಕೊನೆಯ ಐದು ವಿಕೆಟ್‌ ಗಳನ್ನು ಕಳೆದುಕೊಂಡ ಪಾಕಿಸ್ತಾನ 1995ರ ನಂತರ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಗೆಲ್ಲುವ ಕನಸು ಈಡೇರಿಸಿಕೊಳ್ಳುವಲ್ಲಿ ವಿಫಲವಾಯಿತು.

49 ರನ್‌ ಗೆ ಐದು ವಿಕೆಟ್ ಗೊಂಚಲು ಪಡೆದ ಆಸ್ಟ್ರೇಲಿಯದ ನಾಯಕ ಕಮಿನ್ಸ್ ಪಾಕಿಸ್ತಾನದ ಅಗ್ರ ಸರದಿಯ ಬ್ಯಾಟಿಂಗ್ ಕುಸಿತಕ್ಕೆ ಪ್ರಮುಖ ಕಾರಣರಾದರು. ಮೊದಲ ಇನಿಂಗ್ಸ್‌ ನಲ್ಲಿ 48 ರನ್‌ ಗೆ ಐದು ವಿಕೆಟ್ ಪಡೆದಿದ್ದ ಕಮಿನ್ಸ್ ಟೆಸ್ಟ್ ವೃತ್ತಿಜೀವನದಲ್ಲಿ ಎರಡನೇ ಬಾರಿ 10 ವಿಕೆಟ್ ಗೊಂಚಲು ಪಡೆದರು.

ನಾಯಕ ಶಾನ್ ಮಸೂದ್(60 ರನ್, 71 ಎಸೆತ), ಅಘಾ ಸಲ್ಮಾನ್(50 ರನ್, 70 ಎಸೆತ) ಹಾಗೂ ಬಾಬರ್ ಆಝಮ್(41 ರನ್, 79 ಎಸೆತ) ಪಾಕಿಸ್ತಾನದ ಗೆಲುವಿಗಾಗಿ ಹೋರಾಟ ನೀಡಿದರು. ಮಸೂದ್ ಹಾಗೂ ಆಝಮ್ 3ನೇ ವಿಕೆಟ್‌ ಗೆ 61 ರನ್ ಜೊತೆಯಾಟದಲ್ಲಿ ಭಾಗಿಯಾದರು. ಮುಹಮ್ಮದ್ ರಿಝ್ವಾನ್ ಹಾಗೂ ಅಘಾ ಸಲ್ಮಾನ್ 6ನೇ ವಿಕೆಟ್‌ ಗೆ 57 ರನ್ ಸೇರಿಸಿ ಪಾಕಿಸ್ತಾನಕ್ಕೆ ಗೆಲುವಿನ ಆಸೆ ಮೂಡಿಸಿದರು. ರಿಝ್ವಾನ್ ವಿಕೆಟ್ ಕಬಳಿಸಿದ ಕಮಿನ್ಸ್ ಈ ಜೋಡಿಯನ್ನು ಬೇರ್ಪಡಿಸಿದರು.

ಆದರೆ ಹಿರಿಯ ವೇಗಿ ಮಿಚೆಲ್ ಸ್ಟಾರ್ಕ್(4-55) ಪಾಕಿಸ್ತಾನದ ಕೆಳ ಸರದಿಯ ಆಟಗಾರರಿಗೆ ಸವಾಲಾಗಿ ಪರಿಣಮಿಸಿದರು.

ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ನಾಲ್ಕನೇ ಇನಿಂಗ್ಸ್‌ ನಲ್ಲಿ ಗರಿಷ್ಠ ರನ್ ಚೇಸ್ ಯಾವಾಗಲೂ ಕಷ್ಟಕರ. 1928ರಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 332 ರನ್ ಚೇಸಿಂಗ್ ಮಾಡಿದ ನಂತರ ಯಾವೊಂದು ತಂಡವು 300ಕ್ಕಿಂತ ಹೆಚ್ಚು ರನ್ ಚೇಸ್ ಮಾಡಿಲ್ಲ.

ಪಾಕಿಸ್ತಾನದ ಆರಂಭಿಕ ಬ್ಯಾಟರ್ ಅಬ್ದುಲ್ಲಾ ಶಫೀಕ್ ಭೋಜನ ವಿರಾಮಕ್ಕೆ ಮೊದಲು 4 ರನ್ ಗಳಿಸಿ ನಿರ್ಗಮಿಸಿದರು. ಇಮಾಮ್ ಉಲ್ ಹಕ್ 12 ರನ್ ಗಳಿಸಿ ಕಮಿನ್ಸ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಮಸೂದ್ 12 ರನ್ ಗಳಿಸಿದಾಗ ಅಂಪೈರ್ರಿಂದ ಎಲ್ಬಿಡಬ್ಲ್ಯು ತೀರ್ಪಿಗೆ ಒಳಗಾದರು. ಮಸೂದ್ ಇದನ್ನು ಪ್ರಶ್ನಿಸಿ ಔಟ್ ಆಗುವುದರಿಂದ ಬಚಾವಾದರು.

