ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್ | ಜಾವೆಲಿನ್ ಎಸೆತ: ಆಶೀಶ್ ಯಾದವ್‌ಗೆ ಬೆಳ್ಳಿ

ಪದಕದ ಖಾತೆ ತೆರೆದ ಭಾರತ

Update: 2026-08-08 21:49 IST

 ಆಶೀಶ್ ಯಾದವ್ | Photo Credit : PTI  

ಯುಜೀನ್(ಅಮೆರಿಕ), ಆ.8: ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಶುಕ್ರವಾರ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಆಶೀಶ್ ಯಾದವ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಪದಕದ ಖಾತೆಯನ್ನು ತೆರೆದಿದೆ.

ಸ್ಪರ್ಧೆಯಲ್ಲಿ ತನ್ನ ಮೂರನೇ ಸುತ್ತಿನಲ್ಲಿ 74.09 ಮೀಟರ್ ದೂರ ಜಾವೆಲಿನ್ ಎಸೆದ ಯಾದವ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು. 19ರ ವಯಸ್ಸಿನ ಯಾದವ್ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ನಂತರ ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿರುವ ಭಾರತದ ಎರಡನೇ ಅತ್ಲೀಟ್ ಎಂಬ ಹಿರಿಮೆಗೆ ಪಾತ್ರರಾದರು.

ಚೋಪ್ರಾ ಅವರು 2016ರಲ್ಲಿ ಪೋಲ್ಯಾಂಡ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ 86.48 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಲ್ಲದೆ, ವಿಶ್ವ ಜೂನಿಯರ್ ದಾಖಲೆಯನ್ನು ನಿರ್ಮಿಸಿದ್ದರು.

ದಕ್ಷಿಣ ಆಫ್ರಿಕಾದ ಜಾನ್-ಹೆಂಡ್ರಿಕ್ ಹೇಮನ್ಸ್ ಅವರು ಕೊನೆಯ ಯತ್ನದಲ್ಲಿ 80.50 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಹೇಮನ್ಸ್ ಮೊದಲ ಸುತ್ತಿನಿಂದಲೇ ಮುನ್ನಡೆಯಲ್ಲಿದ್ದರು. ಪ್ರತಿ ಸುತ್ತಿನಲ್ಲೂ ತನ್ನ ಅಂತರ ಗಣನೀಯವಾಗಿ ಹೆಚ್ಚಿಸಿಕೊಂಡರು.

ಇದೇ ವೇಳೆ, ಆಶೀಶ್ ನಿಧಾನಗತಿಯ ಆರಂಭ ಪಡೆದಿದ್ದು,ತನ್ನ ಮೊದಲೆರಡು ಪ್ರಯತ್ನದಲ್ಲಿ 70 ಮೀ. ದಾಟುವಲ್ಲಿ ವಿಫಲರಾದರು.ಆದರೆ ಮೂರನೇ ಪ್ರಯತ್ನದಲ್ಲಿ ತನ್ನ ಲಯವನ್ನು ಕಂಡುಕೊಂಡ ಆಶೀಶ್ ತನ್ನ ವೃತ್ತಿಜೀವನದ ಅತಿ ದೊಡ್ಡ ಪದಕ ಗೆದ್ದುಕೊಂಡರು.

ಡೊಮಿನಿಕಾದ ಅಡಿಸನ್ ಜೇಮ್ಸ್(73.89 ಮೀ.)ಕಂಚಿನ ಪದಕ ಜಯಿಸಿದರು. ಪುರುಷರ ಜಾವೆಲಿನ್ ಎಸೆತದ ಫೈನಲ್‌ನಲ್ಲಿದ್ದ ಇನ್ನೋರ್ವ ಭಾರತೀಯ ಸ್ಪರ್ಧಿ ಟಿ.ಧರಣಿಧರನ್ 72.35 ಮೀಟರ್ ಎಸೆದು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News