ಬ್ರೆಝಿಲ್ | ಸಂಭ್ರಮಾಚರಣೆ ವೇಳೆ ಬಿದ್ದು ಗಾಯಗೊಂಡ ಫುಟ್ಬಾಲ್ ಆಟಗಾರ!
Photo Credit : X
ರಿಯೋ ಡಿ ಜನೈರೊ, ಆ. 10: ಬ್ರೆಝಿಲ್‌ನ ಉನ್ನತ ಸ್ತರದ ಫುಟ್ಬಾಲ್ ಪಂದ್ಯಾವಳಿಯೊಂದರಲ್ಲಿ ಗೋಲು ಸಂಭ್ರಮಾಚರಣೆಯ ವೇಳೆ ಆಟಗಾರನೊಬ್ಬ ಮೈದಾನಕ್ಕೆ ಹೊಂದಿಕೊಂಡಿರುವ ದಾರಿಯ ಮೇಲೆ ಬಿದ್ದು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಈ ಘಟನೆಯಿಂದ ಕೊರಿಟಿಬಾ ತಂಡದ ಆಟಗಾರ 29 ವರ್ಷದ ಷಸೀ ಮರನಯಂಗ್‌ರ ಹಿಮ್ಮಡಿಗೆ ಗಾಯವಾಗಿದೆ.
ಶಾಪೆಕೋಯೆನ್ಸೆ ವಿರುದ್ಧದ ಬ್ರೆಝಿಲಿಯನ್ ಸಿರೀ ಎ ಪಂದ್ಯವೊಂದರಲ್ಲಿ, 41ನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಬಾರಿಸಿದ ಷಸೀ ಕೊರಿಟಿಬಾ ತಂಡಕ್ಕೆ 2-0 ಅಂತರದ ಮುನ್ನಡೆ ತಂದುಕೊಟ್ಟರು. ಈ ಸಂಭ್ರಮದಲ್ಲಿ ಅವರು ಚೆಂಡನ್ನು ಎತ್ತಿಕೊಂಡು ಅಭಿಮಾನಿಗಳ ಗುಂಪಿನತ್ತ ಜಿಗಿಯುತ್ತಾ ಓಡಿದರು.
Different angle… 😭 pic.twitter.com/mkXrbLBreF https://t.co/fTcr61ryVC
— Football Away Days (@FBAwayDays) August 9, 2026
ಅವರು ಮೈದಾನದ ತಡೆಗೋಡೆಯನ್ನು ಹಾರಿ ಅಂಚಿಗೆ ಹೊಂದಿಕೊಂಡಿದ್ದ ದಾರಿಯ ಮೇಲೆ ಬಿದ್ದರು.
ಬಿದ್ದ ನಂತರವೂ ಷಸೀ ಮೈದಾನಕ್ಕೆ ಹಿಂತಿರುಗಿ ದ್ವಿತೀಯಾರ್ಧದ ಮೊದಲ ಕೆಲವು ನಿಮಿಷಗಳ ಕಾಲ ಆಡಿದರು. ಆದರೆ, ಹಿಮ್ಮಡಿಯ ನೋವು ಹೆಚ್ಚಾದಾಗ ಅವರ ಜಾಗಕ್ಕೆ ಬೇರೊಬ್ಬ ಆಟಗಾರನ್ನು ಕಳುಹಿಸಲಾಯಿತು.
ಅದೇ ವೇಳೆ, ಷಸೀ ಇನ್ನೊಂದು ಆಘಾತವನ್ನೂ ಎದುರಿಸಬೇಕಾಯಿತು. ವಿಡಿಯೋ ಅಸಿಸ್ಟೆಂಟ್ ರೆಫರಿ (ವಿಎಆರ್) ಪರಿಶೀಲನೆಯ ವೇಳೆ, ಅವರ ಗೋಲ್‌ಅನ್ನು ಆಫ್‌ಸೈಡ್ ಎಂಬುದಾಗಿ ನಿರ್ಧರಿಸಲಾಯಿತು.
ಷಸೀ ಅವರನ್ನು ಕಳೆದುಕೊಂಡರೂ, ಕೊರಿಟಿಬಾ ತಂಡವು ಶಾಪೆಕೋಯೆನ್ಸೆ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು.
2014ರಲ್ಲೂ ಇದೇ ‘ಎಸ್ಟೇಡಿಯೋ ಮೇಜರ್ ಆಂಟೋನಿಯೊ ಕೌಟೋ ಪೆರೇರಾ’ ಕ್ರೀಡಾಂಗಣದ ದಾರಿಗೆ ಬಿದ್ದು ಇದೇ ಮಾದರಿಯಲ್ಲಿ ಗಾಯಗೊಂಡಿದ್ದರು. ಅಂದು ಸಾವೊಪೌಲೋ ವಿರುದ್ಧ ಕೊರಿಟಿಬಾ 3-1 ಅಂತರದ ಗೆಲುವು ಸಾಧಿಸಿದಾಗ, ಸಂಭ್ರಮಾಚರಣೆಯಲ್ಲಿದ್ದ ಕ್ಯಾಮರೂನ್‌ನ ಜೋಯಲ್ ಕೂಡ ತಡೆಗೋಡೆ ಜಿಗಿದು ಹೊರಗಿನ ದಾರಿಗೆ ಬಿದ್ದಿದ್ದರು.