ಹಿರಿಯ ಬ್ಯಾಟರ್ ಬಾಬರ್ ಆಝಮ್ 41 ರನ್ ಗಳಿಸಿ ಜೋಶ್ ಹೇಝಲ್ವುಡ್ಗೆ ಕ್ಲೀನ್ ಬೌಲ್ಡಾದರು.

ಕಮಿನ್ಸ್ ಮ್ಯಾಜಿಕ್ಗೆ ಬಲಿಯಾಗುವ ಮೊದಲು ಮುಹಮ್ಮದ್ ರಿಝ್ವಾನ್ 35 ರನ್ ಗಳಿಸಿದರು. ಸ್ಟಾರ್ಕ್ ಅವರು ಪಾಕಿಸ್ತಾನದ ಕೆಳ ಸರದಿಯನ್ನು ಬೇಧಿಸುವ ಮೊದಲು ಕಮಿನ್ಸ್ ಅವರು ಕ್ಷಿಪ್ರವಾಗಿ ಆಮಿರ್ ಜಮಾಲ್ ಹಾಗೂ ಶಾಹೀನ್ ಶಾ ಅಫ್ರಿದಿ ವಿಕೆಟ್ ಪಡೆದರು.

ಆಸ್ಟ್ರೇಲಿಯ 262 ರನ್

ಇದಕ್ಕೂ ಮೊದಲು 6 ವಿಕೆಟ್‌ ಗಳ ನಷ್ಟಕ್ಕೆ 187 ರನ್ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯವು 262 ರನ್ ಗಳಿಸಿ ಆಲೌಟಾಯಿತು.

32 ರನ್‌ ಗೆ 4 ವಿಕೆಟ್ ಕಬಳಿಸಿದ ಮಿರ್ ಹಂಝಾ ಶ್ರೇಷ್ಠ ಬೌಲಿಂಗ್ ಮಾಡಿದರು. ಶಾಹೀನ್ ಶಾ ಅಫ್ರಿದಿ(4-76) ಕೂಡ ನಾಲ್ಕು ವಿಕೆಟ್ ಪಡೆದರು. 53 ರನ್ ಗಳಿಸಿದ ಅಲೆಕ್ಸ್ ಕಾರೆ ಆಸ್ಟ್ರೇಲಿಯದ ಮುನ್ನಡೆ ಹಿಗ್ಗಿಸುವಲ್ಲಿ ಕಾಣಿಕೆ ನೀಡಿದರು.

ಒಂದು ಹಂತದಲ್ಲಿ 16 ರನ್‌ ಗೆ 4 ವಿಕೆಟ್‌ ಗಳನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯ ತಂಡ ಮಿಚೆಲ್ ಮಾರ್ಷ್(96 ರನ್, 130 ಎಸೆತ)ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಸ್ಮಿತ್ (50 ರನ್, 176 ಎಸೆತ)ದಿಟ್ಟ ಹೋರಾಟದ ನೆರವಿನಿಂದ ಮರು ಹೋರಾಟ ನೀಡಿತು. ಮಾರ್ಷ್ ಹಾಗೂ ಸ್ಮಿತ್ 5ನೇ ವಿಕೆಟ್‌ ಗೆ 153 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ರಿಪೇರಿ ಮಾಡಿದರು.

ವರ್ಷದ ಹಿಂದೆ ಮೆಲ್ಬೋರ್ನ್ನಲ್ಲಿ ತನ್ನ ಮೊದಲ ಹಾಗು ಏಕೈಕ ಶತಕ ಗಳಿಸಿದ್ದ ಕಾರೆ ಅವರು ಹಸನ್ ಅಲಿ ಎಸೆದ ಓವರ್ನಲ್ಲಿ ಸತತ ಬೌಂಡರಿ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.

ಮತ್ತೊಂದೆಡೆ ಸ್ಟಾರ್ಕ್ 9 ರನ್ ಗಳಿಸಿ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಕಮಿನ್ಸ್ 16 ರನ್ ಗಳಿಸಿ ಜಮಾಲ್ಗೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News