Korea Masters | ಚೊಚ್ಚಲ BWF ಟೂರ್ ಪ್ರಶಸ್ತಿ ಗೆದ್ದ ಅಶ್ಮಿತಾ ಚಾಲಿಹಾ
Picture by Badminton Photo
ಅಸಾನ್, ಆ. 9: BWF ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ನಲ್ಲಿ ರವಿವಾರ ಭಾರತದ ಅಶ್ಮಿತಾ ಚಾಲಿಹಾ ಪ್ರಶಸ್ತಿ ಗೆದ್ದಿದ್ದಾರೆ.
ಅವರು ಫೈನಲ್ನಲ್ಲಿ ಚೀನಾದ ಹಾನ್ ಕಿಯಾನ್ ಕ್ಸಿ ವಿರುದ್ಧ ರೋಚಕ ಗೆಲುವು ಸಾಧಿಸಿದರು. ಇದರೊಂದಿಗೆ, ತಮ್ಮ ಚೊಚ್ಚಲ BWF ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಗುವಾಹಟಿಯ 26 ವರ್ಷದ ಅಶ್ಮಿತಾ ಮೊದಲ ಗೇಮ್ ನಲ್ಲಿ ಸೋತರೂ, ನಂತರ ಭರ್ಜರಿ ಪ್ರತಿಹೋರಾಟ ನೀಡಿದರು. ಅವರು ಅಂತಿಮವಾಗಿ ತಮ್ಮ ನಾಲ್ಕನೇ ಶ್ರೇಯಾಂಕಿತ ಎದುರಾಳಿಯನ್ನು 53 ನಿಮಿಷಗಳಲ್ಲಿ 14-21, 21-14, 21-14 ಅಂತರದಿಂದ ಮಣಿಸಿದರು.
ಮೇ ತಿಂಗಳಿನಲ್ಲಿ ಮೂರು ತಿಂಗಳ ಗಾಯದ ವಿಶ್ರಾಂತಿಯಿಂದ ಹೊರಬಂದ ನಂತರ BWF ಟೂರ್ನಲ್ಲಿ ಅಶ್ಮಿತಾ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ರಾಂತಿಯ ನಂತರದ ತಮ್ಮ ಮೊದಲ ಎರಡು ಪಂದ್ಯಾವಳಿಗಳಾದ ಚೀನಾ ಮಾಸ್ಟರ್ಸ್ ಮತ್ತು ಮಲೇಶ್ಯ ಮಾಸ್ಟರ್ಸ್ ನಲ್ಲಿ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಸೈನಾ ನೆಹ್ವಾಲ್, ಪಿ.ವಿ. ಸಿಂಧು ಮತ್ತು ದೇವಿಕಾ ಸಿಹಾಗ್ ಬಳಿಕ, BWF ಟೂರ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ಕ್ರೀಡಾಪಟುಗಳ ಪಟ್ಟಿಗೆ ಈಗ ಅಶ್ಮಿತಾ ಮತ್ತು ತನ್ವಿ ಸೇರ್ಪಡೆಗೊಂಡಿದ್ದಾರೆ.